ಉಸಿರು

ಹೋಗುವುದು ಹೋಗಲಿ ಬಿಡಿ;
ಉಳಿಯುವುದು ಮಾತ್ರ ಉಳಿಯಲಿ -
ಮನುಷ್ಯ ಮನುಷ್ಯರಿಗಷ್ಟೆ ಅರ್ಥವಾಗುತ್ತಾನೆ...

ಚೆನ್ನಾಗಿ ಅರ್ಥಮಾಡಿಕೊಳ್ಳುವುದಕ್ಕೆ ನಾವು
ರೇಡಿಯೋದಲ್ಲಿ ಹಾಡು ಕೇಳಿ ಗುರುತಿಸುತ್ತೇವೆ
ಟಿವಿಯಲ್ಲಿ ಸಿನಿಮಾ, ಕಾರ್ಟೂನ್ ಪ್ರಸಾರಿಸುತ್ತೇವೆ
ಇಂಟರ್‌ನೆಟ್ಟಿಗೆ ಉಚಿತ ಡಾಟಾ ಕೊಟ್ಟಿರುತ್ತೇವೆ
ಅರ್ಥವಾಗಲಿ ಅಂತ
ಥರಥರದ ಮೊಬೈಲು, ಕಂಪ್ಯೂಟರ್ ಬಳಸುತ್ತೇವೆ
ವಸ್ತು ಹಾಗೂ ಮನುಷ್ಯರನ್ನು
ಉಪಯೋಗಿಸುತ್ತೇವೆ
ಕತೆ, ಕವಿತೆ, ಚಿತ್ತಾರ,
ನೃತ್ಯ, ತಾಳ, ಲಯ, ಲಾಸ್ಯ
ಕಲಿಯತೊಡಗುತ್ತೇವೆ
ಹಾಗೆಯೇ...
ನಮಗೆ ಎಲ್ಲರೂ ಅರ್ಥವಾಗತೊಡಗುತ್ತಾರೆ
ಚೂರುಚೂರು.

ಅರ್ಥವಾಗುತ್ತೇವೆ ನಾವು ನಮಗೆ
ತನ್ಮೂಲಕ -
ಒಂದು ಅಶಾಬ್ದಿಕ ಪ್ರಕ್ರಿಯೆಯಲ್ಲೂ ಕೂಡ
ಸಮಾಜಕ್ಕಾಗಿ ಬದುಕುವ ಮನುಷ್ಯನಿಗೆ
ಸಮಾಜ ಅರ್ಥವಾಗುತ್ತದೆ
ಮನುಷ್ಯ ಕೂಡ ಅರ್ಥವಾಗುತ್ತಾನೆ
ತಕ್ಕಷ್ಟು -
ಮುಖ್ಯವಾಗುತ್ತಾನೆ ಮತ್ತಷ್ಟು.

ಬರಬರುತ್ತಾ,
ಇಪ್ಪತ್ತೇಳಲ್ಲ ಇಪ್ಪತ್ತೆಂಟನ್ನೇ ಏಕೆ ಆಡಬೇಕು
ಅರ್ಥವಾಗುತ್ತದೆ-
ಹೊರಬರಬೇಕು ನಾವು
ಭ್ರಾಂತಿ - ಭಂಡತನದಿಂದ,
ಬಡಿವಾರದಿಂದ,
ಅರ್ಥವಾಗುವುದಕ್ಕೆ.

ಚೆನ್ನಾಗಿ ಅರ್ಥೈಸಿಕೊಳ್ಳುತ್ತ
ಸಜ್ಜನನಾಗಿ ಬದುಕುವುದಕ್ಕೆ
ಜ್ಞಾನ ಅರಿವಾಗಬೇಕು;
ಪ್ರೀತಿ ಪಡೆದಾತ ಮಾತ್ರ
ಪ್ರೀತಿ ಕೊಡಬಲ್ಲನಂತೆ -
ಕಾಯಕ ಕೀರ್ತಿಯಾಗಬೇಕು
ಎಲ್ಲರೂ ಬಾಳಬೇಕು.

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

🔺ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗಶಾಸ್ತ್ರದ ಜನಪ್ರಿಯತೆಯ ಬಗ್ಗೆ ಮಾತು🔻 ದಿನಾಂಕ 21.06.2019

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್