ವಿಮರ್ಶೆ 🖼️ ವಿದ್ಯಾರ್ಥಿನಿ ಪಂಚಮಿಕುಮಾರಿ ವಿರಚಿತ 'ಆರಾಧನೆ'
ಕುl ಪಂಚಮಿಕುಮಾರಿ ಬಾಕಿಲಪದವು ನಮ್ಮ ಜನತಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ
ಬಹುಮುಖ ಪ್ರತಿಭೆಯ ವಿದ್ಯಾರ್ಥಿನಿ. ಈಕೆ ಪ್ರಕಟಿಸುತ್ತಿರುವ ತನ್ನ ಚೊಚ್ಚಲ ಕೃತಿ 'ಆರಾಧನೆ' ಎಂಬ ಕವನ ಸಂಕಲನಕ್ಕೆ ಎರಡು ಮಾತುಗಳ ಮುನ್ನುಡಿಯನ್ನು ಬರೆದುಕೊಡಲು ಅತ್ಯಂತ ಹೆಮ್ಮೆಪಡುತ್ತೇನೆ.
ಕವಿಮನಸ್ಸು ಹೆಚ್ಚು ಸೂಕ್ಷ್ಮಗ್ರಾಹಿಯಾದುದು. ಸುತ್ತಲ ಜಗತ್ತನ್ನು ಬೆರಗಿನಿಂದ ನೋಡುತ್ತಾ, ತನ್ಮಯತೆಯಿಂದ ಅನುಭವಿಸುತ್ತಾ, ಕುತೂಹಲ ತಳೆಯುತ್ತಾ, ಪ್ರತಿಕ್ರಿಯಿಸುತ್ತಾ ಹೋದಂತೆ ಪ್ರಕೃತಿಯ ಮೂಲದ್ರವ್ಯದಿಂದಲೇ ಕೃತಿಯೊಂದು ರಚನೆಯಾಗುತ್ತದೆ. ಅದರಂತೆ ಇಲ್ಲಿ ಪಂಚಮಿಕುಮಾರಿ ತನ್ನ ಸೊಗಸಾದ ಕವನ ಸಂಕಲನವನ್ನು ಬರೆದು ಓದುಗರಿಗೆ ನೀಡಿದ್ದಾಳೆ.
ಭಾವದ ಉತ್ಕಟ ಸ್ಥಿತಿಯಲ್ಲಿ ಕವಿತೆ ಸೃಷ್ಟಿಯಾಗುತ್ತದೆ. ಜಾತ ಸ್ವರೂಪದ ಪ್ರತಿಭೆ ಮತ್ತು ವ್ಯುತ್ಪತ್ತಿಯ ಬಲದಿಂದ ಕವಿತ್ವ ಸಿದ್ಧಿಸುತ್ತದೆ. ತನ್ನ ಹೈಸ್ಕೂಲು ವಿದ್ಯಾಭ್ಯಾಸದ ಆರಂಭದಿಂದಲೇ ಕುl ಪಂಚಮಿ ಓದು ಮತ್ತು ಬರವಣಿಗೆ ಎರಡರಲ್ಲೂ ಮುಂದಿದ್ದು, ಓದಲು ಕೊಟ್ಟ ಪುಸ್ತಕಗಳನ್ನು ಲಗುಬಗೆಯಿಂದ ಜ್ಞಾನಪಿಪಾಸುವಿನಂತೆ ಓದಿ ಮುಗಿಸುತ್ತಿದ್ದಳು. ಶೈಲೀಕರಣದ ಸಮಸ್ಯೆ ಕಾಡದಂತೆ ಲಾಗಾಯ್ತಿನಿಂದಲೂ ಛಂದಸ್ಸು, ವ್ಯಾಕರಣ ಮತ್ತು
ಭಾಷೆಯ ಹಿಡಿತವನ್ನು ಸಂಪಾದಿಸಿದ್ದರಿಂದ ಆಕೆಯ ಬರವಣಿಗೆಯ ಪದ್ಧತಿ ಬಲಿಷ್ಠಗೊಳ್ಳುತ್ತಿರುವುದನ್ನು
ಗಮನಿಸಬೇಕಾಗಿದೆ.
ಸಂಕಲನದ ಶೀರ್ಷಿಕೆಯಾಗಿರುವ 'ಆರಾಧನೆ' ಪುಸ್ತಕದ ಮೊದಲನೇ ಕವಿತೆಯೂ ಆಗಿದ್ದು, ಅದೊಂದು ಚೆಲುವಾದ ಪ್ರಾರ್ಥನೆ. ಪ್ರಕೃತಿಪ್ರೀತಿ, ಬಂಡಾಯ, ಮಾನವೀಯತೆ, ಜೀವಪರ ಕಾಳಜಿ, ದೇಶಪ್ರೇಮ, ವಾಂಛೆ, ಕಷ್ಟ-ಸುಖ, ಜೀವನದೃಷ್ಟಿ ಮತ್ತು ಸಂಬಂಧಗಳು - ಇವೆಲ್ಲವನ್ನೂ ಬಿಂಬಿಸುವ ಕವನಗಳು ಪುಸ್ತಕದಲ್ಲಿವೆ. ಇವು ಸರಳ ಮತ್ತು ಆಕರ್ಷಣೀಯವಾಗಿರುವುದರಿಂದ ಮಕ್ಕಳಿಗೆ ಅಚ್ಚುಮೆಚ್ಚಾಗುವಲ್ಲಿ ಮತ್ತು ಎಲ್ಲರನ್ನೂ
ಓದಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತವೆ.
ಈ ಸಂಕಲನದ ಕವನಗಳು ವೈವಿಧ್ಯಪೂರ್ಣವಾಗಿವೆ. ಕಾವ್ಯವಸ್ತುವಿನ ಆಯ್ಕೆಯಲ್ಲೂ, ಅದರ ಪ್ರಸ್ತುತಿಯಲ್ಲೂ ತಾಜಾತನ ಮತ್ತು ಪ್ರಯೋಗಶೀಲತೆ ಕಾಣಿಸುತ್ತದೆ. ಅಲ್ಲಲ್ಲಿ ಶಬ್ದಾಲಂಕಾರ ಮತ್ತು ಅರ್ಥಾಲಂಕಾರಗಳ ಬಳಕೆ ಸರಳ, ಸಹಜ ಮತ್ತು ಸಮುಚಿತವಾಗಿ ಕಂಡುಬರುತ್ತದೆ. 'ಕ್ರಾಂತಿ-ಶಾಂತಿ', 'ಬಾ ಮಳೆ', 'ವೀರ ಯೋಧ', 'ಮಿಡಿತ', 'ಕಹಿ ನೆನಪು', 'ಗುಲಾಬಿ', 'ಭಾರತ', 'ಗುರು', 'ಅಮ್ಮನ ಸವಿ ನೆನಪು' - ಇಂತಹ ಕವಿತೆಗಳು ಮಕ್ಕಳ ಮನಸ್ಸಿಗೆ ಕಚಗುಳಿಯಿಟ್ಟು, ಮುದವನ್ನು ತುಂಬುವಂತಿವೆ. ಹಾಗೆಯೇ ಪ್ರತಿಯೊಂದು ಪದ್ಯದಲ್ಲಿ ಒಳ್ಳೆಯ ಆಶಯವೂ, ಮೌಲ್ಯ ಪ್ರತಿಪಾದನೆಯೂ ಅಡಕವಾಗಿದೆ. ಇಲ್ಲಿರುವ 'ಆರಾಧನೆ', 'ಅಮ್ಮ', 'ತಬ್ಬಲಿ', 'ಸ್ನೇಹ', 'ಜೀವನ', 'ಎಚ್ಚರ', 'ಪ್ರಕೃತಿ', 'ತವರುಮನೆ', 'ಸೃಷ್ಟಿ' ಮೊದಲಾದ ಪದ್ಯಗಳು ಗಂಭೀರವಾದ ಒಳನೋಟವನ್ನೂ ಹೊಂದಿರುವುದು ವಿಶೇಷ.
ಒಟ್ಟಿನಲ್ಲಿ ಕುl ಪಂಚಮಿ ಸಾಹಿತ್ಯರಂಗದಲ್ಲಿ ದಿಗ್ಗಜವಾಗಿ ಬೆಳೆಯಲಿ. ಈ ಹೊತ್ತಗೆಯನ್ನು ಪ್ರಕಟಿಸುತ್ತಿರುವ ನಮ್ಮ ಹೆಮ್ಮೆಯ ಅಡ್ಯನಡ್ಕ ಎಜುಕೇಷನಲ್ ಸೊಸೈಟಿ(ರಿ), ಪ್ರಸಾರಕರಾದ ಭಾರತೀಯ ಸಮಾಜ ಜೀವನ ಮತ್ತು ಶಿಕ್ಷಣ ಸಂಶೋಧನಾ ಸಂಸ್ಥೆ(ರಿ), ಅಲ್ಲದೆ ಹೆತ್ತವರ ಮತ್ತು ಗುರುವೃಂದದವರ ಕಾಣ್ಕೆ - ಮಾರ್ಗದರ್ಶನ ಸಫಲವಾಗಲಿ ಎಂದು ಆಶಿಸುತ್ತೇನೆ.
-ಶಿವಕುಮಾರ ಸಾಯ, ಎಂ.ಎ., ಬಿ.ಎಡ್., ಜೆಆರ್‌ಎಫ್
Comments
Post a Comment