ಕನ್ನಡದಲ್ಲಿ ಮಕ್ಕಳ ಸಾಹಿತ್ಯ

ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯವು ಒಂದು ಪ್ರತ್ಯೇಕ ವಿಭಾಗವಾಗಿ ಬೆಳೆದಿದೆ. 'ಮಕ್ಕಳ ಸಾಹಿತ್ಯ' ಎಂದರೆ ಮಕ್ಕಳ ಮನಸ್ಸನ್ನು ಅರಳಿಸಿ, ಕುತೂಹಲವನ್ನು ಕೆರಳಿಸಿ, ಕಲ್ಪನೆಯನ್ನು ರೂಪಿಸಿ, ಭಾವನೆಗಳನ್ನು ಪ್ರಚೋದಿಸಿ, ಆನಂದದಲ್ಲಿ ಮೀಯಿಸಿ ಅವರ ವ್ಯಕ್ತಿತ್ವವನ್ನು ರೂಪಿಸುವ ಸಾಹಿತ್ಯ ಎನ್ನಲಾಗುತ್ತದೆ. ಆಧುನಿಕ ಶಿಕ್ಷಣ ಮತ್ತು ನವೋದಯ ಸಾಹಿತ್ಯದ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯವು ವಿಶೇಷವಾಗಿ ವಿಕಸಿತವಾಗಿದೆ. ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಬೇರನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದು. ಅಜ್ಜಿಕತೆಗಳು, ಲಾಲಿಹಾಡುಗಳು, ಪ್ರಾಸಬದ್ಧವಾದ ಪದಗಳು, ಬೆಡಗುಗಳು, ಒಗಟುಗಳು ಅಲ್ಲಿ ಕಂಡುಬರುತ್ತವೆ. ರಾಜಕುಮಾರ - ರಾಜಕುಮಾರಿಯರ ಕಥೆ, ರಮ್ಯಾದ್ಭುತ ಕಥೆಗಳು, ಕಾಗಕ್ಕ ಗುಬ್ಬಕ್ಕನ ಕಥೆ, ಪಂಚತಂತ್ರದ ಕಥೆ - ಇಂಥವು ಮಕ್ಕಳ ಮನಸ್ಸನ್ನು ಸಂತೋಷಗೊಳಿಸುತ್ತಿದ್ದವು. ಆದರೂ ಆಧುನಿಕ ಕಾಲದಲ್ಲಿ ಮುದ್ರಣ ಕಲೆ ಜಾರಿಗೆ ಬಂದ ಮೇಲೆ ಮಕ್ಕಳ ಸಾಹಿತ್ಯ ವಿಪುಲವಾಗಿ ಬೆಳೆಯಿತು. ಪತ್ರಿಕಾ ಮಾಧ್ಯಮ ಇದಕ್ಕೆ ಪ್ರಚಾರ ನೀಡಿತು. ಹೀಗಾಗಿ ಇಂದು ಮಕ್ಕಳ ಸಾಹಿತ್ಯದಲ್ಲಿ ಮಕ್ಕಳ ಕವಿತೆಗಳು, ಕಥೆಗಳು, ನಾಟಕ, ವಿಜ್ಞಾನ ಬರಹಗಳು, ವ್ಯಕ್ತಿಚಿತ್ರಗಳು ಪುಸ್ತಕಗಳಾಗಿ ಹೊರಬಂದು ಮಕ್ಕಳ ಮನೋಲೋಕವನ್ನು ಅರಳಿಸುತ್ತಿವೆ. ಕವಿ ಪಂಜೆ ಮಂಗೇಶ ರಾವ್ ಅವರನ್ನು ವಿಶೇಷವಾಗಿ 'ಶಿಶು ಸಾಹಿತ್ಯದ ಜನಕ' ಎಂದೇ ಕರೆಯಲಾಗುತ್ತದೆ. ಅವರ 'ಉದಯರಾಗ...