ಶಿಕ್ಷಕರಿಗೆ ಒತ್ತಡ ಹೇರುವುದರಿಂದ ನಷ್ಟವೇ ಹೊರತು ಲಾಭವಿಲ್ಲ
ನನ್ನ ಪರಿಚಯದ ಕನ್ನಡ ಶಿಕ್ಷಕಿಯೊಬ್ಬರು ಸೇವೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡರು. ಇತ್ತೀಚೆಗೆ ಶಿಕ್ಷಣ ಇಲಾಖೆಯಲ್ಲಿ, ಅದರಲ್ಲೂ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಲ್ಲಿ ರಾಜೀನಾಮೆ ಮತ್ತು ಸ್ವಯಂ ನಿವೃತ್ತಿಯ ಪ್ರಕರಣಗಳು ಹೆಚ್ಚಾಗಿವೆ. ಶಿಕ್ಷಕರಲ್ಲಿ ಹಲವರು ರಕ್ತದೊತ್ತಡ, ಉದ್ವೇಗ, ಮಧುಮೇಹ ಹೀಗೆ ಹಲವಾರು ಮನೋದೈಹಿಕ, ಒತ್ತಡದ, ಜೀವನಶೈಲಿಯ ಕಾರಣ ಬರುವ ಕಾಯಿಲೆಗಳಿಂದ ನರಳುತ್ತಿದ್ದಾರೆ. ಇದರಿಂದಾಗಿ ಹಠಾತ್ ಸಂಭವಿಸುತ್ತಿರುವ ಶಿಕ್ಷಕರ ಸಾವುಗಳ ಸಂಖ್ಯೆಯೂ ಕೂಡಾ ಹೆಚ್ಚಾಗಿದೆ. ಕಾರಣ ಸ್ಪಷ್ಟ: ಇತ್ತೀಚೆಗೆ ಶಿಕ್ಷಕರ ಮೇಲೆ ಅತಿಯಾದ ಒತ್ತಡ ಇದೆ. ಬುನಾದಿ ಸಾಮರ್ಥ್ಯ ಮತ್ತು ಸಂಖ್ಯಾಜ್ಞಾನವನ್ನು ಎಲ್ಲಾ ವಿದ್ಯಾರ್ಥಿಗಳು ಸಾಧಿಸುವಂತಾಗಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ವರದಿಯನ್ನು ಕೇಳುತ್ತಿದ್ದಾರೆ. ಇದರಿಂದಾಗಿ ಅತೀ ಹೆಚ್ಚಿನ ಒತ್ತಡ ಬೀಳುವುದು ವಿಶೇಷವಾಗಿ ಪ್ರೌಢಶಾಲೆಗಳ ಭಾಷೆ ಹಾಗೂ ಗಣಿತ ಶಿಕ್ಷಕರಿಗೆ ಎಂಬುದಂತೂ ನಿಜವೇ. ಒಂದು ಸಂದರ್ಭವಿತ್ತು. ಸರ್ವ ಶಿಕ್ಷಣ ಅಭಿಯಾನ ಆಗ ಜಾರಿಯಾಗಿದ್ದರೂ, ಹೆಚ್ಚಾಗಿ ಬುನಾದಿ ಸಾಮರ್ಥ್ಯ ಮತ್ತು ಸಂಖ್ಯಾಜ್ಞಾನ ಹೊಂದಿದ ಮಕ್ಕಳೇ ಪ್ರೌಢಶಾಲೆಗಳ ಮೆಟ್ಟಿಲೇರುತ್ತಿದ್ದರು. ಒಂದು ವೇಳೆ ಬುನಾದಿ ಸಾಮರ್ಥ್ಯ ಹೊಂದಿಲ್ಲದಿದ್ದರೂ ವಿದ್ಯಾರ್ಥಿಗಳು ಹಾಗೂ ಪೋಷಕರ ಮನವೊಲಿಸಿ ಆವಾಗಲೆಲ್ಲಾ ಒಂದಷ್ಟು ಸುಧಾರಣೆ ಸಾಧ್ಯವಾಗುತ್ತಿತ್ತು. ದಶಕಗಳಿಂದೀಚೆಗೆ ಬದಲಾದ ಪರಿಸ್ಥಿ...