ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್
ಆಸ್ಟ್ರೋ ವಿಜ್ಞಾನಿ, ಸ್ನೇಹಿತ, ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್ ಅವರು ಫೇಸ್‍ಬುಕ್‌ನಲ್ಲಿ ಪರಿಚಯವಾಗಿದ್ದರು. ನನಗೆ ತಿಳಿದಂತೆ ಅವರು ಮುಂಬೈ, ಮಹಾರಾಷ್ಟ್ರದಲ್ಲಿ ನೆಲೆಸಿದ್ದಾರೆ. ಸುಮಾರು 40 ಮಂದಿಯ ತಂಡದೊಂದಿಗೆ ಕನ್‌ಸಲ್ಟೆಂಟ್ ಆಗಿ ಇವರು ಕಾರ್ಯ ನಿರ್ವಹಿಸುತ್ತಿರುವರು. ಪ್ರಾಯಶಃ ಜ್ಯೋತಿಷ್ಯದ ಗುಂಪಿನಲ್ಲಿ ಅವರಿಗೆ ನನ್ನ ಪರಿಚಯವಾಗಿದ್ದಿರಬಹುದು. ಅವರು ನನ್ನ ಅನೇಕ ಯೂಟ್ಯೂಬ್ ವಿಡಿಯೋಗಳನ್ನು ಮೆಚ್ಚಿಕೊಂಡು, ಅವುಗಳಲ್ಲಿ ಇರುವ ಅನ್ವೇಷಣೆಗಳನ್ನು ಅವರು ಅರ್ಥೈಸಿಕೊಂಡು ಅಭಿಪ್ರಾಯ ತಿಳಿಸಿದ್ದರು.
ಅವರು ನನ್ನ ಆರೋಗ್ಯದ ಬಗ್ಗೆ ಅಕ್ಟೋಬರ್ 19ರಂದು ವಿಚಾರಿಸಿದಾಗ ಸುಧಾರಣೆಯಾಗುತ್ತಿರುವ ಬಗ್ಗೆ ಹೇಳಿದೆ. ನಿಧಾನವಾಗಿ ನಮ್ಮ ಮಾತುಕತೆ ಜ್ಯೋತಿಷ್ಯದತ್ತ ಸಾಗಿತು. ಸಿದ್ದೇಶ್ವರನ್ ಜ್ಯೋತಿಷ್ಯವನ್ನು ನನ್ನಂತೆ ವಿಶಿಷ್ಟ ರೀತಿಯಲ್ಲಿ ನೋಡುವ ಮನಸ್ಸುಳ್ಳವರು. ಆದ್ದರಿಂದ ಅವರ ಅಭಿಪ್ರಾಯಗಳು ನನಗೆ ಕುತೂಹಲಕಾರಿಯಾಗಿದ್ದವು. ಉದಾಹರಣೆಗೆ, ನಾನು ನನ್ನ ಜಾತಕವನ್ನೇ ಅವರ ಜೊತೆ ಸೇರಿ ವಿಶ್ಲೇಷಣೆ ಮಾಡತೊಡಗಿದೆ. ಅವರು ಕೆಲವು ವಿಚಾರಗಳನ್ನು ಲಗ್ನದಿಂದ ನೋಡಬೇಕು, ಕೆಲವು ವಿಚಾರಗಳನ್ನು ರಾಶಿಯಿಂದ ನೋಡಬೇಕು, ಇನ್ನು ಕೆಲವು ವಿಚಾರಗಳನ್ನು ರವಿಯ ಸ್ಥಾನದಿಂದ ನೋಡಬೇಕು ಎಂದು ಅಭಿಪ್ರಾಯಪಟ್ಟರು. ಸಾಂಪ್ರದಾಯಿಕ ಜ್ಯೋತಿಷ್ಯದಲ್ಲಿ ಹೇಳುವ ಉಚ್ಚ-ನೀಚ ಅಂಶವನ್ನು ಅವರು ಒಪ್ಪಲಿಲ್ಲ. ಆ ವಿಚಾರವು ಅಧಿಕೃತವಾಗಿ ಇಲ್ಲ ಎಂದರು. ಅಷ್ಟೇ ಅಲ್ಲದೆ, "ನವಾಂಶದಲ್ಲಿ ಶುಕ್ರನು ನೀಚನಾಗಿದ್ದರೂ ದೀಪ್ತಾವಸ್ಥೆಯಲ್ಲಿದ್ದಾನೆ. ಅದು ಉತ್ತಮ" ಎಂದು ಹೇಳಿದರು. "ಶನಿಯು ನಿಮಗೆ ಉತ್ತಮ ಗ್ರಹವಾಗಿದೆ" ಎಂದು ಅವರು ಹೇಳುತ್ತಾ ಬೇರೆ ಕೆಲವು ಜ್ಯೋತಿಷಿಗಳು ಕೊಟ್ಟ ಅಭಿಪ್ರಾಯಗಳನ್ನು ಅಲ್ಲಗಳೆದರು. ಏಳೂವರೆ ಶನಿಯಿಂದಾಗಿ ಅಪಘಾತವಾಯಿತೇ ಎಂದಾಗ ಅದು ಶನಿಯ ಕಾರಣ ಆಗಿರದೇ ಗುರು ಸಂಚಾರದಿಂದ ಪೂರ್ವ ಪುಣ್ಯ ಸ್ಥಾನ ಚಾಲನೆ ಪಡೆದದ್ದರಿಂದ ಎಂದರು. ಗುರು ಲಗ್ನಾತ್ ಷಷ್ಠ ಸ್ಥಾನದಲ್ಲಿ, ಸೂರ್ಯಾತ್ ಅಷ್ಟಮ ಸ್ಥಾನ ಸಂಚಾರದಲ್ಲಿದ್ದರೂ, ರಾಶಿಯಾತ್ ಪಂಚಮ ಸ್ಥಾನ ಸಂಚಾರವಿರುವುದರಿಂದ "Elephant like accident, ant like injury!" ಎಂದು ಅವರು ವಿಶ್ಲೇಷಿಸಿದರು. ಉದ್ಯೋಗದ ವಿಚಾರದಲ್ಲಿ ಡಿ10 ಕುಂಡಲಿಯನ್ನು ನೋಡಿ ಬಹಳಷ್ಟು ಚೆನ್ನಾಗಿ ತಿಳಿಸಿದರು. ಅಧ್ಯಾಪಕ ವೃತ್ತಿ, ರಾಜಕೀಯ, ಜ್ಯೋತಿಷ್ಯ, ಅಧ್ಯಾತ್ಮ, ಸಾಹಿತ್ಯ, ರಾಜಕೀಯ ವ್ಯಕ್ತಿಗಳಿಗೆ ಕನ್‌ಸಲ್ಟೆಂಟ್ ಆಗಿ ಕೆಲಸ ಮಾಡುವ ನನ್ನ ಒಳತೋಟಿಯನ್ನು ಅವರು ಬಯಲು ಮಾಡಿದ್ದಾರೆ. ಒಂದು ವೇಳೆ ಯಾವುದೇ ಕಾರಣಕ್ಕಾದರೂ ಈ ಸಂದರ್ಭದಲ್ಲಿ ಉದ್ಯೋಗಕ್ಕೆ ರಾಜೀನಾಮೆ ಬೇಡ. ಅದು ಅಗತ್ಯ ಎನಿಸಿದರೆ, ಶನಿಯು ಮೀನ ರಾಶಿಯನ್ನು ಪ್ರವೇಶಿಸುವ ತನಕ ಕಾಯಬೇಕು. ಅದರ ನಂತರ ಉದ್ಯೋಗಕ್ಕೆ ಸಂಬಂಧಿಸಿದಂತೆ ಒಳ್ಳೆಯ ಬೆಳವಣಿಗೆಗಳು ಆಗಲಿವೆ ಎಂದರು. ಸದ್ಯ ಕೈಯಲ್ಲಿ ಅಸಹನೀಯ ನೋವು ಇದೆಯಾದರೂ 'ಲಾಸ್ ಆಫ್ ಪೇ' ತಪ್ಪಿಸುವುದರಿಂದ ಅತಿಯಾದ ನಷ್ಟವಾಗುವುದನ್ನು ತಡೆಯಲೇಬೇಕಿತ್ತು.
ಸಿದ್ಧೇಶ್ವರನ್ ಅವರ ಜೊತೆ ನಾನು ಮಾತನಾಡುವ ಸಂದರ್ಭದಲ್ಲಿ ಸ್ಟಾಕ್ ಮಾರ್ಕೆಟ್ ಕುಸಿತ ಕಂಡಿದ್ದು ನನ್ನ ಒಟ್ಟು ಹೂಡಿಕೆಗಳು ನಷ್ಟದಲ್ಲಿದ್ದವು. ಇದರಿಂದ ಅವರು ನುಡಿದಂತೆ ಮುಂದಿನ ಐದು ತಿಂಗಳು ಅಂದರೆ ಶನಿಯ ಮೀನ ರಾಶಿ ಪ್ರವೇಶದ ತನಕವೂ ನನಗೆ ಆರ್ಥಿಕ ಹಿನ್ನಡೆಯ ಕಾರಣ ಹಣದ ಅವಶ್ಯಕತೆ ಇತ್ತು. ಹೀಗೆ ಸ್ವಯಂ ಸಲಹೆ ಪಡೆಯಲು ನಾನು ಅಸಮರ್ಥನಾಗಿದ್ದಾಗ ಸಿದ್ಧೇಶ್ವರನ್ ಅವರ ಮಾತುಗಳಲ್ಲಿ ಸತ್ಯಾಂಶವಿದ್ದುದು ನನಗೆ ಮನದಟ್ಟಾಯಿತು. ಸಿದ್ದೇಶ್ವರನ್ ಯಾವುದೇ ಗ್ರಹವನ್ನು ನೆಗೆಟಿವ್ ಆಗಿ ಹೇಳಲಿಲ್ಲ. ಗ್ರಹಕ್ಕೆ ಪೂಜಿಸುವುದು ಸರಿಯಲ್ಲ, ಗ್ರಹದ ಅಧಿದೇವತೆಯನ್ನು ನೆನೆಯಬೇಕು ಎಂಬ ನನ್ನ ವಾದವನ್ನು ಅವರು ಒಪ್ಪಿಕೊಂಡರು.
✍️ ಶಿವಕುಮಾರ್ ಸಾಯ 'ಅಭಿಜಿತ್'
Comments
Post a Comment