ವಿಮರ್ಶೆ 🖼️ ಕವಿ ವಿ. ನರಸಿಂಹ ವರ್ಮ ವಿರಚಿತ 'ಆಕಾಶದ ಚಿತ್ರಗಳು'
ವಿಟ್ಲ ರಾಜ ಮನೆತನದ ಶ್ರೀಯುತ ವಿ. ನರಸಿಂಹ ವರ್ಮ ಅವರು ಕಳೆದ ಹಲವಾರು ವರ್ಷಗಳಿಂದ ಕನ್ನಡ ಕಾವ್ಯರಚನೆಯಲ್ಲಿ ಗಂಭೀರವಾಗಿ ತೊಡಗಿಕೊಂಡಿರುವ ಸ್ವಂತಿಕೆಯ ಛಾಪುಳ್ಳ ಕವಿ. 'ಆಕಾಶದ ಚಿತ್ರಗಳು' ಇದು ಸನ್ಮಾನ್ಯ ನರಸಿಂಹ ವರ್ಮರು ಹೊರತರುತ್ತಿರುವ ಚೊಚ್ಚಲ ಕೃತಿ. ವೃತ್ತಿಯಲ್ಲಿ ಉನ್ನತ ಕಾನೂನು ಅಧಿಕಾರಿಯಾಗಿದ್ದು, ಪ್ರವೃತ್ತಿಯಲ್ಲಿ ಅಪ್ಪಟ ಕವಿತ್ವವನ್ನು ಸಾರುತ್ತಿರುವ ಇವರ ಕಾರಯಿತ್ರೀ ಪ್ರತಿಭೆ ಮೆಚ್ಚುವಂಥದ್ದು. ಶ್ರೀಯುತ ನರಸಿಂಹ ವರ್ಮರು ಸತತ ಅಧ್ಯಯನಶೀಲರು. ನನ್ನ ತಿಳಿ ವಳಿಕೆಯಂತೆ ಇವರು ಯಾವುದೇ ಚೌಕಟ್ಟು ಮತ್ತು ಪಂಥಗಳಿಗೆ ಒಳಪಟ್ಟವರಲ್ಲ. ಇವರ ಕವಿತೆಗಳನ್ನು ಓದುತ್ತಿದ್ದಂತೆ ವಿಪುಲವಾದ ಜ್ಞಾನ ಮತ್ತು ಕಾವ್ಯದ ಕಲೆಗಾರಿಕೆ ಎರಡರ ಸಮ್ಮಿಶ್ರಣದಂತೆ ಕವಿತೆಗಳು ಭಾಸವಾಗುತ್ತವೆ. ಆದರೆ ಸ್ವತಂತ್ರವಾದ ಕವಿಯ ಮನೋಧರ್ಮವು ಪರಿಪಕ್ವವಾದ ಕವಿತೆಗಳನ್ನು ಹುಟ್ಟುಹಾಕುವ ಶ್ರೇಯಸ್ಸಿಗೆ ಪಾತ್ರವಾಗಿ ಧನ್ಯವಾಗಿದೆ. ಬದುಕಿನ ಗಹನತೆಯನ್ನು, ಸೂಕ್ಷ್ಮಗಳನ್ನು ಗಮನಿಸಿ ಇವರ ಕವಿತೆ ಅನನ್ಯವಾಗಿ ಹೊಮ್ಮಿದೆ. ಸಾಲುಗಳ ವೇಗ, ಓಘ ಮತ್ತು ಶಿಸ್ತನ್ನು ಹುಲುಸಾಗಿ ಬಳಸಿದ ಅನೇಕ ಕವಿತೆಗಳು ಅಲಂಕಾರಗಳ ಚಮತ್ಕಾರದಿಂದಲೂ ಕೂಡಿವೆ. 'ಆಕಾಶದ ಚಿತ್ರಗಳು' ಈ ಕೃತಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕವನಗಳಿವೆ. ಪ್ರತಿಯೊಂದು ಕವನವು ವಸ್ತು, ವಿಷಯ ಮತ್ತು ಪ್ರಸ್ತುತಿಯಲ್ಲಿ ವಿಭಿನ್ನವೂ ವಿಶಿಷ್ಟವೂ ಆಗಿರುವುದನ್ನು ಕಾಣುತ್ತೇವೆ. ಶ್ರೀಯುತರ ನೂರಾರ...