ವಿಮರ್ಶೆ 🖼️ ಕವಿ ವಿ. ನರಸಿಂಹ ವರ್ಮ ವಿರಚಿತ 'ಆಕಾಶದ ಚಿತ್ರಗಳು'

ವಿಟ್ಲ ರಾಜ ಮನೆತನದ ಶ್ರೀಯುತ ವಿ. ನರಸಿಂಹ ವರ್ಮ ಅವರು ಕಳೆದ ಹಲವಾರು ವರ್ಷಗಳಿಂದ ಕನ್ನಡ ಕಾವ್ಯರಚನೆಯಲ್ಲಿ ಗಂಭೀರವಾಗಿ ತೊಡಗಿಕೊಂಡಿರುವ ಸ್ವಂತಿಕೆಯ ಛಾಪುಳ್ಳ ಕವಿ. 'ಆಕಾಶದ ಚಿತ್ರಗಳು' ಇದು ಸನ್ಮಾನ್ಯ ನರಸಿಂಹ ವರ್ಮರು ಹೊರತರುತ್ತಿರುವ ಚೊಚ್ಚಲ ಕೃತಿ. ವೃತ್ತಿಯಲ್ಲಿ ಉನ್ನತ ಕಾನೂನು ಅಧಿಕಾರಿಯಾಗಿದ್ದು, ಪ್ರವೃತ್ತಿಯಲ್ಲಿ ಅಪ್ಪಟ ಕವಿತ್ವವನ್ನು ಸಾರುತ್ತಿರುವ ಇವರ ಕಾರಯಿತ್ರೀ ಪ್ರತಿಭೆ ಮೆಚ್ಚುವಂಥದ್ದು.
ಶ್ರೀಯುತ ನರಸಿಂಹ ವರ್ಮರು ಸತತ ಅಧ್ಯಯನಶೀಲರು. ನನ್ನ ತಿಳಿವಳಿಕೆಯಂತೆ ಇವರು ಯಾವುದೇ ಚೌಕಟ್ಟು ಮತ್ತು ಪಂಥಗಳಿಗೆ ಒಳಪಟ್ಟವರಲ್ಲ. ಇವರ ಕವಿತೆಗಳನ್ನು ಓದುತ್ತಿದ್ದಂತೆ ವಿಪುಲವಾದ ಜ್ಞಾನ ಮತ್ತು ಕಾವ್ಯದ ಕಲೆಗಾರಿಕೆ ಎರಡರ ಸಮ್ಮಿಶ್ರಣದಂತೆ ಕವಿತೆಗಳು ಭಾಸವಾಗುತ್ತವೆ. ಆದರೆ ಸ್ವತಂತ್ರವಾದ ಕವಿಯ ಮನೋಧರ್ಮವು ಪರಿಪಕ್ವವಾದ ಕವಿತೆಗಳನ್ನು ಹುಟ್ಟುಹಾಕುವ ಶ್ರೇಯಸ್ಸಿಗೆ ಪಾತ್ರವಾಗಿ ಧನ್ಯವಾಗಿದೆ. ಬದುಕಿನ ಗಹನತೆಯನ್ನು, ಸೂಕ್ಷ್ಮಗಳನ್ನು ಗಮನಿಸಿ ಇವರ ಕವಿತೆ ಅನನ್ಯವಾಗಿ ಹೊಮ್ಮಿದೆ. ಸಾಲುಗಳ ವೇಗ, ಓಘ ಮತ್ತು ಶಿಸ್ತನ್ನು ಹುಲುಸಾಗಿ ಬಳಸಿದ ಅನೇಕ ಕವಿತೆಗಳು ಅಲಂಕಾರಗಳ ಚಮತ್ಕಾರದಿಂದಲೂ ಕೂಡಿವೆ.
'ಆಕಾಶದ ಚಿತ್ರಗಳು' ಈ ಕೃತಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕವನಗಳಿವೆ. ಪ್ರತಿಯೊಂದು ಕವನವು ವಸ್ತು, ವಿಷಯ ಮತ್ತು ಪ್ರಸ್ತುತಿಯಲ್ಲಿ ವಿಭಿನ್ನವೂ ವಿಶಿಷ್ಟವೂ ಆಗಿರುವುದನ್ನು ಕಾಣುತ್ತೇವೆ. ಶ್ರೀಯುತರ ನೂರಾರು ಕವಿತೆಗಳು ಮತ್ತು ಲೇಖನಗಳು ಕನ್ನಡದ ಹೆಸರಾಂತ ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಮೂಡಿಬಂದಿರುವುದನ್ನು ನಾವು ಗಮನಿಸಬಹುದು. ಅವೆಲ್ಲವೂ ಇಲ್ಲಿ ಒಂದು ಗುಚ್ಛವಾಗಿ ಓದುಗರಿಗೆ ಲಭ್ಯವಾಗುತ್ತಿರುವುದು ಸಂತಸದ ಸಂಗತಿ.
ಅಳೆಯದೇ ತೂಗದೇ 'ಮೂಸೆ'ಯಿಂದ ಕವಿತೆಗಳನ್ನು ತೆಗೆದ ಕವಿ "ವಾದಗಳು ವಿವಾದವಾಗುವುದು ಬೇಕಾಗಿಲ್ಲ - ಹೃದಯ ಬೆಸೆಯುವ ಸಂವಾದವಾಗಿದ್ದರೆ ಸಾಕು" ಎಂದು 'ಸಹೃದಯರಿಗೆ' ಕವನದಲ್ಲಿ ಖಡಕ್ ಆಗಿ ಹೇಳಿರುವುದು ಮಾರ್ಮಿಕವಾಗಿದೆ. 'ಕೆಲವರು ಜೀವ ತುಂಬುತ್ತಾರೆ, ಕೆಲವರು ಜೀವ ತೆಗೆಯುತ್ತಾರೆ' ಎಂದು ಕವಿ ಹೇಳಿರುವಲ್ಲಿ ಏನೇ ಆದರೂ ಪಾತ್ರಗಳಿಗೆ ಜೀವವಿದೆ ಎಂಬಲ್ಲಿ ಸೊಗಸಾದ ವ್ಯಂಗ್ಯಾರ್ಥ ಪ್ರಾಪ್ತವಾಗಿದೆ. ಕವಿತೆಯಲ್ಲಿ ನಿಜಕ್ಕೂ ವಿಶ್ವರೂಪವಿರುತ್ತದೆ ಎಂಬುದನ್ನು ಬೆರಗಿನಿಂದಲೇ ಮತ್ತೊಂದು ಕಡೆ ಕವಿ ಬರೆದುಕೊಂಡಿದ್ದಾರೆ.
ಅನುಪ್ರಾಸ ಹಾಗೂ ವಿಡಂಬನಾತ್ಮಕ ಧಾಟಿಯಲ್ಲಿರುವ ಅನೇಕ ಕವನಗಳಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಸಶಕ್ತ ವಾಙ್ಮಯ ವೈವಿಧ್ಯವೂ ಇದೆ. 'ಅರ್ಥವಾಗದ ಕವಿತೆ', 'ಹುತಾತ್ಮರು', 'ಸಾಧಕರು', 'ಏಕಾಂತವೆಂದರೆ', 'ಗುರುತು', 'ಸ್ಥಿತ್ಯಂತರ', 'ದಿಗಿಲು', 'ಮಾರ್ಜಾಲ', 'ಕ್ಲೀಷೆ' ಮುಂತಾದ ಕೆಲವು ಕವನಗಳಲ್ಲಿ ಕವಿತೆಯ ಆ ಬಗೆಯ ಶ್ರೇಷ್ಠತೆಯನ್ನು ಕಾಣಬಹುದು. ಶೋಷಣೆ, ಢೋಂಗಿ, ಪೊಳ್ಳು ವಿತಂಡವಾದಗಳ ಬಗ್ಗೆ ಕವಿಯ ಧಿಕ್ಕಾರ ಮತ್ತು ತಿರಸ್ಕಾರವಿರುವುದು ತಿಳಿದುಬರುತ್ತದೆ. ಆದರೆ ಕವಿಯ ಶೋಧದ ಪರಿಣಾಮದಲ್ಲಿ ನಿಟ್ಟುಸಿರು, ಸಹಜಾಸನ, ಸುಯೋಗ, ಅಂತರ್ಯೋಗದೊಡನೆ ಜೀವನೋಪನಿಷತ್ತನ್ನು ಕಲಿಸುವ ದೇವರು ಸ್ವಾಭಾವಿಕ ಆಯಾಮವಾಗಿದ್ದಾನೆ ಎಂಬ ತರ್ಕವು 'ನನ್ನೊಳಗಿನ ದೇವರು' ಕವನದಲ್ಲಿ ಸ್ಪಷ್ಟವಾಗಿ ಬಿತ್ತರವಾಗಿದೆ.
ಕವಿಮಿತ್ರರ ಬಳಗದಲ್ಲಿ ಸಕ್ರಿಯರಾಗಿರುವ ಶ್ರೀಯುತ ನರಸಿಂಹ ವರ್ಮ ಅವರ ಸಾಧನೆ, ಸದಭಿರುಚಿಯ ಬಗ್ಗೆ ಅತ್ಯಂತ ಹೆಮ್ಮೆಯೆನಿಸುತ್ತದೆ. ಇವರು ಪ್ರಕಟಿಸುತ್ತಿರುವ ಕವನ ಸಂಕಲನ ಲೋಕಪ್ರಿಯವಾಗಲಿ. ಇನ್ನಷ್ಟು ಕೃತಿಗಳು ಇವರ ಲೇಖನಿಯಿಂದ ಮೂಡಿಬರುವುದರೊಂದಿಗೆ ಸಾಹಿತ್ಯ ವಲಯದಲ್ಲಿ ಮತ್ತಷ್ಟು ಪ್ರಶಸ್ತಿ, ಪ್ರಶಂಸೆಗಳು ಹರಿದು ಬರಲಿ ಎಂದು ಆಶಿಸುತ್ತೇನೆ.
- ಶಿವಕುಮಾರ ಸಾಯ, ಎಂ.ಎ.,ಬಿ.ಎಡ್.,ಜೆಆರ್‌ಎಫ್,
ಸಾಹಿತಿ, ಅಧ್ಯಾಪಕ

Comments

  1. 'akashada chitragalu' is a very good collection of poems.

    ReplyDelete

Post a Comment

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್