ನೈಜ ಗೆಳೆಯರು
ನೈಜ ಗೆಳೆಯರು
ನಿನ್ನ ಕೈಗುಣ ನೆನೆಯುತ್ತಾರೆ
ಅವರೆಂದೂ ಕೈಬಿಡುವುದಿಲ್ಲ.
ನೈಜ ಗೆಳೆಯರೆಂದರೆ
ನಿನ್ನ ಆತ್ಮಸಂಗಾತಿಗಳು;
ಅವರೆಂದೂ ಹಳಿಯುವುದಿಲ್ಲ
ಹಂಗಿಸುವುದಿಲ್ಲ
ನಿನ್ನೊಳಗಿನ ಭಾಗವೇ ಆಗಿ
ಬಾಹ್ಯದಲ್ಲಿ ಬೆಳೆದವರೇ
ಗೆಳೆಯರು.
ನೈಜ ಗೆಳೆಯರು ನಿನ್ನ ವಿರುದ್ಧ
ಸೇಡು ಕಾರುವುದಿಲ್ಲ
ಸೋಲು ಉಣಿಸುವುದಿಲ್ಲ
ಮದ್ದು ಅರೆಯುವುದಿಲ್ಲ
ಮತ್ಸರಿಸುವುದಿಲ್ಲ
ಕತ್ತಿ ಮಸೆಯುವುದಿಲ್ಲ
ಅಲ್ಲದೇ
ಹೊಟ್ಟೆ ಉರಿಸುವುದಿಲ್ಲ
ಎಲ್ಲಕ್ಕಿಂತ ಮಿಗಿಲಾಗಿ
ಅಷ್ಟು ವಿಮರ್ಶಿಸುವುದಿಲ್ಲ.
ದೇಹ ನಿನ್ನದೇ ಆಗಿದ್ದು
ಉಸಿರಾಡುತ್ತಿರುವಾಗ,
ಗೆಳೆಯರು ನಿನ್ನ
ಅವಯವಗಳಂತಿದ್ದು
ಹರಸುವರು.
ನೈಜ ಗೆಳೆಯರು
ನೀನು ನಡೆಯುತ್ತಿರುವಾಗ
ತಮಗೆ ಅರಿವಿರದೆ
ನಿನ್ನೊಡನೆ ಚಲಿಸುವರು
ಅವರೆಂದೂ ನಿನ್ನ
ಸುಟ್ಟು ಬೆಂಕಿ ಮಾಡಿ
ಸಿಗರೇಟು ಹಚ್ಚಿಕೊಳ್ಳುವುದಿಲ್ಲ.
ನೈಜ ಗೆಳೆಯರ ನೀನು
ಮೆಚ್ಚಿಸಬೇಕಿಲ್ಲ
ಅವರು ತಾವೇ ಮೆಚ್ಚಿಕೊಳ್ಳುವರು
ಹಚ್ಚಿಕೊಳ್ಳುವರು.
ಭವ್ಯತೆಯನ್ನಷ್ಟೇ ಹೊಗಳಿ
ಹೊರಗೆಲ್ಲ ಉಗುಳಿದವರು
ನಿನ್ನ ಮೇಲೆ ಸವಾರಿ ಮಾಡಿ
ತೆಗಳಿದವರು
ಗೆಳೆಯರಲ್ಲ
ನೀ ಬಿದ್ದಾಗಲೂ ಬಿಡದೆ ಮುದ್ದಿಸಿ
ಮೇಲೆತ್ತಿದವರೇ
ಗೆಳೆಯರು.
ನಿಜವಾದ ನಿನ್ನ ಗೆಳೆಯರಿಗೆ
ನೀನೆಂದೂ ಪರಕೀಯನಾಗುವುದಿಲ್ಲ
ಏಕೆಂದರೆ ನೈಜ ಗೆಳೆಯರು ಯಾವತ್ತೂ
ಸ್ವಾರ್ಥದ ಸಂವಿಧಾನ
ರಚಿಸಿಕೊಳ್ಳುವುದಿಲ್ಲ.
ಸಾವು ನೋವಿಗೂ ಬೆದರಲು ಬಿಡದೆ
ನಾವಿದ್ದೇವೆಂದು
ನೈಜ ಗೆಳೆಯರು
ಬಿಟ್ಟು ಹೋಗದೆ ಬದುಕಿಸುತ್ತಾರೆ
ಅಥವಾ
ಬದುಕಿಸುವವರ ಪಕ್ಷದಲ್ಲಿರುತ್ತಾರೆ.
Rewiring the things ಎನ್ನುತ್ತಿರಲು
ನಿಡುಗಾಲದ
ನೈಜ ಗೆಳೆಯರು ಮಾತ್ರ
ಹಾದಿಗೆ ನೆರಳಾದಾರು
ಹಾಡಿಗೆ ವಸ್ತುವಾದಾರು.
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment