ಆಮೆ ಎಂಬ ಯೋಗಿ
ಆಮೆ ಒಂದು ತಪಸ್ವಿಯಂತೆ;
ಅದು ತೆವಳುತ್ತದೆ
ಅಷ್ಟೇ.
ಮೊಲದ ಜೊತೆ ಸ್ಪರ್ಧಿಸಿ
ಮ್ಯಾರಥಾನ್ ಗೆದ್ದ ಆಮೆ
ಇತಿಹಾಸಕ್ಕೆ ಸೇರಿತು ಅಥವಾ
ದಂತಕಥೆಯಾಯಿತು.
ಆಮೆಗೆ ಜಲದ ಭಯವಿಲ್ಲ
ನೆಲದ ಮೇಲೂ ಭಯವಿಲ್ಲ
ನಿರ್ಭಯವಾಗಿರುವ ಆಮೆ
ಉಭಯವಾಸಿ.
ಆಮೆ ಯೋಗಿಯೇ;
ಅದು ನಿಧಾನವಾಗಿ ಉಸಿರಾಡುತ್ತಾ
ನಿರಾಳವಾಗಿ ಬದುಕುವುದು
ಎರಡುನೂರು ವರುಷ.
ಶುಭ ಕೋರುವಾಗ
'ಆಯುಷ್ಮಾನ್ ಭವ' ಅನ್ನುವುದು
ಹಳೆಯದಾಯಿತು
'ಆಮೆಯಾಗು'
ಎಂದರೇನೆ ಸೊಗಸು.
ಆಮೆಯೊಂದು
ತನ್ನ ಇಂದ್ರಿಯಗಳನ್ನು
ಫಕ್ಕನೆ ಚಿಪ್ಪಿನೊಳಗೆ
ಎಳೆದುಕೊಳ್ಳುತ್ತದೆ
ಎಂದು ಪುಸ್ತಕದಲ್ಲಿದೆ ವರದಿ.
ಅಚ್ಚರಿಯಾಗುತ್ತಿದೆ,
ಆಮೆಗೂ ಗೊತ್ತಿರಬಹುದೆ
ವಿಶ್ವದ ಕೇಂದ್ರ
ತನ್ನೊಳಗಿರುವುದೆಂದು?!
ಅದು ಯಾವ ಪವಾಡ ಮಾಡಿತೋ
ತಿಳಿಯದು
ತನ್ನ ಗೆಲುವಿಗಾಗಿ
ಮತ್ತು ನಿಲುವಿಗಾಗಿ.
ಅಂತೂ
ಆಮೆಯ ದೇಹ
ವಜ್ರಕಾಯವಾಗಿದ್ದು
ಸಂಕಲ್ಪದಿಂದಲೇ;
ಆಮೆಯ ಬದುಕಿನ ಆರೋಗ್ಯ,
ಆಯುಷ್ಯ ಮತ್ತು ಯೋಗ್ಯತೆ
ಬಲಿಷ್ಠ ಮಾದರಿಯೇ.
✍️ ಶಿವಕುಮಾರ ಸಾಯ 'ಅಭಿಜಿತ್'
🐢🐢🐢🐢🐢🐢🐢🐢
Comments
Post a Comment