ಕೃಷ್ಣ + ಅರ್ಜುನ = ಮಹಾಭಾರತದ 'ವ್ಯಾಸವಿಸ್ತಾರ'!

ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಯಾಕೆ ಕೃಷ್ಣನ ಬಗ್ಗೆ ಬರೆಯಬಾರದು ಅನ್ನಿಸಿತು.

ನೀನು ನಿನ್ನ ರಕ್ಷಣೆಯ ವಿಷಯದಲ್ಲಾಗಲೀ, ಯುದ್ಧಗಳಲ್ಲಾಗಲೀ ಹಿಂದೆ ಬೀಳುವಂತಿಲ್ಲ ಎಂಬ ಬಗ್ಗೆ ಬೋಧಿಸುವ ಒಂದು ಪವಿತ್ರ ಗ್ರಂಥ ಭಗವದ್ಗೀತೆ. ಆರನೇ ತರಗತಿಯ ಚಿಕ್ಕ ವಯಸ್ಸಿನಲ್ಲೇ ನಾನದನ್ನು ಹತ್ತಾರು ಬಾರಿ ಓದಿ ಮನನ ಮಾಡಿಕೊಂಡಿದ್ದೆ. ಕೃಷ್ಣನ ಮೂಲಕ ಅಲ್ಲಿ ವಿವಿಧ ಯೋಗಗಳು ಪ್ರತಿಪಾದಿಸಲ್ಪಟ್ಟಿದ್ದೂ ಕೂಡ ಇದೆ. ಅರ್ಜುನನಲ್ಲಿ ಎಲ್ಲ ಶಕ್ತಿ ಸಾಮರ್ಥ್ಯ ಇದ್ದು, ಆತ ಯುದ್ಧಗಳಲ್ಲಿ ಹಿಂದೆ ಬೀಳದೆ ತನ್ನೆಲ್ಲ 'ಒಳ್ಳೆಯತನ'ಗಳನ್ನು ಬಳಸಿ ಕೃಷ್ಣನ ಸಾರಥ್ಯದಲ್ಲಿ ವಿಜಯ ಸಾಧಿಸುವ ಸಂದರ್ಭ ನನಗೆ ಅತ್ಯಂತ ಮುಖ್ಯವಾಗುತ್ತದೆ. ವ್ಯಾಸ ವಿರಚಿತವಾದ ಮಹಾಭಾರತ ಹಾಗೂ ಮತ್ತೆ ಅವರಿಂದಲೇ ವಿಸ್ತರಿಸಿ ರಚಿಸಲ್ಪಟ್ಟ ಈ ಭಗವದ್ಗೀತೆಯಿಂದ ನಾನೇನಾದರೂ ಕಲಿಯಬೇಕಾಗಿದ್ದರೆ ಅಲ್ಲಿ ಅರ್ಜುನನ 'ಸಾಚಾತನ' ಮತ್ತು ಶ್ರೀಕೃಷ್ಣನ 'ಅಕಳಂಕ' ಚಾರಿತ್ರ್ಯ ಬಹಳ ಮುಖ್ಯವೆನಿಸುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ವ್ಯಾಸರ ಕಾಲ್ಪನಿಕ ಜಗತ್ತು ಅದ್ಭುತವೆನಿಸುತ್ತದೆ. ಸಂಸ್ಕೃತದ ಪದಧಾತುಗಳ ವ್ಯುತ್ಪತ್ತಿ ಮತ್ತು ಅರ್ಥನಿರ್ಣಯದ ಪ್ರತಿಪಾದನೆಗಳು ಅಗಾಧವೆನಿಸುತ್ತವೆ.

ಕೇವಲ ಒಂದು ಕಥೆ ಎನ್ನುವಾಗಲೂ ಕೂಡ ಕಥೆಯೂ ಒಂದು ಸಾಧ್ಯತೆ ಮತ್ತು ಅದು ಸ್ವಯಂಸಿದ್ಧ ಎಂಬ ನನ್ನ ಕಲ್ಪನೆಗೆ ಪುಷ್ಟಿ ಕೊಡುವುದು ವ್ಯಾಸರ ಆಖ್ಯಾನಗಳು. ಏಕೆಂದರೆ ವ್ಯಾಸ ವಿರಚಿತವಾದ ಕಾವ್ಯಜಗತ್ತಿನಲ್ಲಿ ಪಾತ್ರಗಳಿಗೆ ಜನ್ಮನಕ್ಷತ್ರ ಸಹಿತ ಜೀವಂತಿಕೆಯಿದೆ! ಒಂದೇ ಒಂದು ನಕ್ಷತ್ರಪಾದದಲ್ಲಿ ಸೋಲು ಮತ್ತು ಗೆಲುವನ್ನು ನಿರ್ಣಯಿಸಬಲ್ಲ ವ್ಯಾಸರಿಗೆ ನಿಕಷಮತಿಯಿದೆ. ಅನುಭವಗಳ ಪರಿಪೇಕ್ಷ್ಯ ಅಗಾಧವಾದಾಗ, ವಿಸ್ತಾರವಾದಾಗ ಮಾತ್ರವೇ ವ್ಯಾಸರು ಅರ್ಥವಾಗುತ್ತಾರೆ.
ಶ್ರೀಕೃಷ್ಣ ಮತ್ತು ಅರ್ಜುನನ ಬಗ್ಗೆ ನೀವು ಬರೆಯಬೇಕಿದ್ದ ಸಂದರ್ಭಗಳಲ್ಲಿ ಮನೋವಿಜ್ಞಾನ ನಿಮ್ಮ ಜೊತೆಗೇ ಬರುತ್ತದೆ. ನಿಮ್ಮೊಳಗೆ ಒಬ್ಬ ರಥವನ್ನು ನಡೆಸುವ ಸಾರಥಿ ವಿಶ್ವರೂಪದ ದರ್ಶನ ನೀಡುತ್ತಾನೆ. 'ನರ' ಮತ್ತು 'ಸಾರಥಿ' ಇಬ್ಬರನ್ನುಳಿದು ಮತ್ತೊಂದರ ಬಗ್ಗೆ, ಅನವಶ್ಯವಾದದ್ದರ ಬಗ್ಗೆ ಚಿಂತಿಸುವ ಪ್ರಮೇಯವೇ ಉಳಿದಿರುವುದಿಲ್ಲ. ಏಕೆಂದರೆ ಶ್ರೀಕೃಷ್ಣ ಅಪ್ರಮೇಯನಾಗಿದ್ದಾನೆ. ಅಜಿತನಾಗಿದ್ದಾನೆ. ಉಳಿದದ್ದೆಲ್ಲವೂ ಒಂದು ಭ್ರಮೆಯಷ್ಟೇ! 'ದೇಹೋ ದೇವಾಲಯಃ ಪ್ರೋಕ್ತಃ ಜೀವೋ ದೇವೋ ಸದಾಶಿವಃ' ಎಂಬ ಮಾತು, Body consciousnessಗೆ ತುಂಬ ಮಹತ್ವ ನೀಡುವ ಯೋಗದ ತತ್ತ್ವಗಳು, ಹಾಗೆಯೇ ನರ ಮತ್ತು ಸಾರಥಿ ಕಲ್ಪನೆ ನನಗೆ ಬೇರೆಬೇರೆಯಾಗಿ ಕಾಣುವುದಿಲ್ಲ.
ಮನೋವಿಜ್ಞಾನದಲ್ಲಿ ಅಂತರಾವಲೋಕನ (Introspection) ಎಂಬ ಒಂದು ವಿಷಯವಿದೆ. ಜೀವಂತ ಸ್ಥಿತಿಯಲ್ಲಿರುವ ಜೀವಿಗಳ Balancing systemನಲ್ಲಿ ಈ ಮೂರು ಸಂಗತಿಗಳ ಸಂಲಗ್ನತೆಯಿರುತ್ತದೆ.  1. ನಿನ್ನೊಳಗೆ ಒಂದಾಗುವುದು, 2. ಎಲ್ಲರ - ಎಲ್ಲವುಗಳ ಜೊತೆ ಒಂದಾಗುವುದು, 3. ಇವೆಲ್ಲಕ್ಕೆ ಮಿಗಿಲಾದ ಶಕ್ತಿಯಲ್ಲಿ ಒಂದಾಗುವುದು. ಒತ್ತಡಕ್ಕೆ ಕಾರಣವಾದ ಪರಿಸ್ಥಿತಿಗಳಲ್ಲಿರುವ ಜನರಲ್ಲಿ ಹೊರವಸ್ತುಗಳಲ್ಲಿ ಕಳೆದುಹೋಗುವಿಕೆಯಿಂದ ಶಾಂತಿಭಂಗ ಉಂಟಾಗುವುದು. ಆದರೆ ಯೋಚನೆಯನ್ನು ಯೋಚನೆಯಿಂದ ಕಳೆಯಲು ಸಾಧ್ಯವಿಲ್ಲ. ತರ್ಕವನ್ನು ತರ್ಕದಿಂದ ಕಳೆಯಲಿಕ್ಕಾಗದು. ಯೋಚನಾರಾಹಿತ್ಯಕ್ಕೆ ಹೋಗಬೇಕು, ತರ್ಕರಾಹಿತ್ಯಕ್ಕೆ ತೆರಳಬೇಕು. ಹೆಚ್ಚಿನ ವ್ಯಕ್ತಿಗಳಲ್ಲಿ ಈ Involving with yourself ಕಡಿಮೆ. ಅದಕ್ಕೆ ಶ್ರೀಕೃಷ್ಣ ಮಾರ್ಗದರ್ಶಕನಾಗಿದ್ದಾನೆ.
ಗುರುವನ್ನು ಬಿಂಬ ರೂಪದಲ್ಲೋ, ಮನುಷ್ಯ ರೂಪದಲ್ಲೋ ಕಾಣುವುದು ಸೌಲಭ್ಯಾಕಾಂಕ್ಷೆಯಿಂದ ಮಾಡಿದ ರೂಢಿ. ಯಾವ ಒಳ್ಳೆಯ ಗುರುವೂ ಕೂಡ 'ನನ್ನನ್ನು ಅನುಸರಿಸಿ' ಎನ್ನಲಾರ. ನಿನ್ನ ಅಂತಃಪ್ರಜ್ಞೆಯ ಒಳಸುಳಿಯಲ್ಲಿ, ವಿವೇಕದಲ್ಲಿ ದೇವರು - ಗುರು ಅಡಗಿದ್ದು, ಆ ಸ್ವಧರ್ಮವನ್ನು ಕಾಪಾಡಿ, ಸ್ವ-ತಂತ್ರವನ್ನು, ಕರ್ಮವನ್ನು ಕೈಗೊಳ್ಳಬೇಕು ಎಂದು ಹೇಳಿದವನು ಕೃಷ್ಣನಾಗಿದ್ದಾನೆ. ಶ್ರೀಕೃಷ್ಣ ಒಬ್ಬ ಒಳ್ಳೆಯ ಆಪ್ತ ಸಲಹೆಗಾರ, ಹಾಗೆಯೇ ಚಾಲಕ - ಗೆಳೆಯ ಕೂಡಾ. ಏಕೆಂದರೆ ಆತ ಅರ್ಜುನನ ಅಂತಃಪ್ರಜ್ಞೆಯ ಜಾಗೃತಿಯಲ್ಲಿ ಅಡಗಿದ್ದವನು. ಒಮ್ಮೊಮ್ಮೆ ಆತ ರಥವನ್ನು ತಗ್ಗಿಸಿ ಬಾಣಗಳಿಂದ ರಕ್ಷಿಸುತ್ತಾನೆ. ಮತ್ತೊಮ್ಮೆ ಎದುರಾಳಿಯನ್ನು ನಿರ್ಬಲನನ್ನಾಗಿಸುವ ಎಲ್ಲ ತಂತ್ರಗಳನ್ನೂ ಬಳಸುತ್ತಾನೆ. ಧರ್ಮ ರಕ್ಷಣೆಗಾಗಿ ಪರಿಸ್ಥಿತಿ ಕೃಷ್ಣನಿಗೆ ಅಂತಹ ಪಂಥಾಹ್ವಾನಗಳನ್ನು ತಂದೊಡ್ಡಿತು. ಅವನು ಅರ್ಜುನನ ಶಸ್ತ್ರತ್ಯಾಗದ ಸಂದರ್ಭದಲ್ಲಿ ಆತನ ಆತ್ಮವೇ ತಾನೆಂಬಂತಿದ್ದ. ಏಕೆಂದರೆ ಆತ ಅಂತರ್ಯಾಮಿ. ಬಹಿರಂಗದಲ್ಲಿ ಆತ ಸಾರಥಿಯಾಗಿದ್ದು ಸಾಂಕೇತಿಕ. ಮಹಾಕಾವ್ಯದಲ್ಲಿ ಅದೊಂದು ಮಿಥ್ ಎಂಬಂಥದ್ದು. ಆತ ಅರ್ಜುನನ ಒಳಗಿಳಿದು ಗೆಳೆಯನಂತೆ ನಡೆದುಕೊಂಡ. 'ನಿನ್ನ ವಿವೇಕವನ್ನು ಬಳಸು. ಗೆಲ್ಲುವೆ' ಎಂಬ ಅಭಯ ತುಂಬಿದ್ದಲ್ಲದೆ ತಾನು ರಣದ ಣದಲ್ಲಿ ಕೂಡ ಆತನ ರಥವನ್ನು ಅಗತ್ಯಾನುಸಾರ ಚಲಾಯಿಸಿದ್ದ. ಕೃಷ್ಣ ಅರ್ಜುನನಿಗೆ ಒಳ್ಳೆಯ ಸಲಹೆಯನ್ನೂ ನೀಡಿದ. ಗೆಳೆಯನೂ, ಆಪ್ತ ಸಲಹೆಗಾರನೂ ಆಗಿದ್ದ. ಅರ್ಜುನ ಸವ್ಯಸಾಚಿಯಾಗುವುದಕ್ಕೆ ಶ್ರೀಕೃಷ್ಣನೇ ಕಾರಣ ಎಂದು ಬೇರೆ ಹೇಳಬೇಕಿಲ್ಲ.
ಗುಣಗಳು ಗುಣಗಳ ಜೊತೆ ವರ್ತಿಸುತ್ತವೆ. ಕರ್ಮವನ್ನು ಮಾಡು ಎಂದು ಅರ್ಜುನನಿಗೆ ನ್ಯಾಯ ನಿರ್ಣಯಿಸಿ ಕೊಟ್ಟವನು ಕೃಷ್ಣನೇ. ಸೂತ್ರಧಾರಿಯಾದ ಕೃಷ್ಣನ ಸವಾಲುಗಳು ಸಣ್ಣದಲ್ಲ. ಅರ್ಜುನನ ಕ್ಷಮತೆಯೂ ಕೂಡ ಕಡಿಮೆಯಲ್ಲ. ನಮ್ಮ ದೇಹ ಕಲ್ಪನೆಗಳ ವ್ಯಾಸದಲ್ಲಿ ಕೃಷ್ಣ - ಅರ್ಜುನರು ವಿಜೃಂಭಿಸುತ್ತಾರೆ.

✍️ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್