ಸತ್ಯ
ಬ್ರಹ್ಮಾಂಡದಲ್ಲಿ
ಬೆಳಗಲಾಗದ ಮಂದಿ
ಸೂರ್ಯನನ್ನು ಕಟ್ಟಿ ಹಾಕಿದರು
ನದಿಯನ್ನು ಮುಟ್ಟಿ
ಉದರಕ್ಕೆ ತಿರುಗಿಸಿದರು
ಸಮುದ್ರವನ್ನು ಮುಖಕ್ಕೆ ಹಾಯಿಸಿಕೊಂಡು
ತಾವೇ ಸಮುದ್ರ ಎಂದರು.
ಕುರುಡನ ವರ್ಣನೆಯಂತೆ
ಕಿವುಡನ ಮಾತಿನಂತೆ
ಆಚೆ ಈಚೆ ನೋಡದೆ
ಸತ್ಯಕ್ಕೆ ಬಾಗದೆ
ನುಡಿದದ್ದೇ ವೇದ
ನಡೆದದ್ದೇ ಹಾದಿಯೆಂದು ಸಾರಿ
ಪೀಠಕ್ಕೆ ಹಂಬಲಿಸಿಬಿಟ್ಟರು
ತಾವೇ ಪರಬ್ರಹ್ಮ ಎಂದು
ದಾಖಲೆಯನ್ನೂ ಕೊಟ್ಟರು.
ಆ ರಾಕ್ಷಸರಿಗೆ
ಲೋಕವಿಡೀ ನಕ್ಕದ್ದು
ತಿಳಿಯಲಿಲ್ಲ
ಪ್ರಪಂಚ ಅಣಕಿಸಿದರೂ
ಗೊತ್ತಾಗಲಿಲ್ಲ
ಸೂರ್ಯ ಬದಲಾಗಲಿಲ್ಲ
ನದಿ ಬಯಲಾಗಲಿಲ್ಲ
ಸಮುದ್ರ ಮೂತಿಯಾಗಲಿಲ್ಲ
ಆ ದುರುಳರು ಮಾತ್ರ
ಬರ್ಬರವಾಗಿ ಸತ್ತರು.
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment