ಪ್ರತಿಭೆ ಮತ್ತು ಶ್ರಮ ವಿಭಜನೆ
ಎಲ್ಲ ಮನುಷ್ಯರಲ್ಲೂ ಒಂದೊಂದು ಬಗೆಯ ಪ್ರತಿಭೆ ಇರುತ್ತದೆಯಂತೆ. ಆದರೆ ಪ್ರತಿಭೆ ಒಂದು ಸ್ವರೂಪವನ್ನು ಪಡೆಯಬೇಕಾದರೆ ಮನುಷ್ಯನು ಒಂದು ಕ್ಷೇತ್ರದಲ್ಲಿ, ಒಂದು ವಿಭಾಗದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ.
ಕೆಲವರಿಗೆ ಸಂಗೀತ, ಕೆಲವರಿಗೆ ಸಾಹಿತ್ಯ, ಕೆಲವರಿಗೆ ಕ್ರೀಡೆ, ಕೆಲವರಿಗೆ ವ್ಯಾಯಾಮ, ಕೆಲವರಿಗೆ ಅಧ್ಯಾತ್ಮ, ಕೆಲವರಿಗೆ ತಂತ್ರಜ್ಞಾನ ಹೀಗೆ ಒಬ್ಬೊಬ್ಬರಿಗೂ ಒಂದಲ್ಲ ಒಂದು ವಿಷಯ ಇಷ್ಟವಾಗುವಂಥದ್ದು ಇರುತ್ತದೆ. ಇನ್ನು ಕೆಲವರಿಗೆ ಒಂದಕ್ಕಿಂತ ಹೆಚ್ಚು, ಹಲವು ವಿಷಯಗಳು ಇಷ್ಟವಾಗುತ್ತವೆ ಮತ್ತು ಆಸಕ್ತಿಯೂ ಇರುತ್ತದೆ.
ಹಲವು ವಿಷಯಗಳಲ್ಲಿ ಆಸಕ್ತಿ ಉತ್ತಮವೇ ಆದರೂ ದೂರದೃಷ್ಟಿಯಿಂದ ನೋಡಿದಾಗ ಒಂದು ವಲಯದಲ್ಲಿ ನಿಮಗಷ್ಟೇ ಆಸಕ್ತಿ ಇರುವ, ನಿಮಗಷ್ಟೇ ವಿಷಯಜ್ಞಾನವಿರುವ ವಿಭಾಗದಲ್ಲಿ ಮಾತ್ರವೇ ಕನ್ಸಿಸ್ಟೆಂಟ್ ಆಗಿ ತೊಡಗಿಕೊಳ್ಳುವುದು ಉತ್ತಮ. ಹಲವರಿಗೆ ಸಾಹಿತ್ಯ ಇಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ನೀವು ಬರೆಯಬೇಕಿಲ್ಲ. ಹಲವರಿಗೆ ಸಂಗೀತದ ಪ್ರೀತಿ ಇರುತ್ತದೆ ಎನ್ನುವುದಕ್ಕೆ ನಿಮಗೆ ಸಂಗೀತ ಮಾಧ್ಯಮವಾಗಬೇಕಿಲ್ಲ. ಎಲ್ಲರೂ ಟಿವಿ, ಸಿನಿಮಾ ನೋಡುತ್ತಾರೆ ಎನ್ನುವ ಕಾರಣಕ್ಕೆ ನೀವು ಅದನ್ನು ಅನುಕರಿಸಬೇಕಿಲ್ಲ. ನಿಮ್ಮ ಅಂತರಂಗದಲ್ಲಿ ಬಲವಾದ ಪ್ರಚೋದನೆಯಿದ್ದಾಗ ಮಾತ್ರವೇ ನೀವು ಯಾವುದೇ ಕೆಲಸವನ್ನು ಮಾಡುತ್ತೀರಿ. ಹಾಗೆಯೇ ಮಾಡಬೇಕು ಕೂಡಾ.
ಇನ್ನು, ಒಬ್ಬ ವ್ಯಕ್ತಿ ಎಲ್ಲದರಲ್ಲೂ ತೊಡಗಿಕೊಳ್ಳುವುದರಿಂದ ಒಮ್ಮೊಮ್ಮೆ ಆತನ ವಿಶೇಷ ಸಾಧನೆ ಕುಂಠಿತವಾಗಬಹುದು. ಏಕೆಂದರೆ ಹಲವು ವಿಷಯಗಳಲ್ಲಿ ತೊಡಗಿಕೊಳ್ಳುವುದರಿಂದ ಆತನಿಗೆ ಯಾವುದೇ ಒಂದು ನಿರ್ದಿಷ್ಟ ವಿಷಯದಲ್ಲಿ ಆಳವಾಗಿ ಹೋಗುವುದಕ್ಕೆ ಕಷ್ಟವಾಗಬಹುದು. ಇದರಿಂದಾಗಿ ಎಲ್ಲಾ ವಿಷಯಗಳ ಸಾಮಾನ್ಯ ಜ್ಞಾನ ಪ್ರಾಪ್ತಿಯಾದೀತೇ ಹೊರತು ಅಸಾಮಾನ್ಯ ಜ್ಞಾನ ಪಡೆಯುವುದು ಕಷ್ಟವೆಂದೇ ಹೇಳಬೇಕು. ಏಕೆಂದರೆ ಪ್ರತಿ ಕ್ಷೇತ್ರದಲ್ಲೂ ತುಂಬ ಕನ್ಸಿಸ್ಟೆಂಟ್ ಆಗಿ ಸಾಧನೆಯನ್ನು ಮಾಡುವವರು ಈ ಯುಗದಲ್ಲಿ ಸಾಕಷ್ಟು ಮಂದಿ ಇರುತ್ತಾರೆ.
ಒಂದೇ ವಿಷಯದಲ್ಲಿ ನಾವು ನಿಪುಣರಾದಾಗ ಒಮ್ಮೊಮ್ಮೆ ನಮಗೆ ನಾವು ಇತರ ವಿಷಯಗಳಲ್ಲಿ ದುರ್ಬಲ ಎಂದೆನಿಸುವುದಿದೆ. ಆದರೆ ನಿಜವಾಗಿ ಯೋಚಿಸಿ ನೋಡಿದರೆ ನಾವು ದುರ್ಬಲರಾಗಿರುವುದಿಲ್ಲ. ಏಕೆಂದರೆ ನಮಗೆ ಮಾತ್ರ ತಿಳಿದಿರುವ ವಿಷಯದಲ್ಲಿ ನಾವು ಹೆಚ್ಚು ಪ್ರಭಾವಶಾಲಿಯಾಗಿ ಮತ್ತು ಪ್ರಬಲರಾಗಿಯೂ ಇರುತ್ತೇವೆ. ಎಲ್ಲರೂ ಎಲ್ಲದರಲ್ಲೂ ನಿಪುಣರಾಗುವ ಅಗತ್ಯವಿಲ್ಲ. ಆದರೆ ಪರಸ್ಪರ ನಾವು ಸಹಕಾರವನ್ನು ಪಡೆಯಬೇಕು ಮತ್ತು ಇತರ ವ್ಯಕ್ತಿಗಳು ಯಾರ ಸಹಕಾರವನ್ನು ನಾವು ಪಡೆಯುತ್ತೇವೋ ಅವರ ಕೆಲಸ, ಶ್ರಮಕ್ಕೆ ನಾವು ಬೆಲೆಯನ್ನು, ಹಣವನ್ನಾದರೂ ನೀಡಬೇಕು. ಬದಲಾಗಿ ನಾವೇ ಎಲ್ಲ ಉದ್ಯೋಗಗಳನ್ನೂ ಮಾಡತೊಡಗಿದರೆ ಅದರಲ್ಲಿ ಪಳಗಿದವರಿಗಿಂತ ನಮಗೆ ಅದನ್ನು ನಿರ್ವಹಿಸುವಾಗ ಸಮಯ ಹೆಚ್ಚು ತಗಲುತ್ತದೆ, ಹಾಗಾಗಿ ನಮ್ಮ ನಿಪುಣತೆಯಿರುವ ಕೆಲಸದಲ್ಲಿ ತೊಡಗಲು ಇದರಿಂದ ಕಡಿಮೆ ಸಮಯ ದೊರೆಯಬಹುದು ಹಾಗೂ ಇದರಿಂದ ನಾವು ಯಾವುದೇ ಒಂದು ವಿಭಾಗದಲ್ಲಿ ನಿರ್ದಿಷ್ಟವಾಗಿ ಗುರುತಿಸಲ್ಪಡುವುದು ಕ್ರಮೇಣ ಕಡಿಮೆಯಾಗುತ್ತದೆ.
ಶ್ರಮ ವಿಭಜನೆ (Division of Labour) ಎಂಬ ಸಿದ್ಧಾಂತ ಅರ್ಥಶಾಸ್ತ್ರದಲ್ಲಿ ಬರುತ್ತದೆ. ಅದರಲ್ಲಿ ಉತ್ಪಾದನೆಯ ಪ್ರಮಾಣ ಹೆಚ್ಚಿಸಲು ಕೆಲಸವನ್ನು ಪಾಲು ಮಾಡಿ ವಹಿಸಿಕೊಡುವುದರಿಂದ ಉತ್ಪಾದನೆಯನ್ನು ಹೆಚ್ಚಿಸಬಹುದು ಎಂದು ತಜ್ಞರು ಹೇಳಿದ್ದಾರೆ.
ಇತ್ತೀಚೆಗೆ ಸಣ್ಣ ಮಕ್ಕಳು ಯಾವುದೇ ಪ್ರಾಥಮಿಕ ಶಿಕ್ಷಣ ಪೂರೈಸುವ ಮುನ್ನವೇ ಕಂಪ್ಯೂಟರ್ ಪರಿಣತಿ ಸಾಧಿಸುವುದು, ಕಲಾವಿದರಾಗುವುದು, ವಿಜ್ಞಾನಿಯಾಗುವುದು, ಕಾದಂಬರಿ ಬರೆಯುವುದು, ಗಿನ್ನಿಸ್ ದಾಖಲೆ ಮಾಡುವುದು ನೋಡಿದ್ದೇವೆ. ಒಂದು ವಿಷಯವನ್ನು ಚಿಕ್ಕ ವಯಸ್ಸಿನಿಂದಲೇ ಗುರಿ ಮಾಡಿಕೊಂಡದ್ದರಿಂದ ಆ ಸಾಧನೆ ಸಾಧ್ಯವಾಗುತ್ತದೆ. ಪ್ರಸ್ತುತ ಜಾರಿಯಾಗುತ್ತಿರುವ ಹೊಸ ಶಿಕ್ಷಣ ನೀತಿಯು ಕೂಡಾ ನಿರ್ದಿಷ್ಟ ವಿಷಯದ ತಜ್ಞರನ್ನು, ಪರಿಣಿತರನ್ನು ತಯಾರು ಮಾಡುವುದಕ್ಕೆ ಒತ್ತು ನೀಡುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವುದೇ ಕ್ಷೇತ್ರದಲ್ಲಿ ಆಳವಾದ ಜ್ಞಾನ ಹೊಂದಿದವರ ಸಂಖ್ಯೆ ಹಾಗೂ ಸಾಧಕರ ಸಂಖ್ಯೆಯೂ ಕೂಡ ಹೆಚ್ಚಾಗಬಹುದೇನೋ.
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment