ಶಾಂತಿಯುದ್ಧದ ಮತ್ತೊಂದು ಪರಿ... ಸಂತೋಷಕ್ಕಾಗಿ...

ಅಧ್ಯಾತ್ಮ ಮತ್ತು ವಿಜ್ಞಾನಕ್ಕೆ ಹತ್ತಿರದ ನಂಟು ಇದೆ. Strong nuclear force, Weak nuclear force, Electromagnetic force, Gravitational force - ಅಧ್ಯಾತ್ಮದಲ್ಲಿ ಒಮ್ಮೆ ಒಂದು ಕಲ್ಪನೆಯಾಗಿದ್ದದ್ದು ವಿಜ್ಞಾನದಲ್ಲಿ ಮತ್ತೊಂದು ಕಾಲದಲ್ಲಿ ಸಾಧಿಸಲ್ಪಟ್ಟಿದೆ. ಆಧ್ಯಾತ್ಮಿಕವಾಗಿ ಎಲ್ಲದರ ಕಾರ್ಯ, ಕಾರಣ ಸಂಕಲ್ಪ. ಸಂಕಲ್ಪಕ್ಕೆ ಮಿಗಿಲಾದುದು ಯಾವುದೂ ಇಲ್ಲ. ಒಂದು ಬಲಿಷ್ಠವಾದ ಸಂಕಲ್ಪದಿಂದಲೇ ಎಲ್ಲವೂ ನಡೆಯುತ್ತಿದೆ. ಪ್ರಾಯಶಃ ಅದಕ್ಕಾಗಿಯೇ "Spiritual is stronger than any material force, that thoughts rule the world" ಎಂದು ಎಮರ್ಸನ್ ಹೇಳಿದ್ದಾನೆ. ಭಾರತೀಯ ತತ್ತ್ವಶಾಸ್ತ್ರದಲ್ಲೂ ಎಲ್ಲೆಂದರಲ್ಲಿ ಅಂತಹ ಶಕ್ತಿಯ ಬಗ್ಗೆ ಬಣ್ಣನೆಯಾಗಿದೆ.
"ಅಹಂ ಬ್ರಹ್ಮಾಸ್ಮಿ" ಎಂಬ ಆದಿ ಶಂಕರಾಚಾರ್ಯರ ಸಿದ್ಧಾಂತವಿರಬಹುದು, "Iam everywhere" ಎಂದೇ ಅಂತಿಮವಾಗಿ ಹೇಳುವ ವಿಜ್ಞಾನದ ಅತ್ಯಂತ ದೊಡ್ಡ ಸಿದ್ಧಾಂತಗಳಾದ "ಜಗತ್ತಿನ ಮಾಯಾಜಾಲ", "ಸರ್ವತತ್ತ್ವ", "ಆಯಾಮಗಳು", "ಬಿಗ್ ಬ್ಯಾಂಗ್" ಮುಂತಾದ ಒಂದಷ್ಟು ಥಿಯರಿಗಳು ಹೊರಗೆಡಹಿದ ಅಂತರಾರ್ಥವಿರಬಹುದು - ಯಾರಿಗಾದರೂ ಈ ಅದ್ಭುತ ಶಕ್ತಿಯ ಬಗ್ಗೆ ಅಚ್ಚರಿ ಮತ್ತು ಕುತೂಹಲ ಮೂಡುತ್ತದೆ. ನಾವು ಯಾವುದೇ ಕಷ್ಟಗಳಿಂದ ಪಾರಾಗಲಿಕ್ಕಾಗಲೀ, ಸರಳರೇಖೆಯಂತೆ ಸಂತೋಷದ ದಿನಗಳೊಂದಿಗೆ ಬಾಳಲಿಕ್ಕಾಗಲಿ ಇನ್ನಿಲ್ಲದ ಸಾಹಸಿಗಳಾಗುತ್ತೇವೆ. ಆಗ ನಾವು ಎಲ್ಲಾ ಕಾಲಗಳಲ್ಲಿ ಅನ್ವೇಷಿಸಲಾದ ಅದ್ಭುತ ವಿಚಾರಗಳ ಒಳಗೆ ಪ್ರವೇಶಿಸುತ್ತಾ ವಿಜ್ಞಾನಿಯೆನಿಸುತ್ತೇವೆ.
ಭಾರತೀಯ ತತ್ತ್ವಶಾಸ್ತ್ರದ ಕೊಡುಗೆ ಇಲ್ಲಿ ಅಪಾರ. ನಮ್ಮ ವೇದ, ಪುರಾಣ, ಶಾಸ್ತ್ರಗಳಲ್ಲಿ ದೇವರನ್ನು ಅಂದರೆ ವಿಶ್ವಶಕ್ತಿಯನ್ನು ಪ್ರಾರ್ಥಿಸುವ ಕೆಲವು ವಿಧಾನಗಳು ಇವೆ. ಅವುಗಳ ಮಧ್ಯದಲ್ಲೇ ಸುಖದ ಕೀಲಿಗೈ ಇದೆ. ಪೂಜೆಗಳನ್ನು ಮೂರು ವಿಧದಲ್ಲಿ ಮಾಡಬಹುದು ಎಂದು ಶಾಸ್ತ್ರಗಳು ಹೇಳುತ್ತವೆ. ಮಂತ್ರ, ತಂತ್ರ, ಯಂತ್ರಗಳ ಮೂಲಕ ಪೂಜೆಗಳು ಸಾಮಾನ್ಯವಾದವು. "ಮನನಂ ತ್ರಾಯತೇ ಇತಿ ಮಂತ್ರಃ". ವಿಶೇಷವಾದ ಧ್ವನಿತರಂಗಗಳೇ ಮಂತ್ರಗಳು. ಅದೇ ರೀತಿ, ಆಂಗಿಕವಾಗಿ, ಸಾಂಕೇತಿಕವಾಗಿ ಕೈಗೊಳ್ಳುವಂಥದ್ದು ತಂತ್ರ. ಹಾಗೆಯೇ ನಿರ್ದಿಷ್ಟ ಲೆಕ್ಕಾಚಾರಗಳಿಂದ ಮಾಡಲ್ಪಟ್ಟ ಉಪಕರಣಗಳ ಮೂಲಕ ಶಕ್ತಿಯ ಆವಾಹನೆ ಯಂತ್ರ. ಇವು ಸಾಧಾರಣವಾಗಿ ಪ್ರಾಪಂಚಿಕವಾಗಿ ಭಕ್ತರಲ್ಲಿ ಬಳಕೆಯಾಗುವಂಥದ್ದು. ಇವು ದೇವತೆಗಳಿಂದ ಸಾಮಾನ್ಯ ಫಲಗಳನ್ನು ಪಡೆಯಲಿಕ್ಕಾಗಿ. ಆದರೆ, ದ್ರಷ್ಟಾರರಾದ ನಮ್ಮ ಋಷಿಮುನಿಗಳು ಇದರ ಜೊತೆಗೆ ಮಾಡುತ್ತಿದ್ದುದು ತಪಸ್ಸನ್ನು! ಅವರು ಪಾಲಿಸಿದ್ದು ಹೆಚ್ಚಾಗಿ ಮೌನವನ್ನು! 
ಜಪ ಎಂದರೆ ಮಂತ್ರ, ಅದು 'ಆಹತ' ಎಂದರೆ ಸ್ವರಸಹಿತ ಉಚ್ಚಾರಣೆ. ತಪವಾದರೋ ಮೌನ, ಅಂದರೆ 'ಅನಾಹತ', ಧ್ಯಾನ! ಮಂತ್ರಗಳಲ್ಲಂತೂ ಅದರ ಅರ್ಥ ಪ್ರತಿಪಾದನೆಯಲ್ಲಿ, ದೇವತೆಗಳ ಬಗೆಗಿನ ಪುರಾಣಕಥೆಗಳ ಸಂವಿಧಾನದಲ್ಲಿ ಒಂದು ವಿಧವಾದ modulation ಇದೆ. ಕೋಡಿಂಗ್ ಇದೆ. ಹೀಗಾಗಿಯೇ ಅವು ನಮ್ಮ ಮನಸ್ಸಿನ ಆಳದಿಂದ ಕೆಲಸಮಾಡುತ್ತವೆ.
ಸಗುಣಬ್ರಹ್ಮ ಹಾಗೂ ನಿರ್ಗುಣಬ್ರಹ್ಮದ ಬಗ್ಗೆ ನೋಡೋಣ. ಸಗುಣಬ್ರಹ್ಮದ ಆರಾಧನೆ ಅಂದರೆ ದೇವತೆಯ ಸ್ವರೂಪವನ್ನು ಮೂರ್ತಿ ಅಥವಾ ಬಿಂಬದಲ್ಲಿ ಕಲ್ಪಿಸಿಕೊಂಡು ಪ್ರಾರ್ಥಿಸುವುದು. ಅದು ಸುಲಭ. ನಿರ್ಗುಣಬ್ರಹ್ಮನನ್ನು ಆರಾಧಿಸುವುದಕ್ಕೆ ಆಗದು. ಏಕೆಂದರೆ ನಿರ್ಗುಣ, ನಿರಾಕಾರ, ನಿರ್ಮಲ ಪರಮಾತ್ಮನ ಬಗ್ಗೆ ತಪಸ್ಸು ಮಾತ್ರ ಮಾಡಬಹುದಷ್ಟೇ. ಎಲ್ಲ ಆಕಾರಗಳೂ ಬ್ರಹ್ಮನೇ. ಇರುವುದೊಂದೇ. ಅದು ಅನಂತರೂಪಿಯಾದ ಬ್ರಹ್ಮವೇ. ಒಟ್ಟು ಈ ನಾಲ್ಕು ಕ್ರಮದ ಪೂಜೆ, ಧ್ಯಾನ, ಪದ್ಧತಿಗಳಂತೂ ತುಂಬಾ ಬೆಳೆದಿವೆ.
ಪ್ರಾರ್ಥನೆ, ಪೂಜೆಗಳು ಕೆಲಸಮಾಡುವುದು ಹೇಗೆ?
ನಮ್ಮ ಮನಸ್ಸನ್ನು ಜಾಗೃತ ಮನಸ್ಸು, ಅಜಾಗೃತ ಮನಸ್ಸು ಹಾಗೂ ಸುಪ್ತ ಮನಸ್ಸು ಎಂದು ವಿಂಗಡಿಸುತ್ತೇವೆ. ಸುಪ್ತ ಮನಸ್ಸನ್ನು ಹೇಗೆ ಪ್ರಭಾವಿಸುತ್ತೇವೋ ವಾಸ್ತವವನ್ನು ನಾವು ಹಾಗೆಯೇ ರೂಪಿಸಿಕೊಳ್ಳುತ್ತೇವೆ. ಆದರೆ ಸುಪ್ತಮನಸ್ಸನ್ನು ಹಿಡಿತಕ್ಕೆ ತೆಗೆದುಕೊಂಡು ಸೂಚನೆ ಕೊಡಲು ಕಷ್ಟ. ಏಕೆಂದರೆ ಅದು ಮರ್ಕಟನಂತೆ. ಅಲ್ಲದೆ ಅದು ಸುಪ್ತವೂ ಕೂಡಾ. ಹಾಗಾಗಿ ಅದಕ್ಕೆ ಸೂಚನೆಯನ್ನು ಕೊಡಲು ನಾವು ಜಾಗೃತ ಮನದ ಕಾರ್ಯಗಳನ್ನು ಬಳಸಬೇಕಾಗುತ್ತದೆ. ಅಜಾಗೃತ ಮನಸ್ಸು ಸುಪ್ತ ಮತ್ತು ಜಾಗೃತ ಮನಸ್ಸು ಇವೆರಡರ ನಡುವಿನ ತೆಳುವಾದ ಪದರದಂತಿರುತ್ತದೆ.
ಸುಪ್ತಮನಸ್ಸನ್ನು ಪ್ರೋಗ್ರಾಂ ಮಾಡುವುದು ಹೇಗೆ?
ಈಗಾಗಲೇ ಹೇಳಿದಂತೆ, ಜಾಗೃತ ಮನಸ್ಸಿನ ಕಾರ್ಯಗಳೆಲ್ಲವೂ ಸುಪ್ತಮನಸ್ಸನ್ನು ಪ್ರಭಾವಿಸುತ್ತದೆ. ಹೀಗಾಗಿ ಜಾಗೃತ ಮನಸ್ಸಿನಿಂದ ನಾವು ಶಾಂತ ಸ್ಥಿತಿಯಲ್ಲಿ ಮಾಡಿದ ಪ್ರಾರ್ಥನೆ, ಆಶೀರ್ವಾದ ಅತ್ಯಂತ ಪರಿಣಾಮಕಾರಿ ಎನಿಸುತ್ತದೆ. ಶಾಂತ ಸ್ಥಿತಿಯನ್ನು ತಲುಪಲು ಮಂತ್ರ, ತಂತ್ರ, ಯಂತ್ರಗಳನ್ನು ಬಳಸುತ್ತೇವೆ. ಆದರೆ ನಮ್ಮ ಉದ್ದೇಶ ಮೌನ ಅಥವಾ ಕಠಿಣ ತಪಸ್ಸಿನ ಹಂತಕ್ಕೆ ತಲುಪುವುದು. ಆ ಮೂಲಕ ಶಾಂತ ಸ್ಥಿತಿಗೆ ತಲುಪಿದಾಗ ನಮ್ಮ ಮನಸ್ಸು Upper consciousness ಅಂದರೆ ಪರಮಾತ್ಮನ ಮಟ್ಟದಲ್ಲಿರುತ್ತದೆ. ಆಗ ಅದು ಸಮಷ್ಟಿರೂಪ(collective consciousness)ನಲ್ಲಿರುತ್ತದೆ. ಇದನ್ನು ಧ್ಯಾನದ ಪರಾಕಾಷ್ಠೆ ಎನ್ನಬಹುದು. ಆಗ ನಿಜಕ್ಕೂ ನಮ್ಮ ಮನಸ್ಸು ಅತ್ಯಂತ ಶಕ್ತಿಶಾಲಿಯಾಗಿದ್ದು, ಅಲ್ಲಿಂದ ಹೊರಡುವ ಆಶೀರ್ವಾದ, ಹಾರೈಕೆಗಳು ಫಲಿಸುತ್ತವೆ.
ಸುಪ್ತಮನಸ್ಸನ್ನು ಪ್ರೋಗ್ರಾಂ ಮಾಡಲು ಹಲವಾರು ತಂತ್ರಗಳಿವೆ. ಒಂದನೆಯದು Affirmations ಅಂದರೆ ದೃಢೀರಣಗಳ ಬಳಕೆ, ಎರಡನೆಯದು mataphors ಅಂದರೆ ರೂಪಕಗಳು. ಅಂದರೆ ಚಿತ್ರದ ರೀತಿ ಕಟ್ಟಿಕೊಳ್ಳುವುದು. ಮನಸ್ಸು ಸೂಚನೆಗಳನ್ನು ಹೇಗೆ ತೆಗೆದುಕೊಳ್ಳುತ್ತದೆ ಎಂಬ ಮೇಲೆ ಪರಿಣಾಮವಿರುತ್ತದೆ. ಚಿತ್ರದ ಮೂಲಕ ಸಾಂಕೇತಿಕವಾಗಿ ಸೂಚನೆ ಕೊಡುವುದು ಹೆಚ್ಚು ಪರಿಣಾಮಕಾರಿ. ಏಕೆಂದರೆ ಮರ್ಕಟನಂತಹ ಮನಸ್ಸಿಗೆ ಅದು ಯಾವುದೇ ವಿವೇಚನೆಗೂ ಮುನ್ನ ಇಳಿಯುತ್ತದೆ. ಬಹುಶಃ ಇದೇ ಆಧಾರದಲ್ಲಿ ನಮ್ಮಲ್ಲಿ ವಾಸ್ತುಶಾಸ್ತ್ರ ಹಾಗೆಯೇ ಚೀನಾದ ಫೆಂಗ್‌ಶುಯಿ ತಂತ್ರಗಳು ಅಭಿವೃದ್ಧಿಯಾಗಿದ್ದು. ಹಾಗೆಯೇ Affirmations ಎಂದರೆ ದೃಢೀಕರಣಗಳ ಬಳಕೆ. ದೃಢೀಕರಣಗಳಂತೆ ಮಂತ್ರಗಳು ನಿಷ್ಪನ್ನವಾದದ್ದು. ನಿದ್ದೆ ಹೋಗುತ್ತಿರುವ ಸಂದರ್ಭ ಹಾಗೂ ನಿದ್ದೆಯಿಂದ ಎಚ್ಚರವಾಗುತ್ತಿರುವ ಸಂದರ್ಭಗಳಲ್ಲಿ ಸಹಜವಾಗಿ ಸುಪ್ತಮನಸ್ಸನ್ನು ಪ್ರೋಗ್ರಾಂ ಮಾಡಬಹುದೆಂದು ಬಲ್ಲವರು ಹೇಳುತ್ತಾರೆ. ಹಾಗಾಗಿಯೇ ಏನೋ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಪ್ರಾರ್ಥನೆಗಳನ್ನು ನೆರವೇರಿಸಲಾಗುತ್ತದೆ. ಆ ಸಮಯದಲ್ಲೇ ಧ್ಯಾನವನ್ನು ಮಾಡಲಾಗುತ್ತದೆ.
ಮಂತ್ರಗಳು ಹೇಗೆ ಪ್ರಭಾವಿಸುತ್ತವೆ?
ಮಂತ್ರಗಳು ವಿಶೇಷವಾದ ಧ್ವನಿತರಂಗಗಳು. ನಾವು ಪ್ರಾರ್ಥಿಸುವ ದೇವತೆಯ ಸ್ವರೂಪವು ಶಕ್ತಿಯ ವ್ಯಾಪಕತೆಯನ್ನು ಬಿತ್ತರಿಸುವಂತೆ ಜಪಗಳಲ್ಲಿ ಚಿತ್ರಿತವಾಗಿರಬೇಕು. ಅದು Limitless ಆಗಿ ವರ್ಣಿಸಲ್ಪಟ್ಟ ರೀತಿಯಿಂದ ಅದರ ಆರಾಧನೆಯ ಫಲ ನಿರ್ಧರಿಸಲ್ಪಡುತ್ತದೆ.
ಯೋಗಶಾಸ್ತ್ರದ ಹಿನ್ನೆಲೆ
“Loving people live in a loving world. Hostile people live in a hostile world. Same world.” ಎಂದು Wayne W. Dyer ಹೇಳಿದ್ದಾನೆ. ಭೂಲೋಕ, ಭುವರ್ಲೋಕ, ಸುವರ್ಲೋಕ, ಮಹರ್ಲೋಕ, ಜನೋಲೋಕ, ತಪೋಲೋಕ, ಸತ್ಯಲೋಕ ಎಂಬ ಸಪ್ತ ಊರ್ಧ್ವಲೋಕಗಳೂ, ಅತಲ, ವಿತಲ, ಸುತಲ, ತಲಾತಲ, ರಸಾತಲ, ಮಹಾತಲ, ಪಾತಾಳ ಎಂಬ ಸಪ್ತ ಅಧೋಲೋಕಗಳೂ ಇವೆಯಂತೆ. We create our own reality ಎಂಬ ಮಾತಿದೆ. ನಮ್ಮ ಮನಸ್ಸಿನಲ್ಲಿ, ಅಂತರ್ಯದಲ್ಲಿ ಎಲ್ಲವೂ ರಚನೆಯಾಗುತ್ತದೆ. ಕೃತಯುಗವನ್ನು ಸತ್ಯಯುಗ, golden age ಎನ್ನಲಾಗುತ್ತದೆ. ಸತ್ಯ, ಸಂಪತ್ತು, ದಯೆ ಹಾಗೂ ಕಠಿಣ ತಪಸ್ಸು - ಈ ನಾಲ್ಕೂ ಸ್ತಂಭಗಳನ್ನು ಒಳಗೊಂಡ ಯುಗಧರ್ಮ ಪಾಲನೆಯಾಗುವುದು ಕೃತಯುಗದಲ್ಲಿ. ನಾವು ಎಲ್ಲೇ ಇರಲಿ. ನಾವು ಹೇಗೆ ಬದುಕುತ್ತೇವೆ ಎಂಬುದು ನಾವಿರುವ ಯುಗವನ್ನು ನಿರ್ಧರಿಸುತ್ತದೆ.
ದೇಹವನ್ನು ಒಂದು ಪರಿಪೂರ್ಣ ವಾಹನ ಎನ್ನಲಾಗುತ್ತದೆ. ದೇಹೋ ದೇವಾಲಯಃ ಪ್ರೋಕ್ತಃ ಜೀವೋ ದೇವೋ ಸದಾಶಿವಃ. ಎರಡು ರೀತಿಯ ದೇಹಗಳಿವೆ. ಸ್ಥೂಲ ಮತ್ತು ಸೂಕ್ಷ್ಮ. ಸ್ಥೂಲದೇಹ ನಮಗೆ ಕಾಣುತ್ತದೆ. ಆದರೆ ಸೂಕ್ಷ್ಮದೇಹ ಅರಿವಿಗೆ ಮಾತ್ರ ಬರುತ್ತದೆ. ಅದನ್ನು ನಾವೆಷ್ಟು ವಿಸ್ತರಿಸಿಕೊಳ್ಳುತ್ತೇವೋ ಅದು ನಮ್ಮ ಸಾಧನೆಗೆ ಬಿಟ್ಟದ್ದು. ಬ್ರಹ್ಮಾಂಡದ ಅತ್ಯಲ್ಪ ಭಾಗವು ಪ್ರಕೃತಿಯಾಗಿ ತೆರೆದಂತೆ ವಿಶ್ವಶಕ್ತಿಯು ದೇಹದ ಮೂಲಕ ವ್ಯಕ್ತವಾಗಿದೆ. ಹಾಗಾಗಿ ದೇಹ ಒಂದು ಸಮರ್ಥ ಸಾಧನ.
ದೇಹದಲ್ಲಿ ಏನೆಲ್ಲಾ ಇದೆ?
ಪರಮಾತ್ಮನ ಆವಾಸಸ್ಥಾನವಾಗಿರುವ ದೇಹದಲ್ಲಿ ಇಲ್ಲದಿರುವುದು ಯಾವುದೂ ಇಲ್ಲ. ಪಂಚಭೂತಗಳು ವಿವಿಧ ರೂಪದಲ್ಲಿ ಒಂದು ಯೋಗ್ಯ ನಿಷ್ಪತ್ತಿಯಲ್ಲಿವೆ. ಸಪ್ತ ಚಕ್ರಗಳಿವೆ. ಅಂಗೋಪಾಂಗಗಳಿವೆ. ಕೋಟ್ಯಂತರ ಜೀವಕಣಗಳು ಇವೆ. ಯಾವುದನ್ನು ಇದೆ ಎನ್ನಲಾಗುತ್ತದೋ ಅದು 99.99%ದಷ್ಟು ಇರುವ ಏನೂ ಇಲ್ಲ ಎಂಬ spaceನಲ್ಲಿ ಸದಾ ಇರುತ್ತದೆ. ಹೀಗಾಗಿ ಎಲ್ಲ ಜೀವಕೋಶಗಳ ಧಾತುಗಳಾಗಿ ಸಹಿತ ನಾವು ಇಲ್ಲ ಎಂಬುದರಲ್ಲಿಯೇ ಸದಾ ಇರುತ್ತೇವೆ.
Matter = Energy, Energy = Matter ಎಂಬ ರೀತಿಯಲ್ಲಿ ನಾವಿದ್ದೇವೆ. ಸಾತ್ವಿಕ, ರಾಜಸಿಕ, ತಾಮಸಿಕ ಮೂರೂ ಗುಣಗಳು ಬಹುಗುಣಗಳಾಗಿ 108 ಗುಣಗಳಿವೆಯೆಂದು ಒಟ್ಟಾರೆ ನಂಬಿಕೆಯಿದೆ. ದೇಹದಲ್ಲಿ ಎಲ್ಲ ಗುಣಗಳು ಯುಕ್ತವಾಗಿ, ಹೇಗೆ ಬೇಕೋ ಹಾಗೆ ಇದ್ದರೆ ಬದುಕು. ದೇಹಕ್ಕೆ ಒಂದು ವಿವೇಕವಿದೆ. ಇದನ್ನು ದೇಹದ ವಿವೇಕ ಎನ್ನುತ್ತಾರೆ. ಗರ್ಭದಲ್ಲಿ ಭ್ರೂಣವಾಗಿದ್ದ ಹಂತದಿಂದಲೂ ಇದ್ದ ವಿವೇಕ ದೇಹದ ವಿವೇಕ. ದೇಹದಲ್ಲಿ ಅನೈಚ್ಛಿಕವಾಗಿ ದೇವರು ಎಲ್ಲ ಕಾರ್ಯಗಳನ್ನು ಸಮರ್ಥವಾಗಿ ನಡೆಸುತ್ತಿದ್ದಾನೆ. ಆ ವಿವೇಕವದು. ಉಸಿರಾಟದ ಗಾಳಿಯಿಂದ, ಆಹಾರದಿಂದ, ವಿಹಾರದಿಂದ, ಎಲ್ಲೆಂದರಿಂದಲೂ ಕೂಡಾ ಬೇಕಾದ್ದನ್ನು ಮಾತ್ರ ಜೀವಕಣಗಳು ಸ್ವೀಕರಿಸುತ್ತವೆ. ಆ ಯೋಗ್ಯತೆ ದೇಹದ ಸ್ಥೂಲ ಮತ್ತು ಸೂಕ್ಷ್ಮ ರೂಪದಲ್ಲಿ ಅಂತರ್ಗತವಾದ ಶಕ್ತಿಗಳೆಲ್ಲದರ ಯೋಗದಿಂದ ಬರುತ್ತದೆ. ದೇಹದಲ್ಲಿ ಪ್ರತಿಯೊಂದರ ಹೊಂದಾಣಿಕೆ, ಸಮತೋಲನ ಇರಬೇಕು. ಅದನ್ನು ಕೇವಲ ತಪಸ್ಸಿನಿಂದಲೂ ತರಬಹುದು ಎಂದರೆ ನೀವು ನಂಬಲೇಬೇಕು.
ಓಂಕಾರ(AUM) ಇಡೀ ಬ್ರಹ್ಮವನ್ನೇ ಸಂಕೇತಿಸುತ್ತದೆ. ಸೂಕ್ಷ್ಮತೆಯ ವಿರಾಟ್ ಸ್ವರೂಪವೇ ಆ, ಊ, ಮ್ ಆಗಿ ದೇಹದೊಳಗಿದೆ. ಆದಿ, ಮಧ್ಯ, ಅಂತ್ಯ ಎಂಬ ಮೂರು ಸ್ವರಗಳೇ ಎಲ್ಲಾ ಬಗೆಯಲ್ಲಿ ಹೊಮ್ಮಿ ವಿವಿಧ ರೂಪದಲ್ಲಿವೆ. ಸ್ವರಗಳಲ್ಲಿ ಏನಿದೆ ಎಂದರೆ, ಸ್ವರಗಳಲ್ಲಿ ಇಡೀ ವಿಶ್ವವೇ ಇದೆ. ನಿಶ್ಶಬ್ಧವಾಗಿ ನಾವು ಸ್ವರಗಳನ್ನು ಒಂದು ಕ್ರಮದಲ್ಲಿ ಪ್ರಯೋಗಿಸಿದರೆ, ನಿಧಾನವಾಗಿ ಮೂರು ಸ್ವರಗಳನ್ನು ಮೂರು ಗತಿಗಳಲ್ಲಿ ಉಚ್ಚರಿಸಿದರೆ, ಅದೇ ನಮ್ಮ ಸ್ಥಿತಿಯ ಸಂಕೇತ. ಭದ್ರತೆ. ಧ್ಯಾನದಲ್ಲಿ ನಿಶ್ಶಬ್ದವಾದ ಉಚ್ಚಾರಕ್ಕೆ, ಉಸಿರಾಟದ ಬಳಕೆಗೆ, ಸಮರ್ಥ ಊಹೆಗೆ ತುಂಬಾ ಮಹತ್ವ ಇದೆ.
ಶಾಂತಿಯ ಮಹತ್ವ
ಔಂ ಶಾಂತಿಃ ಎಂಬುದು ಅತ್ಯಂತ ಶಕ್ತಿಶಾಲಿಯಾದ ಮಂತ್ರ ಎನ್ನಲಾಗುತ್ತದೆ. ಅದು ನಮ್ಮನ್ನು ಹೇಗಿಡಬೇಕೋ ಹಾಗೆ ಇಡುತ್ತದೆ. ನವರಸಗಳಲ್ಲಿ ಶಾಂತರಸಕ್ಕೆ ಹೆಚ್ಚಿನ ಪ್ರಾಮುಖ್ಯ. ಎಲ್ಲ ರಸಗಳೂ ಒಳಗೊಂಡರೆ ಅದು ಶಾಂತರಸ. ಅದು ಪ್ರಕಾಶಿಸುವ ಚೈತನ್ಯದ ಬಿಳಿ ಬಣ್ಣದಂತೆ. ಅದು ಸಂಖ್ಯಾಶಾಸ್ತ್ರದ ಅನಂತದಂತೆ. ಅದಕ್ಕೆ ಯಾವುದೇ ಮೌಲ್ಯವನ್ನು ಕೂಡಿಸಿದರೂ, ಕಳೆದರೂ, ಗುಣಿಸಿದರೂ, ಭಾಗಿಸಿದರೂ ಅನಂತವೇ. ಕಣ್ಣಿಗೆ ಕಾಣಿಸುವುದರಲ್ಲೇ ಕಾಣಿಸದೇ ಇರುವುದು ಎಂಬುದೂ ಇದೆ. ಹಾಗಾಗಿ ಬೆಳಕಿನ ಅಸ್ತಿತ್ವದಿಂದಾಗಿ ಕತ್ತಲೆಯೂ ಕಾಣಬಲ್ಲುದಾಗಿದೆ. ಶಾಂತಿಯಿಂದ, ಮೌನದಿಂದ, ಸ್ಥೂಲದೇಹದಿಂದ ನಮ್ಮ ಸೂಕ್ಷ್ಮದೇಹವನ್ನು ಕಂಡುಕೊಂಡಾಗ ಎಲ್ಲವೂ ನಾವೇ ಎಂದು ತಿಳಿಯುತ್ತದೆ. ನಾವು ಯುದ್ಧವನ್ನು ಮಾಡುವುದಾದರೆ ಶಾಂತಿಯಿಂದ ಮಾಡಬೇಕು. ಸಂಕಲ್ಪದಿಂದ ಮತ್ತು ಸೂಕ್ಷ್ಮರೂಪದ ದೇಹದಿಂದ ಮಾಡಬೇಕು. ಶಾಂತಿಗೋಸ್ಕರವೇ ಮಾಡಬೇಕು.
ಇಂದು ಟೆಲಿಪೋರ್ಟೇಶನ್, ಟೈಮ್ ಟ್ರಾವೆಲ್, ಸ್ಪೇಸ್ ಟ್ರಾವೆಲ್ ಇಂತಹ ಕಲ್ಪನೆಗಳನ್ನು ಖಂಡಿತಾ ಬಳಸಬೇಕಾದ ತುರ್ತು ಅನಿವಾರ್ಯತೆಯಿದೆ. ಪೂರ್ವಿಕರು ತಮ್ಮ ತಪಶ್ಶಕ್ತಿಯಿಂದ ಅದೃಶ್ಯವಾಗಿ ಎಲ್ಲೆಲ್ಲೋ ಪ್ರತ್ಯಕ್ಷವಾಗುತ್ತಿದ್ದರು. ನಮ್ಮ ಜ್ಞಾನವನ್ನು ತಾತ್ಪೂರ್ತಿಕವಾಗಿ ಬಳಸಿದಾಗಲಷ್ಟೇ ನಾವು ಯಶಸ್ವಿಯಾಗುತ್ತೇವೆ.
ಒಬ್ಬೊಬ್ಬ ವ್ಯಕ್ತಿಯೂ, ಜೀವಿಯೂ ಒಂದೊಂದು ಜಗತ್ತಿನ ಹಾಗೆ. ನೂರೆಂಟು ವಿಧಗಳು. ನಾವು ಯಾರಿಗೆ ಪ್ರತಿಕ್ರಿಯೆ ಕೊಡುತ್ತೇವೋ ಆ ಜಗತ್ತಲ್ಲಿ ಆಗ ಇರುತ್ತೇವೆ. ಕ್ರಿಯೆ - ಪ್ರತಿಕ್ರಿಯೆಗಳನ್ನು ಬೇಕಾದಲ್ಲಿ ಮಾತ್ರ ವ್ಯಕ್ತಪಡಿಸಿ, ಉಳಿದಲ್ಲಿ ಮೌನವಾಗಿರಬೇಕು.
ಪಾಶ್ಚಿಮಾತ್ಯ ಸಾಹಿತಿಗಳು, ಭಾಷಾ ವಿದ್ವಾಂಸರು ನಾವು ಬಳಸುವ ಪದಗಳಿಗೂ ಬದುಕಿಗೂ ಸಂಬಂಧವಿದೆ ಎಂದಿದ್ದಾರೆ. ಈ ಕುರಿತ ನನ್ನ ಒಂದು ಸಂದರ್ಭದ ಅಧ್ಯಯನದಂತೆ, ಅವರ ಪ್ರಕಾರ Prefix ಅಥವಾ suffix ಸೇರಿಸಿ ರೂಪಿಸಿದ ನೆಗೆಟಿವ್ ಪದಗಳ ವಿರುದ್ಧಾರ್ಥಕಗಳು ಅಸಾಮಾನ್ಯವಾದ ಧನಾತ್ಮಕ ಅರ್ಥವನ್ನು ಸಾರುತ್ತವೆ. ಅವು ನಮ್ಮ ಆತ್ಮಶಕ್ತಿಗೆ ಅನುಗುಣವಾಗಿವೆ. ಉದಾಹರಣೆಗೆ, Fearless, limitless, sorrowless, untemporary, unconditional, undivided, undefeated, undestroyable ಇಂಥವು. ನಮ್ಮ ದೇವರುಗಳ ಸಹಸ್ರನಾಮಗಳಲ್ಲಿ ಸಂಸ್ಕೃತದಲ್ಲಿ ಇಂತಹ ಶಬ್ದಗಳು, ವರ್ಣನೆಗಳೇ ಇವೆ. ಇಂತಹ ಪದಗಳು ಇದ್ದಷ್ಟೂ ಅಂತಹ ದೇವತೆ ಹೆಚ್ಚು ಪ್ರಯೋಜನಕಾರಿ ಎಂಬ ನಿಲುವಿಗೆ ಅದೊಂದು ಪ್ರಮಾಣ. ನಮ್ಮಲ್ಲಿ ಹನುಮಂತನನ್ನು ವರ್ಣಿಸುವಾಗ ವಾಯುವೇಗ, ಮನೋವೇಗ ಎಂಬರ್ಥದಲ್ಲಿ ಚಿತ್ರಿಸಿದ್ದು, ಅವನನ್ನು ಸರ್ವಗ್ರಹವಿನಾಶಿನೇ ಎಂದಿರುವುದು, ಆ ದೇವತೆಯ ಚಾರಿತ್ರ್ಯ ಇವನ್ನೆಲ್ಲ ಉದಾಹರಣೆಗೆ ಗಮನಿಸಬಹುದು.
ಕಾಣಿಕೆ, ಹರಕೆ, ದಾನ ಇತ್ಯಾದಿಯ ಬಗ್ಗೆ
ತಂತ್ರಗಳಲ್ಲಿ ಒಂದು ವಿಧ ಕಾಣಿಕೆ ಅಥವಾ ದಾನ. ಪಾಶ್ಚಿಮಾತ್ಯ ತತ್ತ್ವಶಾಸ್ತ್ರವನ್ನು ಹಾಗೂ ಇತರ ವಿಜ್ಞಾನಶಾಖೆಗಳೆಲ್ಲದರ ಆಧಾರದಿಂದ ತಿಳಿದ ವಿಚಾರವೇನೆಂದರೆ, ಬದುಕಿನಲ್ಲಿ ಎಲ್ಲವೂ ಒಂದು ಕೊಡುಗೆ. ಪ್ರತಿಯೊಂದು ಕೊಡುಗೆಯ ಹಿಂದೆ ಮೌಲ್ಯ ಇರುತ್ತದೆ. ಬದುಕು ಕೊಡುಗೆಯನ್ನು ಕೊಟ್ಟು ಅದಕ್ಕೆ ಸಂಬಂಧಿಸಿದ ಮೌಲ್ಯವನ್ನು ಕಿತ್ತುಕೊಳ್ಳುತ್ತದೆ. ನಾವು ಪಡೆಯುವ ವಸ್ತು, ಪ್ರಯೋಜನಗಳನ್ನು ಹೊಂದಿಕೊಂಡು ಅದರ ಬೆಲೆ ಇರುತ್ತದೆ. ಅಂದರೆ  ಕಾಣಿಕೆ, ಹರಕೆ, ದಾನಗಳು ಹೊರಜಗತ್ತಿಗೆ ನಮ್ಮ ಕೃತಜ್ಞತೆ ಎಂಬರ್ಥದಲ್ಲಿ ಸಲ್ಲಿಕೆಯಾಗುತ್ತವೆ. ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಮೌಲ್ಯ ಎಂದರೆ ಹಣ ಎಂದೇನೂ ಆಗಿರಬೇಕಿಲ್ಲ. ಒಟ್ಟು ನಾವು ಧನ್ಯರಾಗಿರಬೇಕು. ದಾನಗಳನ್ನು ಬೇರೆ ಬಗೆಯಲ್ಲಿ ಕೊಡುವವರೂ ಇದ್ದಾರೆ. ಉದಾಹರಣೆಗೆ, ಪಶುಪಕ್ಷಿಗಳಿಗೆ ಮೇವು, ನೀರು ಕೊಡುವುದು, ಸಸ್ಯಗಳನ್ನು ಸಲಹಿ ಬೆಳೆಸುವುದು ಇತ್ಯಾದಿ. ಕರ-ಕಂದಾಯ, ತೆರಿಗೆ ಕೂಡಾ ಹಾಗೆಯೇ. ಪರರಿಗೆ ಮಾಡುವ ಸಹಾಯವೂ ಹಾಗೆಯೇ. ಜಗತ್ತಿನಲ್ಲಿ ನಮ್ಮ ಭಾಗವಿದೆ ಎಂಬ ತಿಳುವಳಿಕೆಯಿಂದ ಸೇವೆ, ಸಹಾಯ ಕೊಡುವುದು.
ಒಟ್ಟಿನಲ್ಲಿ ತಿಳಿದುಬರುವ ವಿಚಾರವೇನೆಂದರೆ, ಹೊರಜಗತ್ತು ನಮ್ಮ ಒಂದು ಉತ್ಪ್ರೇಕ್ಷೆ ಅಷ್ಟೇ. ಅದು ನಮ್ಮ ಭಾಗವೇ. ಎಲ್ಲಾ ನಕ್ಷತ್ರಗಳ ಎಲ್ಲಾ ಪಾದಗಳಲ್ಲಿ ಜರಗಿರುವ ನೂರೆಂಟು ಗುಣಧರ್ಮಗಳ ಸೃಷ್ಟಿಯೂ ನಮ್ಮದೇ. ನಮ್ಮಲ್ಲಿ ಯಾವ ಗುಣ ಇಲ್ಲವೋ ಅದನ್ನು ತಕ್ಷಣ ಅಳವಡಿಸಿಕೊಂಡರೆ ಹೊರಜಗತ್ತಿನಿಂದ ಅದನ್ನು ಬೆಳೆಸಲಿಕ್ಕಾಗಿ ಬರುವ ಕಷ್ಟವೊಂದು ಕೈತಪ್ಪುತ್ತದೆ. ಸತ್ಯಂ ವದ, ಧರ್ಮಂ ಚರ! ಔಂ ಶಾಂತಿಃ!
✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್