ಶಿಕ್ಷಕರಿಗೆ ಒತ್ತಡ ಹೇರುವುದರಿಂದ ನಷ್ಟವೇ ಹೊರತು ಲಾಭವಿಲ್ಲ

ನನ್ನ ಪರಿಚಯದ ಕನ್ನಡ ಶಿಕ್ಷಕಿಯೊಬ್ಬರು ಸೇವೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡರು. ಇತ್ತೀಚೆಗೆ ಶಿಕ್ಷಣ ಇಲಾಖೆಯಲ್ಲಿ, ಅದರಲ್ಲೂ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಲ್ಲಿ ರಾಜೀನಾಮೆ ಮತ್ತು ಸ್ವಯಂ ನಿವೃತ್ತಿಯ ಪ್ರಕರಣಗಳು ಹೆಚ್ಚಾಗಿವೆ. ಶಿಕ್ಷಕರಲ್ಲಿ ಹಲವರು ರಕ್ತದೊತ್ತಡ, ಉದ್ವೇಗ, ಮಧುಮೇಹ ಹೀಗೆ ಹಲವಾರು ಮನೋದೈಹಿಕ, ಒತ್ತಡದ, ಜೀವನಶೈಲಿಯ ಕಾರಣ ಬರುವ ಕಾಯಿಲೆಗಳಿಂದ ನರಳುತ್ತಿದ್ದಾರೆ. ಇದರಿಂದಾಗಿ ಹಠಾತ್ ಸಂಭವಿಸುತ್ತಿರುವ ಶಿಕ್ಷಕರ ಸಾವುಗಳ ಸಂಖ್ಯೆಯೂ ಕೂಡಾ ಹೆಚ್ಚಾಗಿದೆ.
ಕಾರಣ ಸ್ಪಷ್ಟ: ಇತ್ತೀಚೆಗೆ ಶಿಕ್ಷಕರ ಮೇಲೆ ಅತಿಯಾದ ಒತ್ತಡ ಇದೆ. ಬುನಾದಿ ಸಾಮರ್ಥ್ಯ ಮತ್ತು ಸಂಖ್ಯಾಜ್ಞಾನವನ್ನು ಎಲ್ಲಾ ವಿದ್ಯಾರ್ಥಿಗಳು ಸಾಧಿಸುವಂತಾಗಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ವರದಿಯನ್ನು ಕೇಳುತ್ತಿದ್ದಾರೆ. ಇದರಿಂದಾಗಿ ಅತೀ ಹೆಚ್ಚಿನ ಒತ್ತಡ ಬೀಳುವುದು ವಿಶೇಷವಾಗಿ ಪ್ರೌಢಶಾಲೆಗಳ ಭಾಷೆ ಹಾಗೂ ಗಣಿತ ಶಿಕ್ಷಕರಿಗೆ ಎಂಬುದಂತೂ ನಿಜವೇ.
ಒಂದು ಸಂದರ್ಭವಿತ್ತು. ಸರ್ವ ಶಿಕ್ಷಣ ಅಭಿಯಾನ ಆಗ ಜಾರಿಯಾಗಿದ್ದರೂ, ಹೆಚ್ಚಾಗಿ ಬುನಾದಿ ಸಾಮರ್ಥ್ಯ ಮತ್ತು ಸಂಖ್ಯಾಜ್ಞಾನ ಹೊಂದಿದ ಮಕ್ಕಳೇ ಪ್ರೌಢಶಾಲೆಗಳ ಮೆಟ್ಟಿಲೇರುತ್ತಿದ್ದರು. ಒಂದು ವೇಳೆ ಬುನಾದಿ ಸಾಮರ್ಥ್ಯ ಹೊಂದಿಲ್ಲದಿದ್ದರೂ ವಿದ್ಯಾರ್ಥಿಗಳು ಹಾಗೂ ಪೋಷಕರ ಮನವೊಲಿಸಿ ಆವಾಗಲೆಲ್ಲಾ ಒಂದಷ್ಟು ಸುಧಾರಣೆ ಸಾಧ್ಯವಾಗುತ್ತಿತ್ತು. ದಶಕಗಳಿಂದೀಚೆಗೆ ಬದಲಾದ ಪರಿಸ್ಥಿತಿಯಲ್ಲಿ ಮಕ್ಕಳು ಬದಲಾಗಿದ್ದಾರೆ, ಪೋಷಕರು ಬದಲಾಗಿದ್ದಾರೆ, ಸಮಾಜ ಸಾಕಷ್ಟು ಬದಲಾಗಿದೆ. ಈಗ ಮಕ್ಕಳನ್ನು ಶಿಕ್ಷಿಸುವಂತಿಲ್ಲ. ಪೋಷಕರಿಗೂ ತಮ್ಮ ಮಕ್ಕಳ ಮೇಲೆ ಹಿಡಿತವಿಲ್ಲ. ಈ ನಡುವೆ ಅನೇಕ ಆಕರ್ಷಣೆ ಮತ್ತು ಪ್ರಲೋಭನೆಗಳಿಗೆ ಹದಿಹರೆಯದ ಮಕ್ಕಳೂ ಮಾರುಹೋಗಿದ್ದಾರೆ. ನೀತಿಗಳು ಮತ್ತು ಕಾನೂನುಗಳೇ ಸಮಾಜವನ್ನು ಸಾಮೂಹಿಕವಾಗಿ ಭ್ರಷ್ಟವಾಗಿಸುತ್ತಿರುವ ಅತೀ ಕೆಟ್ಟ ಸಮಯದಲ್ಲಿ ಶಿಕ್ಷಕರು ಮಾತ್ರ ಒಳ್ಳೆಯದನ್ನು ಮಾಡಬೇಕಾಗಿದೆ.
ಇಂದು ಒಂದಷ್ಟು ಗುಣಮಟ್ಟದ ಮಕ್ಕಳು ಅದಾಗಲೇ ಖಾಸಗಿ ಶಾಲೆಗಳಲ್ಲಿ ಶುಲ್ಕ ತೆತ್ತು ದಾಖಲಾಗುತ್ತಾರೆ. ಅಲ್ಲಿ ದಾಖಲಾಗುವ ಸ್ಥಿತಿಗತಿಗಳಿಲ್ಲದ ಮಕ್ಕಳು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸೇರಿಕೊಳ್ಳುತ್ತಾರೆ. ಅನುದಾನಿತ ಶಾಲೆಗಳು ಹಾಗೂ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದಿಂದ ವೇತನ ಪಡೆಯುವ ಸಿಬ್ಬಂದಿಗಳು ಇದ್ದರೂ ಸರ್ಕಾರಿ ಶಾಲೆಗಳಿಗೆ ಒದಗಿಸಲಾಗುವ ಎಲ್ಲಾ ಸವಲತ್ತುಗಳು ಅನುದಾನಿತ ಸಂಸ್ಥೆಗಳಿಗೆ ಲಭ್ಯವಾಗುವುದಿಲ್ಲ. ಹಾಗೆಯೇ ಕನಿಷ್ಠ ಮಕ್ಕಳ ಸಂಖ್ಯೆ, ನೇಮಕಾತಿ, ವರ್ಗಾವಣೆ, ಸೌಲಭ್ಯಗಳು, ತರಬೇತಿ ಮತ್ತಿತರ ಅನೇಕ ನಿಯಮಗಳಲ್ಲಿ ವ್ಯತ್ಯಾಸವಿದೆ. ಅನೇಕ ಅನುದಾನಿತ ಸಂಸ್ಥೆಗಳಲ್ಲಿ ಪ್ರತಿಯೊಂದು ವಿಷಯಕ್ಕೆ ಬೋಧಿಸಬಲ್ಲ ಪ್ರತ್ಯೇಕ ಅಧ್ಯಾಪಕರು ಕೂಡ ಇಲ್ಲ. ಬೋಧಕೇತರ ಸಿಬ್ಬಂದಿ ಇಲ್ಲ. ಹೆಚ್ಚಿನ ಕೆಲಸಗಳನ್ನು ಇರುವ ಅಧ್ಯಾಪಕರೇ ಪಾತ್ರಾಭಿನಯದಂತೆ ನಿರ್ವಹಿಸುತ್ತಾ ದಿನಪೂರ್ತಿ ಕಾರ್ಯಗಳಲ್ಲಿ ವ್ಯಸ್ತರಾಗಿ ಇರಬೇಕಾಗಿದೆ. ಈ ನಡುವೆ ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು, ಪುಸ್ತಕ, ಬ್ಯಾಗ್ ಇತ್ಯಾದಿ ಉಚಿತಗಳನ್ನು ಮಕ್ಕಳಿಗೆ ಕೊಡುವುದರಿಂದ ಚಿಕ್ಕಂದಿನಿಂದಲೂ ಮಕ್ಕಳಿಗೆ ಯಾವುದೇ ವಸ್ತುವಿನ ಮೌಲ್ಯ ತಿಳಿಯದೇ ಸೋಮಾರಿಗಳಾಗಲು ಗ್ರಾಸವಾದಂತಾಗಿದೆ. ಒಂದು ರೀತಿಯಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡುವುದು ಹರಸಾಹಸವೇ ಸರಿ.
ನಮ್ಮ ರಾಜ್ಯದಲ್ಲಿ ನಡೆಸುವ ಎಸ್ಸೆಸ್ಸೆಲ್ಸಿ ಪರೀಕ್ಷಾ ವಿಧಾನ ಮಾತ್ರ ಬೆಚ್ಚಿ ಬೀಳಿಸುವಂತಿದೆ. ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ಇನ್ನಿತರ ರಾಜ್ಯಗಳಲ್ಲಿನ 10ನೇ ತರಗತಿ ಪರೀಕ್ಷೆಯಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಕ್ರಮವನ್ನು ಯಥಾವತ್ತಾಗಿ ಅಳವಡಿಸಲಾಗಿದೆ. ಆಂತರಿಕ ಮತ್ತು ಬಾಹ್ಯ ಅಂಕ ಸೇರಿ 30ರಿಂದ 35 ಶೇ ಬಂದಾಗ ಅಲ್ಲಿ ಉತ್ತೀರ್ಣತೆ ನಿರ್ಧಾರವಾಗುತ್ತದೆ. ಆದರೆ, ನಮ್ಮ ರಾಜ್ಯದಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಾಹ್ಯ ಪರೀಕ್ಷೆಯೊಂದರಲ್ಲೇ ವಿದ್ಯಾರ್ಥಿ 35 ಶೇ. ಪಡೆಯಬೇಕು ಎಂಬ ನಿಯಮವಿದೆ. ಆಂತರಿಕ ಅಂಕಗಳಿಗೆ ಫಲಿತಾಂಶದಲ್ಲಿ ಯಾವುದೇ ಮಹತ್ವದ ಬೆಲೆ ಇಲ್ಲ. ಪರೀಕ್ಷಾ ವಿಧಾನದಲ್ಲಿ ಸರಳತೆ ತರುವ ಬದಲು ರಾಜ್ಯದಲ್ಲಿ ಸರ್ಕಾರ ಮಕ್ಕಳಿಗೆ ವರ್ಷದಲ್ಲಿ ಮೂರು ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿ ದೊಂಬರಾಟ ನಡೆಸುತ್ತಿದೆ. ಪರೀಕ್ಷಾ ನಿಯಮದಲ್ಲಿ ಬದಲಾವಣೆಗೆ ತಿದ್ದುಪಡಿ ತರಲು ಚಿಂತನೆ ನಡೆಸುತ್ತಿರುವ ರಾಜ್ಯ ಶಿಕ್ಷಣ ಇಲಾಖೆ ಇನ್ನೂ ಅದನ್ನು ಜಾರಿ ಮಾಡದೆ ಆ ಚಿಂತನೆ ನೆನೆಗುದಿಗೆ ಬೀಳುವಂತಿದೆ.
ಪ್ರಸ್ತುತ ಬುನಾದಿ ಸಾಮರ್ಥ್ಯ ಮತ್ತು ಸಂಖ್ಯಾಜ್ಞಾನ ಸಾಧಿಸುವಲ್ಲಿ ಎಡವಲು ಪ್ರೌಢಶಾಲೆ ಶಿಕ್ಷಕರು ಮಾತ್ರ ಜವಾಬ್ದಾರರೇ ಅಥವಾ ಒಟ್ಟು ವ್ಯವಸ್ಥೆಯ ಪಾತ್ರ ಇದರಲ್ಲಿ ಇಲ್ಲವೇ? 7ನೇ ತರಗತಿಯ ತನಕ ಸದ್ಯದ ಎಸ್ಸೆಸ್ಸೆಲ್ಸಿ ಮಾದರಿಯ ಯಾವ ಪರೀಕ್ಷೆಯೂ ಇಲ್ಲದ ಕಾರಣ ಪ್ರಾಥಮಿಕ ಶಾಲೆಗಳಲ್ಲಿ ದಾಖಲೆಯ ದೃಷ್ಟಿಯಿಂದ 100 ಶೇ. ಬುನಾದಿ ಸಾಮರ್ಥ್ಯ ಮತ್ತು ಸಂಖ್ಯಾಜ್ಞಾನ ಸಾಧನೆಯಾದಂತೆ ತೋರಬಹುದು. ಪದವಿ ಪೂರ್ವ, ಐಟಿಐ, ಡಿಪ್ಲೊಮಾ ತರಗತಿಗಳಿಗೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರಷ್ಟೇ ಹೋಗುವ ಕಾರಣ ಅಲ್ಲಿ ಬುನಾದಿ ಸಾಮರ್ಥ್ಯ ಮತ್ತು ಸಂಖ್ಯಾಜ್ಞಾನ ಇಲ್ಲದವರು ಹೋಗುವ ಪ್ರಮಾಣ ವಾಸ್ತವವಾಗಿ ಕಡಿಮೆಯಾಗಿರುತ್ತದೆ. ಆದರೆ ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಗೊತ್ತು-ಗುರಿ ಇರುವುದರಿಂದ 8, 9, 10ನೇ ತರಗತಿಯಲ್ಲಿ ಬುನಾದಿ ಸಾಮರ್ಥ್ಯ ಮತ್ತು ಸಂಖ್ಯಾಜ್ಞಾನ ಹೊಂದದ ಮಕ್ಕಳು ಎಡವಿ ಬೀಳುತ್ತಾರೆ. ಪ್ರೌಢಶಾಲೆಯಲ್ಲಿ ಮೊದಲೇ ಸದ್ಯದ ಪರಿಸ್ಥಿತಿಯಲ್ಲಿ ಕಠಿಣವೇ ಆಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿಲೆಬಸ್, 8, 9ನೇ ತರಗತಿಗಳಿಗೂ ಪಠ್ಯಪುಸ್ತಕ ಮತ್ತು ಸಂಬಂಧಿಸಿದ ಎಲ್ಲಾ ಪ್ರಮುಖ ಅಂಶಗಳ ಬೋಧನೆ ಅವಶ್ಯವಾಗಿವೆ. ಈ ಹಂತದಲ್ಲಿ 'ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?' ಎಂಬಂತೆ ವಿವಿಧ ಕಾರಣಗಳಿಂದ ಒಂದು ವೇಳೆ ಮಕ್ಕಳು ದುರ್ಬಲ ಕಲಿಕಾ ಸಾಮರ್ಥ್ಯ ಹೊಂದಿದ್ದರೆ ಅವರನ್ನು ಸಬಲರನ್ನಾಗಿಸಲು ಸಂಪನ್ಮೂಲ, ಸವಲತ್ತು ಮತ್ತು ಕೆಲಸದ ಸಮಯ ದ್ವಿಗುಣಗೊಳಿಸಿದರೂ ಸಾಧ್ಯವಿಲ್ಲ. ಶ್ರಮಪಟ್ಟರೆ ಅವರಿಗೆ ಒಂದಷ್ಟು ಶಿಸ್ತು, ಸ್ವಚ್ಛತೆ, ಶಿಷ್ಟಾಚಾರ ಕಲಿಸಿ ಅಡ್ಡದಾರಿ ಹಿಡಿಯುವುದನ್ನು ತಪ್ಪಿಸಬಹುದು. ಅವರಿಂದ ಬೇರೆ ಮಕ್ಕಳಿಗೆ ತೊಂದರೆಯಾಗುತ್ತಿದ್ದರೆ ತಪ್ಪಿಸಬಹುದು, ಅಷ್ಟೇ. ಅಥವಾ, ಪ್ರೌಢಶಾಲೆಗಳಲ್ಲಿ ಅದಾಗಲೇ ಒರಟು ಒರಟಾಗಿ ಮಾರ್ಪಟ್ಟು ಏನೊಂದೂ ಕಲಿತುಕೊಳ್ಳದೇ ಕೇವಲ ಹಾಜರಾತಿ ಪಡೆಯುವಂಥವರು ಕನಿಷ್ಠ ಸಾಮರ್ಥ್ಯ ಪಡೆಯುವ ಹಂಬಲವೇ ಇಲ್ಲದೆ ಮನವೊಲಿಸಿದರೂ ಕಲಿಯುವ ಮೂಟೆ ದೊಡ್ಡದಾಗಿಬಿಟ್ಟಿರುವುದರಿಂದ ಅಂಥ ಮಕ್ಕಳು ಯಾವುದಕ್ಕೂ ಸಿದ್ಧರಿರುವುದಿಲ್ಲ. ಇನ್ನು, ಅತಿಯಾದ ಒತ್ತಡ ಬೀಳುವುದರಿಂದ ಶಿಕ್ಷಕರಲ್ಲಿ ಒಂದಷ್ಟು ಹೆಚ್ಚು ಅನಾರೋಗ್ಯಗಳು, ದ್ವೇಷಾಸೂಯೆಗಳು, ಹಠಾತ್ ಸಾವುಗಳು, ನೋವುಗಳನ್ನು ಬರಮಾಡಿಕೊಳ್ಳಬಹುದು ಅಷ್ಟೇ.
ಶಿಕ್ಷಣ ಇಲಾಖೆಯ ಬಗ್ಗೆ ಸಂಶೋಧನೆ ಮಾಡುವ ಸರ್ಕಾರಿ ಸಾಂಸ್ಥಿಕ ಹುದ್ದೆಗಳಲ್ಲಿ ಇರುವವರು ಹೊಸ - ಹೊಸ ವಿಧಾನಗಳನ್ನು ಪರಿಚಯಿಸಿ ಇನ್ನೂ ಮೇಲಿನ ಹುದ್ದೆಗೆ ಭಡ್ತಿ ಪಡೆಯುವುದು, ಪ್ರಶಸ್ತಿ ಪಡೆಯುವುದು ಮಾಮೂಲಿ. ಆದರೆ ಇವರುಗಳು ತಾವು ಸಂಶೋಧಕರೇ ಹೊರತು ಸ್ವತಃ ಶಿಕ್ಷಕರಾಗಿ ಅನುಪಾಲನೆ ಮಾಡುವ ನೆಲೆಯಲ್ಲಿ ಇಲ್ಲವೆಂಬುದನ್ನು ಗಮನಿಸಬೇಕು.
ಇದು ಈ ಹೊತ್ತಿನ ವಿಶೇಷ.

✍️ ಶಿವಕುಮಾರ್ ಸಾಯ

Comments

Popular posts from this blog

ಹಣಕಾಸು ನಿರ್ವಹಣೆ ಹೇಗಿರಬೇಕು?

ಬಹಿರಂತಶ್ಚ ಭೂತಾನಾಂ........

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್