ಪ್ರತಿಭೆ ಮತ್ತು ಶ್ರಮ ವಿಭಜನೆ
ಎಲ್ಲ ಮನುಷ್ಯರಲ್ಲೂ ಒಂದೊಂದು ಬಗೆಯ ಪ್ರತಿಭೆ ಇರುತ್ತದೆಯಂತೆ. ಆದರೆ ಪ್ರತಿಭೆ ಒಂದು ಸ್ವರೂಪವನ್ನು ಪಡೆಯಬೇಕಾದರೆ ಮನುಷ್ಯನು ಒಂದು ಕ್ಷೇತ್ರದಲ್ಲಿ, ಒಂದು ವಿಭಾಗದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ. ಕೆಲವರಿಗೆ ಸಂಗೀತ, ಕೆಲವರಿಗೆ ಸಾಹಿತ್ಯ, ಕೆಲವರಿಗೆ ಕ್ರೀಡೆ, ಕೆಲವರಿಗೆ ವ್ಯಾಯಾಮ, ಕೆಲವರಿಗೆ ಅಧ್ಯಾತ್ಮ, ಕೆಲವರಿಗೆ ತಂತ್ರಜ್ಞಾನ ಹೀಗೆ ಒಬ್ಬೊಬ್ಬರಿಗೂ ಒಂದಲ್ಲ ಒಂದು ವಿಷಯ ಇಷ್ಟವಾಗುವಂಥದ್ದು ಇರುತ್ತದೆ. ಇನ್ನು ಕೆಲವರಿಗೆ ಒಂದಕ್ಕಿಂತ ಹೆಚ್ಚು, ಹಲವು ವಿಷಯಗಳು ಇಷ್ಟವಾಗುತ್ತವೆ ಮತ್ತು ಆಸಕ್ತಿಯೂ ಇರುತ್ತದೆ. ಹಲವು ವಿಷಯಗಳಲ್ಲಿ ಆಸಕ್ತಿ ಉತ್ತಮವೇ ಆದರೂ ದೂರದೃಷ್ಟಿಯಿಂದ ನೋಡಿದಾಗ ಒಂದು ವಲಯದಲ್ಲಿ ನಿಮಗಷ್ಟೇ ಆಸಕ್ತಿ ಇರುವ, ನಿಮಗಷ್ಟೇ ವಿಷಯಜ್ಞಾನವಿರುವ ವಿಭಾಗದಲ್ಲಿ ಮಾತ್ರವೇ ಕನ್ಸಿಸ್ಟೆಂಟ್ ಆಗಿ ತೊಡಗಿಕೊಳ್ಳುವುದು ಉತ್ತಮ. ಹಲವರಿಗೆ ಸಾಹಿತ್ಯ ಇಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ನೀವು ಬರೆಯಬೇಕಿಲ್ಲ. ಹಲವರಿಗೆ ಸಂಗೀತದ ಪ್ರೀತಿ ಇರುತ್ತದೆ ಎನ್ನುವುದಕ್ಕೆ ನಿಮಗೆ ಸಂಗೀತ ಮಾಧ್ಯಮವಾಗಬೇಕಿಲ್ಲ. ಎಲ್ಲರೂ ಟಿವಿ, ಸಿನಿಮಾ ನೋಡುತ್ತಾರೆ ಎನ್ನುವ ಕಾರಣಕ್ಕೆ ನೀವು ಅದನ್ನು ಅನುಕರಿಸಬೇಕಿಲ್ಲ. ನಿಮ್ಮ ಅಂತರಂಗದಲ್ಲಿ ಬಲವಾದ ಪ್ರಚೋದನೆಯಿದ್ದಾಗ ಮಾತ್ರವೇ ನೀವು ಯಾವುದೇ ಕೆಲಸವನ್ನು ಮಾಡುತ್ತೀರಿ. ಹಾಗೆಯೇ ಮಾಡಬೇಕು ಕೂಡಾ. ಇನ್ನು, ಒಬ್ಬ ವ್ಯಕ್ತಿ ಎಲ್ಲದರಲ್ಲೂ ತೊಡಗಿಕೊಳ್ಳುವುದರಿಂದ ಒಮ್ಮೊಮ್ಮೆ ಆತನ ವಿಶ...