ದೇವ ಹೇ ಶುಭಕರ....
ದೇವ, ಹೇ ಶುಭಕರ
ನಿನ್ನೊಲುಮೆಯೆ ಪ್ರಿಯಕರ
ಅಸ್ತಿತ್ವ, ಅಧಿಕಾರ,
ಸೌಖ್ಯ ದಾತಾರ;
ನೀ ತಳೆದೆ ಬಹುರೂಪ
ಸತ್ಯಾವತಾರ.
ದೇಹಧಾರಿಯು ನೀನು
ಕೃಪೆ ಹೊಮ್ಮಿದವನು;
ನಗುವಲ್ಲಿ ನಲಿವಲ್ಲಿ
ಸೊಗ ಚಿಮ್ಮಿದವನು.
ವಿಶ್ವಾಸ, ಒಡನಾಟ,
ಶ್ವಾಸ-ಉಸಿರಾಟ;
ಹೃದಯಮಂದಿರದಲ್ಲಿ
ಪ್ರತಿಭಾಸ-ಪಾಠ!
ಪಂಚಭೂತ ತತ್ತ್ವ
ನಾರಾಯಣತ್ವ;
ಹಂಸಕ್ಷೀರ ನ್ಯಾಯ
ಸುಗುಣ ಸಮತ್ವ.
ಆಂತರ್ಯದ ಆ ಮಹಾ
ಚೈತನ್ಯ ನೀನು;
ನಿನ್ನ ಸಾಕಾರಕ್ಕೆ
ಕೊರತೆ ಇನ್ನೇನು?
ಕಣ್ಮುಚ್ಚಿ ಧ್ಯಾನಿಸಿರೆ
ದೃಷ್ಟಿ ಸಮಾನ;
ವಿಶ್ವವ್ಯಾಪಕ ವಿಜಯ
ಶಾಂತಿ ವಿಧಾನ!
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment