ಶಬ್ದ ಮತ್ತು ಸಾರ್ಥಕ್ಯ
ನಿತ್ಯ ನಿರ್ಮಲನಂತೆ ನೀನು ನಿಶ್ಚಲನಾಗಿ
ವರ್ತಮಾನದಿ ಬಾಳ ನೋಡಬೇಕು
ಹಾಡು ಹುಟ್ಟುವುದಿರಲಿ, ತಾಳ ತಟ್ಟುವುದಿರಲಿ
ನಿನ್ನೊಳಗೆ ಆನಂದ ಮೂಡಬೇಕು
ಅಮ್ಮ ನೀಡಿದ ಊಟ, ಅಪ್ಪ ಹೇಳಿದ ಪಾಠ
ಸ್ನೇಹಿತರ ಮುನ್ನೋಟ ಫಲಿಸಬೇಕು
ಪುಣ್ಯವೇ ಫಲವಾಗಿ ಬೆಳೆಯುತ್ತ ಹೋಗುವುದು
ಕಾವು ಕೊಡು, ಈ ಆಟ ಜರಗಬೇಕು
ಶತ್ರುವಿಗೆ ಧಿಕ್ಕಾರ, ಮಿತ್ರರಿಗೆ ಸತ್ಕಾರ
ಪ್ರಾಣಶಕ್ತಿಗೆ ಧ್ಯಾನ ಶ್ರೇಯಸ್ಕರ
ನೋವುಗಳ ಮರೆಯುತ್ತ ಮಾತಾಡುವಂತಾಯ್ತು
ಪಾಲಿಸಿದ ದೇವರಿಗೆ ನಮಸ್ಕಾರ
ವಿಶ್ವವ್ಯಾಪಕ ಶಕ್ತಿ, ಅಂತರಂಗದಿ ಭಕ್ತಿ
ನಿಜದ ನೆಲೆ ಯುಗದ ಬೆಲೆ ಘನತೆ
ತಾರೆಗಳು ಹೊಳೆಯುವವು, ದಿನರಾತ್ರಿ ಕಳೆಯುವವು
ಉದ್ಭವಿಸಿ ಶಬ್ದ - ಕವಿತೆ
ಸ್ಫೂರ್ತಿ ಹೊಸದಾಗಿರಲಿ, ಕೀರ್ತಿ ಹೊಶದಾಗಿರಲಿ
ಹರಿಸೋಣ ಪ್ರೀತಿಯೊರತೆ;
ಹಬ್ಬವಿದು ಸಂತೋಷ; ನಿಬ್ಬೆರಗು, ಆವೇಶ;
ಹಬ್ಬೋಣ ವೀರಚರಿತೆ
✍️ ಶಿವಕುಮಾರ್ ಸಾಯ 'ಅಭಿಜಿತ್'
Comments
Post a Comment