ಶೋಧನೆ ಎಂದರೆ.....?!

ಶೋಧನೆ ಎಂದರೆ ಹುಡುಕುವುದು. ಶೋಧನೆಯನ್ನು ನಾವು ಎರಡು ರೀತಿಯಲ್ಲಿ ಮಾಡಬಹುದು. ಒಂದು ಬಾಹ್ಯಜಗತ್ತಿನಲ್ಲಿ. ಮತ್ತೊಂದು ಆಂತರಿಕ ಜಗತ್ತಿನಲ್ಲಿ. ಎರಡೂ ಒಗ್ಗೂಡಿದಾಗ ಜ್ಞಾನವು ಹೊಳೆಯುತ್ತದೆ.
ಜ್ಞಾನ ಸಾಧನೆಯಾಗುವುದು ಅಂತರಂಗದ ಶೋಧನೆಯಿಂದ. ಬಾಹ್ಯದಲ್ಲಿ ನಮ್ಮ ಇಂದ್ರಿಯಗಳು ಅನುಭವ ಪಡೆಯುತ್ತವೆ. ಅವಕ್ಕೆ ಜಗತ್ತಿನ ಪರಿಸರದಲ್ಲಿ ಬೋಧನೆ, ತರಬೇತಿ ಎಲ್ಲವೂ ಸಿಗುತ್ತಿರುತ್ತದೆ. ಅದರ ಇನ್ನೊಂದು ಮಗ್ಗುಲಲ್ಲಿ ಅಂದರೆ ಅಂತರಂಗದಲ್ಲಿ ಶೋಧನೆಯು ನಡೆಯುತ್ತದೆ. ಬಾಹ್ಯಕ್ಕೆ ತೆರೆದ ದೃಷ್ಟಿ ಮತ್ತು ಅಂತರಂಗಕ್ಕೆ ತೆರೆದ ದೃಷ್ಟಿ ಎರಡರ ಸಂಗಮದಿಂದ ಅಜ್ಞಾತವಾಗಿದ್ದ ಜ್ಞಾನವು ಜ್ಞಾತರೂಪಕ್ಕೆ ಬರುತ್ತದೆ. ನಮ್ಮ ಪೂರ್ವಜ್ಞಾನ ಹೊಸ ವಿಷಯಗಳನ್ನು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ನಮ್ಮ ದೇಹದ ಎಲ್ಲಾ ಅಂಗೋಪಾಂಗಗಳಿಗೂ, ಎಲ್ಲಾ ಜೀವಕಣಗಳಿಗೂ ಅನೂಹ್ಯ, ಅನಂತ, ಬೃಹತ್ ಬ್ರಹ್ಮಾಂಡಗಳ ಚೇತನದ ಚೈತನ್ಯವಿರುತ್ತದೆ ಹಾಗೂ ಅರ್ಥಪೂರ್ಣವಾದ ಸಿದ್ಧಿ, ವಿಶೇಷತರವಾದ ಸ್ಮೃತಿ ಇರುತ್ತದೆ.
ಬೋಧನೆಯಿಂದ ಲಭಿಸುವುದು ತರಬೇತಿ. ಆದರೆ ನಾವು ಇಂದ್ರಿಯಗಳ ಮೂಲಕ ಪಡೆಯುವ ಪಾಠ ಏನನ್ನು ಹೇಳುತ್ತದೆ? ಕಣ್ಣಿನ ಆಕಾರವನ್ನೊಮ್ಮೆ ಗಮನಿಸಿ. ಬಹುಕೋನಗಳಲ್ಲಿ ಅದು ವ್ಯಾಪಕವಾದದ್ದನ್ನೆಲ್ಲ ನೋಡುತ್ತಿದೆ! ಎಷ್ಟು ಹೊರಗೆ ತೆರೆದಿದೆಯೋ ಅಷ್ಟೂ ಒಳಗೆ ಗ್ರಹಿಕೆಯಿದೆ. ಅಷ್ಟೊಂದು ತಂತುಗಳಿವೆ, ವ್ಯವಸ್ಥೆಯಿದೆ. ಎಲ್ಲ ಪಂಚೇಂದ್ರಿಯಗಳೂ ಹಾಗೆಯೇ. ಹೊರಪ್ರಪಂಚ ಅರ್ಥವಾಗುವುದು ಒಳಗೆ ಅದೇ ಪ್ರಪಂಚವನ್ನು ಗ್ರಹಿಸಬಲ್ಲ ಜ್ಞಾನೇಂದ್ರಿಯಗಳೂ, ಪ್ರತಿಕ್ರಿಯಿಸುವ ಕರ್ಮೇಂದ್ರಿಯಗಳೂ ಇರುವುದರಿಂದ. ಇನ್ನು ನಮಗೆ ಡಿಕೋಡಿಂಗ್ ಮಾಡಲಾಗದ್ದು ಅರಿವಿಗೂ ಬರುವುದಿಲ್ಲ ಮತ್ತು ಅದನ್ನು ನಮ್ಮ ಪ್ರಪಂಚವೆನ್ನಲಾಗುವುದಿಲ್ಲ. ಅಂದರೆ ಅದು ನಮಗೆ ಅರ್ಥವಾಗುವುದೇ ಇಲ್ಲ ಹಾಗೂ ಅಂಥದ್ದಕ್ಕೆ ನಮ್ಮ ಪ್ರತಿಕ್ರಿಯೆಯೂ ಇರುವುದಿಲ್ಲ. ನಮ್ಮ ಬದುಕು ನಮಗೆ ಎಷ್ಟು ಅರಿವನ್ನು ನೀಡಿದೆಯೋ ಅದು ನಮ್ಮ ಒಳಗಿನ ಇಂದ್ರಿಯ ವ್ಯವಸ್ಥೆ ಮತ್ತು ಗ್ರಹಿಸುವ ಬುದ್ಧಿಯದ್ದು - ಹೊರಗೆ ಅದರದ್ದೇ ಆದ ವಿದ್ಯಮಾನ ಮಾತ್ರ. ಅಷ್ಟಕ್ಕೆ ಮಾತ್ರ ನಾವು ಕರ್ಮೇಂದ್ರಿಯಗಳಿಂದ ಪ್ರತಿಕ್ರಿಯಿಸುವುದು. ಅಂತರಂಗದ ಶೋಧ ಮತ್ತು ಬಹಿರಂಗದ ಶೋಧ ಇದಕ್ಕೆ ನೇರ ಸಂಬಂಧವಿದೆ. ಏಕೆಂದರೆ ಎಲ್ಲೆಡೆ ನಡೆಯುವುದು ಈ ಹನುಮದ್ವಿಕಾಸವೇ ಆಗಿರುತ್ತದೆ.
ಒಟ್ಟಿನಲ್ಲಿ ನಾನು ಹೇಳಹೊರಟಿದ್ದು, ಜ್ಞಾನವು ಲಭಿಸುವುದು ಬಾಹ್ಯದಲ್ಲಿ ಸಿಗುವ ಬೋಧನೆಯಿಂದಲಷ್ಟೇ ಅಲ್ಲ - ಅದು ಒಳನೋಟ ಅಥವಾ ಅಂತರಂಗದ ವಿವೇಕ, ವಿಚಾರಶಕ್ತಿ, ವಿವೇಚನೆ, ಶೋಧನೆಯಿಂದ. ಒಬ್ಬ ವ್ಯಕ್ತಿಯ ಜ್ಞಾನಕ್ಕೆ ಅನುಗುಣವಾಗಿ ಅನುಭವ ಹಾಗೂ ಅನುಭವಕ್ಕೆ ಅನುಗುಣವಾಗಿ ಪ್ರಮಾಣವು ಸಿಗುತ್ತದೆ. ನಮ್ಮ ಇಂದ್ರಿಯಗಳ ಗ್ರಾಹಕತ್ವ ಮತ್ತು ಅದರ ಒಳಗಿನ ವ್ಯಕ್ತಾವ್ಯಕ್ತ ಚೇತನ - ಚೈತನ್ಯಕ್ಕೆ, ಅಂತಃಪ್ರಜ್ಞೆಗೆ ವಂದಿಸೋಣ....

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್