ರಾಜ್ಯೋತ್ಸವ ಎಂಬ ಸಮಯ-ಸಂದರ್ಭ: ಒಂದು ಕುಶಲೋಪರಿ
"ಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿ/ಯುಗ ವಿಪರೀತನ್ ಮಾಧವನೀತನ್ ಪೆರನಲ್ಲ" ಈ ನವೆಂಬರ್ ತಿಂಗಳಲ್ಲಿ ಎಲ್ಲರೂ ಮೈಕೊಡವಿ ಒಮ್ಮೆ ಕನ್ನಡ ಮಾತಾಡತೊಡಗುತ್ತಾರೆ. ಸಮ್ಮೇಳನಗಳು ಆರಂಭವಾಗುತ್ತವೆ. ಪ್ರಚಾರದ ಭರಾಟೆ ಜೋರಾಗುತ್ತದೆ. ನಿನ್ನೆಯ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ನನ್ನ ಕನ್ನಡ ಗುರುಗಳಲ್ಲೊಬ್ಬರಾದ ಡಾ. ಎಚ್. ಜಿ. ಶ್ರೀಧರ ಅವರನ್ನು ಕಾರ್ಯಕ್ಷೇತ್ರ ಅಡ್ಯನಡ್ಕಕ್ಕೆ ಕರೆದಿದ್ದೆ. ಅವರು ನನಗೆ ಪದವಿ ಐಚ್ಛಿಕದಲ್ಲಷ್ಟೇ ಅಲ್ಲದೆ ನಾನು ಪದವಿಪೂರ್ವ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದಾಗಲೂ ಕನ್ನಡ ಪಾಠ ಹೇಳುತ್ತಿದ್ದವರು. ಅಷ್ಟೇ ಅಲ್ಲದೆ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ನನ್ನ ಸಾಹಿತ್ಯ ಮನಸ್ಸನ್ನು ಸಲಹುವ ಕೆಲಸ ಮಾಡಿದ ಒಬ್ಬ ಸಾಚಾ ಮನುಷ್ಯ. ಅನೇಕ ಕಾರ್ಯಕ್ರಮಗಳಲ್ಲಿ ವೇದಿಕೆ ಕೂಡ ಕೊಡಿಸಿದವರು. ಮಾನ್ಯ ಶ್ರೀಧರ್ ಸರ್ ಅವರ ಬಗ್ಗೆ ಅಭಿಮಾನವಿರುವುದಕ್ಕೆ ಹಲವಾರು ಕಾರಣಗಳಿರಬಹುದು. ಪದವಿಯಲ್ಲಿ ಕನ್ನಡ ಐಚ್ಛಿಕಕ್ಕೆ ನಾನು ಸೀಟು ಬಯಸಿದ್ದ ಸಂದರ್ಭ. ಆ ದಿನ ನಾನು 'ವಿಜ್ಞಾನ ವಿದ್ಯಾರ್ಥಿ' ಎಂಬ ಕಾರಣಕ್ಕೆ ಸೀಟು ನಿರಾಕರಿಸಲ್ಪಟ್ಟಿತ್ತು. ಇಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಪೀಟರ್ ವಿಲ್ಸನ್ ಅವರಂತೂ ಕಿರಿಕಿರಿಯೆನಿಸಿ "ಸೀಟು ಕೊಡಲು ಸಾಧ್ಯವೇ ಇಲ್ಲ. ಏನು ಇನ್ಫ್ಲುಯೆನ್ಸ್ ಮಾಡುತ್ತೀಯ ನೀನು"ಎಂದು ಹೇಳಿ ವಾಪಸ್ ಕಳಿಸಿದ್ದರು. ಶ್ರೀ...