🔺ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗಶಾಸ್ತ್ರದ ಜನಪ್ರಿಯತೆಯ ಬಗ್ಗೆ ಮಾತು🔻 ದಿನಾಂಕ 21.06.2019
"ವೇದಿಕೆಯಲ್ಲಿರುವ ಗಣ್ಯರೇ, ಸಹೋದ್ಯೋಗಿ ಬಂಧುಗಳೇ, ವಿದ್ಯಾರ್ಥಿಗಳೇ....
'ಅಂತರರಾಷ್ಟ್ರೀಯ ಯೋಗ ದಿನಾಚರಣೆ' ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಕ್ರೀಡಾ ಸಂಘದ ವತಿಯಿಂದ ಹಮ್ಮಿಕೊಂಡಿರುವ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಒಂದೆರಡು ನುಡಿಗಳು....
ಈ ಯೋಗ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಮಾತ್ರ ಅಲ್ಲ; ನಮ್ಮ ದೇಶದಲ್ಲಿ ಮಾತ್ರ ಅಲ್ಲ; ವಿಶ್ವಮಟ್ಟದಲ್ಲೇ ಆಚರಿಸಲಾಗುತ್ತಾ ಇದೆ. ಈ ಮಾನ್ಯತೆ ದೊರಕಿದ್ದು 2014ರ ಡಿಸೆಂಬರ್‌ನಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ ಅಥವಾ ವಿಶ್ವಸಂಸ್ಥೆ ಯೋಗವನ್ನು ಅಂತರರಾಷ್ಟ್ರೀಯ ದಿನಾಚರಣೆ ಎಂದು ಘೋಷಿಸಿದ ಬಳಿಕ.
ಇನ್ನು ಈ ಯೋಗವನ್ನು ನಾವು ಅಭ್ಯಸಿಸುವುದಕ್ಕೆ ಮೊದಲು ಯೋಗ ಅಂದರೇನು, ಯೋಗವನ್ನು ಯಾಕೆ ಮಾಡಬೇಕು ಇದನ್ನೆಲ್ಲ ತಿಳಿದಿದ್ದರೆ ಒಳ್ಳೆಯದು.
ಯೋಗ ನಮ್ಮ ದೇಶದಲ್ಲಿ ಒಂದು ಪರಂಪರೆಯಾಗಿ ಬೆಳೆದದ್ದು. ನಮ್ಮ ದೇಶಕ್ಕೆ ಅದು ಹೊಸದೇನೂ ಅಲ್ಲ. ಯೋಗವಿದ್ಯೆಯು ಇಡೀ ಜಗತ್ತಿಗೆ ಭಾರತೀಯರು ನೀಡಿದ ಕೊಡುಗೆ. ಅದು ನಮ್ಮ ದೇಶದ ಸನಾತನ ಋಷಿಮುನಿಗಳು ಸಾಧಿಸಿ ಕಂಡುಹಿಡಿದ ಮಹಾನ್ ವಿದ್ಯೆ. ಆದ್ದರಿಂದ ನಾವು ಯೋಗದ ಬಗ್ಗೆ ತಿಳಿದಿರಬೇಕು.
ಈ ಯೋಗ ಎಂಬ ಶಬ್ದ ಬಂದಿದ್ದು 'ಯುಜ್' ಎಂಬ ಧಾತುವಿನಿಂದ. 'ಯುಜ್' ಅಂದರೆ 'ಒಂದುಗೂಡಿಸುವುದು' ಅಂತ ಅರ್ಥ. ಜೀವಾತ್ಮನನ್ನು ಪರಮಾತ್ಮನ ಜೊತೆ ಒಂದುಗೂಡಿಸುವುದು. ಅಂದರೆ ನಮ್ಮನ್ನು ನಮ್ಮ ದೇಹಕ್ರಿಯೆಗಳ ಕೇಂದ್ರದ ಜೊತೆ ಸೇರಿಸುವುದು. ಆಗ ನಮ್ಮ ಶಕ್ತಿ ಸಹಜವಾಗಿ ಹೆಚ್ಚಾಗಲೇ ಬೇಕು.
'ಆತ್ಮಾನಂ ರಥಿನಂ ವಿದ್ದಿ, ಶರೀರಂ ರಥಮೇವ ತು, ಬುದ್ಧಿ ತು ಸಾರಥಿಂ ವಿದ್ದಿ, ಮನಃ ಪ್ರಗ್ರಹಮೇವ ಚ' ಹೀಗೆ ಕಠೋಪನಿಷತ್‍ನಲ್ಲಿ ಒಂದು ಮಾತಿದೆ. ಶರೀರವನ್ನು ಇಲ್ಲಿ ಒಂದು ರಥಕ್ಕೆ ಹೋಲಿಸಿದ್ದಾರೆ. ಅದರಲ್ಲಿ ಆತ್ಮ ರಥವನ್ನು ನಡೆಸುವವ. ಮನಸ್ಸು ಮತ್ತು ಪಂಚೇಂದ್ರಿಯಗಳು ಕುದುರೆಗಳು. ಬುದ್ಧಿಯನ್ನೇ ಸಾರಥಿ ಅಂತ ಇಲ್ಲಿ ಹೇಳಿದ್ದಾರೆ.
"ಯುಜ್ಯತೇ ಅನೇನ ಇತಿ ಯೋಗಃ" ಎಂಬುದರ ಅರ್ಥವನ್ನು ನಾವು ಈ ಬಗೆಯಲ್ಲಿ ಗ್ರಹಿಸಬಹುದು.
ಯೋಗಶಾಸ್ತ್ರದ ಪಿತಾಮಹ ಅಂತ ನಾವು ಪತಂಜಲಿ ಮುನಿಯನ್ನು ಕರೆಯುತ್ತೇವೆ. ಅವನ ಪ್ರಕಾರ, "ಯೋಗಃ ಚಿತ್ತವೃತ್ತಿ ನಿರೋಧಃ".
'ಯೋಗ' ಎಂಬ ಪದದ ಪ್ರಸ್ತಾಪ ಭಗವದ್ಗೀತೆಯಲ್ಲಿ ಇದೆ. ಅಲ್ಲಿ ತಿಳಿಸಿರುವ ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ರಾಜಯೋಗ - ಇವು ಯೋಗದ ಪಥಗಳು.
ಇದರಲ್ಲಿ ನಾಲ್ಕನೆಯದಾದ ರಾಜಯೋಗವನ್ನು ಮುಂದೆ 'ಅಷ್ಟಾಂಗಯೋಗ' ಎಂದು ಕರೆಯಲಾಗಿದೆ.
ಯೋಗ ಅಂದರೆ ಬರೀ ಆಸನಗಳು ಅಥವಾ ಶರೀರದ ಭಂಗಿಗಳು ಅಷ್ಟೇ ಅಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ - ಇವು ಯೋಗದ ಅಷ್ಟಾಂಗಗಳು.
ಆದರೆ ಇದರ ಬಳಕೆಯಲ್ಲಿ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗಿರುವುದು ಯೋಗಾಸನಗಳು, ಪ್ರಾಣಾಯಾಮ ಮತ್ತು ಧ್ಯಾನ ಈ ಮೂರು ಮಾತ್ರ. ಅವುಗಳನ್ನು ಇಲ್ಲಿ ಗಮನಿಸೋಣ.
1. ಯೋಗಾಸನಗಳು:-
'ಆಸನ' ಅಂದರೆ ಶರೀರದ ಭಂಗಿಗಳು ಅಥವಾ ಅಂಗವಿನ್ಯಾಸಗಳು. ಯೋಗಾಸನವನ್ನು ನಾವು ಮಾಡುವಾಗ ನಮ್ಮ ನಂಬಿಕೆ ಮುಖ್ಯ. ಯೋಗಿಗಳು ದೇಹವನ್ನು ದೇವಾಲಯ ಎಂದಿದ್ದಾರೆ. ಯೋಗ ಮಾಡುವಾಗ ಮನಸ್ಸಿನಲ್ಲಿ ಬರುವ ಆಲೋಚನೆಗಳಿಗೆ ಪ್ರತಿಕ್ರಿಯೆ ನೀಡದೆ ಹಾಗೆಯೇ ಅವನ್ನು ಬಿಟ್ಟುಬಿಡಬೇಕು. ದೇಹದ ಕಡೆಗೆ, ಉಸಿರಾಟದ ಕಡೆಗೆ ಗಮನವನ್ನು ನೀಡಬೇಕು.
ನಮ್ಮ ಶರೀರದ ಬಗ್ಗೆ ಒಮ್ಮೆ ಯೋಚನೆ ಮಾಡಿ. ಎಷ್ಟು ಅದ್ಭುತವಾದ ವ್ಯವಸ್ಥೆ! ನಮ್ಮ ಪಾದದಿಂದ ನೆತ್ತಿಯ ತನಕ ಕೋಟ್ಯನುಕೋಟಿ ಜೀವಕಣಗಳು, ಅಂಗೋಪಾಂಗಗಳು ಇರುವ ವ್ಯವಸ್ಥೆ. ಯೋಗವನ್ನು ಮಾಡುವಾಗ ಹೊರಗಿನ ಯೋಚನೆಯನ್ನು ಬಿಟ್ಟು ದೇಹವನ್ನೇ 'ವಿಶ್ವ' ಎಂದು ತಿಳಿದು ದೇಹದಲ್ಲಿ ನಡೆಯುತ್ತಿರುವ ಬದಲಾವಣೆಗಳಿಗೆ ಮಾತ್ರ ಗಮನ ನೀಡಬೇಕು.
ಶರೀರವನ್ನು ನಾವು limited ಶಕ್ತಿ ಎಂದು ಭಾವಿಸಿರುತ್ತೇವೆ. ಆದರೆ ಯೋಗವನ್ನು ಅಭ್ಯಾಸ ಮಾಡಿದರೆ ದೇಹದೊಳಗೆ ಅನಂತ ವಿಶ್ವವಿರುವ ಕಲ್ಪನೆ ನಮಗೆ ಸಿಗುತ್ತಾ ಹೋಗುತ್ತದೆ. ನಮ್ಮ ಸಾಮರ್ಥ್ಯ ಕೂಡಾ ಹೆಚ್ಚಾಗುವುದು ಅರಿವಿಗೆ ಬರುತ್ತದೆ. ಆಗ ಶರೀರದ ಶಕ್ತಿ unlimited ಎಂಬುದು ತಿಳಿಯುತ್ತಾ ಹೋಗುತ್ತದೆ. ಆದ ಕಾರಣ ಯೋಗ ಅಂದರೆ ನಾವು ನಮ್ಮ ಶರೀರದ ಒಳಗೆ ಹೋಗುವುದು.
ಯೋಗಾಸನಗಳನ್ನು ಮಾಡುವಾಗ ಶಾಂತತೆಯಿಂದ, ನಗುನಗುತ್ತಾ ಮಾಡಬೇಕು. ಒಳ್ಳೆಯ ಮನಸ್ಸಿನಿಂದ ಮಾಡಬೇಕು. ನಿಧಾನವಾಗಿ ಯೋಗಾಭ್ಯಾಸ ಮಾಡಬೇಕು. ಸರಿಯಾದ ಮಾರ್ಗದರ್ಶಕರಿಂದಲೇ ಕಲಿಯಬೇಕು.
ಯೋಗಾಸನವು ಕೈಕಾಲು, ಮಾಂಸಖಂಡ, ನರವ್ಯೂಹಗಳಿಗೆ ವ್ಯಾಯಾಮ ನೀಡುತ್ತದೆ. ಆರೋಗ್ಯಕರ ಶರೀರವನ್ನು ನೀಡುತ್ತದೆ. ಮನಸ್ಸಿನ ಮತ್ತು ದೇಹದ ದ್ವಂದ್ವ ಅಥವಾ ಅಸಮತೋಲನ ನಿವಾರಣೆಯಾಗುತ್ತದೆ.
"A sound mind in a sound body" - ಎಂದು ಅರಿಸ್ಟಾಟಲ್ ಹೇಳಿದ್ದಾನೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಯೋಗದ ತತ್ತ್ವಗಳ ಪ್ರಕಾರ ಯೋಗಾಸನಗಳು ಮನಸ್ಸಿನ ಆರೋಗ್ಯವನ್ನು ಉತ್ತಮಗೊಳಿಸುತ್ತವೆ. ಅದೇ ಪ್ರಕೃತಿ ಚಿಕಿತ್ಸೆಯು ದೈಹಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಮನಸ್ಸಿಗೆ ಒಂದು ಪ್ರತ್ಯೇಕ ಅಸ್ತಿತ್ವ ಇಲ್ಲ. ಮನಸ್ಸು ಅಂದರೆ ಮೆದುಳು ಅಲ್ಲ. Mind consciousness ಎಂದು ಪ್ರತ್ಯೇಕವಾಗಿ ಇಲ್ಲ. ದೇಹದ ಆರೈಕೆಯೇ ಮನಸ್ಸಿನ ಆರೈಕೆ ಎಂಬುದಾಗಿ ಯೋಗದ ತತ್ತ್ವಗಳು ತಿಳಿಸುತ್ತವೆ. ಗರ್ಭದಲ್ಲಿರುವ ಭ್ರೂಣದ ಹಂತದಿಂದಲೇ Body consciousness ಇರುತ್ತದೆ.
ಯೋಗದಿಂದ ಶಕ್ತಿ ಹೆಚ್ಚಾಗುತ್ತದೆ ಎಂಬುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ನಾಥಪಂಥದಲ್ಲಿ ಗೋರಖನಾಥ ಎಂಬ ಹಠಯೋಗಿ ಒಬ್ಬರಿದ್ದರು. ಕಠಿಣ ತಪಸ್ಸನ್ನು ಆಚರಿಸಿ ಶಕ್ತಿ ಹೆಚ್ಚು ಮಾಡಿಕೊಂಡಿದ್ದರು. ಜನಪ್ರಿಯ ದಾಖಲೆಗಳ ಪ್ರಕಾರ, ಹಠಯೋಗಿ ಗೋರಖನಾಥ ಮತ್ತು ಅಲ್ಲಮಪ್ರಭು ಒಂದು ಸನ್ನಿವೇಶದಲ್ಲಿ ಎದುರಾಗುತ್ತಾರೆ. ಹಠಯೋಗಿ ಗೋರಖನಾಥ ಅಲ್ಲಮನಿಗೆ ಕತ್ತಿಯೊಂದನ್ನು ನೀಡಿ ತನ್ನ ದೇಹಕ್ಕೆ ಹೊಡೆಯಲು ಹೇಳುತ್ತಾನೆ. ಅಲ್ಲಮ ಹೊಡೆಯುತ್ತಾನೆ. ಗೋರಖನಾಥನ ದೇಹಕ್ಕೆ ಕತ್ತಿ ತಗುಲಿದಾಗ ಲೋಹಕ್ಕೆ ಕತ್ತಿ ತಗುಲಿದಾಗ ಉಂಟಾಗುವ ಶಬ್ದ ಕೇಳುತ್ತದೆ. ಶರೀರಕ್ಕೆ ಏನೂ ಆಗುವುದಿಲ್ಲ.
ಇನ್ನೊಂದು ಉದಾಹರಣೆ. ಕೆಲವರು ಗೆಳೆಯರು ಚಾರಣದ ಸಂದರ್ಭದಲ್ಲಿ ಹಿಮದ ನೀರಿನಲ್ಲಿ ಸಾಹಸ ಮಾಡುತ್ತಿದ್ದರಂತೆ. ಅವರಲ್ಲೊಬ್ಬ ಆಹಾರ ಸೇವಿಸಿರಲಿಲ್ಲ. ಆದರೂ ಒಂಟಿಕಾಲಲ್ಲಿ ಇಡೀ ದಿನ ನೀರಲ್ಲಿ ನಿಂತಿದ್ದ. ಆಹಾರವನ್ನು ಸೇವಿಸದಿದ್ದರೂ ಆತ ನಿಶ್ಶಕ್ತನಾಗದೇ ಇದ್ದುದಕ್ಕೆ ಕಾರಣ 'ಸೂರ್ಯ ಸ್ನಾನ'. ಶಕ್ತಿಯ ಮೂಲ ಸೂರ್ಯ. ಸೂರ್ಯನ ಶಕ್ತಿ ನಮ್ಮ ಶರೀರಕ್ಕೆ ತುಂಬಾ ಪ್ರಯೋಜನಕಾರಿ.
ಅದೇ ರೀತಿ ಉಪವಾಸ ಸತ್ಯಾಗ್ರಹಕ್ಕೆ ಹೆಸರಾಗಿದ್ದ ಮಹಾತ್ಮ ಗಾಂಧೀಜಿ ಉಪವಾಸದ ಶಕ್ತಿಯಿಂದ ದೇಶಕ್ಕೇ ಸ್ವಾತಂತ್ರ್ಯ ತಂದುಕೊಟ್ಟವರು. ಯೋಗದ ಪ್ರಕಾರ ಉಪವಾಸ ಎಂದರೆ ಆಕಾಶತತ್ತ್ವದ ಬಳಕೆ. ಅವಕಾಶವನ್ನು ಸೃಷ್ಟಿಸುವುದು ಎಂದು ಅರ್ಥ. ಅವಕಾಶವನ್ನು ಸೃಷ್ಟಿಸಿದಾಗ ಅಗತ್ಯವಾದದ್ದು ಪೂರೈಸಲ್ಪಡುತ್ತದೆ ಎಂಬುದು ಅದರ ಹಿಂದಿನ ನಿಯಮ.
ಇನ್ನು ಯೋಗಾಸನದ ವಿಶೇಷತೆಗಳ ಬಗ್ಗೆ ನೋಡೋಣ.
🔸ನಿಧಾನ ಮತ್ತು ಮಂದಗತಿಯಿಂದ ಅಭ್ಯಾಸ ಮಾಡಬೇಕು
🔸ಹೆಚ್ಚು ಶ್ರಮ ಬೇಡ. ವಿಶ್ರಾಂತಿದಾಯಕ.
🔸ಆಸನವನ್ನು ಅಭ್ಯಾಸ ಮಾಡುವಾಗ ಶ್ವಾಸಕ್ಕೆ ಮಹತ್ವ ನೀಡಬೇಕು.
🔸ಇದು ವ್ಯಾಯಾಮದಂತೆ ಅಲ್ಲ. ಇಲ್ಲಿ ಬೆವರು ಮತ್ತು ಶಾಖ ಹೆಚ್ಚು ಉತ್ಪತ್ತಿಯಾಗುವುದಿಲ್ಲ.
🔸ಮನಸ್ಸು ಶಾಂತಿ ಮತ್ತು ನೆಮ್ಮದಿಯಿಂದ ಇರುತ್ತದೆ.
🔸ಸಾತ್ವಿಕತೆ ಬೆಳೆಯುತ್ತದೆ.
🔸ದೇಹ ಮತ್ತು ಮನಸ್ಸನ್ನು ಸದೃಢಗೊಳಿಸುತ್ತದೆ.
🔸ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
🔸ಕಡಿಮೆ ಖರ್ಚು. ಜನಸಾಮಾನ್ಯರೂ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ವಿದ್ಯೆ.
ಅಷ್ಟಾಂಗಯೋಗದಲ್ಲಿ ಬರುವ ಮತ್ತೊಂದು ಜನಪ್ರಿಯ ಪ್ರಕಾರ ಪ್ರಾಣಾಯಾಮ.
2. ಪ್ರಾಣಾಯಾಮ:-
ಕ್ರಮಬದ್ಧವಾದ ಉಸಿರಾಟ ಪ್ರಕ್ರಿಯೆಯೇ ಪ್ರಾಣಾಯಾಮ. ನಿಧಾನವಾಗಿ ಉಸಿರಾಡುವುದರಿಂದ ಮತ್ತು ಹೆಚ್ಚು ಗಾಳಿಯನ್ನು ಉಸಿರಾಡುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ. ಗಾಳಿ ತುಂಬ ಮುಖ್ಯ. ನಮ್ಮ ದೇಹಕ್ಕೆ 54% ಶಕ್ತಿ ಗಾಳಿಯಿಂದ ಬರುತ್ತದೆ. ಪ್ರಕೃತಿಯಲ್ಲಿ ನಿಧಾನವಾಗಿ ಉಸಿರಾಡುವ ಪ್ರಾಣಿ ಆಮೆ ಹೆಚ್ಚು ವರ್ಷ ಬದುಕುತ್ತದೆ. ಹಿಂದೆ ಋಷಿಮುನಿಗಳು 700 ವರ್ಷ ಬದುಕುತ್ತಿದ್ದರಂತೆ. ಅದು ಹೀಗೆಯೇ ಇರಬಹುದು.
3. ಧ್ಯಾನ:-
ಅಷ್ಟಾಂಗಯೋಗದ ಮತ್ತೊಂದು ಜನಪ್ರಿಯ ವಿಧಾನ ಧ್ಯಾನ. ಧ್ಯಾನವನ್ನು ತಪಸ್ಸು ಎಂಬುದಾಗಿಯೂ, ಆಧುನಿಕರು meditation ಎಂಬುದಾಗಿಯೂ ಕರೆದಿದ್ದಾರೆ. ನಮ್ಮ ದೇಹದಲ್ಲಿ ಸಪ್ತಚಕ್ರಗಳು ಅಂದರೆ ಏಳು ಶಕ್ತಿಕೇಂದ್ರಗಳು ಇದ್ದು, ಅವುಗಳನ್ನು ಸಮತೋಲನದಲ್ಲಿಡಲು ಧ್ಯಾನ ಸಹಾಯಕವಾಗಿದೆ. ನಿದ್ದೆಯು limited energy ನೀಡಿದರೆ, ಧ್ಯಾನವು unlimited energy ನೀಡುತ್ತದೆ.
ಪ್ರಯೋಜನಗಳು - ಪರಿಣಾಮಗಳು
ಯೋಗಕ್ಕೆ ಎಲ್ಲರನ್ನೂ ಒಂದಾಗಿಸಬಲ್ಲ ಶಕ್ತಿ ಇದೆ. ಯೋಗ ಮತ್ತು ಧ್ಯಾನ ಮಾಡುವುದರಿಂದ stress induced diabetes ಸಕ್ಕರೆ ಕಾಯಿಲೆ ನಿಯಂತ್ರಿಸಲ್ಪಡುತ್ತದೆ. ಆತಂಕ, ದುಗುಡದಿಂದ ಮೆದುಳಿನಲ್ಲಿ ಸ್ರವಿಸುವ catecholamines ಮತ್ತು cartisolಗಳು ಸಕ್ಕರೆ ಕಾಯಿಲೆಗೆ ಕಾರಣ. ಧ್ಯಾನ ಮತ್ತು ಯೋಗದಿಂದ ಮನಸ್ಸು ಮತ್ತು ಶರೀರ ಎರಡೂ ಪ್ರಫುಲ್ಲಿತವಾಗಿ Feel good hormones ಎಂಬುದಾಗಿ ಕರೆಯಲ್ಪಡುವ Endorphin ಮತ್ತು neuro peptides ಮೆದುಳಿನಲ್ಲಿ ಸ್ರವಿಸುತ್ತವೆ. ಇದರಿಂದ ಸಹಜವಾಗಿ ಮನಸ್ಸಿನ ಒತ್ತಡ, ಮೆದುಳಿನ ಒತ್ತಡ, ಸಕ್ಕರೆ ಕಾಯಿಲೆ ಹೀಗೆ ಮನೋದೈಹಿಕ ಕಾಯಿಲೆಗಳೆಲ್ಲವೂ ಗುಣವಾಗುತ್ತವೆ ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ.
ಆರೋಗ್ಯಕ್ಕೆ ಯೋಗ ತುಂಬಾ ಪ್ರಯೋಜನಕಾರಿ. ಪಾಶ್ಚಾತ್ಯ ವೈದ್ಯ ಪದ್ಧತಿಯ ಪ್ರಕಾರ ವೈದ್ಯ ದೇಹದ ಹೊರಗಿದ್ದಾನೆ. ಅದಕ್ಕೇ ಅವರು ಔಷಧಿಗಳನ್ನು ನೀಡುತ್ತಾರೆ. ಅದೇ ಭಾರತೀಯರ ಪ್ರಕಾರ ದೇಹ ಒಂದು closed system. ದೇಹದ ರೋಗವನ್ನು ನಿವಾರಿಸುವ ಶಕ್ತಿ ಅದೇ ದೇಹದೊಳಗೆ ಇದೆ. ಇಲ್ಲಿ ಡಾಕ್ಟರ್ ದೇಹದ ಒಳಗೆಯೇ ಇದ್ದಾನೆ. ಬೇರೆಲ್ಲೋ ಹುಡುಕಬೇಕಾಗಿಲ್ಲ.
ಯೋಗ ಜನಪ್ರಿಯವಾಗಲು ಕಾರಣವೇನು, ಏಕೆ ಇದು ಮಹಾವಿದ್ಯೆ ಎಂಬುದನ್ನು ನೋಡೋಣ.
ಪ್ರಕೃತಿಯು ಪಂಚಮಹಾಭೂತಗಳಾದ ಮಣ್ಣು, ನೀರು, ಬೆಂಕಿ, ಗಾಳಿ, ಆಕಾಶ - ಈ ಐದು ತತ್ತ್ವಗಳಿಂದ ಮಾಡಲ್ಪಟ್ಟಿದೆ. ಈ ಐದು ತತ್ವಗಳು ಮಾನವನ ದೇಹವನ್ನು ರೂಪಿಸಿವೆ. ಇದರ ಸಮತೋಲನದಲ್ಲಿ ಏರುಪೇರುಗಳಾದಾಗ ರೋಗಗಳು ಬರುತ್ತವೆ. ಅದನ್ನು ನಿವಾರಿಸುವುದೇ ಯೋಗ.
ಮಣ್ಣು ಮಾಂಸಖಂಡಗಳು ಮತ್ತು ಚರ್ಮದ ರೂಪದಲ್ಲಿ, ನೀರು ರಕ್ತ ಮತ್ತು ದುಗ್ಧರಸಗಳ ರೂಪದಲ್ಲಿ, ಅಗ್ನಿಯು ದೇಹದ metabolism ಮತ್ತು ಜಠರಾಗ್ನಿ ಅಂದರೆ ಆಮ್ಲೀಯತೆಯ ರೂಪದಲ್ಲಿ, ವಾಯುವು ಉಸಿರಾಡುವ ಗಾಳಿಯ ರೂಪದಲ್ಲಿ, ಆಕಾಶವು ಉದರದ ಭಾಗ, ಕರುಳಿನ ಭಾಗವಾಗಿ ದೇಹದಲ್ಲಿ ಇದೆ. ರೋಗಗಳು ಬಂದಾಗ ಇದೇ ತತ್ತ್ವವನ್ನು ಆಧರಿಸಿ ನೀಡುವ ಚಿಕಿತ್ಸೆಗಳೇ ಪ್ರಕೃತಿ ಚಿಕಿತ್ಸೆ, ಜಲ ಚಿಕಿತ್ಸೆ, ಪೃಥ್ವಿ ಚಿಕಿತ್ಸೆ, ಮರ್ದನ ಅಂದರೆ massage ಚಿಕಿತ್ಸೆ, ಆಹಾರ ಚಿಕಿತ್ಸೆ, ಉಪವಾಸ ಚಿಕಿತ್ಸೆ, ಯೋಗ ಚಿಕಿತ್ಸೆ, ಸೂಜಿ ಚಿಕಿತ್ಸೆ ಅಥವಾ ಆಕ್ಯುಪಂಕ್ಚರ್, ಆಕ್ಯುಪ್ರೆಶರ್, ಅಯಸ್ಕಾಂತ ಚಿಕಿತ್ಸೆ, ಫಿಸಿಯೋಥೆರಪಿ ಇವುಗಳಾಗಿವೆ.
ಜೂನ್ 21ರ ವಿಶೇಷವೇನು? ಏಕೆ ಇಂದೇ ಯೋಗ ದಿನ?
ಜೂನ್ 21 ದೀರ್ಘ ಹಗಲು ಇರುವ ದಿನ. ಈ ದಿನದ ನಂತರ ಬರುವ ದಕ್ಷಿಣಾಯನ ಕಾಲವು ಆಧ್ಯಾತ್ಮಿಕ ಅಭ್ಯಾಸಗಳಿಗೆ ಉತ್ತಮವಂತೆ. ಹಾಗೆಯೇ ಜೂನ್ 21 ಅತೀ ಹೆಚ್ಚು ಸೂರ್ಯನ ಬೆಳಕು ಸಿಗುವ ದಿನವಾದ್ದರಿಂದ ಹೆಚ್ಚಿನ 'ಧೀ'ಶಕ್ತಿ ಸಿಗಬಲ್ಲ ದಿನ. ಈ ಕಾರಣಕ್ಕೆ ಇದೇ ದಿನವನ್ನು ಯೋಗ ದಿನವಾಗಿ ಆರಿಸಲಾಗಿದೆ.
ಇನ್ನು ಈ ಯೋಗವನ್ನು ಜನಪ್ರಿಯಗೊಳಿಸಲು ಭಾರತ ಸರ್ಕಾರವು ಆಯುಷ್ ಇಲಾಖೆಯನ್ನು ಸ್ಥಾಪಿಸಿದೆ. AYUSH ಅಂದರೆ Ayurveda, Yoga and Naturopathy, Unani, Sidda, Homeopathy ಎಂದಾಗಿದೆ.
ಇಷ್ಟನ್ನು ಹೇಳುತ್ತಾ, ಇಲ್ಲಿ ಆಚರಿಸಲಾಗುತ್ತಿರುವ ಯೋಗ ದಿನ ಯಶಸ್ವಿಯಾಗಲಿ ಎಂದು ಹಾರೈಸುತ್ತಾ ನನ್ನ ಮಾತುಗಳನ್ನು ಕೊನೆಗೊಳಿಸುತ್ತೇನೆ."
✍️ಶಿವಕುಮಾರ ಸಾಯ 'ಅಭಿಜಿತ್'

Comments
Post a Comment