ಅಭಿವ್ಯಕ್ತಿಯ ವಿಧಾನವೂ, ಆದರ್ಶ ಹಾಗೂ ವಾಸ್ತವತೆಗಳ ಸಂಘರ್ಷವೂ
ಕೆಲವು ಸಾರಿ ವಾಸ್ತವತೆಗಳು ನಮ್ಮನ್ನು ಬಯಲಿನಲ್ಲೇ ವಂಚಿಸುತ್ತಿರುತ್ತವೆ. ಏಕೆಂದರೆ ಒಮ್ಮೊಮ್ಮೆ ನಾವು ಅಂದುಕೊಂಡ ಅನಿಸಿಕೆಗಳು ಪೂರ್ತಿಯಾಗಿ ಸುಳ್ಳಾಗಿ ಸಾಬೀತಾಗುತ್ತವೆ ಮತ್ತು ಹಿಂಸಿಸುತ್ತಿರುತ್ತವೆ. ಎಲ್ಲರನ್ನೂ ಗೆಲ್ಲಬೇಕೆಂಬ ಹಂಬಲ ತಳೆದಿರುತ್ತೇವೆ. ಆದರೆ ಈ ನಿರೀಕ್ಷೆಗಳು ಹುಸಿಯಾಗಿಬಿಟ್ಟಿರುತ್ತವೆ. ನಿಜವಾಗಿಯೂ ನಮಗೇಕೆ ಆ ಬಗೆಯ ಆಗ್ರಹಗಳಿರುತ್ತವೆಯೋ ಗೊತ್ತಿಲ್ಲ. ಆದರೆ ಎಲ್ಲರನ್ನೂ ಮೆಚ್ಚಿಸಬೇಕೆಂಬ ಹಂಬಲವನ್ನು ಜೀವಿಯಾದವನು ಕೈಬಿಡಬೇಕು. ಏಕೆಂದರೆ ನೀವು ಏನನ್ನೇ ಮಾಡಲಿ ಬಿಡಲಿ ಒಂದಷ್ಟು ಜನ ನಿಮ್ಮನ್ನು ಹೊಗಳುತ್ತಾರೆ. ಒಂದಷ್ಟು ಜನ ಅದೇ ಕಾರಣಕ್ಕಾಗಿ ತೆಗಳುತ್ತಾರೆ. ಯಾವುದು ನಿಮ್ಮ ದೌರ್ಬಲ್ಯವೆನ್ನಲಾಗುತ್ತದೆಯೋ ಅದೇ ನಿಮ್ಮ ಪ್ರಾಬಲ್ಯವೂ ಆಗಿರುತ್ತದೆ! ವಿಮರ್ಶೆಯ ರೀತಿರಿವಾಜುಗಳು ಹಾಗೂ ವಿಚಾರಗಳು ಬದಲಾಗಬಹುದೇ ಹೊರತು ಜನರ ಪ್ರಮಾಣದಲ್ಲಿ ಅಂತಹ ವ್ಯತ್ಯಾಸಗಳಾಗುವುದಿಲ್ಲ.
ನಿಮ್ಮ ಸುತ್ತಲಿನ ಮೂರನೇ ಒಂದಂಶದಷ್ಟು ಜನ ನಿಮ್ಮನ್ನು ವಿನಾಕಾರಣ ಬೇಷರತ್ತಾಗಿ ಪ್ರೀತಿಸುತ್ತಾರೆ, ಸ್ವೀಕರಿಸುತ್ತಾರೆ, ಗೌರವಿಸುತ್ತಾರೆ. ಇನ್ನು ಒಂದಂಶದಷ್ಟು ಜನ ನಿಂದಕರೇ ಆಗಿರುತ್ತಾರೆ. ಉಳಿದ ಒಂದಂಶದಷ್ಟು ಜನರು ಪೂರ್ತಿಯಾಗಿ ನಿಮ್ಮನ್ನು ಸ್ವೀಕರಿಸುವುದೂ ಇಲ್ಲ. ತಿರಸ್ಕರಿಸುವುದೂ ಇಲ್ಲ. ನಿಮ್ಮನ್ನು ಚೆನ್ನಾಗಿ ತಿಳಿದವರಿಗೆ ಮತ್ತೆ ನಿಮ್ಮಯಾವುದೇ ಚರ್ಯೆಗಳನ್ನು ಪರಿಚಯಿಸಬೇಕಾಗಿಯೇ ಇಲ್ಲ. ಯಾರು ಅರ್ಥೈಸಿಕೊಳ್ಳುವುದಿಲ್ಲವೋ ಅವರು ಅರ್ಥೈಸಿಕೊಳ್ಳಬೇಕೆಂಬ ನಿರೀಕ್ಷೆಗಳೇ ಇರಬಾರದು. ನೀವು ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ ಮುಂತಾದ ನೂರಾರು ಹಾದಿಗಳನ್ನೇನೋ ಹುಡುಕಬಹುದು. ಆದರೆ ಪರಿಮಿತಿಗಳು ಇನ್ನೂ ಉಳಿದಿರುತ್ತವೆ. ಏಕೆಂದರೆ ನಿಮ್ಮ ಯಾವುದೇ ಅಭಿವ್ಯಕ್ತಿಯ ಕ್ರಮವು ಅವರವರ ವಿಷಯಗ್ರಹಣ ಮತ್ತು ಅನುಭೂತಿಯ ಪ್ರಕಾರವಷ್ಟೇ ಡೀಕೋಡಿಂಗ್ ಮಾಡಲ್ಪಡುತ್ತದೆ ಹಾಗೂ ಅರ್ಥೈಸಲ್ಪಡುತ್ತದೆ. ಆದುದರಿಂದಲೇ ನಿನ್ನ ನೀನು ಅರಿಯುವುದು ಮುಖ್ಯ; ಇತರರಲ್ಲ, ಇತರರನ್ನಲ್ಲ.
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment