'ಟೆಲಿಪತಿ' ಪ್ರಯೋಗಗಳ ಸುತ್ತಮುತ್ತ
ಸುಮಾರು ವರ್ಷಗಳ ಹಿಂದೊಮ್ಮೆ ದಿಢೀರಾಗಿ ನನ್ನ ಬಾಲ್ಯದ ಗುರುಗಳೂ, ಸ್ನೇಹಿತರೂ ಆದ ಶ್ರೀಯುತ ಶ್ರೀಪತಿ ಭಟ್ ಪದ್ಯಾಣ ಅವರು "Do you know telepathy?" ಎಂದು ಒಂದು ಮೊಬೈಲ್ ಮೆಸೇಜ್ ಕಳಿಸಿದ್ದರು. "Don't know" ಎಂದಷ್ಟೇ ಉತ್ತರಿಸಿದ್ದೆ. ಹಲವಾರು ವರ್ಷಗಳ ನಂತರ ಅಂತಹ ಅರೆವಿಜ್ಞಾನದ ವಿಷಯಗಳು ನನ್ನ ಪರಿಗಣನೆಗೆ ಬಂದಿದ್ದವು.
ಅದು 2016ನೇ ಇಸವಿ. ವಿಶೇಷಾಂಕವೊಂದರಲ್ಲಿ 'ಅತೀಂದ್ರಿಯ ಲೋಕದಲ್ಲಿ' ಎಂಬ ಲೇಖನವನ್ನು ಓದುತ್ತಿದ್ದಾಗ ಕುತೂಹಲ ಕೆರಳಿತು. ಆ ನಂತರ ಟೆಲಿಪತಿ ಎಂಬ ಈ mind to mind communication ಬಗ್ಗೆ ಕುತೂಹಲಿಯಾದೆ. ಟೆಲಿಪತಿ ಪ್ರಯೋಗಗಳನ್ನು ಮಾಡಲು ವಿಶೇಷ ಶಕ್ತಿ ಬೇಕಾಗುತ್ತದೆ. ಈ ದಿನಗಳಲ್ಲಿ ನಾವು ಪ್ರಾಪಂಚಿಕ ನೆಟ್‌ವರ್ಕ್‌ಗಳನ್ನು ಹೆಚ್ಚಿಸಿಕೊಂಡಿದ್ದೇವೆ. ಆದರೆ ನಮ್ಮ "inner engineering" ಬಗ್ಗೆ ತಿಳಿದಿಲ್ಲ. ನಿಜವಾಗಿ ಪಿಂಡಾಂಡದಲ್ಲಿ ಬ್ರಹ್ಮಾಂಡ ಅಡಗಿದೆ ಎನ್ನುತ್ತಾರೆ ನೋಡಿ. ನಮ್ಮ ಒಳಗೇನೇ ಎಲ್ಲವೂ ಇದೆಯಂತೆ. ಟೆಲಿಪತಿಕ್ ವ್ಯಕ್ತಿಗಳಲ್ಲಿ ಎರಡು ಬಗೆ. ಕೆಲವರು ಸುಲಭವಾಗಿ ರಿಸೀವ್ ಮಾಡುತ್ತಾರೆ. ಇನ್ನು ಕೆಲವರು ಸುಲಭವಾಗಿ ಸಂದೇಶ ಕಳುಹಿಸುತ್ತಾರೆ. ಮನುಷ್ಯನೆಂದರೆ ಒಂದು ಜೀವರಾಸಾಯನಿಕ ವ್ಯವಸ್ಥೆ ಎಂದು ವೈದ್ಯ ವಿಜ್ಞಾನ ಹೇಳುತ್ತದೆ. ದೇಹದ ಒಳಗೆ ಸಂವೇದನೆಗಳನ್ನು ರವಾನಿಸಬಲ್ಲ ಇಂದ್ರಿಯಗಳೊಂದಿಗಿನ ಆಂತರಿಕ ನೆಟ್‌ವರ್ಕ್ ವ್ಯವಸ್ಥೆ ಇದೆ ತಾನೇ? ಅಂಥದ್ದೊಂದು ಅತೀಂದ್ರಿಯ ವ್ಯವಸ್ಥೆಯೂ ಇದೆಯಂತೆ. ಅತೀಂದ್ರಿಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿಕೊಂಡರೆ ಆ ವ್ಯವಸ್ಥೆಯ ಮೂಲಕ ಸಂದೇಶಗಳನ್ನು ಕಳುಹಿಸಲು ಹಾಗೂ ರಿಸೀವ್ ಮಾಡಲು ಸಾಧ್ಯ ಎಂದು ಟೆಲಿಪತಿ ತತ್ತ್ವಗಳು ಹೇಳುತ್ತವೆ. ನಾವು ಕಂಡುಹಿಡಿದಿರುವ ಎಲ್ಲಾ ಬಾಹ್ಯ ಸಂಪರ್ಕ ಸಾಧನಗಳು ಕೂಡಾ ಮನಸ್ಸೆಂಬ ಮಹಾನ್ ಸಾಧನದೊಳಗೇ ಹೊಳೆದದ್ದು. ಅವೆಲ್ಲವೂ ಸೆಕೆಂಡರಿ ಸಾಧನಗಳು. ವಾಸ್ತವವಾಗಿ ದೇಹ ಅರಸಿದರೆ ಒಂದು ಅದ್ಭುತ ವ್ಯವಸ್ಥೆ. ಅತೀಂದ್ರಿಯ, ಅತಿಮಾನುಷ ಶಕ್ತಿಯನ್ನು ಸೂಪರ್ ನ್ಯಾಚುರಲ್ ಪವರ್ ಎನ್ನುತ್ತಾರೆ.
ಟೆಲಿಪತಿ ಸಂದೇಶಗಳು ಯಾವ ಮಾದರಿಯಲ್ಲಿ ರವಾನೆಯಾಗುತ್ತವೆ ಎಂದು ನೀವು ಕೇಳಬಹುದು. ಕೆಲವು ಉದಾಹರಣೆಗಳನ್ನು ನೀಡಬಯಸುತ್ತೇನೆ. ಒಂದು ಸಂದರ್ಭದಲ್ಲಿ ನೀವು ಯಾರ ಬಗ್ಗೆಯೋ ಆಲೋಚಿಸುತ್ತಿರುತ್ತೀರಿ ಎಂದಿಟ್ಟುಕೊಳ್ಳಿ. ಆ ಮರುಕ್ಷಣ ಆತ ನಿಮಗೆ ಕರೆ ಮಾಡುತ್ತಾನೆ ಅಥವಾ ನಿಮ್ಮೆದುರು ಕಾಣಿಸಿಕೊಳ್ಳುತ್ತಾನೆ ಎಂದಾಗ, ಆಡುಮಾತಿನಲ್ಲಿ ಇದು ಕಾಕತಾಳೀಯ. ಆದರೆ ಅತೀಂದ್ರಿಯ ವಿಚಾರಗಳಲ್ಲಿ ನಿಮಗೆ ನಂಬಿಕೆಯಿರುವುದೇ ಆಗಿದ್ದರೆ ಇದು ಟೆಲಿಪತಿ ಶಕ್ತಿಯಂತೆ ಅಂದರೆ ಒಳಜಗತ್ತಿನ ಸಂಪರ್ಕದಿಂದ ಸಾಧ್ಯವಾಗಿದೆ ಎನ್ನುತ್ತೀರಿ.
ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ಧ್ಯಾನ ಹೇಳಿಕೊಡುವ ಗುರುವೊಬ್ಬ ಮನಸ್ಸಿನ ಶಕ್ತಿಯಿಂದ ಪೆಂಡುಲಂ ಚಲನೆಯ ದಿಕ್ಕನ್ನು ಬದಲಾಯಿಸುತ್ತಿದ್ದುದನ್ನು ನೋಡಿದ್ದೇನೆ. ಅದು ಹೇಗೋ ನನಗೆ ಗೊತ್ತಿಲ್ಲ. ಆದರೆ ಟೆಲಿಪತಿ ಮೂಲಕ ರಹಸ್ಯವಾಗಿ ವ್ಯಕ್ತಿಗೂ ತಿಳಿಯದಂತೆ ಒಬ್ಬ ಮನುಷ್ಯನ ಮನಸ್ಸಿಗೆ ನೇರವಾಗಿ ಒಂದು ಬುದ್ಧಿಯನ್ನು, ಒಂದು ಆಲೋಚನೆಯನ್ನು ಕಳುಹಿಸಬಹುದು ಎನ್ನಲಾಗಿದೆ.
ಟೆಲಿಪತಿ ಪ್ರಯೋಗ ನಡೆಸುವವರು ಧ್ಯಾನ ನಡೆಸಿ ಮನಸ್ಸಿನ ಶಕ್ತಿಯನ್ನು ಪ್ರಸಾರಕ್ಕೆ ಸಜ್ಜುಗೊಳಿಸುತ್ತಾರೆ. ಪದೇ ಪದೇ ಸಂದೇಶ ಕಳುಹಿಸುತ್ತಾರೆ. ವಾರದಲ್ಲಿ ಹಲವು ಬಾರಿ ಇದನ್ನು ರಿಪೀಟ್ ಮಾಡಲಾಗುತ್ತದೆ. ರಿಸೀವ್ ಮಾಡಿದವರು ತಾವಾಗಿಯೇ ಬಂದು ವರ್ಗಾಯಿಸಿದ ಆಲೋಚನೆಯಂತೆ ನಡೆದುಕೊಳ್ಳುತ್ತಾರೆ. ಉದಾಹರಣೆಗೆ, ಒಬ್ಬ ಮೆಣಸು ತಿನ್ನದ ವ್ಯಕ್ತಿಗೆ ನೀವು ಮೆಣಸು ತಿನ್ನುವಂತೆ ರಹಸ್ಯವಾಗಿ ಮನಸ್ಸಿಗೆ ಸಂದೇಶ ಕಳುಹಿಸಿದರೆ ಆತ ಒಂದು ದಿನ ಬಂದು ತನಗೆ ಮೆಣಸು ತಿನ್ನುವ ಬಯಕೆಯಾಗಿದೆ ಎಂದೋ, ಕನಸಿನಲ್ಲಿ ಮೆಣಸು ತಿನ್ನಲು ಪ್ರೇರಣೆ ಸಿಕ್ಕಿತೆಂದೋ ಹೇಳುವ ಸಾಧ್ಯತೆಯಿರುತ್ತದೆ.
ಟೆಲಿಪತಿ ಶಕ್ತಿಯನ್ನು ಪರೀಕ್ಷೆ ಮಾಡುವವರು ಮೊದಲು ತಮ್ಮನ್ನು ತಾವೇ ಪ್ರಯೋಗಕ್ಕೆ ಒಡ್ಡಿಕೊಳ್ಳುವರು. ಮಲಗುವ ಮುಂಚೆ ಸುಪ್ತಮನಸ್ಸಿನ ಶಕ್ತಿ ಬಳಸಿ "ನಾಳೆ ನೀನು ನಾಲ್ಕು ಗಂಟೆಗೆ ಏಳು" ಎಂದು ಸ್ವಯಂ ಹೇಳಿಕೊಳ್ಳಿ. ಮರುದಿನ ನಿಮಗೆ ನಾಲ್ಕು ಗಂಟೆಗೆ ಎಚ್ಚರವಾಗಿದ್ದರೆ ನಿಮ್ಮ ಮನಸ್ಸು ಟೆಲಿಪತಿಕ್ ಆಗಿದೆ ಎಂದು ಅರ್ಥ.
ಟೆಲಿಪತಿ ಪ್ರಯೋಗ ಮಾಡಬೇಕಾದರೆ ತಾಳ್ಮೆ, ಶಾಂತಿ, ಸಮಾಧಾನ ಇರಬೇಕು. ಇದೊಂದು ಅರೆವಿಜ್ಞಾನ. ಆದುದರಿಂದ ಆತುರ ಪಡಬಾರದು. ವ್ಯಕ್ತಿಯ ಮನಸ್ಸಿನ ಆಂದೋಲನವು ಸಂದೇಶ ಕಳುಹಿಸಲು ಸಮರ್ಥವಾಗಿದ್ದಾಗ ಮಾತ್ರ ಟೆಲಿಪತಿ ಸಂದೇಶ ರವಾನೆ ಸಾಧ್ಯವಾಗುತ್ತದೆ.
ನಾನು ಟೆಲಿಪತಿ ಪ್ರಯೋಗಗಳನ್ನು ಜಾರಿಗೆ ತಂದ ಬಳಿಕ ಆಶ್ಚರ್ಯಕರ ಪ್ರಯೋಜನಗಳನ್ನು ಕಂಡಿದ್ದೇನೆ. ಆಚಾನಕ್ಕಾಗಿ ಸಹಾಯಗಳನ್ನು ಪಡೆದಿದ್ದೇನೆ. ಅಪರೂಪವಾಗಿ ಸಿಗುವ ಸಂಬಂಧಿಯೊಬ್ಬರ ನೆನಪು ಮಾಡಿಕೊಂಡ ಕೆಲಸಮಯದಲ್ಲಿ ಅವರಿಂದಲೇ "ಹಾಯ್" , "ಹಲೋ" ಎಂಬ ಸಂದೇಶ ಬಂದಿದೆ. ಕಲ್ಪಿಸಿದ ಕೆಲವು ವಸ್ತುಗಳನ್ನು ಕ್ಷಣದಲ್ಲಿ ತಮಾಷೆ ಎಂಬಂತೆ ಕಂಡಿದ್ದೇನೆ. ಆಶ್ಚರ್ಯವೆಂದರೆ ಇತ್ತೀಚೆಗೆ ನನ್ನಲ್ಲಿ ಮಾತು ಬಿಟ್ಟಿದ್ದ ವ್ಯಕ್ತಿಯೊಬ್ಬರು ಅವರಾಗಿಯೇ ಮಾತಾಡುವಂತೆ ಮಾಡಿದ್ದೇನೆ. ಟೆಲಿಪತಿಯನ್ನು ಯಾವಾಗಲೂ ನಿಸ್ವಾರ್ಥತೆಯಿಂದ ಬಳಸಬೇಕಂತೆ. ವಿಶೇಷ ತಂತ್ರ: ನೀವು ಟೆಲಿಪತಿ ಮೂಲಕ ಸಂಭಾಷಿಸಲು ಭಾವನೆಗಳು ಅಡ್ಡಿಯಾದಾಗ ವಿಚಾರಗಳನ್ನು ಆತ್ಮೀಯರಿಗೆ ತಿಳಿಸಿ. ಆಗ ಅವರ ಮನಸ್ಸು ಅರಿವಿಲ್ಲದಂತೆ ಟೆಲಿಪತಿಯಲ್ಲಿ ಪಾಲ್ಗೊಳ್ಳುತ್ತದೆ. ಹಾಗೆಯೂ ಉದ್ದೇಶಗಳನ್ನು ಸಾಧಿಸುವುದಕ್ಕಾಗುತ್ತದೆ ಎಂದು ನಾವು ಪ್ರಯೋಗಗಳಲ್ಲಿ ಕಂಡುಕೊಂಡಿದ್ದೇವೆ.
ಮುಖ್ಯವಾಗಿ ಜೀವನಕ್ಕೆ ಸಂಬಂಧಿಸಿ 12 ಸಾರ್ವತ್ರಿಕ ನಿಯಮಗಳನ್ನು ಜ್ಞಾನಿಗಳು ಪಟ್ಟಿಮಾಡಿದ್ದಾರೆ. ಇವುಗಳಲ್ಲಿ ಮೊದಲನೇ ನಿಯಮ 'The Law of Divine Oneness' ಆಗಿದೆ. ಆ ನಿಯಮದ ಪ್ರಕಾರ
"In this world we live, everything is connected to everything else. Every thought, words, actions and beliefs of ours affect others and the universe around us irrespective of whether the people are near or far away, in other words, beyond time and space" ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಪ್ರಖ್ಯಾತ ಮನೋವೈದ್ಯರಾದ ದಿವಂಗತ ಡಾ. ಅಶೋಕ ಪೈ ಅವರು ಹೇಳಿರುವ ಸಂಶೋಧನಾ ಸತ್ಯವೊಂದರ ಪ್ರಕಾರ ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಶನ್ ನೋಡುತ್ತಿರುತ್ತಾರೆ ಎಂದಿರಲಿ. ಆಗ ಯಾವುದೋ ಕೊಲೆ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಪಕ್ಕದ ಕೊಠಡಿಯಲ್ಲಿ ತಮ್ಮಷ್ಟಕ್ಕೆ ಇರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪ ಮಟ್ಟಿಗೆ ದುಗುಡಗೊಳ್ಳುವುದು ಹಾಗೂ ಇತ್ತ ಯಾವುದಾದರೂ ನೃತ್ಯ ನೋಡುತ್ತಿದ್ದರೆ ಅದೇ ಪಕ್ಕದ ಕೊಠಡಿಯಲ್ಲಿ ತಮ್ಮಷ್ಟಕ್ಕೆ ಇರುವವರ ಮನಸ್ಸಿನ ಮೇಲೂ ಪರಿಣಾಮ ಬೀರಿ ಸ್ವಲ್ಪ ಮಟ್ಟಿಗೆ ಸಂತೋಷದ ಭಾವನೆ ಉಂಟಾಗುವುದನ್ನು ಪ್ರಯೋಗಗಳಲ್ಲಿ ಕಂಡುಕೊಳ್ಳಲಾಗಿದೆ.
ನಾವೆಲ್ಲ ನಮ್ಮ ದೇಹದ ಬುದ್ಧಿ ಅಂದರೆ Body wisdom ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ದೇಹ ಒಂದು ಮಿತ ಶಕ್ತಿಯುಳ್ಳ ಯಂತ್ರವಲ್ಲ; ಅದರ ಶಕ್ತಿ ಅಮಿತವಾದದ್ದು ಎಂಬುದನ್ನು ನೆನಪಿಡಬೇಕು. "ದೇಹೋ ದೇವಾಲಯಃ ಪ್ರೋಕ್ತಃ ಜೀವೋ ದೇವೋ ಸದಾಶಿವಃ" ಎಂಬ ಮಾತಿನಂತೆ Body consciousness ಬಗ್ಗೆ ಹೆಚ್ಚು ಮಹತ್ವ ನೀಡಬೇಕು.
✍️ಶಿವಕುಮಾರ ಸಾಯ 'ಅಭಿಜಿತ್'
Comments
Post a Comment