ಹೊಸತನ
ಹೊಸ ದೃಷ್ಟಿಯಂತೆ, ಹೊಸ ಸೃಷ್ಟಿಯಂತೆ
ಹಸಿರಾದ ಹಾದಿ ಅಂದ;
ತುಸು ತಂಪು ಗಾಳಿ, ಪರಿಮಳದ ಗಂಧ,
ಉಸಿರಾಡುವಾಗ ಚಂದ.
ಬದಲಾದ ರೂಪ, ಬದಲಾದ ಬಣ್ಣ,
ಬದಲಾದ ಬಣ್ಣನೆ;
ಮೊದಲಿಲ್ಲದಂತೆ, ಮುದವಳಿಯದಂತೆ,
ಪದದಲ್ಲಿ ಬದಲಾವಣೆ!
ನಭದಲ್ಲಿ ತಾರೆ - ಪ್ರಭೆ ಮಿಂಚಿದಂತೆ
ಶುಭ ಲಹರಿಯೊಂದು ಬರಲು,
ರಾಗ ಮೂಡುತ್ತ, ನಾದ ಹೊಮ್ಮುತ್ತ
ಯೋಗ ನುಡಿಯ ತರಲು;
ಅನುದಿನವು ಬೆಳಕು, ಅನುಕ್ಷಣವು ಹುರುಪು
ಮಿನುಗುವುದು ಹೊಳಪು ನಿತ್ಯ;
ಅನುಮಾನವಿಲ್ಲ, ಅಪಮಾನವಿಲ್ಲ,
ಅನ್ವೇಷಿಸುವುದು ಸತ್ಯ.
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment