ರಾಜ್ಯೋತ್ಸವ ಎಂಬ ಸಮಯ-ಸಂದರ್ಭ: ಒಂದು ಕುಶಲೋಪರಿ
"ಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯಂ
ಬಾಧಿಪ್ಪ ಕಲಿಗೆ ಕಲಿ/ಯುಗ ವಿಪರೀತನ್
ಮಾಧವನೀತನ್ ಪೆರನಲ್ಲ"
ಈ ನವೆಂಬರ್ ತಿಂಗಳಲ್ಲಿ ಎಲ್ಲರೂ ಮೈಕೊಡವಿ ಒಮ್ಮೆ ಕನ್ನಡ ಮಾತಾಡತೊಡಗುತ್ತಾರೆ. ಸಮ್ಮೇಳನಗಳು ಆರಂಭವಾಗುತ್ತವೆ. ಪ್ರಚಾರದ ಭರಾಟೆ ಜೋರಾಗುತ್ತದೆ.
ನಿನ್ನೆಯ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ನನ್ನ ಕನ್ನಡ ಗುರುಗಳಲ್ಲೊಬ್ಬರಾದ ಡಾ. ಎಚ್. ಜಿ. ಶ್ರೀಧರ ಅವರನ್ನು ಕಾರ್ಯಕ್ಷೇತ್ರ ಅಡ್ಯನಡ್ಕಕ್ಕೆ ಕರೆದಿದ್ದೆ. ಅವರು ನನಗೆ ಪದವಿ ಐಚ್ಛಿಕದಲ್ಲಷ್ಟೇ ಅಲ್ಲದೆ ನಾನು ಪದವಿಪೂರ್ವ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದಾಗಲೂ ಕನ್ನಡ ಪಾಠ ಹೇಳುತ್ತಿದ್ದವರು. ಅಷ್ಟೇ ಅಲ್ಲದೆ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ನನ್ನ ಸಾಹಿತ್ಯ ಮನಸ್ಸನ್ನು ಸಲಹುವ ಕೆಲಸ ಮಾಡಿದ ಒಬ್ಬ ಸಾಚಾ ಮನುಷ್ಯ. ಅನೇಕ ಕಾರ್ಯಕ್ರಮಗಳಲ್ಲಿ ವೇದಿಕೆ ಕೂಡ ಕೊಡಿಸಿದವರು.
ಮಾನ್ಯ ಶ್ರೀಧರ್ ಸರ್ ಅವರ ಬಗ್ಗೆ ಅಭಿಮಾನವಿರುವುದಕ್ಕೆ ಹಲವಾರು ಕಾರಣಗಳಿರಬಹುದು. ಪದವಿಯಲ್ಲಿ ಕನ್ನಡ ಐಚ್ಛಿಕಕ್ಕೆ ನಾನು ಸೀಟು ಬಯಸಿದ್ದ ಸಂದರ್ಭ. ಆ ದಿನ ನಾನು 'ವಿಜ್ಞಾನ ವಿದ್ಯಾರ್ಥಿ' ಎಂಬ ಕಾರಣಕ್ಕೆ ಸೀಟು ನಿರಾಕರಿಸಲ್ಪಟ್ಟಿತ್ತು. ಇಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಪೀಟರ್ ವಿಲ್ಸನ್ ಅವರಂತೂ ಕಿರಿಕಿರಿಯೆನಿಸಿ "ಸೀಟು ಕೊಡಲು ಸಾಧ್ಯವೇ ಇಲ್ಲ. ಏನು ಇನ್ಫ್ಲುಯೆನ್ಸ್ ಮಾಡುತ್ತೀಯ ನೀನು"ಎಂದು ಹೇಳಿ ವಾಪಸ್ ಕಳಿಸಿದ್ದರು. ಶ್ರೀಧರ್ ಸರ್ ಅಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾಗಿದ್ದ ದಿವಂಗತ ಪ್ರೊ. ಯು. ರಾಮಮೋಹನ್ ರಾವ್ ಅವರ ಜೊತೆ ಮಾತುಕತೆ ನಡೆಸಲು ಜೊತೆಯಾಗಿ ಬಂದಿದ್ದರು. ಅಂದು ನನ್ನಲ್ಲಿ ಕನ್ನಡದ ಕೆಲವು ಪ್ರಮಾಣಪತ್ರಗಳು ಮತ್ತು ಒಂದು ಸ್ವರಚಿತ ಕವನವಿತ್ತು. ತದನಂತರ ನನ್ನ ಪ್ರಭಾವಕ್ಕೆ ಮಣಿದು ಅರ್ಥಶಾಸ್ತ್ರ ವಿಭಾಗದ ಡಾ. ಪಿ. ಕೆ. ಬಾಲಕೃಷ್ಣ ಅವರು ಹೆಚ್ಚುವರಿ ಡೊನೇಶನ್ ಪಡೆದುಕೊಂಡು ಸೀಟು ನೀಡಿದರಾದರೂ "ಇದು ಒಬ್ಬ ಆರ್ಟ್ಸ್ ವಿದ್ಯಾರ್ಥಿಯ ಸೀಟು. ಅವನಿಗೆ ಬದಲಾಗಿ ನಿಮಗೆ ಕನ್ನಡದಲ್ಲಿ ಸೀಟು ಕೊಟ್ಟಿರುವುದಕ್ಕೆ ಅದರಲ್ಲಿ ಏನಾದರೂ ಕಾಲೇಜಿಗೆ ಸಾಧಿಸಿ ತೋರಿಸಬೇಕು!" ಎಂದು ಹೇಳಿದ್ದರು. ಆ ವಿಭಾಗದಲ್ಲಿ ಇಂದು ಪ್ರಾಧ್ಯಾಪಕರಾಗಿರುವ ಡಾ. ಅರುಣ್ ಪ್ರಕಾಶ್ ಅವರು "ನೀವು ಆಗ ಬರೆದುಕೊಟ್ಟ ಕವನದ ಒರಿಜಿನಲ್ ಪ್ರತಿ ನನ್ನ ಬಳಿ ಇದೆ" ಎಂದು ಇಂದಿಗೂ ಆ 'ಬರೆವೆ ಬದುಕಿನ ಬರಹ' ಎಂಬ ನನ್ನ ಕವಿತೆಯನ್ನು ಎತ್ತಿ ತೋರಿಸುತ್ತಾರೆ ಮತ್ತು ಕೆದಕಿ ಖುಷಿಪಡಿಸುತ್ತಾರೆ. ಡಾ. ಪಿ. ಕೆ. ಬಾಲಕೃಷ್ಣ ಅವರಂತೂ ನಾನು ಆ ನಂತರ ಕಾಲೇಜಿನಲ್ಲಿ ಕನ್ನಡದಲ್ಲಿ ಪಡೆದ ಬಹುಮಾನಗಳು ಮತ್ತು ಸಾಧನೆಗಳು ಎಲ್ಲವನ್ನೂ ನಿವೃತ್ತಿಯ ತನಕವೂ ತಮ್ಮ ವಿದ್ಯಾರ್ಥಿಗಳಿಗೆ ಉದಾಹರಣೆಯಾಗಿ ಹೇಳುತ್ತಿದ್ದರು.
ಈ ರೀತಿ ಕಾಲೇಜಿನ ಇಡೀ ಎಲ್ಲ ವಿಭಾಗದವರ ಗಮನ ಸೆಳೆದು ಸದ್ದು ಮಾಡುತ್ತಾ ಎಚ್ಇಕೆ ವಿಭಾಗಕ್ಕೆ ವಿದ್ಯಾರ್ಥಿಯಾಗಿ ಸೇರಿದ್ದೆ. ನುಡಿದಂತೆ ನಾನು ಒಂದೇ ತಿಂಗಳಲ್ಲಿ ಮಂಗಳೂರು ವಿವಿ ವ್ಯಾಪ್ತಿಯ ಅಂತರ್ ಕಾಲೇಜು ಕವಿಗೋಷ್ಠಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ. ಪತ್ರಿಕೆಗಳಲ್ಲಿ ಕವನಗಳು ಪುಂಖಾನುಪುಂಖವಾಗಿ ಪ್ರಕಟವಾಗುತ್ತಿದ್ದವು. ರಾಜ್ಯಮಟ್ಟದ ದ.ರಾ.ಬೇಂದ್ರೆ ಸ್ಮೃತಿ ಕವನ ಸ್ಪರ್ಧೆಯಲ್ಲಿ ಸತತ ಮೂರು ವರ್ಷ ಬಹುಮಾನ, ಹಾಗೆಯೇ ಹಂಪಿ ವಿವಿಯ ಅಲ್ಲಮ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದೆ. ಆ ವೇಳೆಗಾಗಲೇ ಹಲವು ಗೋಷ್ಠಿಗಳಲ್ಲಿ ವೇದಿಕೆ ಸಿಕ್ಕಿತ್ತು. ಅಂತಹ ಸಂದರ್ಭದಲ್ಲಿ ಸಹಜವಾಗಿ ಡಾ. ಎಚ್. ಜಿ. ಶ್ರೀಧರ ಅವರು ತುಂಬಾ ಬೆಂಬಲ ನೀಡಿರುವುದರಿಂದ ಇಲ್ಲಿನ coincidence effect ಗಮನಿಸಿದರೆ ಶ್ರೀಧರ ಅವರು ನನ್ನ ನೈಜ ಗೆಳೆಯರು ಪಟ್ಟಿಯಲ್ಲಿ ಪ್ರಮುಖರೇ ಆಗಿದ್ದಾರೆ. ಅವರು ನೀಡಿದ ಪ್ರೋತ್ಸಾಹ ನಿರ್ವ್ಯಾಜ ಮತ್ತು ನಿರ್ದುಷ್ಟವಾಗಿದೆ. ಆ ಸಮಯದಲ್ಲಿ ನಿನಾದ ಎಂಬ ಪತ್ರಿಕೆ ಮಾಡಿ ನನ್ನ ಕವಿತೆಗಳನ್ನು ಆರಿಸಿಕೊಂಡು ಅದರಲ್ಲೂ ಕೊಟ್ಟಿದ್ದರು. ಪುತ್ತೂರು ತಾಲೂಕು ಸಮ್ಮೇಳನದ ಕವಿಗೋಷ್ಠಿಯಲ್ಲಿ ಕೂರಿಸಿದ್ದರು. ಹೀಗೆ ವಿಭಾಗ ಮುಖ್ಯಸ್ಥರಾಗಿ ಶ್ರೀಧರ್ ಸರ್ ನೀಡಿದ ಪ್ರೋತ್ಸಾಹಕ್ಕೆ ಲೆಕ್ಕವಿಲ್ಲ.
ಕಾಲೇಜು ಬಿಟ್ಟ ನಂತರ ಅಪರೂಪವಾಗಿ ಸಿಗುತ್ತಿದ್ದೆ. ಒಮ್ಮೆ ನಾನು ಹೊಸದಿಗಂತ ಉಪಸಂಪಾದಕನಾಗಿದ್ದಾಗ ಮಂಗಳೂರಿಗೆ ತಮ್ಮ ಪುಸ್ತಕದ ಡಿಟಿಪಿ ಪುಟ ತೋರಿಸಲು ತಂದಿದ್ದರು. ಆ ನಂತರ ಪುತ್ತೂರಿನಲ್ಲಿ ಬಿ.ಎಡ್ ಓದುವಾಗಲೂ ಅವರು ನನ್ನನ್ನು ಗಮನಿಸುತ್ತಿದ್ದರು. ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಅಧ್ಯಾಪಕನಾಗಿದ್ದಾಗ ನನಗೂ ನನ್ನ ವಿದ್ಯಾರ್ಥಿನಿಯೊಬ್ಬಳಿಗೂ ವಿವೇಕಾನಂದ ಮಹಾವಿದ್ಯಾಲಯದಲ್ಲಿ ನಡೆಸಿದ ಕವಿಗೋಷ್ಠಿಯಲ್ಲಿ ಅವಕಾಶ ಕೊಟ್ಟಿದ್ದರು. ಹಾಗೆಯೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಮತ್ತಿತರ ಹಲವು ಸಾಹಿತ್ಯ ಸಮಾರಂಭಗಳಲ್ಲಿ ಮತ್ತೆ ಸಿಗತೊಡಗಿದೆವು. ವಿಶೇಷವಾಗಿ ಎನ್ಇಟಿ ಜೆಆರ್‌ಎಫ್ ಪಡೆದಾಗ ಅವರ ಸಲಹೆಯನ್ನು ಕೂಡ ನಾನು ಪಡೆದದ್ದಿದೆ. ಈ ವರ್ಷಾರಂಭದಲ್ಲಿ ನನ್ನ ಕೆಲವು ಸ್ವರಚಿತ ಕವಿತೆಗಳನ್ನು ಮನೆಯಲ್ಲೇ ಧ್ವನಿಮುದ್ರಿಸಿ ಕಳಿಸಲು ತಿಳಿಸಿ, ಅದನ್ನು 'ರೇಡಿಯೋ ಪಾಂಚಜನ್ಯ' ಚಾನೆಲ್‌ನಲ್ಲಿ ಹಾಗೆಯೇ ಬಿತ್ತರಿಸಿದ್ದಾರೆ.
ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಗಂಭೀರವಾಗಿ, ಕಾಳಜಿಯಿಂದ ಸಾಹಿತ್ಯ ಮತ್ತು ಸಂಘಟನೆಯಲ್ಲಿ ಸಕ್ರಿಯರಾಗಿರುವ ಅಪರೂಪದ ವ್ಯಕ್ತಿಗಳಲ್ಲಿ ಡಾ. ಎಚ್. ಜಿ. ಶ್ರೀಧರ ಒಬ್ಬರು. ಪುತ್ತೂರಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳು, ಅಲ್ಲಿನ ಕನ್ನಡ ಸಂಘ, ಕನ್ನಡ ಅಧ್ಯಯನ ಸಂಸ್ಥೆಗಳು ಹಮ್ಮಿಕೊಳ್ಳುವ ನಿರಂತರ ಸಾಾಹಿತ್ಯ ಚಟುವಟಿಕೆಗಳ ಹಿಂದಿನ ರೂವಾರಿಯಾಗಿದ್ದು, ನಾಯಕತ್ವ ಮತ್ತು ಸಂಘಟನಾ ಚಾತುರ್ಯಕ್ಕೆ ಅವರು ಹೆಸರಾಗಿದ್ದಾರೆ. ಸರಳತೆ, ಸಜ್ಜನಿಕೆ ಮತ್ತು ಆತ್ಮೀಯತೆಯಿಂದ ಸಾವಿರಾರು ವಿದ್ಯಾರ್ಥಿಗಳ ಮನಗೆದ್ದವರು. ಭಾಷೆಯ ನವಿರನ್ನು ಸಾಹಿತ್ಯದ ಲೇಪನದೊಂದಿಗೆ ಪರಿಚಯಿಸುತ್ತಾ ತರಗತಿಯಲ್ಲಿ ಅದೆಷ್ಟೋ ಭಾಷಾ ವಿದ್ಯಾರ್ಥಿಗಳನ್ನು ತಯಾರುಗೊಳಿಸಿದ್ದಾರೆ. ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ ಇನ್ನೂ ಆರಂಭವಾಗದೇ ಇದ್ದ ಕಾಲದಲ್ಲಿ ಕಾಲೇಜಿನ ಕನ್ನಡ ಸಂಘದಿಂದ 'ವಾರಾಂತ್ಯ ಪತ್ರಿಕೋದ್ಯಮ ಶಿಬಿರ'ವನ್ನು ಸಾಹಿತಿ, ಪತ್ರಕರ್ತ ಪ್ರೊ. ವಿ. ಬಿ. ಅರ್ತಿಕಜೆ ಅವರ ಒಡಗೂಡಿ ಹಮ್ಮಿಕೊಳ್ಳುತ್ತಿದ್ದರು. ಈ ಬಗೆಯಲ್ಲಿ ಒಂದು ಪೀಳಿಗೆಯನ್ನು ರೂಪಿಸುವ ವೈಖರಿ ಇವರದು. ಕನ್ನಡ ಮನಸ್ಸುಗಳನ್ನು ಅರಳಿಸುವ, ಆಹ್ಲಾದವನ್ನು ತುಂಬುವ, ಪ್ರೇರಣೆಯಿಂದ ಹುರಿದುಂಬಿಸುವ ಡಾ. ಎಚ್. ಜಿ. ಶ್ರೀಧರ ಅವರು ನಿನ್ನೆ ಅಡ್ಯನಡ್ಕಕ್ಕೆ ಬಂದು ಬಹಳ ಸೊಗಸಾಗಿ ಮಾತಾಡಿದ್ದಾರೆ. ಅಂತೂ ಮುಲಾಜಿಲ್ಲದೆ ಒಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮನ್ನು ಸಂಘಟಿಸುವ ಈ ಪ್ರಯತ್ನ ಅಭೂತಪೂರ್ವ ಯಶಸ್ಸು ಗಳಿಸಿದೆ.
✍️ಶಿವಕುಮಾರ ಸಾಯ 'ಅಭಿಜಿತ್'
ಅದ್ಭುತ ಸಾಧನೆ ತಮ್ಮದು. ಅಭಿನಂದನೆಗಳು. ಮಾನ್ಯ ಶ್ರೀಧರ್ ಅವರ ಬಗ್ಗೆ ತಿಳಿದಿರಲಿಲ್ಲ. ಅವರ ಉದಾತ್ತ ವ್ಯಕ್ತಿತ್ವ ಅನುಸರಣೀಯ. ಅವರಿಗೂ ಅಭಿವಂದನೆಗಳನ್ನು ಈ ಮೂಲಕ ಸಲ್ಲಿಸುವೆ. ನಿಮ್ಮ ಕವನಗಳು ಸತ್ವಪೂರ್ಣವಾಗಿವೆ. ಪತ್ರಿಕೆಗಳಲ್ಲಿ ಇನ್ನಷ್ಟು ಕವನಗಳು ಪ್ರಕಟವಾಗಲಿˌ ನಿಮ್ಮ ಕಾವ್ಯಪ್ರತಿಭೆಗೆ ಸೂಕ್ತ ಮನ್ನಣೆ ಲಭಿಸಲಿ ಎಂದು ಹಾರೈಸುವೆ.
ReplyDelete