ಚೈತನ್ಯದ ಆಂದೋಲನ ನಿರಂತರ - ಇದು ಜೀವ, ಇದೇ ಜೀವನ!

“No man ever steps in the same river twice, for it's not the same river and he's not the same man.” - ಹೀಗೆಂದು ಹೇಳಿದವನು ಹಿರಾಕ್ಲಿಟಸ್. ಬದುಕಿನ ಬಗ್ಗೆ ಆತ ಎಷ್ಟೊಂದು ಅರ್ಥವತ್ತಾಗಿ ಹೇಳಿದ್ದಾನೆ ಅಲ್ಲವೇ? ನದಿ ಹೇಗೆ ಕ್ಷಣ ಕ್ಷಣ ಬದಲಾಗುತ್ತಿರುತ್ತದೆಯೋ ಮನುಷ್ಯ ಕೂಡ ಕ್ಷಣ ಕ್ಷಣ ಬದಲಾಗುತ್ತಾನೆ. ಅಚಲ ಎಂದು ಭಾವಿಸಿದರೆ ಎಲ್ಲವೂ ಅಚಲ, ಸ್ಥಿರ. ಆದರೆ ಪ್ರತಿಕ್ಷಣ ಬದಲಾವಣೆಯೊಂದಿಗೆ ಪ್ರಕೃತಿಯಾಗಿ ತೆರೆದುಕೊಳ್ಳುವುದು ಬ್ರಹ್ಮಾಂಡವೇ.
"ಜೀವನ" ಎಂಬ ಪದವನ್ನು ಬದುಕಿಗೆ ಅನ್ವರ್ಥವಾಗಿ ಬಳಸುವಾಗ ಅದರ ನೀರು ಎಂಬರ್ಥವನ್ನು ಗ್ರಹಿಸಬೇಕು. ನೀರು ಎಲ್ಲಾ ಸ್ಥಿತಿಯಲ್ಲೂ ಇರುತ್ತದೆ.
ಈ ಅನಂತ, ಅಖಂಡ ವಿಶ್ವವೂ ತನ್ನಷ್ಟಕ್ಕೆ ತಾನೇ ಬಹು ಆಯಾಮಗಳ ಬೃಹತ್ ಬೆಳಕು ಅಂದರೆ ಚೈತನ್ಯ. ಅದು ಅದರಷ್ಟಕ್ಕೇ ಸ್ಥಿರವೂ, ಚಲನಶೀಲವೂ ಹೌದು. ಅದು ಬದಲಾಗುವ ಸ್ವರೂಪ ಹೊಂದಿರುವುದರಿಂದಲೇ ಶಾಶ್ವತ! ಅದಕ್ಕೆ ಒಳಗೆ ಹೊರಗೆ ಎಂಬುದಿಲ್ಲ. ಅದರ ಹೊರಗೆ ಮತ್ತೊಂದು ಎಂಬುದೂ ಇಲ್ಲ.
ಜೀವವಿಜ್ಞಾನವು ಉಸಿರಾಟದ ಆಧಾರದಲ್ಲಿ, ಹೃದಯಬಡಿತದ ಆಧಾರದಲ್ಲಿ ಜೀವಂತಿಕೆಯನ್ನು ಗುರುತಿಸುತ್ತದೆ. ದೇಹದ ಕಣಕಣಗಳಲ್ಲಿ ಶಕ್ತಿಯ ಸ್ವೀಕರಣೆಯಾಗುತ್ತದೆ. ಶಕ್ತಿಯ ಪರಿವರ್ತನೆಯಾಗುತ್ತದೆ. ಶಕ್ತಿಯ ಬಿಡುಗಡೆಯಾಗುತ್ತದೆ. ಜೀವಿ ಪರಿಸರಶಾಸ್ತ್ರದಲ್ಲಿ ಜೀವಿಗಳ ಮೂಲ ಉದ್ದೇಶ ಪ್ರತ್ಯುತ್ಪಾದನೆಯಲ್ಲದೆ ಮತ್ತೇನೂ ಅಲ್ಲ ಎನ್ನುತ್ತಾರೆ. ರಸಾಯನಶಾಸ್ತ್ರವು ರಾಸಾಯನಿಕವಾಗಿ ಮೂಲವಸ್ತುಗಳನ್ನು ಬೇರ್ಪಡಿಸಿ ತೋರಿಸಿ, ಅವುಗಳ ವೈವಿಧ್ಯಮಯ ಪ್ರವರ್ತನೆ, ಬದಲಾವಣೆಯ ಬಗ್ಗೆ ಹೇಳುತ್ತದೆ. ಭೌತವಿಜ್ಞಾನವು ಪ್ರಕೃತಿ ಸಂಭೂತವಾಗಿರುವ ದ್ರವ್ಯದ ವಸ್ತುಸ್ಥಿತಿಯ ಬಗ್ಗೆ ಘನ, ದ್ರವ, ಅನಿಲ, ಪ್ಲಾಸ್ಮಾ ಹೀಗೆ ಗುರುತಿಸುತ್ತಾ ಹೋಗುತ್ತದೆ. ಇನ್ನು ನಮ್ಮ ಆಲೋಚನೆ, ಭಾವನೆ, ರಸಾನುಭವ ಅವೆಲ್ಲವೂ ಜೀವವಿಜ್ಞಾನದ ದೃಷ್ಟಿಯಿಂದ ನೋಡಿದರೆ ವಿವಿಧ ರಸದೂತ, ಚೋದಕಗಳು, ಕ್ರಿಯೆ - ಪ್ರತಿಕ್ರಿಯೆ ಎಲ್ಲವೂ ಬಗೆಬಗೆಯಾಗಿ ಜೀವರಾಸಾಯನಿಕ ಸ್ವರೂಪ ಹೊಂದಿದ ಚೈತನ್ಯವೇ. ಹಾಗಾಗಿ ಅದು ಹರಿದಲ್ಲೆಲ್ಲಾ ನಾವಿದ್ದೇವೆ! ಒಟ್ಟಿನಲ್ಲಿ ಹಲವು ಶಾಸ್ತ್ರ-ವಿಜ್ಞಾನ-ಕಲೆ-ಸಾಹಿತ್ಯಗಳು ಚೈತನ್ಯದ ಪ್ರವಹಿಸುವಿಕೆಯ ಬಗ್ಗೆ ವ್ಯಾಖ್ಯಾನಿಸುತ್ತಾ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಜೀವನದ ಬಗ್ಗೆ ಹೇಳುತ್ತದೆ. ಹೀಗಾಗಿ ಅತೀ ಪುರಾತನವಾದ, ದೇಶ-ಕಾಲ ಮತ್ತು ಇನ್ನೆಲ್ಲಾ ಒಳಸುಳಿಗಳಿಂದ, ಆಯಾಮಗಳ ಪ್ರಮಾಣದಿಂದ ಸಿದ್ಧಿಸಬಹುದಾದ 'ಜ್ಯೋತಿರ್ವಿಜ್ಞಾನ', Matter = energy ಎಂಬ ಹೇಳಿಕೆ, ಅದ್ವೈತ ಅಥವಾ A- Duality, ಅದೂ ಇದೂ ಒಂದೇ ಎಂಬ ಶೋಧನೆಗಳು ಮುಖ್ಯವಾಗುತ್ತವೆ.
ಎಲ್ಲವೂ ನಾವೇ ಏಕೆ ಎಂದರೆ, ಪ್ರತಿಕ್ಷಣ ನಮ್ಮ ದೇಹದಲ್ಲಿ ನಡೆಯುತ್ತಿರುವ ಉಸಿರಾಟದೊಂದಿಗೆ ಕೋಟ್ಯಂತರ ಜೀವಕಣಗಳಲ್ಲಿ ಆಂತರಿಕ ಉಸಿರಾಟ, ಜೀವ ರಾಸಾಯನಿಕ ಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ನಾವು ಪೂರ್ತಿಯಾಗಿ ಪ್ರತಿಕ್ಷಣ ಸ್ಥಿರವಾಗಿಯೇ ಬದಲಾಗುತ್ತೇವೆ! ಆಂದೋಲನ ಮತ್ತು ಅಚಲತೆ ಎರಡೂ ನಮ್ಮದೇ ಸ್ಥಿತಿಗಳು. ಕ್ವಾಂಟಂ ಫಿಸಿಕ್ಸ್ ಪ್ರಕಾರ ಒಂದು ಪರಮಾಣುವಿನಿಂದ ಮತ್ತೊಂದು ಪರಮಾಣುವಿನ ಸಾಮೀಪ್ಯದೊಂದಿಗೆ ಸಂಘಟನೆ, ಸಂಲಗ್ನತೆಗಳಿರುವುದರಿಂದ ಚೈತನ್ಯವು ಅಯಾನುಗಳ ರೂಪದಲ್ಲಿ ಹರಿಯುತ್ತಲೇ ಇದ್ದು, ಈ ಕ್ರಿಯೆಗೆ ಆರಂಭವಾಗಲೀ, ಅಂತ್ಯವಾಗಲೀ ಇಲ್ಲದೇ ಅದು ಶಾಶ್ವತ. ಹೀಗಾಗಿ "ಅಂತರ್ ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ". ಕಣಕಣದ ಎಲ್ಲಾ ಧಾತುಗಳು ಏನೋ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಲೇ ಇರುವಾಗ ಮೃತ್ಯು ಎಂಬುದೇ ಇಲ್ಲ. ಅಮೃತತ್ವವೇ ಇರುವಂಥದ್ದಾಗಿದೆ. ಈ ಬೃಹದೀಕರಣದಲ್ಲಿ ನಮ್ಮ ಶರೀರ ಸೇವಿಸುವ ಆಮ್ಲಜನಕ, ನೀರು, ಆಹಾರ, ಆತ್ಮೀಯರು, ವಸ್ತು-ವಿಷಯ-ಆಲೋಚನೆಗಳು ಅವು ಯಾವ್ಯಾವುದು ನಮ್ಮ ಬದುಕನ್ನು ಬಲಿಷ್ಠಪಡಿಸುತ್ತಿರುತ್ತದೋ ಅವು ಯಾವುದೂ ನಮ್ಮಿಂದ ಬೇರೆಯಲ್ಲ. ನಮ್ಮ ದೇಹದಲ್ಲಿ ಈ ಕ್ಷಣ ಇರುವ ಪಂಚಭೂತಗಳ ನಿಷ್ಪತ್ತಿ ಮತ್ತಾವುದೋ ಕ್ಷಣ ಯಾವ್ಯಾವುದೋ ರೂಪದಲ್ಲಿ ಪ್ರಕೃತಿಯಲ್ಲಿ ಇರುವಂಥದ್ದು ಹೌದಾಗಿರುವುದರಿಂದ ನಮ್ಮ ಪ್ರಕೃತಿ ಮತ್ತು ಪರಾಪ್ರಕೃತಿ ಇವು ಯಾವುದೂ ಪ್ರತ್ಯೇಕಿತವಲ್ಲ. ಹೀಗಾಗಿ ನಮ್ಮ ಹೊರಗೆ ಅನುಭವಕ್ಕೆ ಬರುತ್ತಿರುವ, ನಮ್ಮ ಸೇವನೆಗೆ ಒಳಪಡುವಂಥದ್ದು ಆಗಿರುವ ವರ್ತಮಾನದ ಎಲ್ಲವೂ ನಾವೇ ತಾನೇ! ಹಾಗಾಗಿ ನಮ್ಮ ಸ್ಥಿತಿಯು ದೇಶ - ಕಾಲ ಹೀಗೆ ಎಲ್ಲಾ ಕಾಲಖಂಡಗಳನ್ನೂ ಮೀರಿ, ಬೃಹತ್ ಬೆಳಕಲ್ಲಿ ಅನಂತ ಆಯಾಮಗಳಲ್ಲೂ ಊಹಿಸಿದಂತೆ ಬದುಕಬಲ್ಲದ್ದು. Conservation of energy ಎಂಬರ್ಥದಲ್ಲಿ ಆ ಚೈತನ್ಯ ಶಾಶ್ವತ. ಅದು ನಮ್ಮನ್ನು ಅನುಕ್ಷಣ ಬದುಕಿಸುತ್ತಿರುವಂಥದ್ದೇ.
ನಮ್ಮ ಪುರಾತನರು ಈ ಜ್ಞಾನವನ್ನು ವಿಜ್ಞಾನ ಎಂದಿದ್ದರು. "ವಿಶೇಷೋ ಜ್ಞಾನಃ ಇತಿ ವಿಜ್ಞಾನಃ". 'ವಿ' ಎಂಬ ಉಪಸರ್ಗಕ್ಕೆ ವಿಶೇಷ ಎಂಬ ಅರ್ಥ. ಇಂದು ಆನ್ವಯಿಕ ವಿಜ್ಞಾನವು ಮೂಲ ವಿಜ್ಞಾನದ ಅನೇಕ ಕಲ್ಪನೆಗಳನ್ನಾಧರಿಸಿ ಬಹಳಷ್ಟನ್ನು ಸಾಧಿಸಿ ಉಪಲಬ್ಧಗೊಳಿಸಿದೆ.
ನಮ್ಮ ಋಷಿಮುನಿಗಳು ಮನಸ್ಸನ್ನು ವಿಸ್ತರಿಸಿಕೊಳ್ಳುತ್ತಾ ಅದನ್ನು 'ಸಾಧನಾ' ಎಂದರು. ನಾವೆಷ್ಟೇ ಹೇಳಿದರೂ ಎಲ್ಲರ ಮನಸ್ಸುಗಳೂ ಸುಲಭವಾಗಿ ವಿಸ್ತಾರವಾಗುವುದಿಲ್ಲ. ಆದರೆ ನಮ್ಮ ಸುತ್ತಲಿನ ಎಲ್ಲ ಏಕಕೋಶ ಜೀವಿ, ಕ್ರಿಮಿ, ಕೀಟ, ಅಣು, ಕಣ, ನ್ಯೂಕ್ಲಿಯಸ್ ಎಲ್ಲವುಗಳ ಜೊತೆ ಪ್ರತಿಕ್ಷಣದ ಪ್ರತಿ ಭಾಗದಲ್ಲೂ ನಮ್ಮ ಸಂಪೂರ್ಣ ಸಂಬಂಧ ಮತ್ತು ವರ್ತನೆ ಇದೆ. ಹೀಗಾಗಿ ಇಡೀ ವಿಶ್ವವೇ ಒಂದು ಎಂದು ಹೇಳಲಾಗುತ್ತದೆ.
ಕಲ್ಪನೆಯು ಜಗತ್ತನ್ನೇ ಅಳುತ್ತದೆ ಎಂದು ನೆಪೋಲಿಯನ್ ಹೇಳುತ್ತಾನೆ. ಹಾಗೆಯೇ “Great men are they who see that spiritual is stronger than any material force, that thoughts rule the world.” ಎಂದು ಎಮರ್ಸನ್ ಹೇಳುತ್ತಾನೆ. ಕೆಲವು ಕಲ್ಪನೆಗಳು ನಮಗೆ ಲಭಿಸದಿರುವುದಕ್ಕೆ ಕಾರಣಗಳನ್ನು ನೀಡಬಯಸುತ್ತೇನೆ. ಆನೆಮರಿಯನ್ನು ಗಿಡಕ್ಕೆ ಕಟ್ಟಿ ಬೆಳೆಸಿದಾಗ, ಅದು ಬೆಳೆದು ದೊಡ್ಡ ಆನೆಯಾಗಿ ಶಕ್ತಿಯುತವಾದರೂ ಅದು ಮರವನ್ನು ಕಿತ್ತು ಓಡುವುದಿಲ್ಲ. ಬಾವಿಯೊಳಗಿನ ಕಪ್ಪೆ ಅದರಾಚೆಗೆ ಪ್ರಪಂಚವಿದ್ದರೂ ಸಾಹಸಿಯಾಗುವುದಿಲ್ಲ. ಅಂದರೆ ನಮ್ಮ Perception ನಾವು ಬೆಳೆದ ಪರಿಸ್ಥಿತಿಗೆ, ಅಂದರೆ ನೇರವಾಗಿ ನಮಗೇ ಸಂಬಂಧಿಸಿದೆ. ವಿಜ್ಞಾನಿಗಳ ಪ್ರಕಾರ ನಮಗೆ ಕಾಣುತ್ತಿರುವ ಪ್ರಪಂಚ ಇದು ಹೀಗೆಯೇ ಇಲ್ಲ. ನಮ್ಮ ದೇಹದ ಇಂದ್ರಿಯ ವ್ಯವಸ್ಥೆಯ ಪ್ರಕಾರ ಅನುಭವವಾಗುತ್ತದೆ. ಶಬ್ದ ಸ್ಪರ್ಶ ರೂಪು ರಸ ಗಂಧ ಈ ಅರಿವು ಅಥವಾ ಇದಕ್ಕೆ ಮಿಗಿಲಾದ ಎಲ್ಲಾ ಕಂಡುಕೇಳಿರದ ಅತೀಂದ್ರಿಯಗಳ ಸೂಚನೆಗಳು, ಅಂತಹ ಆಯಾಮಗಳ ಅದೃಷ್ಟ ಕೂಡಾ ಅನೇಕ ಜೀವಿಗಳಿಗೆ ಇರುತ್ತದೆ. ಅದು ಮತ್ತೊಬ್ಬರಿಗೆ ಗೊತ್ತಿಲ್ಲ. ಏಕೆಂದರೆ ಆ ಬಗೆಯಲ್ಲಿ ಎಲ್ಲಾ ಜೀವಿಗಳೂ ಬೇರೆ ಬೇರೆ - ಒಂದೇ ರೀತಿ ಭಾಸವಾದದ್ದೂ ಕೂಡಾ ಒಂದೇ ಆಗಿರಲು ಸಾಧ್ಯವಿಲ್ಲ ಎಂಬುದೂ ವಿಜ್ಞಾನಿಗಳ ಸಂಶೋಧನೆ ಹೇಳಿದ ಮಾತು. ವಿಜ್ಞಾನಿಗಳು ಇಂದು ನಾಲ್ಕನೇ ಆಯಾಮದ ಜೀವಿಗಳ ಬಗ್ಗೆ, ಏಲಿಯನ್ಸ್ ಬಗ್ಗೆ, 11, 26 ಆಯಾಮಗಳ ಬಗ್ಗೆಯೂ ಹೇಳುತ್ತಾರೆ. ಆಲೋಚಿಸಿದರೆ ಕಂಡು ಕೇಳಿರದ ಆಯಾಮಗಳೂ, ಅಂತಹ ವಿಶೇಷ ಪರಿಜ್ಞಾನ ಹೊಂದಿದ ಕಣ್ಣಿಗೆ ಕಾಣದ ಜೀವಿಗಳೂ ಇರುತ್ತವೆ! ಆಯಾಮಗಳು ಅನಂತ! ಬಹುಶಃ ನಾವು ಪ್ರಯತ್ನಪಟ್ಟು ನಮ್ಮ ಜ್ಯೋತಿರ್ವಿಜ್ಞಾನದ ಡಿಗ್ರಿಗಳಲ್ಲಿ ಹಂಚಿ ಹಾಕಿದರೆ, 27 ಕಾಲಖಂಡ ಅರ್ಥಾತ್ ನಕ್ಷತ್ರ x 4 ಪಾದ= 108 ಕೋನಗಳು (Degrees of thought, view, angle), ಅಂದರೆ 108 ಆಯಾಮಗಳಾಗಿಯೂ ಸಂಕೇತಿಸಬಹುದೇನೋ! ಆದರೂ ಆಯಾಮಗಳು ಅನಂತವೇ! ಎಲ್ಲಾ ಬದುಕು ಕೂಡಾ ವಿಶ್ವದಲ್ಲಿ ಸಂಭವ ಅಲ್ಲವೇ? ಚಿತ್ತ ಹರಿದಷ್ಟೂ ಊಹಿಸಿ! ಏಕೆಂದರೆ ಆಗ ಹೇಳಿದ ಪ್ರಕಾರ ಅಧ್ಯಾತ್ಮಿಕವಾಗಿ ಅದೆಲ್ಲ ನಾವೇ! ನಮ್ಮ ಸುತ್ತಲೂ, ನಮ್ಮ ಹಿಂದೆಯೂ ಮುಂದೆಯೂ, ನಮ್ಮ ಮೇಲೆಯೂ ಕೆಳಗೂ, ಇನ್ನೂ ಕಂಡು ಕೇಳಲಾಗದ ಇಂದ್ರಿಯಾತೀತ ಆಯಾಮಗಳಲ್ಲೂ ಇರುವುದು ನಾವೇ! ಅದು ನಮ್ಮ ರೂಪ-ರೂಪಾಂತರವೇ. ಕವಿ ಕುವೆಂಪು ಅವರ "ರೂಪ ರೂಪಗಳನು ದಾಟಿ ನಾಮಕೋಟಿಗಳನು ಮೀಟಿ" ಎಂಬ ಸಾಲುಗಳಲ್ಲಿಯೂ, ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರ "ಹೊರಗಿರುವ ಪರಿಯೆಲ್ಲ ಅಡಗಿಹುದೇ ಒಳಗೆ, ಹುಡುಕಿದರೆ ಕೀಲಿಕೈ ಸಿಗದೆ ಎದೆಯೊಳಗೆ, ತಿಳಿಯದೆ ಅದರಲ್ಲಿ ಕುಳಿತಿರುವೆ ನೀನೆ, ಎನ್ನುವರು ನನಗೀಗ ಸೋಜಿಗವು ನಾನೆ!" ಎಂಬ ಭಾವಗೀತೆಯಲ್ಲೂ, ಹೆಚ್ಚೆಂದರೆ ಅಕಾರಾದಿಯಾಗಿ ಕ್ಷಕಾರಾಂತವಾದ ಎಲ್ಲ ಧ್ವನಿಮಾಗಳ ಹಿಂದೆಯೂ ಇಂತಹ ಅಧ್ಯಾತ್ಮ ಇದೆ. ಎಲ್ಲಾ ಧರ್ಮಗಳ ಹಿಂದೆಯೂ ಪರಮಾತ್ಮನ ಪರಿಶುದ್ಧವಾದ ಒಂದು ತತ್ತ್ವವಿದೆ. ನಾಸ್ತಿಕತೆ ಎಂಬುದೇ ಇಲ್ಲ - ಏಕೆಂದರೆ ಅಸ್ತಿತ್ವದ ಎಲ್ಲ ಕಣ ಕಣಗಳ ನ್ಯೂಕ್ಲಿಯಸ್ ಮತ್ತು ಕಕ್ಷೆಗಳಲ್ಲಿ ಶಕ್ತಿಗಳೇ ಅಂತರ್ಗತವಾಗಿರುವವು ಮತ್ತು ಪ್ರವಹಿಸುತ್ತಿರುವವು. ಬಲಿಷ್ಠವಾದ ನಂಬಿಕೆ ಮತ್ತು ಸಂಕಲ್ಪದ ಮೇಲೆಯೇ ಸರ್ವಸ್ವವೂ ನಡೆಯುತ್ತಿರುತ್ತದೆ.
ಸ್ಥಿರತೆ ಒಂದು ಪರಿಶುದ್ಧ ಬೆಳಕು. ಅನಂತ. ಅದಕ್ಕೆ ಯಾವುದೇ ಮೌಲ್ಯವನ್ನು ಸೇರಿಸಿದರೂ, ಕಳೆದರೂ, ಗುಣಿಸಿದರೂ, ಭಾಗಿಸಿದರೂ ಅನಂತವೇ ಶಾಶ್ವತ! "Infinity+value = Infinity, Infinity - value = Infinity, Infinity x Value = Infinity, Infinity / Value = Infinity". ಹಾಗೆಯೇ ಶೂನ್ಯದ ಬಗ್ಗೆ ಹೇಳುತ್ತಾ ಪೂರ್ಣಕ್ಕೆ ಪೂರ್ಣವನ್ನು ಕೂಡಿಸಿದರೂ, ಕಳೆದರೂ, ಗುಣಿಸಿದರೂ, ಭಾಗಿಸಿದರೂ ಪೂರ್ಣವೇ ಅಖಂಡವಾಗಿ ಅಭೇದ್ಯವಾಗಿ ಉಳಿದಿರುತ್ತದೆ ಎಂದು ಸನಾತನರು ಸಾರಿದ್ದಾರೆ. ಈ ಹಿಂದೆ ಮಹಾಶೂನ್ಯದಿಂದ ಸೃಷ್ಟಿಯಾಗಿದೆ ಎಂದು ಪ್ರತಿಪಾದನೆಯಾಗಿದೆ. ಆದರೆ ಬಿಂದು ಬಿಂದುವಾಗಿಯೇ ಇದ್ದುಬಿಟ್ಟರೆ ಸೃಷ್ಟಿಯಿಲ್ಲ. ಸ್ಥಿತಿಯಿಲ್ಲ. ಲಯವಿಲ್ಲ. ಏನೂ ಇಲ್ಲದೆ ಇರುವ ಶೂನ್ಯದ ಪಕ್ಕದಲ್ಲೇ - ಅಂದರೆ ಅದರ ನಂತರದ ಬಿಂದುವಿನ ಪರಿಣಮಿಸುವಿಕೆಯ ಹಂತದಲ್ಲೇ ಎಲ್ಲಾ ಆಯಾಮಗಳಲ್ಲೂ ಮತ್ತೇನೋ ಮೌಲ್ಯದ ಸ್ವರೂಪವಾಗಿ ಅದು ಮಾರ್ಪಡುತ್ತದೆ. ಹೀಗಾಗಿ ಆಂದೋಲನ ಮತ್ತು ಅಚಲತೆ ಅವೆರಡೂ ನಮ್ಮೆಲ್ಲರ, ಎಲ್ಲವುಗಳ ಪ್ರಾಪಂಚಿಕ ಸ್ಥಿತಿ. Dual nature of light ಎಂಬ ಸಿದ್ಧಾಂತವೊಂದಿದೆ. ಬೆಳಕು ಯಾರಾದರೂ ತನ್ನನ್ನು ಗಮನಿಸುತ್ತಿದ್ದರೆ ಕಣವಾಗಿರುತ್ತದೆ. ಗಮನಿಸದಿದ್ದಾಗ ಆಂದೋಲನವಾಗುತ್ತದೆ. ಅಂದರೆ ಪ್ರವಹಿಸುತ್ತದೆ. ನಾವೂ ಹಾಗೆಯೇ ಅಲ್ಲವೇ! ಶಕ್ತಿ ಪ್ರವಹಿಸಬೇಕಾದರೆ Dual nature ಅಗತ್ಯವಿದೆ. ಹೀಗಾಗಿ ಆ ವಿಜ್ಞಾನಿಯ ಭಾವನೆ ನಮಗೆ ಅರ್ಥವಾಗುತ್ತದೆ. ಯುಜ್ಯತೇ ಅನೇನ ಇತಿ ಯೋಗಃ = ಒಂದುಗೂಡಿಸು ಎಂಬರ್ಥದಲ್ಲಿ ಎಲ್ಲವೂ ಸಂಪರ್ಕಸಹಿತ. ಆಯಾಮಗಳು ಅನಂತವೇ ಅಥವಾ ಶೂನ್ಯವೇ ಕೇಳಿದರೆ ಶೂನ್ಯವಲ್ಲದ್ದಕ್ಕೆ ಅನಂತ. ಬಿಂದುವಲ್ಲದ್ದಕ್ಕೆ collective consciousness ಅಥವಾ ಸಮಷ್ಟಿಯಲ್ಲಿ ನಾವು ಬದುಕುತ್ತಿದ್ದೇವೆ. ಬೆಳಕೋ ಅಥವಾ ಕತ್ತಲೆಯೋ ಕೇಳಿದರೆ ಬದುಕು  ಬೆಳಕಿನ ಆಂದೋಲನ. ನೀವು ಆಂದೋಲನವಾದಾಗ ಅದರೊಳಗೆ ಸ್ಥಿರವಾಗಿಯೂ ಇರುತ್ತೀರಿ. ಅಲ್ಲದಿರುವುದು ಇಲ್ಲಿ ಯಾವುದೂ ಇಲ್ಲ ಅನ್ನಿಸುತ್ತದೆ. ಏಕೆಂದರೆ ಮನೋವಿಜ್ಞಾನದ ಪ್ರಕಾರ ಯಾವುದನ್ನು ನಾವು ಅಲ್ಲಗಳೆಯುತ್ತೇವೋ ಅಥವಾ ಗೊಂದಲದಲ್ಲಿ ಗ್ರಹಿಸಿಕೊಳ್ಳುತ್ತೇವೋ ಅದನ್ನು ಗ್ರಹಿಸುವಂಥದ್ದಕ್ಕೆ ನಮ್ಮ ಮುಂದಿನ ಅನುಭವವಿರುತ್ತದೆ. ಹಾಗಾಗಿ ಎಲ್ಲವೂ ಸರಿ. ಇರುವಂಥದ್ದು ಒಂದೇ. ಅದು ಶೂನ್ಯವೂ, ಪೂಜ್ಯವೂ, ಹಿಂದು-ಮುಂದುಗಳಿಲ್ಲದ, ಆಚೆ-ಈಚೆ ಇಲ್ಲದ, ಮೇಲೆ-ಕೆಳಗೆ ಈ ಯಾವುದೇ ಆಯಾಮವಿರದ ಸೊನ್ನೆ, ಅಥವಾ ಎಲ್ಲವೂ ಇರುವ ಅನಂತ ಸತ್ಯ! ಅದು ಸ್ವಯಂಭು! ಈ ಮೂಲಕ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ವ್ಯಕ್ತಪಡಿಸಿದ್ದೇನೆ. ಅಪಪ್ರಯೋಗಗಳಾಗಿದ್ದಲ್ಲಿ ಅಥವಾ ತಮ್ಮ Degree of thought ಪ್ರಕಾರ ತಪ್ಪಾಗಿದ್ದರೂ ಕ್ಷಮೆ ಇರಲಿ. ತಮಗೆ ವಂದನೆಗಳು. ಔಂ ಶಾಂತಿಃ.
✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್