ಅವರವರ ಬದುಕಲ್ಲಿ ಅವರವರು ಹೀರೋಗಳೇ!
ಈ ಲೋಕದಲ್ಲಿ ಅದೆಂಥ ವಿಚಿತ್ರ ಮನುಷ್ಯರಿರುತ್ತಾರಪ್ಪಾ! ಕೆಲವರಿರುತ್ತಾರೆ. ಅವರಿಗೆ ಮತ್ತೊಬ್ಬರಿಗೆ ಬುದ್ಧಿ ಹೇಳುವ ತೆವಲು, ತವಕ. ಒಂದು ಬಗೆಯ ತಿಕ್ಕಲು ಸ್ವಭಾವ. ತಮ್ಮ ಮೂಗಿನ ನೇರಕ್ಕೆ ಮಾತಾಡಿಬಿಡುವುದು. ಮತ್ತೊಬ್ಬರಲ್ಲಿರುವ ಕುಂದುಕೊರತೆಗಳನ್ನೇ ಗುರುತಿಸುತ್ತಾ ಹೋಗುವುದು. ಆಷ್ಟೇ ಆಗಿದ್ದರೆ ದೊಡ್ಡ ಸಮಸ್ಯೆಯಿರಲಿಲ್ಲ. ಆದರೆ ಇವರು ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆಯೇ. ಮತ್ತೊಬ್ಬನನ್ನು ಕೀಳಾಗಿ ಕಾಣುವ ಪ್ರವೃತ್ತಿ. ಇದರಿಂದಾಗಿ ಬೇರೊಬ್ಬನಲ್ಲಿ ಪರಕೀಯತೆಯ ಪ್ರಜ್ಞೆ ಪಸರಿಸುವುದಕ್ಕೆ ಅಂಥವರು ಕಾರಣರಾಗಿ ಹೋಗುತ್ತಾರೆ. ಮೊನ್ನೆ ಒಬ್ಬರಂತೂ ನನ್ನೊಡನೆ ಒಂದು ಕ್ಷುಲ್ಲಕ ಕಾರಣಕ್ಕೆ ವಾಗ್ವಾದಕ್ಕಿಳಿದಿದ್ದರು. ಕೆಲ ಬಾರಿ ಮತ್ತೊಬ್ಬನ ಸಾಮಾಜಿಕ ಇಮೇಜಿಗೆ ಧಕ್ಕೆ ತರಲು ಪ್ರಯತ್ನಿಸುವ ಕಿಡಿಗೇಡಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಮಾತ್ರ ಮುಖ್ಯವಾದಂತೆ ಕಾಣುತ್ತದೆ. ಇಂತಹ ಪ್ರಕರಣಗಳು ಕೋರ್ಟ್ ಮೆಟ್ಟಿಲೇರುವುದೂ ಇದೆ. ವೈಯಕ್ತಿಕ ಆತ್ಮಪ್ರತ್ಯಯಕ್ಕೆ ಭಂಗ ಉಂಟಾದರೆ ಯಾರು ತಾನೇ ಸಹಿಸಿಕೊಳ್ಳುತ್ತಾರೆ?
ಯಾರನ್ನೇ ಆಗಲಿ ಕೀಳಾಗಿ ಕಾಣಲು ಪ್ರಕೃತಿಯಲ್ಲಿ ಇನ್ನಾರಿಗೂ ಹಕ್ಕಿಲ್ಲ. ಏಕೆಂದರೆ ಪ್ರತಿಯೊಬ್ಬನೂ ಈ ಸೃಷ್ಟಿಯಲ್ಲಿ ವಿಭಿನ್ನವೇ. ಹಾಗಿರುವಾಗ ನಮ್ಮ ಆಧಾರಗಳಿಂದ ನಾವು ಮತ್ತೊಬ್ಬನನ್ನು ಅಳೆದುಬಿಟ್ಟರೆ ಹೇಗೆ? ಅದು ಸರಿಯೇ? ಪ್ರತಿಯೊಂದು ಜೀವಿಯೂ ಒಂದು ಪ್ರತ್ಯೇಕ ವ್ಯವಸ್ಥೆಯಾಗಿರುವುದರಿಂದ, ವಿಮರ್ಶೆಗೆ ಬಾಹ್ಯ ಆಧಾರಗಳನ್ನು ಬಳಸುವುದೇ ತಪ್ಪಾಗುತ್ತದೆ. ವಿಮರ್ಶೆಯು ಅನವಶ್ಯಕವೆಂದೂ ಹೋಲಿಕೆಯು ಅವೈಜ್ಞಾನಿಕವೆಂದೂ ಹೇಳಬಹುದು. ಹೀಗೆ ಎಲ್ಲ ವ್ಯವಸ್ಥೆಗಳನ್ನು ಅಥವಾ ವ್ಯಕ್ತಿಗಳನ್ನು ಯಥಾವತ್ತಾಗಿ ಒಪ್ಪಿಕೊಳ್ಳಬೇಕು. ಆದುದರಿಂದ ಜಗತ್ತಿನಲ್ಲಿ ಪರಸ್ಪರ "ನಾನು ಸರಿ, ನೀನು ಸರಿ" ಎಂದು ಒಪ್ಪಿಕೊಳ್ಳುವಂತಿದ್ದರೆ ಮಾತ್ರ ಹೊಂದಾಣಿಕೆ. "ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ" ಎಂದು ವಚನಕಾರ ಬಸವಣ್ಣ ಹೇಳಿದ್ದಾನೆ. ಸೂಕ್ಷ್ಮವಾಗಿ ಅರ್ಥೈಸಿದರೆ ಯಾರೂ ಪರಕೀಯರಲ್ಲ. ಎಲ್ಲರೂ ನಮ್ಮವರೇ ಆಗಿದ್ದಾರೆ. ಹಾಗಿರುವಾಗ ತಾನು ಹೀರೋ ಆಗಬೇಕಾದರೆ ಮತ್ತೊಬ್ಬನನ್ನು ಜೀರೋ ಮಾಡಬೇಕೆಂಬ ಉದ್ದಿಶ್ಯಕ್ಕೆ ನಿಲುಕಬಾರದು. ಗೌರವ ನೀಡಿದಾಗಲೇ ಗೌರವ ಬರುವುದು. ಎಲ್ಲರನ್ನೂ ಒಟ್ಟು ಸೇರಿಸಿಕೊಂಡು ಮುನ್ನಡೆಯಬೇಕು. ಕಿರುಕುಳ ನೀಡಿ ಸಂತೋಷಿಸುವುದಕ್ಕೆ ಅರ್ಥವೇ ಇಲ್ಲ. ಯಾರೊಬ್ಬರ ಭಾವನೆಗಳನ್ನು ಕೆಣಕಬಾರದು ಮತ್ತು ಎಲ್ಲರನ್ನು ಗೌರವಿಸಬೇಕು. ಪ್ರಭುತ್ವದಲ್ಲಿ ಎಲ್ಲರಿಗೂ ಸಮಪಾಲು ಇದೆ. ವ್ಯಕ್ತಿಗೌರವ, ಸ್ವಾತಂತ್ರ್ಯವಿದೆ. ಸಾಮಾಜಿಕ ಶಾಂತಿಗೆ ಭಂಗ ಉಂಟುಮಾಡಿದರೆ ಅಂಥದ್ದು ಧಾರ್ಮಿಕವೂ ಆಗುವುದಿಲ್ಲ. ಏಕೆಂದರೆ ಲೋಕರೂಢಿಯಲ್ಲಿ ಪರಿಪೂರ್ಣತೆ ಎಂದರೆ ಹಾಗೆಯೇ. ವೈವಿಧ್ಯವನ್ನು ಒಪ್ಪಿಕೊಳ್ಳುವುದು ಮತ್ತು ಎಲ್ಲಾ ಗುಣಗಳು ಪ್ರಪಂಚದ ಪ್ರಸ್ತುತಿಗೆ ಒಳಪಡುತ್ತವೆಯಾದ್ದರಿಂದ ಯಾವ ಮೌಲ್ಯವೂ ಹೇಯವಲ್ಲ ಮತ್ತು ನಿಕೃಷ್ಟವಲ್ಲ. ಮತ್ತೊಬ್ಬರ ಬದುಕಿನಲ್ಲಿ ಸವಾರಿ ಮಾಡುವುದು ಸಲ್ಲದು. ಏಕೆಂದರೆ ಅವರವರ ಬದುಕಿನಲ್ಲಿ ಅವರವರು ಹೀರೋಗಳೇ ಹೊರತು ಯಾರೂ ವಿಲನ್ಗಳಲ್ಲ. ಈ ನುಡಿಯನ್ನು ನಾವು ಮರೆಯಲೇಬಾರದು.
✍️ಶಿವಕುಮಾರ ಸಾಯ 'ಅಭಿಜಿತ್'
👍
ReplyDelete👌👌
ReplyDelete