ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ಹಿರಿಯ ಕವಿ, ವಿದ್ವಾಂಸ ಡಾ. ವಸಂತಕುಮಾರ ಪೆರ್ಲ ಅವರು ಬರೆದಿರುವ 'ಅಮೃತ ಹಂಚುವ ಕೆಲಸ' ಪುಸ್ತಕವನ್ನು ಪರಿಚಯಿಸಲು ಸಂತೋಷಪಡುತ್ತೇನೆ.
ಆಕಾಶವಾಣಿಯಲ್ಲಿ ಕೇಂದ್ರ ನಿರ್ದೇಶಕರಾಗಿದ್ದು ನಿವೃತ್ತರಾಗಿರುವ ಮಾಧ್ಯಮ ತಜ್ಞ, ಕವಿ - ಲೇಖಕ, ಅಂಕಣಕಾರ ಡಾ. ವಸಂತಕುಮಾರ ಪೆರ್ಲ ಅವರು ಸಮೃದ್ಧವಾದ ಭಾಷಾಜ್ಞಾನ, ಪಾಂಡಿತ್ಯವುಳ್ಳವರು. ಇದುವರೆಗೆ 45ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಅವರು ಅಪ್ಪಟ ಹವ್ಯಕ ಭಾಷೆಯಲ್ಲಿ ಬರೆದ ಚಿಂತನಗಳ ಸಂಕಲನವೇ 'ಅಮೃತ ಹಂಚುವ ಕೆಲಸ'. ಹವ್ಯಕ ಸಮಾಜದ ಮನೆಗಳಲ್ಲಿರುವ ವಿಚಾರ ಸಂಪದವನ್ನು ತಮ್ಮದೇ ಆದ ಶೈಲಿಯಲ್ಲಿ ಪ್ರಸ್ತುತೀಕರಿಸಿರುವ ಪೆರ್ಲರ ಈ ಕೃತಿಯಲ್ಲಿ ಹವ್ಯಕ ಬ್ರಾಹ್ಮಣರ ಸಾಮಾಜಿಕ ಇತಿಹಾಸವನ್ನೇ ಕಾಣಬಹುದು.
ಹವ್ಯಕ ಬ್ರಾಹ್ಮಣರ ಕೃಷಿ, ಆಚಾರ ವಿಚಾರ, ಆಲೋಚನೆಗಳು, ಭಜನೆ - ಆರಾಧನಾ ಪದ್ಧತಿ, ಸಂಸ್ಕಾರ, ಸಂಬಂಧಗಳು, ಮಾತುಕತೆ ಮುಂತಾದ ವಿವಿಧ ಮಗ್ಗುಲುಗಳಲ್ಲಿ ಹಾಸುಹೊಕ್ಕಾಗಿರುವ ಎಲ್ಲ ವಿಚಾರಗಳ ಮಂಥನ ಪ್ರಸ್ತುತ ಕೃತಿಯಲ್ಲಿ ವ್ಯಕ್ತವಾಗಿದೆ. ವಿವಿಧೆಡೆಗಳಲ್ಲಿ ಪ್ರತಿನಿತ್ಯ ಲೇಖಕರು ಬರೆದು ಪ್ರಕಟಿಸುವ ಈ ಲೇಖನಗಳು ಗ್ರಂಥವಾಗಿ ಹೊರಹೊಮ್ಮಿದ್ದು, ಹವ್ಯಕರ ಇತಿಹಾಸವನ್ನು ಬಿಂಬಿಸುವ ಒಂದು ದಾಖಲೀಕರಣ ಇದಾಗಿದೆ.
ಹವ್ಯಕ ಭಾಷೆಯಲ್ಲಿ ಚಿಂತನೆಗಳ ಹೊತ್ತಗೆ ಪ್ರಕಟವಾಗಿರುವುದು ವಿರಳ. ಇಂದಿನ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಶೋಧಗಳು, ಒಳನೋಟಗಳು ಅವಶ್ಯ. ಆಚರಣೆಗಳು, ಸಂಪ್ರದಾಯಗಳು ಕಣ್ಮರೆಯಾಗದಂತೆ ಕಾಪಾಡಬೇಕಾದರೆ ಆ ಪ್ರಜ್ಞೆ ಯುವ ಜನತೆಯಲ್ಲಿ ಮೂಡಬೇಕು. ಈ ದಿಸೆಯಲ್ಲಿ ಬೆಳಕು ಚೆಲ್ಲುವಂತೆ ಡಾ. ವಸಂತಕುಮಾರ ಪೆರ್ಲ ಅವರ ಈ ಮೌಲಿಕ ಕೃತಿ ಬೋಧಪ್ರದವಾಗಿದೆ. ನಡೆ-ನುಡಿ, ಪದ್ಧತಿಗಳ ಬಗ್ಗೆ ಆಳವಾದ ಪರಿಜ್ಞಾನವಿದ್ದಾಗ ಮಾತ್ರ ಇಂತಹ ಕೃತಿಗಳು ಜನ್ಮತಾಳುತ್ತವೆ.
'ಅಮೃತ ಹಂಚುವ ಕೆಲಸ' ಕೃತಿಯ ಕೆಲವು ಭಾಗಗಳನ್ನು ಗಮನಿಸದೆ ಹೋದರೆ ಪುಸ್ತಕದ ವಸ್ತು ವೈವಿಧ್ಯದ ಬಗ್ಗೆ, ಶ್ರೇಷ್ಠತೆಯ ಬಗ್ಗೆ ಅರಿವಾಗಲಿಕ್ಕಿಲ್ಲ. ಅದಕ್ಕಾಗಿ ಕೃತಿಯ ಕೆಲವು ಚಿಂತನೆಗಳ ಮಧ್ಯೆ ಮಿಂಚುವ ಥೀಮ್‌ಗಳನ್ನು ಗಮನಿಸಬೇಕು.
"ನಾವು ಜೀವನಲ್ಲಿ ಅಪೂರ್ಣತೆಯ ಪರ್ವತ ಆಯೆಕೋ ಅಥವಾ ಸದಾ ಪ್ರಸನ್ನಚಿತ್ತರಾಗಿದ್ದುಗೊಂಡು ಇತರರ ಬೆಂಬಲಿಸುತ್ತ ಪ್ರೋತ್ಸಾಹಿಸುತ್ತ, ಇಪ್ಪದರಲ್ಲಿ ತೃಪ್ತಿ ಪಟ್ಟುಗೊಂಡು 'ಸಮಾಜಕೇಂದ್ರಿತ ವ್ಯಕ್ತಿ'ಯಾಗಿ ಪರಿಪೂರ್ಣ ಅಪ್ಪದರ ಕಡೆಂಗೆ ಸಾಗೆಕೋ ಹೇಳುವದರ ನಾವೇ ನಿರ್ಧಾರ ಮಾಡೆಕು." (ಚಿಂತನ)
"ಆಲೋಚನೆ ಸರಿ ಇದ್ದರೆ ಕೆಲವು ಸರ್ತಿ ಮಾತೇ ಬೇಕಾವುತ್ತಿಲ್ಲೆ! 'ಅವನ ಜೀವನವೇ ಒಂದು ಸಂದೇಶ' ಹೇಳುವದು ಇಂಥ ಸಂದರ್ಭಲ್ಲಿ." (ಆಲೋಚನೆ)
" ಜನಿವಾರ ಧಾರಣೆ ದ್ವಿಜತ್ವದ ಸಂಕೇತ. ಸುರುವಿಂಗೆ 'ಜಂತು' ಆಗಿ ಹುಟ್ಟಿದಂವ ಯಜ್ಞೋಪವೀತ ಧಾರಣೆಯ ನಂತರ ಮಾಡುವ ಕರ್ಮಾನುಷ್ಠಾನಂಗಳಿಂದಾಗಿ ದ್ವಿಜ ಆವುತ್ತ." (ಅನುಷ್ಠಾನದ ಅಗತ್ಯ)
"ಕೇಚಪ್ಪಣ್ಣ ಏಳೂವರೆಗೆ ಉಂಡು ಎಂಟು ಗಂಟೆಗೆ ಎಂಗಳಲ್ಲಿಗೆ ಬಂದು ಊರಿಲಿಲ್ಲದ್ದ ಪಟ್ಟಾಂಗ ಹೆಟ್ಟಿಕ್ಕಿ ಒಂಬತ್ತು ಗಂಟಗೆ ತೋಟಕ್ಕೆ ಹೋಕು." (ಕೇಚಪ್ಪಣ್ಣನ ಪ್ರಾಣಸಂಕಟ)
"ಎಲ್ಲೋರು ಇಪ್ಪಾಗ ಡಂಕಿ ಬಿದ್ದರೆ ಎಲ್ಲೋರು ಕಾಂಬ ಹಾಂಗೇ ಎದ್ದು ನಿಲ್ಲೆಕು" (ಹಾಂಗೇ ಸುಮ್ಮನೆ)
"ಇಕ್ಕೇರಿ, ಲಷ್ಕಿರಿ, ಕಾನ, ಕುಂಟಿಕಾನ ಇವೆಲ್ಲ ಕೆಳದಿಯ ಸಂಸ್ಥಾನದ ಕುಂಬಳ ಸೀಮೆಗೆ ವಲಸೆ ಬಂದ ವಸಾಹತುಗೊ, ಅಲ್ಲಿ ದೇವಸ್ಥಾನಂಗಳನ್ನೂ ಕಟ್ಟಿ ಅನುಷ್ಠಾನದ ಜೀವನ ನಡೆಸಿದವು." (ಇಕ್ಕೇರಿಯ ನೆಲಬಾವಿಗೊ)
"ಪ್ರತಿಯೊಂದು ತಲೆಮಾರಿಲ್ಲಿಯೂ ಸಾವಿರಾರು ಜೆನ ಕವಿ, ಲೇಖಕಂಗೊ ಪರಿಶ್ರಮ ಪಟ್ಟು ಸಾಹಿತ್ಯ ರಚನೆ ಮಾಡುತ್ತವು.ಆದರೆ ಒಳಿವದು ಕೆಲವರದ್ದು ಮಾಂತ್ರ." (ತೊಂಡೆ ಮತ್ತು ಕರಗಲ)
" ಮತಧರ್ಮಕ್ಕೆ ಸಂಬಂಧಿಸಿದ ಹಾಂಗೆ ಮಠಂಗೊ ಒಂದು ಕೇಂದ್ರೀಕೃತ ವ್ಯವಸ್ಥೆ. ಆ ವಿಷಯಲ್ಲಿ ಗುರುಗೊ ಮಾರ್ಗದರ್ಶಕರು." (ಮಠೀಯ ಪರಂಪರೆ)
ಕುಟುಂಬ ಹೇಳುವದು ಸಂತತವಾಗಿ ಹರಿವ ಹೊಳೆನೀರಿನ ಹಾಂಗೆ; ಅಲ್ಲಿ ಅನುಭವ ಹೇಳಲೆ - ಮಾರ್ಗದರ್ಶನ ಮಾಡಲೆ ಪ್ರಾಯಸ್ಥರು, ದುಡಿವ ಜವ್ವನಿಗರು, ಬೆಳವ ಮಕ್ಕೊ - ಈ ಮೂರು ತಲೆಮಾರುದೆ ಇರೆಕು. (ಕುಟುಂಬ)
"ಹವ್ಯಕರು ಕನಿಷ್ಠ ಮೂರು ಮಕ್ಕಳ ಹೊಂದೆಕು ಹೇಳಿ ಎನಗೆ ಅನಿಸುತ್ತು. ಶ್ರೀಮಂತರಾಗಿದ್ದರೆ ನಾಲ್ಕು ಮಕ್ಕೊ ಇದ್ದರೂ ಅಡ್ಡಿ ಇಲ್ಲೆ." (ಅಲ್ಪಸಂಖ್ಯಾಕರಾಗೆಡಿ!)
"ಎಲ್ಲೋರು ಕೈಜೋಡಿಸಿದರೆ ಕೆಲಸ ಸುಲಭ. ಕಲ್ಲಿಂಗೆ ಹಾಕಿ ಎಡಿವ ಮೊದಲು ಕಲ್ಲಿನ ಒಂದಾರಿ ಲಾಯಕಿಲ್ಲಿ ತೊಳಕ್ಕೊಂಡಿಕ್ಕಿ ಆತೊ?" (ನಾಳಂಗೆ ಹಪ್ಪಳ ಮಾಡುವನಾ)
'ಅಮೃತ ಹಂಚುವ ಕೆಲಸ' ಕೃತಿಯ ನಾನಾ ಲೇಖನಗಳಲ್ಲಿ ಇಂಥ ವಿಷಯ ವಸ್ತುವಿಗೆ ಸಂಬಂಧಿಸಿದ ದೃಷ್ಟಾಂತಗಳೂ, ವಿಚಾರ ಸರಣಿಯೂ ಇದೆ. ಕತೆ, ಪದ್ಯ, ಗಾದೆಗಳೂ ಸಾಕಷ್ಟು ಸಂಖ್ಯೆಯಲ್ಲಿ ಹಾಸುಹೊಕ್ಕಾಗಿವೆ. ಲೇಖಕರ ಪ್ರಬುದ್ಧ ಶೈಲಿಯ ಸಂಶೋಧನಾತ್ಮಕ ಆಲೋಚನೆ ತುಂಬಿದೆ. ಪ್ರೊ.ವಿ.ಬಿ. ಅರ್ತಿಕಜೆ ಅವರು ಬೆನ್ನುಡಿಯನ್ನು ಬರೆದಿದ್ದಾರೆ. ಭೂಮಿಗೀತ, ಮಂಗಳೂರು ಪ್ರಕಾಶನದಿಂದ ಆಕರ್ಷಕವಾಗಿ ಈ ಪುಸ್ತಕ ಪ್ರಕಟವಾಗಿದ್ಧು, ನೇಮಿರಾಜ ಶೆಟ್ಟಿ ಅವರು ರಕ್ಷಾಪುಟಕ್ಕೂ, ತಾರಾನಾಥ ಕೈರಂಗಳ ಮತ್ತು ಆಗಮ ಪೆರ್ಲ ಅವರು ಒಳಪುಟಕ್ಕೂ ಚಿತ್ರಗಳನ್ನು ಮಾಡಿದ್ದಾರೆ.
ಹವ್ಯಕ ಬ್ರಾಹ್ಮಣ ಸಮುದಾಯದ ಪ್ರತಿಮನೆಯಲ್ಲಿ ಇರಬೇಕಾದ ಸಂಗ್ರಹಯೋಗ್ಯ ಪರಾಮರ್ಶನ ಗ್ರಂಥ ಇದಾಗಿದೆ.

ಕೃತಿಯ ಹೆಸರು: ಅಮೃತ ಹಂಚುವ ಕೆಲಸ (ಚಿಂತನ ಸಂಕಲನ)
ಲೇಖಕರು: ಡಾ. ವಸಂತಕುಮಾರ ಪೆರ್ಲ,
ಮೊಬೈಲ್: 9448384391, 9448773747
ಪ್ರಕಾಶಕರು: ಭೂಮಿಗೀತ, ಮಂಗಳೂರು
.
✍️ ಶಿವಕುಮಾರ್ ಸಾಯ

Comments

Popular posts from this blog

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್

ರಾಜ್ಯೋತ್ಸವ ಎಂಬ ಸಮಯ-ಸಂದರ್ಭ: ಒಂದು ಕುಶಲೋಪರಿ