ಕನ್ನಡದಲ್ಲಿ ಮಕ್ಕಳ ಸಾಹಿತ್ಯ

ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯವು ಒಂದು ಪ್ರತ್ಯೇಕ ವಿಭಾಗವಾಗಿ ಬೆಳೆದಿದೆ. 'ಮಕ್ಕಳ ಸಾಹಿತ್ಯ' ಎಂದರೆ ಮಕ್ಕಳ ಮನಸ್ಸನ್ನು ಅರಳಿಸಿ, ಕುತೂಹಲವನ್ನು ಕೆರಳಿಸಿ, ಕಲ್ಪನೆಯನ್ನು ರೂಪಿಸಿ, ಭಾವನೆಗಳನ್ನು ಪ್ರಚೋದಿಸಿ, ಆನಂದದಲ್ಲಿ ಮೀಯಿಸಿ ಅವರ ವ್ಯಕ್ತಿತ್ವವನ್ನು ರೂಪಿಸುವ ಸಾಹಿತ್ಯ ಎನ್ನಲಾಗುತ್ತದೆ. ಆಧುನಿಕ ಶಿಕ್ಷಣ ಮತ್ತು ನವೋದಯ ಸಾಹಿತ್ಯದ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯವು ವಿಶೇಷವಾಗಿ ವಿಕಸಿತವಾಗಿದೆ.
ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಬೇರನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದು. ಅಜ್ಜಿಕತೆಗಳು, ಲಾಲಿಹಾಡುಗಳು, ಪ್ರಾಸಬದ್ಧವಾದ ಪದಗಳು, ಬೆಡಗುಗಳು, ಒಗಟುಗಳು ಅಲ್ಲಿ ಕಂಡುಬರುತ್ತವೆ. ರಾಜಕುಮಾರ - ರಾಜಕುಮಾರಿಯರ ಕಥೆ, ರಮ್ಯಾದ್ಭುತ ಕಥೆಗಳು, ಕಾಗಕ್ಕ ಗುಬ್ಬಕ್ಕನ ಕಥೆ, ಪಂಚತಂತ್ರದ ಕಥೆ - ಇಂಥವು ಮಕ್ಕಳ ಮನಸ್ಸನ್ನು ಸಂತೋಷಗೊಳಿಸುತ್ತಿದ್ದವು. ಆದರೂ ಆಧುನಿಕ ಕಾಲದಲ್ಲಿ ಮುದ್ರಣ ಕಲೆ ಜಾರಿಗೆ ಬಂದ ಮೇಲೆ ಮಕ್ಕಳ ಸಾಹಿತ್ಯ ವಿಪುಲವಾಗಿ ಬೆಳೆಯಿತು. ಪತ್ರಿಕಾ ಮಾಧ್ಯಮ ಇದಕ್ಕೆ ಪ್ರಚಾರ ನೀಡಿತು. ಹೀಗಾಗಿ ಇಂದು ಮಕ್ಕಳ ಸಾಹಿತ್ಯದಲ್ಲಿ ಮಕ್ಕಳ ಕವಿತೆಗಳು, ಕಥೆಗಳು, ನಾಟಕ, ವಿಜ್ಞಾನ ಬರಹಗಳು, ವ್ಯಕ್ತಿಚಿತ್ರಗಳು ಪುಸ್ತಕಗಳಾಗಿ ಹೊರಬಂದು ಮಕ್ಕಳ ಮನೋಲೋಕವನ್ನು ಅರಳಿಸುತ್ತಿವೆ.
ಕವಿ ಪಂಜೆ ಮಂಗೇಶ ರಾವ್ ಅವರನ್ನು ವಿಶೇಷವಾಗಿ 'ಶಿಶು ಸಾಹಿತ್ಯದ ಜನಕ' ಎಂದೇ ಕರೆಯಲಾಗುತ್ತದೆ. ಅವರ 'ಉದಯರಾಗ' ಕವಿತೆಯ 'ಮೂಡುವನು ರವಿ ಮೂಡುವನು, ಕತ್ತಲೊಳಗೆ ಜಗಳಾಡುವನು, ಮೂಡಣ ರಂಗಸ್ಥಳದಲಿ ನೆತ್ತರ ಮಾಡುವನು, ಕುಣಿದಾಡುವನು', 'ನಾಗರಹಾವು' ಪದ್ಯದ 'ನಾಗರ ಹಾವೇ! ಹಾವೊಳು ಹೂವೇ! ಬಾಗಿಲ ಬಿಲದಲಿ ನಿನ್ನಯ ಠಾವೇ? ಕೈಗಳ ಮುಗಿವೆ, ಹಾಲನ್ನೀವೆ! ಬಾ ಬಾ ಬಾ ಬಾ ಬಾ ಬಾ ಬಾ ಬಾ' ಇಂತಹ ಸಾಲುಗಳು ಒಂದು ಮಾದರಿಯನ್ನೇ ನಿರ್ಮಿಸಿದವು ಎನ್ನಬಹುದು. ಜಿ. ಪಿ. ರಾಜರತ್ನಂ ಅವರ 'ತುತ್ತೂರಿ' ಕವಿತೆಯ "ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ" ಎಂಬ ಸಾಲುಗಳು ಜನಪ್ರಿಯ. ಇನ್ನು ಕನ್ನಡದ ನವೋದಯ ಸಾಹಿತ್ಯದಲ್ಲಿ ಗುರುತಿಸಿಕೊಂಡ ಸಾಹಿತಿಗಳು ಅನೇಕರು ಮಕ್ಕಳ ಸಾಹಿತ್ಯಕ್ಕೂ ಅಗ್ರಗಣ್ಯ ಕೊಡುಗೆ ನೀಡಿರುವುದನ್ನು ಕಾಣುತ್ತೇವೆ. ಕುವೆಂಪು ಅವರ 'ಕಿಂದರಿಜೋಗಿ' ಕಥನ ಕವನ ರೂಪಾಂತರವಾದರೂ ತನ್ನ ಕಲ್ಪನೆಯಿಂದ ಸ್ವಾದಿಷ್ಟ. ಹಾಗೆಯೇ ಶಿವರಾಮ ಕಾರಂತರು ಮಕ್ಕಳಿಗಾಗಿ ವಿಜ್ಞಾನ ಮತ್ತು ಸಾಹಿತ್ಯದ ವಸ್ತುಗಳನ್ನು ಪುಸ್ತಕ, ಪತ್ರಿಕೆಗಳ ರೂಪದಲ್ಲಿ ಪ್ರಕಟಿಸಿಕೊಟ್ಟು ಮಕ್ಕಳ ಸಾಹಿತ್ಯವನ್ನು ಪೋಷಿಸಿದರು. ಪಂಜೆಯವರ ಪದ್ಯಗಳು, ಜಿ.ಪಿ.ರಾಜರತ್ನಂ ಅವರ ಕಂದನ ಕಾವ್ಯ ಮಾಲೆ, ಟಿ.ಎಸ್.ನಾಗರಾಜಶೆಟ್ಟಿ ಅವರ ಸಮಗ್ರ ಮಕ್ಕಳ ಕವಿತೆಗಳು, ಕಂಚ್ಯಾಣಿ ಶರಣಪ್ಪ ಅವರ ಆಯ್ದ ನೂರೊಂದು ಕವಿತೆಗಳು, ಎಂ.ಡಿ.ಗೋಗೇರಿ ಅವರ ಪುಟ್ಟನ ಪರಿಸರ ಕೃತಿಗಳು ಗಮನಾರ್ಹ. ಸಿದ್ದಯ್ಯ ಪುರಾಣಿಕ, ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ, ಡಾ. ಎಚ್. ಎಸ್. ವೆಂಕಟೇಶಮೂರ್ತಿ ಮೊದಲಾದ ಕವಿಗಳೂ ಮಕ್ಕಳಿಗಾಗಿ ಪದ್ಯಕೃತಿಗಳನ್ನು ಬರೆದಿದ್ದಾರೆ.
ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಬಂದಿರುವ ಮಕ್ಕಳ ಸಾಹಿತ್ಯದಲ್ಲಿ ಮಕ್ಕಳ ಕವಿತೆ, ಕಥೆ, ಪ್ರಬಂಧ, ಮಕ್ಕಳ ಕಾದಂಬರಿ, ಮಕ್ಕಳ ನಾಟಕ ಹೀಗೆ ವಿಭಾಗೀಕರಣ ಮಾಡಬಹುದು. ಇಂದು ಮುದ್ರಣ ಹಾಗೂ ದೃಶ್ಯ ಮಾಧ್ಯಮದ ಮೂಲಕ ಮಕ್ಕಳ ಕಥಾಚಿತ್ರ ಹಾಗೂ ಮಕ್ಕಳ ಚಲನಚಿತ್ರಗಳ ಮೂಲಕವೂ ಸಾಹಿತ್ಯದ ಆಶಯಗಳು ಮಕ್ಕಳನ್ನು ತಲಪುತ್ತಿವೆ. ಹೀಗೆ ಆಧುನಿಕ ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ರೀತಿ, ವಿಧಾನಗಳು ವಿಸ್ತರಣೆಗೊಂಡಿವೆ.
ಮಕ್ಕಳ ಸಾಹಿತ್ಯವು ಸರಳವಾಗಿರಬೇಕು ಎಂದು ಅಭಿಪ್ರಾಯಪಡಲಾಗುತ್ತದೆ. ಅದು ಮಕ್ಕಳ ಕತೆ, ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಎಲ್ಲವಕ್ಕೂ ಅನ್ವಯಿಸುತ್ತದೆ. ಮಕ್ಕಳ ಸಾಹಿತ್ಯದ ವಸ್ತು-ವಿಷಯವು ಮಕ್ಕಳ ಜಗತ್ತಿಗೆ ನಿಲುಕುವಂಥದ್ದಾಗಿರಬೇಕು. ಬರವಣಿಗೆಯ ಶೈಲಿ ಹಾಸ್ಯಮಿಶ್ರಿತವಾಗಿದ್ದರೆ ಮಕ್ಕಳನ್ನು ಸೆಳೆಯಲು ಅನುಕೂಲ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಭಾಷೆಯ ಬಳಕೆಯಾಗಿರಬೇಕು. ವಾಕ್ಯಗಳು ಚಿಕ್ಕ-ಚಿಕ್ಕದಾಗಿದ್ದು, ಸುಲಭವಾಗಿ ಓದುವಂತಿರಬೇಕು.
ಮಕ್ಕಳ ಸಾಹಿತ್ಯ ರಚನೆಯು ಮಕ್ಕಳಾಟಿಕೆಯ ವಿಷಯವಲ್ಲ. ಮಕ್ಕಳ ಸಾಹಿತಿಗಳು ಸಾಹಿತ್ಯದ ಮೂಲಕ ಒಳ್ಳೆಯ ಆಶಯಗಳನ್ನು, ಮೌಲ್ಯಗಳನ್ನು ಬಿಂಬಿಸಬೇಕು ಹಾಗೂ ಅಂತಹ ವಿವರಗಳನ್ನು ಕಟ್ಟಿಕೊಡಬೇಕು. ಆದರೆ ಆ ನೀತಿ, ಮೌಲ್ಯಗಳು ಸಾಹಿತ್ಯದ ಕಲಾತ್ಮಕತೆಗೆ, ಚೌಕಟ್ಟಿಗೆ ಹೊರೆಯೆನಿಸಬಾರದು. ಸಾಹಿತ್ಯದ ಪರಮ ಪ್ರಯೋಜನ ಅದು ನೀಡುವ ಆನಂದವೇ ಆಗಿದೆ ಎನ್ನಲಾಗುತ್ತದೆ. ಈ ಮಾತು ಮಕ್ಕಳ ಸಾಹಿತ್ಯಕ್ಕೂ ಅನ್ವಯಿಸುತ್ತದೆ.
ನಾಟಕ ಒಂದು ರಂಗಕಲೆ. ಮಕ್ಕಳ ನಾಟಕವು ಮಕ್ಕಳ ಸಾಹಿತ್ಯದ ಮತ್ತೊಂದು ವಿಭಾಗ. ನಾಟಕಗಳು ಸೂಕ್ಷ್ಮ ಸಂವೇದಿಯಾದ ಮಕ್ಕಳ ಮನಸ್ಸಿನ ಮೇಲೆ ಉತ್ತಮ ಪರಿಣಾಮಗಳನ್ನು ತರಬಲ್ಲದು. ಆರಂಭದ ಮಕ್ಕಳ ನಾಟಕಗಳಲ್ಲಿ ಕುವೆಂಪುರವರ 'ನನ್ನ ಗೋಪಾಲ', 'ಮೋಡಣ್ಣನ ತಮ್ಮ' ಪ್ರಸಿದ್ಧ. ಚಂದ್ರಶೇಖರ ಕಂಬಾರರ 'ಆಲೀಬಾಬಾ ಮತ್ತು ನಲವತ್ತು ಕಳ್ಳರು', ಮೇವುಂಡಿ ಮಲ್ಲಾರಿ ಅವರ 'ಮಯೂರ ವರ್ಮ', ನಾರಾಯಣ ಸ್ವಾಮಿ ಅವರ 'ಶಿವಾಜಿ', ಎಂ.ವಿ.ಸೀತಾರಾಮಯ್ಯ ಅವರ 'ಕರುಣೆಯ ಕುಡಿ' ಮುಂತಾದ ಕೃತಿಗಳನ್ನು ಪ್ರಾತಿನಿಧಿಕವಾಗಿ ಹೆಸರಿಸಬಹುದು. ಈಚೆಗೆ ಇನ್ನಷ್ಟು ಮಕ್ಕಳ ನಾಟಕ ಕೃತಿಗಳು ರಚನೆಯಾಗಿದ್ದು, ಹಲವು ಸುಪ್ರಸಿದ್ಧ ಮಕ್ಕಳ ರಂಗಭೂಮಿ ತಂಡಗಳು ಮಕ್ಕಳ ನಾಟಕಗಳನ್ನು ಅಭಿನಯಿಸಿ ಪರಿಚಯಿಸುತ್ತಾ ಬರುತ್ತಿವೆ.
ಮಕ್ಕಳಿಗೆ ಹಿರಿಯರು ಕತೆ ಹೇಳುವ ಸಂಪ್ರದಾಯ ಹಿಂದಿನಿಂದಲೂ ಇತ್ತು. ಪಂಚತಂತ್ರದ ಕತೆಗಳು, ಕಥಾ ಸರಿತ್ಸಾಗರ, ಹಿತೋಪದೇಶ, ಪ್ರಾಣಿ-ಪಕ್ಷಿಗಳ ಕತೆಗಳನ್ನು ಮಕ್ಕಳು ಕೇಳಿ ಆನಂದಿಸುತ್ತಿದ್ದರು. ಕ್ರಮೇಣ ಸಂಸ್ಕೃತ ಹಾಗೂ ಪರಭಾಷೆಗಳಿಂದ ಕನ್ನಡಕ್ಕೆ ಮಕ್ಕಳ ಕತೆಗಳು ಅನುವಾದಗೊಂಡಿವೆ. ಅರೇಬಿಯನ್ ನೈಟ್ಸ್, ಅಲಿ ಬಾಬಾ ಮತ್ತು ನಲುವತ್ತು ಕಳ್ಳರು ಇತ್ಯಾದಿಗಳು ಭಾಷಾಂತರವಾಗಿ ಬಂದ ಹೊರ ದೇಶದ ಕತೆಗಳು. ನಾ ಡಿಸೋಜ, ಸಿಸು ಸಂಗಮೇಶ, ರಸಿಕ ಪುತ್ತಿಗೆ, ಟಿ.ಎಸ್.ನಾಗರಾಜ ಶೆಟ್ಟಿ, ಕೃ.ನಾರಾಯಣರಾವ್, ಎಂ.ಜಿ.ಗೋವಿಂದರಾಜು, ರಾಜಶೇಖರ ಭೂಸನೂರಮಠ ಮೊದಲಾದವರು ಈಚಿನ ಕತೆಗಾರರು. ಇತ್ತೀಚೆಗೆ ಅಪಾರ ಸಂಖ್ಯೆಯ ಮಕ್ಕಳ ಕತೆಗಳು ರಚನೆಗೊಂಡಿವೆ. ಸಂದೇಶವನ್ನು ಹಾಗೂ ತಿಳಿವಳಿಕೆಯನ್ನು ಸಾರಲು ಕತೆಗಳು ಉತ್ತಮ ಮಾಧ್ಯಮಗಳು. ಹೀಗಿದ್ದರೂ ಬರೆಹಗಾರರಲ್ಲಿ ಹೊಸ ಪ್ರಯೋಗ ಕಡಿಮೆಯಾಗಿದ್ದು, ಸಮಕಾಲೀನತೆಗೆ ಸ್ಪಂದಿಸುವ ಮಕ್ಕಳ ಕತೆಗಳು ಇನ್ನೂ ಹೆಚ್ಚಾಗಿ ಮೂಡಿಬರಬೇಕಾಗಿವೆ ಎನ್ನಬಹುದು.
ಕವಿತೆಯ ವಿಷಯಕ್ಕೆ ಬಂದಾಗ, ಮಕ್ಕಳ ಕವಿತೆಗಳು ಒಂದಷ್ಟು ಸಲೀಸಾಗಿ, ಲೀಲಾಜಾಲವಾಗಿ ಓದಿಕೊಳ್ಳಬಲ್ಲ, ಹಾಡಬಲ್ಲ ರಚನೆಗಳಾಗಿದ್ದರೆ ಉತ್ತಮ. ಪುಟ್ಟ ಪುಟ್ಟ ಪದಗಳ, ಚಿಕ್ಕ ಚಿಕ್ಕ ಸಾಲುಗಳ ಪದ್ಯಗಳು ಪ್ರಾಥಮಿಕ ಶಾಲಾ ಹಂತದ ವಿದ್ಯಾರ್ಥಿಗಳಿಗೆ ಕಲಿತುಕೊಳ್ಳಲು ಅನುಕೂಲ ಎಂಬುದು ತಿಳಿದುಬರುತ್ತದೆ. ಎರಡು, ಮೂರು ಮಾತ್ರೆಗಳ ಶಬ್ದಗಳನ್ನೇ ಹೆಚ್ಚಾಗಿ ಬಳಸಿದಾಗ ಮಕ್ಕಳಿಗೆ ಓದಿಕೊಳ್ಳಲು ಸುಲಭವಾಗುತ್ತದೆ. ಸಾಲುಗಳಲ್ಲಿ ಪ್ರಾಸನಿಯಮವನ್ನು ಪಾಲಿಸಿದಾಗ ಶಬ್ದಗಳ ಗುಂಜನದಿಂದಾಗಿ ಕವಿತೆ ಆಕರ್ಷಕವಾಗುತ್ತದೆ. ಇತ್ತೀಚೆಗೆ ಮಕ್ಕಳ ಕವಿತೆಗಳನ್ನು ಮುಕ್ತ ಛಂದಸ್ಸಿನಲ್ಲಿ ಬರೆಯುವ ಪದ್ಧತಿಯೂ ಅನೇಕರಿಂದ ಪರಿಚಯಿಸಲ್ಪಟ್ಟಿದೆ. ಅದೇನಿದ್ದರೂ, ಭಾಷೆ - ಸಾಹಿತ್ಯ ಬೆಳೆಯಬೇಕಾದರೆ ಹೀಗೆ ವಿಶಿಷ್ಟ ಬಗೆಯ ಪ್ರಯೋಗಗಳು, ಪ್ರವೃತ್ತಿಗಳೂ ಹೆಚ್ಚಬೇಕು ಎಂಬುದು ತಜ್ಞರ ಅಭಿಪ್ರಾಯ. ಮಕ್ಕಳ ಸಾಹಿತ್ಯ ಅದಕ್ಕೆ ಹೊರತಲ್ಲ.
ಅಪರೂಪಕ್ಕೆ ಕನ್ನಡದಲ್ಲಿ ಮಕ್ಕಳ ಕಾದಂಬರಿಗಳು ಪ್ರಕಟಗೊಂಡಿವೆ. ಕಾದಂಬರಿಯ ಓದು ಮಕ್ಕಳಲ್ಲಿ ಬುದ್ಧಿಯ ವಿಕಾಸಕ್ಕೆ ಹಾಗೂ ಸಹನಶೀಲ ಓದುವಿಕೆಯನ್ನು ಮೈಗೂಡಿಸಲು ಸಹಕಾರಿಯಾಗಿವೆ. ರಸಿಕ ಪುತ್ತಿಗೆ ಅವರ 'ಕೆಂಪು ಕಾರು', ಎಂ.ಪಿ.ಮನೋಹರ ಚಂದ್ರನ್ ಅವರ 'ಪೂಪ ಕಾಡಿನಲ್ಲಿ ಪಾಪು', ಎಚ್.ಎಸ್.ವೆಂಕಟೇಶಮೂರ್ತಿ ಅವರ 'ಅಮಾನುಷರು', 'ಅಗ್ನಿಮುಖಿ', ಸುಮತೀಂದ್ರ ನಾಡಿಗರ 'ಸಾಹಸ', ಬಿ.ಎಲ್.ವೇಣು ಅವರ 'ಗುಹೆ ಸೇರಿದವರು', ಟಿ.ಕೆ.ರಾಮರಾವ್ ಅವರ 'ದಿಬ್ಬದ ಮನೆ' ಇವುಗಳನ್ನು ಪ್ರಾತಿನಿಧಿಕವಾಗಿ ಹೆಸರಿಸಬಹುದು.
ಹಿಂದಿನಿಂದಲೂ ಕನ್ನಡ ಪತ್ರಿಕೋದ್ಯಮ ಕ್ಷೇತ್ರ ಮಕ್ಕಳ ಸಾಹಿತ್ಯ ಸೃಷ್ಟಿಗೆ ಸಾಕಷ್ಟು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇಂದು ಮಕ್ಕಳಿಗಾಗಿ ದೈನಿಕ, ವಾರಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆ ಹೀಗೆ ಮಕ್ಕಳ ನಿಯತಕಾಲಿಕಗಳಿವೆ. ಮಕ್ಕಳಿಂದ ಮಕ್ಕಳಿಗಾಗಿ ಹಾಗೆಯೇ ಹಿರಿಯರಿಂದ ಮಕ್ಕಳಿಗಾಗಿ - ಹೀಗೆ ಎರಡು ಬಗೆಯಲ್ಲಿ ಮಕ್ಕಳ ಸಾಹಿತ್ಯ ಕೃಷಿ ಇಂದು ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗಾಗಿ ಜೀವನ ಚರಿತ್ರೆಗಳು, ಮಾಹಿತಿ ಪುಸ್ತಕಗಳು, ವೈಜ್ಞಾನಿಕ ವಿಷಯಗಳ ಕೃತಿಗಳು ಅಪಾರ ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ. ಹೀಗೆ ತನ್ನ ಬಹು ಆಯಾಮಗಳ ಮೂಲಕ ಮಕ್ಕಳ ಸಾಹಿತ್ಯ ಕ್ಷೇತ್ರವು ಇಂದು ಸಮೃದ್ಧಗೊಳ್ಳುತ್ತಿದ್ದು, ಮಕ್ಕಳನ್ನು ಸಲಹುತ್ತಿದೆ.
✍️ ಶಿವಕುಮಾರ ಸಾಯ, ಎಂ.ಎ., ಬಿ.ಎಡ್., ಜೆಆರ್‌ಎಫ್,
ಸಾಹಿತಿ, ಅಧ್ಯಾಪಕ,
ವಿಳಾಸ: ಜನತಾ ಪ್ರೌಢಶಾಲೆ,
ಅಡ್ಯನಡ್ಕ, ಅಂಚೆ: ಅಡ್ಯನಡ್ಕ,
ಬಂಟ್ವಾಳ ತಾಲೂಕು. ಪಿನ್- 574260
ಮೊಬೈಲ್ : 9481015860
ಇಮೈಲ್: shivakumarsaya1@gmail.com

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್