ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಪದಗ್ರಹಣ: ವಿಟ್ಲದಲ್ಲೊಂದು ಸಭ್ಯ ಸಾಹಿತ್ಯ ಸಮ್ಮಿಲನ
ಮೇ 5ರಂದು ವಿಟ್ಲ ವಿಠಲ ಪ್ರೌಢಶಾಲಾ ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಪದಗ್ರಹಣ ಕಾರ್ಯಕ್ರಮ ಮೌಲಿಕವಾಗಿ ನಡೆದಿದೆ. ಸನ್ಮಾನ್ಯ ಶ್ರೀಯುತ ರಾಜಾರಾಮ ವರ್ಮ ವಿಟ್ಲ ಅವರು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ದಿನ ಪದಗ್ರಹಣದೊಂದಿಗೆ ಚುಟುಕು ಕವಿಗೋಷ್ಠಿಯೂ ಭರ್ಜರಿಯಾಗಿ ನೆರವೇರಿದೆ.
ಸಮಾರಂಭವು ಜರಗುತ್ತಿದ್ದಂತೆ ಒಂದು ಬಗೆಯ ಕಾಳಜಿ ಮತ್ತು ಒತ್ತಾಸೆ ಅಲ್ಲಿ ಸೇರಿದ ಎಲ್ಲ ಸಂಘಟಕರ ಮುಖದಲ್ಲಿ ವ್ಯಕ್ತವಾಗುತ್ತಿತ್ತು. ನನ್ನನ್ನು ಕವಿಗೋಷ್ಠಿಯ ಅಧ್ಯಕ್ಷನನ್ನಾಗಿ ಕರೆಸಿದ ನೂತನ ಅಧ್ಯಕ್ಷರ ನಿರ್ಧಾರವನ್ನು ಗೌರವಿಸಿ, ಒಪ್ಪಿಕೊಂಡು ತೆರಳಿ ಒಂದು ಭಾಷಣ ಸಿದ್ಧಪಡಿಸಿ ಓದಿದಂತೆಯೂ ಆಯಿತು. ಆ ಕಾರ್ಯಕ್ರಮದಲ್ಲಿ ಸುಮಾರು ಹದಿನೇಳು ಮಂದಿ ಕವಿ-ಕವಯಿತ್ರಿಯರು ಚುಟುಕು ಮತ್ತು ಕವಿತೆಗಳನ್ನು ವಾಚಿಸಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿ ಕವಿಗಳಿಗೂ ಅವಕಾಶ ನೀಡಲಾಗಿದೆ. ಎಲೆ ಮರೆಯ ಹೂವಿನಂತಿದ್ದ ಅನೇಕ ಪ್ರತಿಭಾವಂತ ಕವಿಗಳನ್ನು ಮತ್ತೆ ವೇದಿಕೆಗೆ ಕರೆ ತರುವ ಪ್ರಾಮಾಣಿಕ ಪ್ರಯತ್ನವನ್ನು ವರ್ಮರು ಅಲ್ಲಿ ಮಾಡಿದ್ದಾರೆ. ಇದೆಲ್ಲವನ್ನೂ ಮನಸಾರೆ ಶ್ಲಾಘಿಸಲೇ ಬೇಕಾಗಿದೆ. ಗೋಷ್ಠಿಯಲ್ಲಿ ಪಾಲ್ಗೊಂಡ ಎಲ್ಲ ಕವಿಗಳ ಚುಟುಕು-ಕವಿತೆಗಳ ಬಗೆಗೂ ನಾನು ಟಿಪ್ಪಣಿ ಮಾಡಿಕೊಂಡಿದ್ದೆ. ಅಲ್ಲಿ ನೆರೆದ ನಮ್ಮ ಸಾಹಿತ್ಯ ಮಿತ್ರರು ಕಾರ್ಯಕ್ರಮದ ಬಗ್ಗೆ ಅಂತರಾಳದಿಂದ ಮೆಚ್ಚುಗೆ ಪ್ರಕಟಿಸಿರುವುದಕ್ಕೆ ನಾವೆಲ್ಲರೂ ಕೃತಜ್ಞರು.
ಹೀಗೆ ಯಾವುದೇ ಅಬ್ಬರವಿಲ್ಲದ, ಆದರೆ ಮೌಲಿಕವಾದ ಚುಟುಕು ಕವಿಗೋಷ್ಠಿಯನ್ನು ಸಂಘಟಕರು ತಮ್ಮ ಕಾರ್ಯಕಾರಿ ಸಮಿತಿಯ ಪದಗ್ರಹಣದಂದೇ ಆಯೋಜಿಸಿದ್ದಾರೆ. ವಿಟ್ಲ ಪರಿಸರದಲ್ಲಿ ಸ್ಥಗಿತಗೊಂಡಂತೆ ಕಾಣುತ್ತಿದ್ದ ಗುಣಾತ್ಮಕ ಸಾಹಿತ್ಯ ಚಟುವಟಿಕೆಗಳು ಅಕಾಡೆಮಿಕ್ ಬೆಂಬಲದೊಂದಿಗೆ ಮತ್ತೆ ಆರಂಭವಾದಂತಾಗಿದೆ. ಈ ಬಗೆಯಲ್ಲಿ ನಾವೆಲ್ಲ ಒಂದು ಅಪ್ಪಟ ಸಾಹಿತ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾದಂತಾಗಿದೆ.
ಮಾಧ್ಯಮ ಮಿತ್ರರು ಕೂಡಾ ಕಾರ್ಯಕ್ರಮಕ್ಕೆ ಆಗಮಿಸಿ ಪ್ರತ್ಯೇಕ ವರದಿಗಳನ್ನು ತಯಾರಿಸಿ ತುರ್ತಾಗಿ ಪ್ರಕಟಿಸಿದ್ದಾರೆ. ಮಿತ್ರರು, ಕವಿಯೂ ಆಗಿರುವ ಶ್ರೀಯುತ ವಿಷ್ಣುಗುಪ್ತರವರು ಕವಿಗೋಷ್ಠಿಯಲ್ಲೂ ಪಾಲ್ಗೊಂಡು ಹರ್ಷ ವ್ಯಕ್ತಪಡಿಸಿದರು. ಪ್ರೀತಿಯ ಶ್ರೀಯುತ ನಿಶಾಂತ್ ಬಿಲ್ಲಂಪದವು, ಶ್ರೀಯುತ ಉದಯಶಂಕರ್ ನೀರ್ಪಾಜೆ, ಶ್ರೀಯುತ ಮಹಮ್ಮದ್ ಆಲಿ ವಿಟ್ಲ ಮತ್ತು ಇತರ ಮಾಧ್ಯಮ ಮಿತ್ರರು ಈ ಸ್ಥಳೀಯ ಮಟ್ಟದ ಕಾರ್ಯಕ್ರಮವನ್ನು ಸೊಗಸಾಗಿ ವರದಿ ಮಾಡಿರುವುದು ಕಂಡು ನನಗಂತೂ ತುಂಬಾ ಹೆಮ್ಮೆಯೆನಿಸಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಹೃದಯರು ನಮ್ಮ ಹಿತೈಷಿಗಳೇ ಆಗಿದ್ದರಿಂದ ನಮಗೆ ಇರಿಸುಮುರಿಸು ಅಥವಾ ಸಂಕೋಚಪಡಬೇಕಾದ ಪ್ರಮೇಯವಿರಲಿಲ್ಲ. ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಗೌರವಾಧ್ಯಕ್ಷರಾದ ಶ್ರೀಯುತ ಇರಾ ನೇಮು ಪೂಜಾರಿ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದರು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ತಾರಾನಾಥ ಬೋಳಾರ್, ಕಾರ್ಯದರ್ಶಿಗಳಾದ ಶ್ರೀಯುತ ಹರೀಶ್ ಸುಲಾಯ ಒಡ್ಡಂಬೆಟ್ಟು ವಿಶೇಷವಾಗಿ ಆಗಮಿಸಿದ್ದರು.
ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಶ್ರೀಯುತ ರಾಜಾರಾಮ ವರ್ಮ ವಿಟ್ಲ, ಗೌರವಾಧ್ಯಕ್ಷರಾಗಿ ಶ್ರೀಯುತ ವಿ. ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿಯಾಗಿ ಶ್ರೀಮತಿ ಸುರೇಖಾ ಎಳವಾರ, ಸದಸ್ಯರಾಗಿ ಶ್ರೀಯುತ ಮಹೇಶ್ ನೆಟ್ಲ, ಶ್ರೀಮತಿ ಜ್ಯೋತಿ ರವಿರಾಜ್ ಹಾಗೂ ಶ್ರೀಮತಿ ಸೀತಾಲಕ್ಷ್ಮೀ ವರ್ಮ ವಿಟ್ಲ ಅವರು ನಿಯುಕ್ತರಾದರು.
ಚುಟುಕು ಕವಿಗೋಷ್ಠಿಯಲ್ಲಿ ಪಾಲ್ಗೊಂಡ ಗೌರವಾನ್ವಿತ ಕವಿಗಳಾದ ಮಹೇಶ್ ನೆಟ್ಲ, ಮೈತ್ರಿ ಭಟ್ ವಿಟ್ಲ, ರಾಧಾಕೃಷ್ಣ ವರ್ಮ, ವಿಷ್ಣುಗುಪ್ತ ಪುಣಚ, ನಾರಾಯಣ ಕುಂಬ್ರ, ಜಯಾನಂದ ಪೆರಾಜೆ, ವಿಶ್ವನಾಥ ಕುಲಾಲ್ ಮಿತ್ತೂರು, ಕೃಷ್ಣಕುಮಾರ್ ಕಮ್ಮಜೆ, ರೋಹಿತ್ ಕೇಪು, ರೇಖಾ ನಾಗೇಶ್, ಉಮಾಶಂಕರಿ, ನಂದಿತಾ, ಶಾಂತಾ, ಸೌಮ್ಯಶ್ರೀ, ಬಶೀರ್ ಬುಡೋಳಿ, ಸ್ಫೂರ್ತಿ, ವಿ.ಸು.ಭಟ್ ಮತ್ತು ರಾಜಾರಾಮ ವರ್ಮ ಅವರಿಗೂ ಇಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದು, ಗೌರವವನ್ನು ಪ್ರಕಟಿಸುತ್ತೇನೆ. ಶ್ರೀಮತಿ ವೀಣಾ ನರಸಿಂಹ ವರ್ಮ ಆಶಯಗೀತೆ ಹಾಡಿದ್ದಾರೆ. ವಿಟ್ಲ ಕನ್ನಡ ಸಂಘದ ಸಕ್ರಿಯ ಸಂಘಟಕರಾದ ಶ್ರೀಯುತ ರಾಜಶೇಖರ್ ಅವರು ಸ್ವಾಗತಿಸಿ, ಕವಯಿತ್ರಿಯರಾದ ಶ್ರೀಮತಿ ಸೀತಾಲಕ್ಷ್ಮೀ ವರ್ಮರವರು ನಿರೂಪಿಸಿ, ಶ್ರೀಮತಿ ಜ್ಯೋತಿ ರವಿರಾಜ್ ಅವರು ಸಹಕರಿಸಿ, ಶ್ರೀಮತಿ ಸುರೇಖಾ ಎಳವಾರ ಅವರು ವಂದಿಸಿದ್ದಾರೆ. ಅವರೆಲ್ಲರ ಒಟ್ಟಂದದ ಪರಿಶ್ರಮವೂ ಉಲ್ಲೇಖನೀಯ.
ಆಗಮಿಸಿದ ಮಹನೀಯರಲ್ಲಿ ನನ್ನ ಮಿತ್ರರನ್ನು ಹೆಸರಿಸುವುದಾದರೆ ಶ್ರೀಯುತ ಗಣೇಶ್ ಕೆ.ಆರ್. ಕೆಲವು ಚಿತ್ರಗಳನ್ನು ಸೆರಹಿಡಿದರಲ್ಲದೆ, ಮಾತುಗಳನ್ನು ಧ್ವನಿಮುದ್ರಿಸಿಕೊಟ್ಟರು. ಶ್ರೀಯುತ ಎಸ್. ರಾಜಗೋಪಾಲ ಜೋಶಿ ಅವರು ವೀಡಿಯೋ ರೆಕಾರ್ಡಿಂಗ್ ತಯಾರಿಸಿ ಪ್ರೋತ್ಸಾಹವಿತ್ತರು. ಅನಿರೀಕ್ಷಿತವಾಗಿ ಕವಿಮಿತ್ರ ಶ್ರೀಯುತ ವಿ. ನರಸಿಂಹ ವರ್ಮ ಅವರು ದೂರದ ಬೆಂಗಳೂರಿನಿಂದ ಆಗಮಿಸಿ ತನ್ಮಯರಾಗಿ ಆಲಿಸುತ್ತಾ ಕುಳಿತಿದ್ದರು. ವಿಟ್ಲ ವಿಠಲ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ಕಿರಣ್‌ಕುಮಾರ್ ಬ್ರಹ್ಮಾವರ ಅವರಿದ್ದರು. ಶ್ರೀಯುತ ಭಾಸ್ಕರ ಅಡ್ವಳ್‌ರವರೂ ಆಗಮಿಸಿದ್ದು, ಒಟ್ಟಿನಲ್ಲಿ ನಲವತ್ತು ಐವತ್ತು ಮಂದಿ ಆಸಕ್ತರನ್ನೇ ಒಗ್ಗೂಡಿಸಿಕೊಂಡು ಈ ಸಾಹಿತ್ಯ ಕಾರ್ಯಕ್ರಮ ನಡೆದಿದೆ.
✍️ಶಿವಕುಮಾರ ಸಾಯ 'ಅಭಿಜಿತ್'
Comments
Post a Comment