ಆಧುನಿಕ ವೃತ್ತಿಪರ ಶಿಕ್ಷಣದ ಒಳನೋಟ
ಜಗತ್ತಿನಲ್ಲಿ ಒಂದಷ್ಟು ಮಂದಿ ಸಂತೋಷಕ್ಕಾಗಿ ಕೆಲಸ ಮಾಡಿದರೆ, ಇನ್ನೊಂದಷ್ಟು ಜನ ಹಣಕ್ಕಾಗಿಯೇ ಕೆಲಸ ಮಾಡುತ್ತಾರೆ. ಒಂದು ಕಾಲದಲ್ಲಿ ವಸ್ತುವಿನಿಮಯ ಪದ್ಧತಿಯ ಬದಲು ಜಾರಿಗೆ ಬಂದ ಹಣ ಇಂದು ಶ್ರೀಮಂತಿಕೆಯ ಕುರುಹಾಗಿ, ತಾರತಮ್ಯದ, ಆಡಂಬರದ, ಅಧಿಕಾರಶಾಹಿಯ, ಸೊಕ್ಕಿನ, ಶೋಷಣೆಯ ಅಸ್ತ್ರವಾಗಿರುವುದು ದುರದೃಷ್ಟಕರ. ಬದುಕಲಿಕ್ಕಾಗಿ ತಿನ್ನುವುದು ಮತ್ತು ತಿನ್ನಲಿಕ್ಕಾಗಿಯೇ ಬದುಕುವುದು - ಇವೆರಡೂ ಬೇರೆಬೇರೆ. ತಿನ್ನಲಿಕ್ಕಾಗಿಯೇ ಬದುಕುವವರು ಹಣದ ಉದ್ದೇಶಕ್ಕಾಗಿಯೇ ವಿವಿಧ ವೃತ್ತಿಗಳನ್ನು ಮಾಡುತ್ತಾರೆ. ವಿವಿಧ ವೃತ್ತಿಪರ ಅಧ್ಯಯನ, ತರಬೇತಿ ಘಟಕಗಳನ್ನು, ಮಹಾವಿದ್ಯಾಲಯ, ವಿಶ್ವವಿದ್ಯಾಲಯಗಳನ್ನು ಪ್ರತ್ಯೇಕ ವಿಷಯಗಳ ಪರಿಣಿತರನ್ನು ತಯಾರುಗೊಳಿಸಲಿಕ್ಕಾಗಿ ತೆರೆಯಲಾಗಿದೆ. ಆದರೆ ವೃತ್ತಿಪರತೆಯ ಭರಾಟೆಯಲ್ಲಿ ಕಲೆ - ಭಾಷೆ - ತತ್ತ್ವಶಾಸ್ತ್ರಗಳ ತಿರುಳನ್ನು, ಮೂಲವಿಜ್ಞಾನವನ್ನು ಗ್ರಹಿಸಿಕೊಳ್ಳುವ ಸೂಕ್ಷ್ಮತೆಯನ್ನು ಅನೇಕರು ಕಳೆದುಕೊಂಡಿದ್ದಾರೆ. ವೃತ್ತಿಪರತೆಯನ್ನು ಬಹಳ ಮಂದಿ ಗಳಿಸಿಕೊಂಡು ಸಾಕಷ್ಟು ದುಡ್ಡು ಸಂಪಾದಿಸಿದರೂ ಅವರಲ್ಲಿ ಎಲ್ಲರೂ ನಿಜಕ್ಕೂ ಪಂಡಿತರಾಗಿಲ್ಲ. ಹೀಗಾಗಿ ಈ ಮಹಾಜಗತ್ತಿನಲ್ಲಿ ಈಗ ದುಡ್ಡು ಎಂಬುದು ಯಾರು ಶ್ರೇಷ್ಠ - ಯಾರು ಶ್ರೇಷ್ಠರಲ್ಲ, ಯಾರು ಜ್ಞಾನಿ - ಯಾರು ಜ್ಞಾನಿಯಲ್ಲ ಎಂಬುದನ್ನು ಗುರುತಿಸುವ ಒಂದು ಮಾನದಂಡವಂತೂ ಆಗಿಯೇ ಇಲ್ಲ. ಹಣಸಂಪಾದನೆಯ ಉದ್ದೇಶದಿಂದ ವಿದ್ಯಾಭ್ಯಾಸವನ್ನಾಗಲೀ, ಯಾವುದೇ ಒಂದು ಉದ್ಯೋಗವ...