Posts

ಪ್ರತಿಭೆ ಮತ್ತು ಶ್ರಮ ವಿಭಜನೆ

Image
ಎಲ್ಲ ಮನುಷ್ಯರಲ್ಲೂ ಒಂದೊಂದು ಬಗೆಯ ಪ್ರತಿಭೆ ಇರುತ್ತದೆಯಂತೆ. ಆದರೆ ಪ್ರತಿಭೆ ಒಂದು ಸ್ವರೂಪವನ್ನು ಪಡೆಯಬೇಕಾದರೆ ಮನುಷ್ಯನು ಒಂದು ಕ್ಷೇತ್ರದಲ್ಲಿ, ಒಂದು ವಿಭಾಗದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ. ಕೆಲವರಿಗೆ ಸಂಗೀತ, ಕೆಲವರಿಗೆ ಸಾಹಿತ್ಯ, ಕೆಲವರಿಗೆ ಕ್ರೀಡೆ, ಕೆಲವರಿಗೆ ವ್ಯಾಯಾಮ, ಕೆಲವರಿಗೆ ಅಧ್ಯಾತ್ಮ, ಕೆಲವರಿಗೆ ತಂತ್ರಜ್ಞಾನ ಹೀಗೆ ಒಬ್ಬೊಬ್ಬರಿಗೂ ಒಂದಲ್ಲ ಒಂದು ವಿಷಯ ಇಷ್ಟವಾಗುವಂಥದ್ದು ಇರುತ್ತದೆ. ಇನ್ನು ಕೆಲವರಿಗೆ ಒಂದಕ್ಕಿಂತ ಹೆಚ್ಚು, ಹಲವು ವಿಷಯಗಳು ಇಷ್ಟವಾಗುತ್ತವೆ ಮತ್ತು ಆಸಕ್ತಿಯೂ ಇರುತ್ತದೆ. ಹಲವು ವಿಷಯಗಳಲ್ಲಿ ಆಸಕ್ತಿ ಉತ್ತಮವೇ ಆದರೂ ದೂರದೃಷ್ಟಿಯಿಂದ ನೋಡಿದಾಗ ಒಂದು ವಲಯದಲ್ಲಿ ನಿಮಗಷ್ಟೇ ಆಸಕ್ತಿ ಇರುವ, ನಿಮಗಷ್ಟೇ ವಿಷಯಜ್ಞಾನವಿರುವ ವಿಭಾಗದಲ್ಲಿ ಮಾತ್ರವೇ ಕನ್ಸಿಸ್ಟೆಂಟ್ ಆಗಿ ತೊಡಗಿಕೊಳ್ಳುವುದು ಉತ್ತಮ. ಹಲವರಿಗೆ ಸಾಹಿತ್ಯ ಇಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ನೀವು ಬರೆಯಬೇಕಿಲ್ಲ. ಹಲವರಿಗೆ ಸಂಗೀತದ ಪ್ರೀತಿ ಇರುತ್ತದೆ ಎನ್ನುವುದಕ್ಕೆ ನಿಮಗೆ ಸಂಗೀತ ಮಾಧ್ಯಮವಾಗಬೇಕಿಲ್ಲ. ಎಲ್ಲರೂ ಟಿವಿ, ಸಿನಿಮಾ ನೋಡುತ್ತಾರೆ ಎನ್ನುವ ಕಾರಣಕ್ಕೆ ನೀವು ಅದನ್ನು ಅನುಕರಿಸಬೇಕಿಲ್ಲ. ನಿಮ್ಮ ಅಂತರಂಗದಲ್ಲಿ ಬಲವಾದ ಪ್ರಚೋದನೆಯಿದ್ದಾಗ ಮಾತ್ರವೇ ನೀವು ಯಾವುದೇ ಕೆಲಸವನ್ನು ಮಾಡುತ್ತೀರಿ. ಹಾಗೆಯೇ ಮಾಡಬೇಕು ಕೂಡಾ. ಇನ್ನು, ಒಬ್ಬ ವ್ಯಕ್ತಿ ಎಲ್ಲದರಲ್ಲೂ ತೊಡಗಿಕೊಳ್ಳುವುದರಿಂದ ಒಮ್ಮೊಮ್ಮೆ ಆತನ ವಿಶ...

ಹಿಂದೂ ಧರ್ಮಪ್ರಜ್ಞೆ ಮತ್ತು ಋಷಿವಾಕ್ಯಗಳ ಪ್ರಸ್ತುತತೆ

Image
ಬಹಳ ದಿನಗಳಿಂದ ಉಪನಿಷತ್ತುಗಳ ಬಗ್ಗೆ ಏನಾದರೂ ಚೂರು ಬರೆಯಬೇಕೆಂದು, ಮಾತಾಡಬೇಕೆಂದು ಬಯಸಿದ್ದೆ. ಈಗ ಅದನ್ನು ಬರೆಯುತ್ತಿದ್ದೇನೆ ಹಾಗೂ ಮಾತಾಡುತ್ತಿದ್ದೇನೆ. ಧರ್ಮದ ಆಚರಣೆಗಾಗಿ ಇರುವ ಶಾಸ್ತ್ರಗಳು ಒಂದು ಬಗೆಯಾದರೆ, ಅರಿವಿಗೆ ಸಂಬಂಧಿಸಿದ ಧರ್ಮಗ್ರಂಥಗಳು ಮತ್ತೊಂದು ಬಗೆ. ಭಾರತೀಯ ಹಿಂದೂ ಧರ್ಮದ ಅತೀ ಮುಖ್ಯ ಭಾಗವಾಗಿರುವ ಉಪನಿಷತ್ತುಗಳು ಜಗತ್ತಿನ ಉತ್ಕೃಷ್ಟ ತಾತ್ತ್ವಿಕ ಧರ್ಮಗ್ರಂಥಗಳಾಗಿವೆ. ಹಿಂದೂ ಧರ್ಮಗ್ರಂಥಗಳಲ್ಲಿ ವೇದಗಳು, ಉಪನಿಷತ್ತುಗಳು, ಪುರಾಣಗಳು ಹಾಗೂ ಮಹಾಕಾವ್ಯಗಳು ಸೇರಿವೆ. ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವವೇದ ಎಂಬ ನಾಲ್ಕು ವೇದಗಳಿವೆ. ವೇದಗಳ ಕೊನೆಯ ಭಾಗವನ್ನು ಉಪನಿಷತ್ತುಗಳು ಅಥವಾ 'ವೇದಾಂತ' ಎಂದು ಕರೆಯುವರು. ಐತರೇಯ, ಬೃಹದಾರಣ್ಯಕ, ಈಶಾವಾಸ್ಯ, ತೈತ್ತಿರೀಯ, ಛಾಂದೋಗ್ಯ, ಕೇನ, ಮುಂಡಕ, ಮಾಂಡೂಕ್ಯ, ಕಠ, ಪ್ರಶ್ನೆ, ಶ್ವೇತಾಶ್ವತರ - ಇವು ಹನ್ನೊಂದು ಪ್ರಮುಖ ಉಪನಿಷತ್ತುಗಳು. ಒಟ್ಟು 18 ಪುರಾಣಗಳು ಹಿಂದೂ ಧರ್ಮದಲ್ಲಿವೆ. ಅವುಗಳೆಂದರೆ ವಿಷ್ಣುಪುರಾಣ, ನಾರದ ಪುರಾಣ, ಶ್ರೀಮದ್ ಭಾಗವತ ಪುರಾಣ, ಗರುಡ ಪುರಾಣ, ಪದ್ಮಪುರಾಣ, ವರಾಹ ಪುರಾಣ, ಬ್ರಹ್ಮ ಪುರಾಣ, ಬ್ರಹ್ಮಾನಂದ ಪುರಾಣ, ಬ್ರಹ್ಮ ವೈವರ್ತ ಪುರಾಣ, ಮಾರ್ಕಂಡೇಯ ಪುರಾಣ, ಭವಿಷ್ಯ ಪುರಾಣ, ವಾಮನ ಪುರಾಣ, ಮತ್ಸ್ಯ ಪುರಾಣ, ಕೂರ್ಮ ಪುರಾಣ, ಲಿಂಗ ಪುರಾಣ, ಶಿವ ಪುರಾಣ, ಸ್ಕಂದ ಪುರಾಣ ಮತ್ತು ಅಗ್ನಿ ಪುರಾಣ. ರಾಮಾಯಣ ಮತ್ತು ಮಹಾಭಾರತ ಎ...

ಸುತ್ತೋಲೆ

Image
ಹಲೋ ಮಗನೇ! ಹಾಯಾಗಿ ಮುನ್ನಡೆ, ಹೌದು, ಈ ಭೂಮಿ ಸೊಗಸಾಗಿದೆ. ನಿಶ್ಚಿಂತನಾಗು, ನಿತ್ಯ ಸಂತೋಷಿಯಾಗು, ನಿನ್ನಿಷ್ಟದಂತೆ ನೀನಿರು; ಬೊಗಳೆಗೆ ಬೆಚ್ಚದಿರು, ಹಬ್ಬ ಮಾಡುತ್ತ ಜೀವಿಸು.  ಸಣ್ಣದಲ್ಲದ ಕತೆ,  ದೊಡ್ಡದರ ವಾಸ್ತವತೆ, ಘನ - ಗಂಭೀರ ನಡೆ, ವರ್ತಮಾನವ ಅರಿತುಕೋ -  ಕೇಡುಗಳ ನುಗ್ಗುನುರಿ ಮಾಡಿ,  ನಾಟು, ದಾಟು. ನಿರಂತರ ನಡೆವ ಕಸರತ್ತು, ಕರಾಮತ್ತು, ಬದಲಾವಣೆಯ ಪರ್ವ -  ಎಲ್ಲವೂ ಒಂದು ಥರ ಚಂದ! ಮಾಯೆ! ನಗುವಿನ ಬುಗ್ಗೆ ವ್ಯಾಪಾರ, ಕ್ಯಾಶ್‌ಲೆಸ್ ವ್ಯವಹಾರ, ನಕಲಿ ಶೃಂಗಾರ ಹಾಗೂ ಬೇರೇನಿದೆ ನೋಡೋಣ ಈ ಜಗತ್ತಲ್ಲಿ ನಾವೂ ಒಂದು ಸುತ್ತೋಲೆ ಹೊರಡಿಸಿ ಸುತ್ತೋಣ. ✍️ ಶಿವಕುಮಾರ ಸಾಯ 'ಅಭಿಜಿತ್'

ಅಕಾಶದಲ್ಲಿ ಅಸ್ತಿತ್ವ

Image
ಆಕಾಶದ ಬಗ್ಗೆ ನಾನು ಇವತ್ತು ಬರೆಯಲೇ ಬೇಕಿತ್ತು. ಅದು ಹೇಗೆ ನಮ್ಮ ಅಸ್ತಿತ್ವವು ಆಕಾಶದಲ್ಲಿದೆ ಎಂಬ ಬಗ್ಗೆ ಈ ಲೇಖನದಲ್ಲಿ ಬರೆದುಕೊಂಡಿದ್ದೇನೆ. ಆಕಾಶವೆಂದರೆ ನಮ್ಮ ಇರುವಿಕೆಗೆ ಇರುವ ಸ್ಥಳಾವಕಾಶ. ವಸ್ತುಗಳು ಘನ, ದ್ರವ, ಅನಿಲ, ಪ್ಲಾಸ್ಮಾ - ಹೀಗೆ ವಿವಿಧ ರೂಪದಲ್ಲಿ ನಮಗೆ ಅನುಭವಕ್ಕೆ ಬರುತ್ತವೆ, ನಿಜ. ಆದರೆ ಎಲ್ಲಾ ವಸ್ತುಗಳ ಪರಮಾಣುವಿನ ಕಣದ ಆದಿಮೂಲಕ್ಕೆ ಹೋದಾಗ ವಿಜ್ಞಾನವು ಹೇಳುತ್ತಿರುವುದು ಏನನ್ನು ಎಂದರೆ ಈ ಭೌತಿಕ ಪ್ರಪಂಚದಲ್ಲಿ 99.99% ಬರೀ ಖಾಲಿ ಇದೆ ಎಂಬುದನ್ನು. ಹಾಗಾದರೆ ನಮಗೆ ಗೋಚರವಾಗುವ ವಸ್ತುಗಳಿಗೆ ವಿಭಿನ್ನ ಸ್ವರೂಪ ಬಂದದ್ದು ಈ ನೂರು ಶೇಕಡಾ ಖಾಲಿಯೊಳಗೆ ಇರಬಹುದಾದ ವಿಭಿನ್ನತೆಯಿಂದ, ಅಲ್ಲಿನ ಚಲಿಸುವ ಮತ್ತು ಚಲನೆಗೆ ಪ್ರೇರಿಸುವ ಕಾಯಗಳಿಂದ. ಸುಲಭವಾಗಿ ಹೇಳುವುದಿದ್ದರೆ ಅವು ಒಂದು ನಿಷ್ಪತ್ತಿಯ ಕಾಸ್ಮಿಕ್ ಚೈತನ್ಯ. ಕೇವಲ ಕಾರ್ಯಗಳ ಮೂಲಕವಷ್ಟೇ ಕಾಯಗಳು ವ್ಯಕ್ತವಾಗುತ್ತವೆ. ಅಲ್ಲದೆ, ಚಲನಶೀಲ ಮತ್ತು ಪರಿವರ್ತಿತವಾಗುವ ಪ್ರಕೃತಿಸ್ವರೂಪದ್ದು ಅದು. ಹಾಗಾಗಿ ಎಲ್ಲವೂ ಪ್ರತ್ಯೇಕವಾಗಿ ಇಲ್ಲದೇ ಈ ಆಕಾಶದಲ್ಲೇ ಇದೆ ಎನ್ನಬಹುದು. ಅಂದರೆ, ಚೈತನ್ಯಕ್ಕೆ ಪ್ರತ್ಯೇಕ ಅಸ್ತಿತ್ವ ಇಲ್ಲದ್ದರಿಂದ ನಾವು ಆಕಾಶ ಅಂದರೆ ಸ್ಪೇಸ್ ಮೇಲೆ ನಂಬಿಕೆಯಿಟ್ಟರೆ ಮುಗಿಯಿತು. ಅಸ್ತಿತ್ವ ಎನ್ನುವಂಥದ್ದು ಇರುವುದೇ ಈ ಸ್ಪೇಸ್‌ನಲ್ಲಿ. ಆ ಆಕಾಶ ಎಂಬುದು ಅಂತಹ ಖಾಲಿತನ ಅಂದರೆ ಅವಕಾಶ ಅಥವಾ ಸರ್ವಸ್ವದ ನಿರ್ಮಿತಿಯ ಮೂಲ ಮತ್ತು ಆಶ್ರಯತಾಣ...

ನಾವು ನಮ್ಮ ಸುತ್ತಲೂ ನಮ್ಮದೇ ಭೂತಕಾಲ ಮತ್ತು ಭವಿಷ್ಯತ್ಕಾಲವನ್ನು ನೋಡುತ್ತೇವೆ

Image
ನಮಗೆ ಈ ಜಗತ್ತನ್ನು ಅನುಭವಿಸುವುದಕ್ಕೆ ನಮ್ಮ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಎಂಬ ಐದು ಜ್ಞಾನೇಂದ್ರಿಯಗಳು ಹಾಗೂ ಕ್ರಿಯೆಗಳಿಗಾಗಿ ವಾಕ್, ಪಾಣಿ, ಪಾದ, ಪಾಯು ಮತ್ತು ಉಪಸ್ಥ ಎಂಬ ಐದು ಕರ್ಮೇಂದ್ರಿಯಗಳು ಇರುವಂಥದ್ದು. ನಮ್ಮ ದೇಹ ಒಂದು ಅದ್ವಿತೀಯ ಸಾಧನವಾಗಿದೆ. ಈ ಲೇಖನದಲ್ಲಿ ನಾವು ನಮ್ಮ ಬಗ್ಗೆ ಸಮಗ್ರವಾಗಿ ನೋಡುವ ಪ್ರಯತ್ನ ಮಾಡೋಣ. ನಮ್ಮ ದೇಹವೆಂಬ ಪಿಂಡಾಂಡವು ಬ್ರಹ್ಮಾಂಡದ ಮಾದರಿಯಲ್ಲಿದೆ. ನಾವು ಎಲ್ಲಾ ಇಂದ್ರಿಯಗಳನ್ನು ಬಳಸಿ ಪ್ರಪಂಚವನ್ನು ಅನುಭವಿಸುವಾಗಲೂ ಅದು ನಮ್ಮದೇ ಅನುಭವಪ್ರಪಂಚವಾಗಿರುತ್ತದೆ. ಆಧ್ಯಾತ್ಮಿಕವಾಗಿ ಮತ್ತು ಜ್ಯೋತಿಷ್ಯ ಅಂದರೆ ಆಸ್ಟ್ರೋನಮಿ ಆಧಾರದಲ್ಲಿ ನೋಡುವಾಗ ಎಲ್ಲಾ ನಮ್ಮ ಸುತ್ತಲ ಬಗೆಬಗೆಯ ವಸ್ತುಗಳು ಹಾಗೂ ಜೀವಿಗಳು ಸಮಸ್ತವೂ ಒಂದೇ ಮೂಲದ ನೂರೆಂಟು ಮುಖಗಳು ಎಂದು ಕಂಡುಬರುವುದಾಗಿದೆ. ವಿಕಾಸವಾದವು ಜೀವಜಗತ್ತು ಕ್ರಿಮಿಗಳ ಹಂತದಿಂದ ಈ ಭೂಮಿಯಲ್ಲಿ ಜೀವ ವಿಕಾಸವಾಗುತ್ತಾ ಬಂತು ಎನ್ನುತ್ತದೆ. ಭೌತಶಾಸ್ತ್ರವು ಸಣ್ಣ ಬೋಸಾನ್ ಕಣ ಸ್ಫೋಟಿಸಿ ಇಂದಿನ ವಿಶ್ವವಾಯಿತೆಂದು ಹೇಳುತ್ತದೆ. ಅವೆರಡನ್ನು ಬೇರೆಬೇರೆಯಾಗಿ ನೋಡದೆ ಒಟ್ಟಾಗಿ ನೋಡುವಾಗ ಕಣ ಸಿದ್ಧಾಂತದಲ್ಲಿ ಬೆಳಕಿನ ಕಣದ ಬಗ್ಗೆ ಹೇಳಿದಂತೆಯೇ ಈ ವಿಶ್ವವೆಂದರೆ ಚೈತನ್ಯದ ಕಣವು ಕಣ ಮತ್ತು ತರಂಗವೂ ಆಗಿರುತ್ತಾ ಕಂಪಿಸುತ್ತಲೇ ಇರುವಂಥದ್ದಾಗಿದೆ. ತನ್ನ ಎಲ್ಲಾ ಆಯಾಮಗಳಿಂದ ಅನೂಹ್ಯ ಬಗೆಯಲ್ಲಿ ಇದು ಕಂಪಿಸುತ್ತಲೇ ಇದೆ. ಆ ಆಂದೋಲನದಲ್ಲಿ ಚೈತ...

ನಾವು ಚೆನ್ನಾಗಿದ್ದೇವೆ

Image
ನೀವೊಂದು ಮರದ ಬುಡವನ್ನು ಅರ್ಧಂಬರ್ಧ ನೋಡುತ್ತೀರಿ ಹಾಗೂ ಅದು ಯಾವ ಹೂವು ಯಾವ ಹಣ್ಣು ಬಿಡುವುದೆಂದು ಅರ್ಧಂಬರ್ಧ ಅರ್ಥ ಮಾಡಿಕೊಳ್ಳುವಿರಿ ಎಂದಿರಲಿ. ನೀವೀಗ ಮರದ ಬುಡವನ್ನು ಮಾತ್ರ ನೋಡುತ್ತಿದ್ದೀರಿ -  ಅದೂ ಭಾಗಶಃ....  ಆಗಲೂ -  ನಿಮಗೆ ಗೊತ್ತಿಲ್ಲದ ನೂರೆಂಟು ಬೇರುಗಳು ಆ ಮರಕ್ಕಿರುತ್ತವೆ ಮತ್ತು ನೀವದನ್ನು ಕಾಣಲಾರಿರಿ ಆ ಮರದ ಒಗಟನ್ನು ನೀವು ಎಳ್ಳಷ್ಟೂ  ಭೇದಿಸಲಾರಿರಿ ಮರಗಳನ್ನು ಕತ್ತರಿಸುವುದು ಸುಲಭ ಬೇರುಗಳ ವಿಷಯ ಕಷ್ಟ ನೀವು ಕತ್ತರಿಸಿದರೂ ಬೇರುಗಳು ಆಕಾಶದಷ್ಟು ಅನಂತಕ್ಕೆ ಇರುತ್ತವೆ ಮತ್ತು ಅವು ನಿಮ್ಮ ದೃಷ್ಟಿಯೊಳಗೇ ಬೇರು ಬಿಟ್ಟಿರುವವು. ಮರಕ್ಕೆ ಬ್ರಹ್ಮಾಂಡದ ಬಹುತ್ವ ನಾವು ನಾವೆಂದು ಬಹುವಚನ ಮಾತಾಡುವ ತವಕ ಅದೇನು ಇಂದ್ರಜಾಲವೋ ನಾನರಿಯೆ ಸದಾ ನಾವೆಲ್ಲರೂ ಚೆನ್ನಾಗಿದ್ದೇವೆ... ✍️ ಶಿವಕುಮಾರ ಸಾಯ 'ಅಭಿಜಿತ್'

ಭಾಗ್ಯೋದಯ ಈ ಸೂರ್ಯೋದಯ

Image
ಭಾಗ್ಯೋದಯ ಈ ಸೂರ್ಯೋದಯ ಅಹಾ! ರಸಮಯ, ಹೃದಯ ತನ್ಮಯ ಕಪ್ಪು ರಾತ್ರಿ ಕಳೆದು, ಬೆಳಕು ಮೂಡಿ ಹರಿದು, ಬೆಟ್ಟ ಘಟ್ಟ ಏರಿ, ರವಿಯು ಬಂದ ಜಾರಿ ಬಾನ ಅರಳು ಬಣ್ಣ, ಕಾಂತಿ ತೆರೆದ ಕಣ್ಣ, ನೋಡಿ ಸುಖದ ಮೋಡಿ, ಮುದದಿ ರಾಗ ಹಾಡಿ ಮಹತಿ ಎಂಬ ಮೇಲ್ಮೆ, ತಾಳಿ ಸ್ಥಿರದ ಜಾಣ್ಮೆ, ಹಿಗ್ಗಿನಿಂದ ಬೀಗಿ, ಜಗ್ಗದೇ ನಿಂತು ತೂಗಿ ಧವಳತೆಯ ಹೊಳಪು ಮಿನುಗಿ, ಚಿಂತನೆಯ ಲಹರಿ ಜಿನುಗಿ, ಶಕ್ತಿ ಸ್ಥಾಯಿಯಾಗಿ, ನಿತ್ಯ ವಿಜಯ ಮೊಳಗಿ ಭಾಗ್ಯೋದಯ ಈ ಸೂರ್ಯೋದಯ ಅಹಾ! ರಸಮಯ, ಹೃದಯ ತನ್ಮಯ ✍️ ಶಿವಕುಮಾರ ಸಾಯ 'ಅಭಿಜಿತ್'