ಆಧುನಿಕ ವೃತ್ತಿಪರ ಶಿಕ್ಷಣದ ಒಳನೋಟ

ಜಗತ್ತಿನಲ್ಲಿ ಒಂದಷ್ಟು ಮಂದಿ ಸಂತೋಷಕ್ಕಾಗಿ ಕೆಲಸ ಮಾಡಿದರೆ, ಇನ್ನೊಂದಷ್ಟು ಜನ ಹಣಕ್ಕಾಗಿಯೇ ಕೆಲಸ ಮಾಡುತ್ತಾರೆ. ಒಂದು ಕಾಲದಲ್ಲಿ ವಸ್ತುವಿನಿಮಯ ಪದ್ಧತಿಯ ಬದಲು ಜಾರಿಗೆ ಬಂದ ಹಣ ಇಂದು ಶ್ರೀಮಂತಿಕೆಯ ಕುರುಹಾಗಿ, ತಾರತಮ್ಯದ, ಆಡಂಬರದ, ಅಧಿಕಾರಶಾಹಿಯ, ಸೊಕ್ಕಿನ, ಶೋಷಣೆಯ ಅಸ್ತ್ರವಾಗಿರುವುದು ದುರದೃಷ್ಟಕರ.
ಬದುಕಲಿಕ್ಕಾಗಿ ತಿನ್ನುವುದು ಮತ್ತು ತಿನ್ನಲಿಕ್ಕಾಗಿಯೇ ಬದುಕುವುದು - ಇವೆರಡೂ ಬೇರೆಬೇರೆ. ತಿನ್ನಲಿಕ್ಕಾಗಿಯೇ ಬದುಕುವವರು ಹಣದ ಉದ್ದೇಶಕ್ಕಾಗಿಯೇ ವಿವಿಧ ವೃತ್ತಿಗಳನ್ನು ಮಾಡುತ್ತಾರೆ. ವಿವಿಧ ವೃತ್ತಿಪರ ಅಧ್ಯಯನ, ತರಬೇತಿ ಘಟಕಗಳನ್ನು, ಮಹಾವಿದ್ಯಾಲಯ, ವಿಶ್ವವಿದ್ಯಾಲಯಗಳನ್ನು ಪ್ರತ್ಯೇಕ ವಿಷಯಗಳ ಪರಿಣಿತರನ್ನು ತಯಾರುಗೊಳಿಸಲಿಕ್ಕಾಗಿ ತೆರೆಯಲಾಗಿದೆ. ಆದರೆ ವೃತ್ತಿಪರತೆಯ ಭರಾಟೆಯಲ್ಲಿ ಕಲೆ - ಭಾಷೆ - ತತ್ತ್ವಶಾಸ್ತ್ರಗಳ ತಿರುಳನ್ನು, ಮೂಲವಿಜ್ಞಾನವನ್ನು ಗ್ರಹಿಸಿಕೊಳ್ಳುವ ಸೂಕ್ಷ್ಮತೆಯನ್ನು ಅನೇಕರು ಕಳೆದುಕೊಂಡಿದ್ದಾರೆ. ವೃತ್ತಿಪರತೆಯನ್ನು ಬಹಳ ಮಂದಿ ಗಳಿಸಿಕೊಂಡು ಸಾಕಷ್ಟು ದುಡ್ಡು ಸಂಪಾದಿಸಿದರೂ ಅವರಲ್ಲಿ ಎಲ್ಲರೂ ನಿಜಕ್ಕೂ ಪಂಡಿತರಾಗಿಲ್ಲ. ಹೀಗಾಗಿ ಈ ಮಹಾಜಗತ್ತಿನಲ್ಲಿ ಈಗ ದುಡ್ಡು ಎಂಬುದು ಯಾರು ಶ್ರೇಷ್ಠ - ಯಾರು ಶ್ರೇಷ್ಠರಲ್ಲ, ಯಾರು ಜ್ಞಾನಿ - ಯಾರು ಜ್ಞಾನಿಯಲ್ಲ ಎಂಬುದನ್ನು ಗುರುತಿಸುವ ಒಂದು ಮಾನದಂಡವಂತೂ ಆಗಿಯೇ ಇಲ್ಲ.
ಹಣಸಂಪಾದನೆಯ ಉದ್ದೇಶದಿಂದ ವಿದ್ಯಾಭ್ಯಾಸವನ್ನಾಗಲೀ, ಯಾವುದೇ ಒಂದು ಉದ್ಯೋಗವನ್ನಾಗಲೀ ಮಾಡುವುದು ನಿಕೃಷ್ಟ ಎಂಬ ಮಾತನ್ನು ನಾವೆಲ್ಲ ಒಪ್ಪಿಕೊಳ್ಳಲೇಬೇಕು. ಇಂದಿನ ವಿದ್ಯಾರ್ಥಿಗಳೆಲ್ಲ ಒಮ್ಮೆ ಯೋಚಿಸಿ ನೋಡಿ. ಭಾಷೆ, ಕಲೆ, ವಿಜ್ಞಾನ ಏನೂ ಆಗಿರಬಹುದು. ನಿಮ್ಮ ತರಗತಿಗಳಲ್ಲಿ ಸಂಶೋಧಕರಾಗಿ ನೀವು ಆಸಕ್ತಿ ವಹಿಸಿದ್ದೀರಾ? ಪಕ್ಕಾ ಜ್ಞಾನಪಿಪಾಸುಗಳಾಗಿ ಏನನ್ನಾದರೂ ತಿಳಿಯಲು, ಕಂಡುಹಿಡಿಯಲು ಪ್ರಯತ್ನಿಸಿದ್ದೀರಾ? ನಿಮ್ಮ ಉತ್ತರ ಹೌದಾದರೆ ನೀವು ನಿಜಕ್ಕೂ ಒಬ್ಬ ಅತ್ಯುತ್ತಮ ವಿದ್ಯಾರ್ಥಿ ಎಂಬುದರಲ್ಲಿ ಎರಡು ಮಾತಿಲ್ಲ. ಒಂದು ವೇಳೆ ನೀವೊಬ್ಬ ವೃತ್ತಿನಿರತರಾಗಿದ್ದರೂ ಕೂಡಾ ಆಳವಾದ ಅಧ್ಯಯನಶೀಲತೆ, ಸೂಕ್ಷ್ಮಗ್ರಾಹಕತ್ವ, ಮೌಲ್ಯನಿರ್ಣಯ ಸಾಮರ್ಥ್ಯ ಕೆಟ್ಟಿದ್ದರೆ ಅಥವಾ ಕೆಲಸ ಮಾಡುತ್ತಿಲ್ಲ ಎಂದಾದರೆ ನೀವೊಬ್ಬ ಸುಶಿಕ್ಷಿತ ವ್ಯಕ್ತಿಯೆನ್ನುವುದಾದರೂ ಹೇಗೆ?
ಆಧುನಿಕ ಪ್ರಪಂಚದಲ್ಲಿ ಜನರು ಸಂಪತ್ತನ್ನು ಮಾತ್ರ ಅಳೆದು, ತೂಗಿ - ಹೋಲಿಸುವ, ಮಣೆ ಹಾಕುವ, ಪೈಪೋಟಿ ನೀಡುವ ಒಂದು ಸಂಕುಚಿತ ಪ್ರವೃತ್ತಿಗೆ ಎಲ್ಲರೂ ಜೋತುಬಿದ್ದು ಕೊನೆಗೆ ಸ್ಪರ್ಧಿಸಲಾಗದೆ ಕಂಗಾಲಾಗುವ ಒಂದು ವಿಚಿತ್ರ ವರ್ತುಲದಲ್ಲಿ ಸಿಲುಕಿಬಿಟ್ಟಿದ್ದಾರೆ. ಇದಕ್ಕೆ ಕಾರಣ ಅವರು ನೀಡುತ್ತಿರುವ ಸ್ಪರ್ಧೆ ಸಾಂಪತ್ತಿಕ ಸ್ಪರ್ಧೆಯಾಗಿರುವುದು. ಮಕ್ಕಳನ್ನು, ಜನಸಮುದಾಯವನ್ನು ಹಣದ ಗುಲಾಮರನ್ನಾಗಿ ಬೆಳೆಸಲಾಗುತ್ತಿದೆ.
ವ್ಯಾವಹಾರಿಕ ಪ್ರಪಂಚದ ಎಲ್ಲವೂ ಕಪಟತೆಯಿಂದ ಕೂಡಿದೆ. ಒರಿಜಿನಲ್ ಮುಖಗಳು ಕಣ್ಮರೆಯಾಗಿವೆ. ಎಲ್ಲೆಡೆ ಹಗಲುವೇಷಗಳು. ಹಣದ ಬಯಕೆಗೆ ಮಿತಿಯಿಲ್ಲ ಹಾಗೂ ಅದು ಬೇಡವೆನ್ನುವ ಸಾಮರ್ಥ್ಯ ಯಾರಿಗೂ ಇಲ್ಲ. ಹಾಗಾಗಿ ಪ್ರಪಂಚವನ್ನು, ಅದರಾಚೆಗಿನ ಅನಂತ ವಿಶ್ವವನ್ನು ನೋಡುವುದಕ್ಕೆ ನಾವು ಖಂಡಿತವಾಗಿಯೂ ವಿಫಲರಾಗುತ್ತಿದ್ದೇವೆ. ವಿಶ್ವದ ಅನಂತ ವಿಸ್ತಾರ, ಅಪರಿಮಿತ ಬಾಹುಳ್ಯದ ಮುಂದೆ ನಮ್ಮ ಸಂಕುಚಿತ ಸ್ವಾರ್ಥ ಸಾಧನೆಯ ದುಸ್ಸಾಹಸ ಕ್ಷುಲ್ಲಕವಾಗಿ, ಬಡವಾಗಿ ತೋರುತ್ತಿದೆ.
ಪ್ರಸ್ತುತ, ನಾವು ಅಂದುಕೊಂಡಿರುವ, ಕಲಿತಿರುವ, ಗೊತ್ತಿದೆ ಎನ್ನುವ ಹೆಚ್ಚಿನ ತಿಳುವಳಿಕೆ ಏನಿದೆಯೋ ಅದು ಜ್ಞಾನವಲ್ಲ. ಹೆಚ್ಚಿನವು 'ಎಪ್ಲೈಡ್ ಜ್ಞಾನ'. ನಾವು ಮೊದಲಿಗರಾಗಬೇಕೆಂಬ ಪೈಪೋಟಿ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಬಿತ್ತುವ ಹಣ ದುಷ್ಟ ಹಣವಾಗಿದೆ. ಹಣ ನಿಜವಾಗಿಯೂ ದುಷ್ಟವಲ್ಲದಿದ್ದರೂ ಅದನ್ನು ಬಳಸುವ ಭ್ರಷ್ಟ ಮನುಷ್ಯರ ಭಂಡತನದಿಂದ ದುಷ್ಟವಾಗಿದೆ.
ಇಂದು ಒಳ್ಳೆಯ ಸಾಹಿತ್ಯ, ವಿಜ್ಞಾನ, ಕಲೆ, ತತ್ತ್ವಶಾಸ್ತ್ರ ಇವೆಲ್ಲವೂ ಲೈಬ್ರೆರಿಗಳಲ್ಲಿ ಇದ್ದರೂ ಓದುಗರೇ ಕಡಿಮೆ. ಇಂಟರ್‌ನೆಟ್ ಹೊಕ್ಕರೆ, ಆಳವಾಗಿ ತಿಳಿಯುವ ಮನಸ್ಸಿದ್ದರೆ ಒಳ್ಳೆಯ ಅರಿವಿಗೆ ಅವಕಾಶ ಇದೆಯಾದರೂ ಹುಡುಕಾಡುವವರೇ ವಿರಳ. ಅಬದ್ಧವಾದ, ಅಪ್ರಬುದ್ಧವಾದ ಆಲೋಚನೆಗಳಿಂದಾಗಿ, ವಿಕೃತಿಯಿಂದಾಗಿ ಈ ಜಗತ್ತು ವಿಘಟನೆಯಾಗುತ್ತಾ ಹೋಗುತ್ತಿದೆ.
ಒಟ್ಟಿನಲ್ಲಿ, ಮನುಕುಲದ ದೃಷ್ಟಿಯು ಎಂದಿಗೂ ಸಂಕುಚಿತವಾಗಕೂಡದು. ನಮ್ಮ ಸಮಾಜದಲ್ಲಿ ಹಣದ ದುರಾಸೆ, ದುರ್ಬಳಕೆ, ಭ್ರಷ್ಟಾಚಾರ ನಿಲ್ಲಬೇಕು. ಹಣದ ಉದ್ದೇಶವನ್ನು ಬಿಟ್ಟು ಸಂತೋಷಕ್ಕಾಗಿ ಕೆಲಸ ಮಾಡಿದರೆ ಸಂತೃಪ್ತಿ ನಿಮ್ಮದಾಗುತ್ತದೆ.
✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್