ವಿಮರ್ಶೆ 🖼️ ವಿದ್ಯಾರ್ಥಿನಿ ಪಂಚಮಿಕುಮಾರಿ ವಿರಚಿತ 'ಆರಾಧನೆ'
ಕುl ಪಂಚಮಿಕುಮಾರಿ ಬಾಕಿಲಪದವು ನಮ್ಮ ಜನತಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಹುಮುಖ ಪ್ರತಿಭೆಯ ವಿದ್ಯಾರ್ಥಿನಿ. ಈಕೆ ಪ್ರಕಟಿಸುತ್ತಿರುವ ತನ್ನ ಚೊಚ್ಚಲ ಕೃತಿ 'ಆರಾಧನೆ' ಎಂಬ ಕವನ ಸಂಕಲನಕ್ಕೆ ಎರಡು ಮಾತುಗಳ ಮುನ್ನುಡಿಯನ್ನು ಬರೆದುಕೊಡಲು ಅತ್ಯಂತ ಹೆಮ್ಮೆಪಡುತ್ತೇನೆ. ಕವಿಮನಸ್ಸು ಹೆಚ್ಚು ಸೂಕ್ಷ್ಮಗ್ರಾಹಿಯಾದುದು. ಸುತ್ತಲ ಜಗತ್ತನ್ನು ಬೆರಗಿನಿಂದ ನೋಡುತ್ತಾ, ತನ್ಮಯತೆಯಿಂದ ಅನುಭವಿಸುತ್ತಾ, ಕುತೂಹಲ ತಳೆಯುತ್ತಾ, ಪ್ರತಿಕ್ರಿಯಿಸುತ್ತಾ ಹೋದಂತೆ ಪ್ರಕೃತಿಯ ಮೂಲದ್ರವ್ಯದಿಂದಲೇ ಕೃತಿಯೊಂದು ರಚನೆಯಾಗುತ್ತದೆ. ಅದರಂತೆ ಇಲ್ಲಿ ಪಂಚಮಿಕುಮಾರಿ ತನ್ನ ಸೊಗಸಾದ ಕವನ ಸಂಕಲನವನ್ನು ಬರೆದು ಓದುಗರಿಗೆ ನೀಡಿದ್ದಾಳೆ. ಭಾವದ ಉತ್ಕಟ ಸ್ಥಿತಿಯಲ್ಲಿ ಕವಿತೆ ಸೃಷ್ಟಿಯಾಗುತ್ತದೆ. ಜಾತ ಸ್ವರೂಪದ ಪ್ರತಿಭೆ ಮತ್ತು ವ್ಯುತ್ಪತ್ತಿಯ ಬಲದಿಂದ ಕವಿತ್ವ ಸಿದ್ಧಿಸುತ್ತದೆ. ತನ್ನ ಹೈಸ್ಕೂಲು ವಿದ್ಯಾಭ್ಯಾಸದ ಆರಂಭದಿಂದಲೇ ಕುl ಪಂಚಮಿ ಓದು ಮತ್ತು ಬರವಣಿಗೆ ಎರಡರಲ್ಲೂ ಮುಂದಿದ್ದು, ಓದಲು ಕೊಟ್ಟ ಪುಸ್ತಕಗಳನ್ನು ಲಗುಬಗೆಯಿಂದ ಜ್ಞಾನಪಿಪಾಸುವಿನಂತೆ ಓದಿ ಮುಗಿಸುತ್ತಿದ್ದಳು. ಶೈಲೀಕರಣದ ಸಮಸ್ಯೆ ಕಾಡದಂತೆ ಲಾಗಾಯ್ತಿನಿಂದಲೂ ಛಂದಸ್ಸು, ವ್ಯಾಕರಣ ಮತ್ತು ಭಾಷೆಯ ಹಿಡಿತವನ್ನು ಸಂಪಾದಿಸಿದ್ದರಿಂದ ಆಕೆಯ ಬರವಣಿಗೆಯ ಪದ್ಧತಿ ಬಲಿಷ್ಠಗೊಳ್ಳುತ್ತಿರುವುದನ್ನು ಗಮನಿಸಬೇಕಾಗಿದೆ. ಸಂಕಲನದ ಶೀರ್ಷಿಕೆಯಾಗಿರುವ 'ಆರಾಧನೆ' ಪುಸ್ತಕದ ಮೊದಲನೇ ಕವಿ...