ಮತ್ತೆ ಬರೆಯುತ್ತೇನೆ ಕವಿತೆ
ಮತ್ತೆ ಬರೆಯುತ್ತೇನೆ ಕವಿತೆ
ದೇವರ ಹೆಸರಿನಲ್ಲಿ;
ಬರೆಯುತ್ತೇನೆ ಕವಿತೆ
ಒಂದು ನಿಶ್ಚಯಕ್ಕಾಗಿ.
ಮುಡಿಪಿನ ಧಾರಣೆಯ ಬಯಸುವ
ಬಯಕೆಗಳ ಮಾಲೆಯಂತೆ
ಬವಣೆಯ ನೀಗುವ ಭರವಸೆ
ಕರುಣೆಯಲಿ ಕರಪಿಡಿದು
ಕಾಪಾಡುವುದು.
ಪವಾಡಗಳು ನಡೆಯುವವು
ಪ್ರಸಿದ್ಧಿಯಂತೆ;
ನಿನ್ನ ಆಶೋತ್ತರಗಳಿಲ್ಲಿ
ನೆರವೇರುವವು
ನಿರ್ಣಯದಂತೆ.
ನೀ ಈ ಕ್ಷಣ
ಒಮ್ಮೆ ಅಳುತ್ತಿರಬಹುದು,
ಮತ್ತೊಮ್ಮೆ ವರ್ತಮಾನದಲ್ಲಿ
ಗೆರೆ ಎಳೆದು ಉಸಿರಾಡುತ್ತಿರಬಹುದು,
ಮಗದೊಮ್ಮೆ
ನಗುನಗುವ ವಿಧಾನ, ತಂತ್ರೋಪಾಯ
ಪಾಲಿಸುತ್ತಿರಬಹುದು....
ಯಾವುದೂ ಶಾಶ್ವತವಲ್ಲ-
ನಿನ್ನ ದುಗುಡಗಳು ಕೂಡ
ನಿಜವಲ್ಲ;
ಅಪೂರ್ವ ನಿಲುವಿನಿಂದ
ಗೆಲುವಿನ ಕಡೆ ಚಲಿಸುತ್ತಾ
ಮತ್ತೆ ಬರೆಯುತ್ತೇನೆ ಕವಿತೆ-
ಒಂದು ತದೇಕ ಚಿತ್ತದ ಧ್ಯಾನದಂತೆ,
ತಪಸ್ಸಿನಂತೆ,
ನಿರ್ವಾಹಕನ ನ್ಯಾಯದಂತೆ
ದೇವರ ಹೆಸರಿನಲ್ಲಿ.
✍️ಶಿವಕುಮಾರ ಸಾಯ 'ಅಭಿಜಿತ್'
Comments
Post a Comment