ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಕರ್ನಾಟಕದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಂತರಿಕ ಅಂಕಗಳನ್ನು ಉತ್ತೀರ್ಣತೆಗೆ ಪರಿಗಣಿಸುವ ಮತ್ತು ಮೌಲ್ಯಮಾಪನವನ್ನು ಸುಲಭಗೊಳಿಸುವ ನಿರ್ಧಾರವು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾಗಿ ಪರೀಕ್ಷಾ ನಿಯಮದಲ್ಲಿ ಬದಲಾವಣೆ ತಂದ ಬಳಿಕ ಇದೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುತ್ತಿದೆ. ಈ ಬದಲಾವಣೆಯು ಕೇವಲ ಫಲಿತಾಂಶದ ಹೆಚ್ಚಳಕ್ಕಾಗಿ ಮಾತ್ರವಲ್ಲ, ನಮ್ಮ ರಾಜ್ಯದ ಶೈಕ್ಷಣಿಕ ಗುಣಮಟ್ಟವನ್ನು ರಾಷ್ಟ್ರೀಯ ಸರಾಸರಿಯ ಮಟ್ಟಕ್ಕೆ ಏರಿಸಲು ಮತ್ತು ನಮ್ಮ ಶಾಲಾ ವ್ಯವಸ್ಥೆಯನ್ನು ಆರ್ಥಿಕವಾಗಿ ಹಾಗೂ ಆಡಳಿತಾತ್ಮಕವಾಗಿ ರಕ್ಷಿಸಲು ಅತ್ಯಗತ್ಯವಾಗಿತ್ತು.

1. ರಾಷ್ಟ್ರಮಟ್ಟದ ಫಲಿತಾಂಶಗಳ ಅಸಮಾನತೆ (2025ರ ಅಂಕಿ-ಅಂಶಗಳು)
ನಮ್ಮ ರಾಜ್ಯದ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದರೂ, ಮೌಲ್ಯಮಾಪನದ ಅಸಮಾನತೆಯಿಂದಾಗಿ ಇತರ ಶಿಕ್ಷಣ ಮಂಡಳಿಗಳ ವಿದ್ಯಾರ್ಥಿಗಳಿಗಿಂತ ಹಿಂದುಳಿಯುತ್ತಿದ್ದರು. 2025ರ ವಿವಿಧ ಮಂಡಳಿಗಳ ಮೊದಲ ಹಂತದ 10ನೇ ತರಗತಿ ಪರೀಕ್ಷಾ ಫಲಿತಾಂಶದ ತುಲನೆ ಇಲ್ಲಿದೆ:

1 ಕೇರಳ 99.50%
2 ಐಸಿಎಸ್‌ಇ (ICSE) 99.09%
3 ಗೋವಾ 95.35%
4 ಮಹಾರಾಷ್ಟ್ರ 94.10%
5 ತಮಿಳುನಾಡು 93.80%
6 ಸಿಬಿಎಸ್‌ಇ (CBSE) 93.66%
7 ತೆಲಂಗಾಣ 92.78%
8 ಕರ್ನಾಟಕ (SSLC) 62.34%

ಕೇವಲ 62.34% ಫಲಿತಾಂಶ ದಾಖಲಾಗಲು ನಮ್ಮ ಮಕ್ಕಳ ಅಸಾಮರ್ಥ್ಯ ಕಾರಣವಲ್ಲ, ಶಿಕ್ಷಕರೂ ಕಾರಣರಲ್ಲ. ಬದಲಿಗೆ ಆಂತರಿಕ ಅಂಕಗಳನ್ನು ಪರಿಗಣಿಸದ ಕಠಿಣ ಮೌಲ್ಯಮಾಪನ ಪದ್ಧತಿಯೇ ಕಾರಣವಾಗಿತ್ತು.

2. ಗಡಿ ಭಾಗದ ಸಮಸ್ಯೆ ಮತ್ತು ದಾಖಲಾತಿ ಕುಸಿತ
ನೆರೆ ರಾಜ್ಯಗಳ, ಸಿಬಿಎಸ್ಇ ಮತ್ತು ಐಸಿಎಸ್ಇ ಶಿಕ್ಷಣ ಕ್ರಮದಲ್ಲಿ ಉತ್ತೀರ್ಣತೆ ಸುಲಭವಾಗಿರುವುದರಿಂದ, ಗಡಿ ಭಾಗದ ಪೋಷಕರು ತಮ್ಮ ಮಕ್ಕಳನ್ನು ಅಲ್ಲಿಗೆ ದಾಖಲಿಸುತ್ತಿದ್ದಾರೆ. ಪರೀಕ್ಷೆಯ ಭಯದಿಂದಾಗಿ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಿಂದ ದೂರ ಸರಿಯುವ ಆತಂಕ ನಿರ್ಮಾಣವಾಗಿತ್ತು. ಇದನ್ನು ತಡೆಯಲು ಪರೀಕ್ಷಾ ಪದ್ಧತಿಯ ಸರಳೀಕರಣ ಅತಿ ಮುಖ್ಯವಾಗಿತ್ತು.

3. ಸರ್ಕಾರದ ಯೋಜನೆಗಳ ಮೇಲೆ ಆಗುವ ಪರಿಣಾಮ
ಶಾಲಾ ದಾಖಲಾತಿ ಸಂಖ್ಯೆ ಕಡಿಮೆಯಾದಷ್ಟೂ ಸರ್ಕಾರವು ಶಿಕ್ಷಣಕ್ಕಾಗಿ ಹೂಡಿಕೆ ಮಾಡುವ ಕೋಟ್ಯಂತರ ರೂಪಾಯಿಗಳ ಯೋಜನೆಗಳು (ಮಧ್ಯಾಹ್ನದ ಬಿಸಿಯೂಟ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಕ್ಷೀರಭಾಗ್ಯ ಇತ್ಯಾದಿ) ತನ್ನ ಗುರಿಯನ್ನು ತಲುಪಲು ವಿಫಲವಾಗುತ್ತವೆ. ವಿದ್ಯಾರ್ಥಿಗಳ ಸಂಖ್ಯೆ ಕುಸಿದಾಗ ಪ್ರತಿ ಮಗುವಿನ ಮೇಲೆ ಸರ್ಕಾರ ಮಾಡುವ ವೆಚ್ಚವು ವ್ಯರ್ಥವಾದಂತಾಗುತ್ತದೆ, ಇದು ಪರೋಕ್ಷವಾಗಿ ಶೈಕ್ಷಣಿಕ ಬಜೆಟ್‌ನ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಆದ್ದರಿಂದ ಮಕ್ಕಳನ್ನು ನಮ್ಮ ಶಾಲಾ ವ್ಯವಸ್ಥೆಯಲ್ಲೇ ಉಳಿಸಿಕೊಳ್ಳುವುದು ಕೇವಲ ಶೈಕ್ಷಣಿಕ ಅನಿವಾರ್ಯತೆಯಲ್ಲ, ಆರ್ಥಿಕ ಅನಿವಾರ್ಯತೆಯೂ ಹೌದು.

4. ಅಂಕಗಳ ತರ್ಕಬದ್ಧ ಹಂಚಿಕೆ (Rationalization of Marks)
ಪ್ರಸ್ತುತ ಪ್ರಥಮ ಭಾಷೆಗೆ 125 ಅಂಕಗಳನ್ನು ನಿಗದಿಪಡಿಸಲಾಗಿದೆ. ಇಂದು 'ಪ್ರಥಮ ಭಾಷೆ'ಯ ವ್ಯಾಪ್ತಿಯಲ್ಲಿ ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳೂ ಇವೆ. ಆದ್ದರಿಂದ 125 ಅಂಕಗಳ ನಿಯಮವು ವಿದ್ಯಾರ್ಥಿಗಳ ಮೇಲೆ ಅತಿಯಾದ ಅಂಕಗಳ ಹೊರೆಯನ್ನು ಹೇರುತ್ತಿದೆ. ಪ್ರಥಮ ಭಾಷೆಯ ಅಂಕಗಳನ್ನು ಉಳಿದ ವಿಷಯಗಳಂತೆ 100ಕ್ಕೆ ಇಳಿಸಿ ಸಮಾನತೆ ತರುವುದರಿಂದ ಕನ್ನಡವು 'ಕಷ್ಟದ ವಿಷಯ' ಎಂಬ ಭೀತಿಯಿಂದ ಮುಕ್ತವಾಗುತ್ತದೆ. ಈ ಬಗ್ಗೆ ಪೂರಕ ವರದಿಗಳನ್ನು ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ಸುಧಾರಣೆಯೂ ಜಾರಿಗೆ ಬರುವ ನಿರೀಕ್ಷೆಯಿದೆ.

5. ಆಂತರಿಕ ಅಂಕಗಳ ಜಾರಿಯ ಮಹತ್ವ
ಆಂತರಿಕ ಮೌಲ್ಯಮಾಪನದ 20 ಅಂಕಗಳು ಮತ್ತು ಬಾಹ್ಯ ಪರೀಕ್ಷೆಯ ಅಂಕಗಳೆರಡನ್ನೂ ಸೇರಿಸಿ 33% ಅಂಕ ಪಡೆದರೆ ಉತ್ತೀರ್ಣ ಎಂದು ಪರಿಗಣಿಸುವ ಕ್ರಮವು ಈಗ ಜಾರಿಯಾಗಿದೆ. ಇದು ವರ್ಷಪೂರ್ತಿ ಶಾಲೆಯಲ್ಲಿ ಮಗು ತೋರುವ ಶಿಸ್ತು, ಸೃಜನಶೀಲತೆ ಮತ್ತು ಪ್ರಾಜೆಕ್ಟ್ ಕೆಲಸಗಳಿಗೆ ನ್ಯಾಯ ಒದಗಿಸುತ್ತದೆ. ಇದರಿಂದ ನಮ್ಮ ರಾಜ್ಯದ ಫಲಿತಾಂಶವು ರಾಷ್ಟ್ರೀಯ ಸರಾಸರಿಗೆ ಏರಲಿದ್ದು, ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಲಿದೆ. ಇದರಿಂದ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಪದ್ಧತಿ ಇತರ ರಾಜ್ಯಗಳಂತೆಯೇ ನ್ಯಾಯಯುತವಾಗಲಿದೆ.

ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲು ನಾವು ನೀಡಿದ ದತ್ತಾಂಶ ಆಧಾರಿತ ವರದಿ ಮತ್ತು ಶಿಕ್ಷಕ ಸಂಘಟನೆಗಳ ನಿರಂತರ ಶ್ರಮಕ್ಕೆ ಸರ್ಕಾರ ಸ್ಪಂದಿಸಿದ್ದು ವಂದನೀಯ. ಈ ಮಹತ್ತರ ಬದಲಾವಣೆಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವು ಉಜ್ವಲವಾಗಲಿದೆ.

✍️ ಶಿವಕುಮಾರ್ ಸಾಯ

Comments

Popular posts from this blog

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

🔺ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗಶಾಸ್ತ್ರದ ಜನಪ್ರಿಯತೆಯ ಬಗ್ಗೆ ಮಾತು🔻 ದಿನಾಂಕ 21.06.2019