ಪ್ರಯೋಗಶೀಲತೆ
"Winners never quit and quitters never win" - ಇಂದು ಆಂಗ್ಲಭಾಷೆಯಲ್ಲಿರುವ Vince Lombardi ಅವರ ಒಂದು ಉಕ್ತಿ. ಯಾವನು ಕಣಕ್ಕಿಳಿಯುತ್ತಾನೋ ಆತ ಪಣದಲ್ಲಿ ಉಳಿಯುತ್ತಾನೆ. ನಾವು ಬಾಳಿನಲ್ಲಿ ಯಶಸ್ಸು ಗಳಿಸಬೇಕಾದರೆ ಪ್ರಯೋಗಶೀಲರಾಗಿರಬೇಕು.
ಪ್ರಯೋಗಶೀಲತೆಯು ಯಾವಾಗಲೂ ಮೆಚ್ಚತಕ್ಕದ್ದಾಗಿದೆ. ಯಾರು ಒಳ್ಳೆಯ ಬಗೆಯಲ್ಲಿ ಪ್ರಯೋಗಗಳನ್ನು ಮಾಡುತ್ತಾರೋ ಅವರೇ ಬದುಕಿನಲ್ಲಿ ಯಶಸ್ವಿಯಾಗಬಲ್ಲರಷ್ಟೇ. ಸಫಲತೆಯು ಪ್ರಯತ್ನಗಳೇ ಇಲ್ಲದೆ ಕೈಗೂಡುವಂಥದ್ದಲ್ಲ. ಎಲ್ಲ ಸಫಲತೆಗಳ ಹಿಂದೆ ಯಾವುದಾದರೂ ಬಗೆಯ ಪ್ರಯತ್ನಗಳಂತೂ ಇದ್ದೇ ಇರುತ್ತವೆ.
ಯಾವುದೇ ರೀತಿಯ ಪ್ರಯೋಗಗಳಲ್ಲಿ ಸುಧಾರಣೆಗಳಾಗಬೇಕಾದರೆ ಪ್ರಯೋಗಕ್ಕೆ ಬಳಸುವ ಮೂಲವಸ್ತುಗಳಲ್ಲಿ, ವಿಚಾರಗಳಲ್ಲಿ, ಬಗೆಯಲ್ಲಿ ಬದಲಾವಣೆಗಳಾಗಬೇಕು. ಪ್ರಯೋಗಗಳಿಗೆ ಬಳಸುವ ಮೂಲವಸ್ತುಗಳು - ಅಂದರೆ ಪರಿಕರಗಳು ಎರಡು ಬಗೆಯವು. ಒಂದನೆಯದು, ಸ್ಥಿರವಾದವು - constants. ಇನ್ನೊಂದು ಬಗೆಯ ಮೂಲವಸ್ತುಗಳು ಚರವಾದವು - variables. ಸ್ಥಿರ ಮಾದರಿಯ ಪರಿಕರಗಳನ್ನು ಬದಲಾಯಿಸುವ ಅಗತ್ಯತೆಯೇ ಇರುವುದಿಲ್ಲ. ಆದರೆ ಚರ ಮಾದರಿಯ ಪರಿಕರಗಳನ್ನು ಬದಲಾಯಿಸುತ್ತಿರಬೇಕಾಗುತ್ತದೆ. ಪ್ರಯೋಗಶೀಲನಾದ ವ್ಯಕ್ತಿಯು ತನ್ನ ಅನುಭವ, ತಿಳಿವಳಿಕೆಯನ್ನು ಹೆಚ್ಚಿಸಿಕೊಂಡು ಈ constants ಮತ್ತು variablesಗಳನ್ನು ವಿವೇಚನೆಯಿಂದ ನಿರ್ಧರಿಸಿಕೊಂಡು ಪ್ರಯೋಗಗಳಿಗೆ ಹಚ್ಚಬೇಕಾಗುತ್ತದೆ.
ಅದ್ಭುತವಾದದ್ದನ್ನು ಕಂಡುಹಿಡಿಯುವ ಜೀನಿಯಸ್‌ಗಳು ಹಲವು ಅಡೆತಡೆಗಳನ್ನು ಹೊಂದಿರುತ್ತಾರೆ. ಅವುಗಳನ್ನು 'T' ಬಿಂದು ಎಂದು ಕರೆಯಲಾಗುತ್ತದೆ. ಆ ಜೀನಿಯಸ್‌ಗಳಲ್ಲಿರುವ ಗೆಲುವಿನ ಅಂಶದಿಂದಾಗಿ ಅವರು 'T' ಬಿಂದುವಿನಲ್ಲಿ ಹೊಸದೊಂದನ್ನು ಕಂಡುಹಿಡಿದುಬಿಡುತ್ತಾರೆ. ಜೀನಿಯಸ್‌ಗಳ ಬದುಕಿನಲ್ಲಿ ಅಡೆತಡೆ, ಸವಾಲುಗಳು ಒಂದು ಅವಶ್ಯಕವಾದ ಪಂಥಾಹ್ವಾನವನ್ನೊಡ್ಡುತ್ತವೆ. ಆದರೆ ಅದಕ್ಕಿಂತಲೂ ಮುಖ್ಯವಾಗಿ ಅಡೆತಡೆಗಳಿಂದ ಪಾರಾಗುವ, ಅದೃಷ್ಟದೊಂದಿಗೆ ಹೊಸದೊಂದನ್ನು ಶೋಧಿಸುವ ಅಂಶವೂ ಕೂಡ ಅವರಲ್ಲೇ ಉದ್ಭವವಾಗುತ್ತದೆ ಎಂಬುದು ಚೋದ್ಯದ ಅಂಶ. ಹೀಗಾಗಿ ಅದೃಷ್ಟಶಾಲಿ ಜೀನಿಯಸ್‌ಗಳಲ್ಲಿ 'T' ಆಕಾರದ ಪ್ರತಿಯೊಂದು ಬಿಂದುಗಳು ಹೊಸ ದಿಸೆಯ ಪಯಣಕ್ಕೆ ಪ್ರತಿ ಸಂದರ್ಭಗಳಲ್ಲೂ ತಿರುವಾಗಿ ತೆರವುಗೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ ಹೊಸ ಹೊಳಹುಗಳು, ರಹಸ್ಯಗಳು ಪವಾಡದಂತೆ ಹೊಳೆಯುತ್ತವೆ. ಅನೂಹ್ಯವಾಗಿ ಸಹಾಯ, ಕಾರ್ಯಾನುಕೂಲತೆ ಒದಗಿಬಂದು ಪ್ರಯತ್ನಗಳು ಕೈಗೂಡುತ್ತವೆ. ತನ್ನ ಪ್ರತಿಭೆ, ಸ್ವಂತಿಕೆ, ಶಕ್ತಿಯ ಮೇಲೆ ಜೀನಿಯಸ್ ಅಪಾರ ನಂಬಿಕೆಯಿಟ್ಟಿರಬೇಕು. ಎಲ್ಲ ಗೆಲುವುಗಳಿಗೆ ಆತ್ಮವಿಶ್ವಾಸ ಮತ್ತು ನಂಬಿಕೆ ತಳಪಾಯವಿದ್ದಂತೆ.
ಎಲ್ಲರೂ ಜೀನಿಯಸ್‌ಗಳು ಅಲ್ಲದಿರಬಹುದು. ಆದರೆ ಪ್ರಯೋಗಶೀಲರಂತೂ ಆಗಿರಲೇಬೇಕು. ಏಕೆಂದರೆ ಪ್ರತಿಯೊಂದು ಪ್ರಯತ್ನ ಮತ್ತು ಪ್ರಮಾದಗಳಲ್ಲಿ ಕಲಿಕೆಯಿದೆ. ಅರಿವು, ಅನುಭವವಿದೆ.
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment