ನಾವು ನಮ್ಮ ಸುತ್ತಲೂ ನಮ್ಮದೇ ಭೂತಕಾಲ ಮತ್ತು ಭವಿಷ್ಯತ್ಕಾಲವನ್ನು ನೋಡುತ್ತೇವೆ
ನಮಗೆ ಈ ಜಗತ್ತನ್ನು ಅನುಭವಿಸುವುದಕ್ಕೆ ನಮ್ಮ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ ಎಂಬ ಐದು ಜ್ಞಾನೇಂದ್ರಿಯಗಳು ಹಾಗೂ ಕ್ರಿಯೆಗಳಿಗಾಗಿ ವಾಕ್, ಪಾಣಿ, ಪಾದ, ಪಾಯು ಮತ್ತು ಉಪಸ್ಥ ಎಂಬ ಐದು ಕರ್ಮೇಂದ್ರಿಯಗಳು ಇರುವಂಥದ್ದು. ನಮ್ಮ ದೇಹ ಒಂದು ಅದ್ವಿತೀಯ ಸಾಧನವಾಗಿದೆ. ಈ ಲೇಖನದಲ್ಲಿ ನಾವು ನಮ್ಮ ಬಗ್ಗೆ ಸಮಗ್ರವಾಗಿ ನೋಡುವ ಪ್ರಯತ್ನ ಮಾಡೋಣ.
ನಮ್ಮ ದೇಹವೆಂಬ ಪಿಂಡಾಂಡವು ಬ್ರಹ್ಮಾಂಡದ ಮಾದರಿಯಲ್ಲಿದೆ. ನಾವು ಎಲ್ಲಾ ಇಂದ್ರಿಯಗಳನ್ನು ಬಳಸಿ ಪ್ರಪಂಚವನ್ನು ಅನುಭವಿಸುವಾಗಲೂ ಅದು ನಮ್ಮದೇ ಅನುಭವಪ್ರಪಂಚವಾಗಿರುತ್ತದೆ. ಆಧ್ಯಾತ್ಮಿಕವಾಗಿ ಮತ್ತು ಜ್ಯೋತಿಷ್ಯ ಅಂದರೆ ಆಸ್ಟ್ರೋನಮಿ ಆಧಾರದಲ್ಲಿ ನೋಡುವಾಗ ಎಲ್ಲಾ ನಮ್ಮ ಸುತ್ತಲ ಬಗೆಬಗೆಯ ವಸ್ತುಗಳು ಹಾಗೂ ಜೀವಿಗಳು ಸಮಸ್ತವೂ ಒಂದೇ ಮೂಲದ ನೂರೆಂಟು ಮುಖಗಳು ಎಂದು ಕಂಡುಬರುವುದಾಗಿದೆ. ವಿಕಾಸವಾದವು ಜೀವಜಗತ್ತು ಕ್ರಿಮಿಗಳ ಹಂತದಿಂದ ಈ ಭೂಮಿಯಲ್ಲಿ ಜೀವ ವಿಕಾಸವಾಗುತ್ತಾ ಬಂತು ಎನ್ನುತ್ತದೆ. ಭೌತಶಾಸ್ತ್ರವು ಸಣ್ಣ ಬೋಸಾನ್ ಕಣ ಸ್ಫೋಟಿಸಿ ಇಂದಿನ ವಿಶ್ವವಾಯಿತೆಂದು ಹೇಳುತ್ತದೆ. ಅವೆರಡನ್ನು ಬೇರೆಬೇರೆಯಾಗಿ ನೋಡದೆ ಒಟ್ಟಾಗಿ ನೋಡುವಾಗ ಕಣ ಸಿದ್ಧಾಂತದಲ್ಲಿ ಬೆಳಕಿನ ಕಣದ ಬಗ್ಗೆ ಹೇಳಿದಂತೆಯೇ ಈ ವಿಶ್ವವೆಂದರೆ ಚೈತನ್ಯದ ಕಣವು ಕಣ ಮತ್ತು ತರಂಗವೂ ಆಗಿರುತ್ತಾ ಕಂಪಿಸುತ್ತಲೇ ಇರುವಂಥದ್ದಾಗಿದೆ. ತನ್ನ ಎಲ್ಲಾ ಆಯಾಮಗಳಿಂದ ಅನೂಹ್ಯ ಬಗೆಯಲ್ಲಿ ಇದು ಕಂಪಿಸುತ್ತಲೇ ಇದೆ. ಆ ಆಂದೋಲನದಲ್ಲಿ ಚೈತನ್ಯವು ಬಿಂದುವಾಗಿದ್ದಾಗ ಶೂನ್ಯದಂತೆಯೂ, ವಿಸ್ತರಿಸಿದಾಗ ಒಂದು ಸಮಗ್ರ ಏಕತ್ವವಿರುವ ಸತ್ಯದಂತೆಯೂ, ಮತ್ತೆ ವಿಸ್ತಾರವಾಗುತ್ತಾ ಆಗುತ್ತಾ ಅನಂತದಂತೆಯೂ, ಮತ್ತೆ ಪುನಃ ಅದೇ ರೀತಿ ನಿರಂತರವಾಗಿ ಇರುತ್ತದೆ. ಇಲ್ಲಿ ವಿಶ್ವದ ಸ್ವರೂಪವು 0, 1, ∞ ಎಂಬ ಬಗೆಯಲ್ಲಿ ಪುನಃ ಪುನಃ ಹಿಂದು ಮುಂದು, ಮೇಲೆ ಕೆಳಗೆ, ಆಚೆ ಈಚೆ, ಭೂತ ಭವಿಷ್ಯತ್ತು ಈ ಯಾವುದೇ ದಿಕ್ಕುದೆಸೆಗಳ ಪ್ರತ್ಯೇಕತೆಯಿಲ್ಲದ ಚೈತನ್ಯದ ಕಂಪನ ಎನ್ನಬಹುದು. ಇದರಲ್ಲಿ ಒಂದು ಕಂಪನದ ಅವಧಿ ನಮ್ಮ ಕಣ್ಣಳತೆ ಮೀರಿದ ಮಿಲಿಯಾಂತರ ಜ್ಯೋತಿರ್ವರ್ಷಗಳು. ಒಂದು ಬೃಹತ್ ಅವಧಿಯಲ್ಲಿ ನಾಮರೂಪದಲ್ಲಿ ನಾವೆಲ್ಲರೂ ಭಿನ್ನ ಭಿನ್ನ ಎಂಬಂತೆ ವ್ಯಕ್ತಗೊಂಡಿದ್ದರೂ ಮೂಲತಃ ನಾವೆಲ್ಲರೂ ಒಂದೇ ಆಗಿರುವ ಸಮಗ್ರ ವಿಶ್ವಚೈತನ್ಯ ಅಂದರೆ ಪರಮಾತ್ಮ ಎಂಬುದನ್ನು ಇಲ್ಲಿ ಅರ್ಥಮಾಡಿಕೊಳ್ಳಬೇಕು. ಈ ಪರಮಾತ್ಮ ಅಥವಾ ವಿಶ್ವ ಅಥವಾ ಈ ಬ್ರಹ್ಮಾಂಡದ ಆಕಾಶವನ್ನು ಒಂದು ವೃತ್ತ, ಅಂದರೆ ಜ್ಯೋತಿಷ್ಯದ ಕ್ರಾಂತಿವೃತ್ತವಾಗಿ ಚಿತ್ರಿಸುವಾಗ ಅದರಲ್ಲಿ ನೂರೆಂಟು ನಕ್ಷತ್ರಪಾದಗಳು ಅಂದರೆ ನೂರೆಂಟು ವಿಭಿನ್ನ ದಿಕ್ಕುಗಳು ಅಥವಾ ಗುಣಗಳೆಂಬ ಡಿಗ್ರಿ, ದೃಷ್ಟಿಕೋನಗಳು ಬರುತ್ತವೆ. ಪ್ರಾಚೀನ ಖಗೋಳಶಾಸ್ತ್ರಜ್ಞ ವರಾಹಮಿಹಿರನು ತನ್ನ ಜ್ಯೋತಿರ್ವಿಜ್ಞಾನದ ಮೂಲಕ ಆಕಾಶಕಾಯಗಳ ಚಲನೆಯ ಬಗ್ಗೆ ಸಂಶೋಧಿಸಿ, ಗಣಿತಶಾಸ್ತ್ರದ ಮೂಲಕ ಕಾಲಗಣನೆಯ ಪದ್ಧತಿಯನ್ನು ಸಂಶೋಧಿಸಿ ಈ ವಿಶ್ವದ ಆಯಾಮಗಳನ್ನು ನಮ್ಮ ಲೆಕ್ಕಾಚಾರಕ್ಕೆ ಒಳಪಡಿಸಿ ಅಳತೆಮಾಡುವ ಕ್ರಮಗಳನ್ನು ತಿಳಿಸಿದ್ದನು. ಹೀಗೆ ನಾವು ದಿನ, ರಾತ್ರಿ, ಪಕ್ಷ, ಮಾಸ, ವರ್ಷ ಲೆಕ್ಕಾಚಾರದ ಮೂಲಕ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಎಂಬ ಪಂಚ ಅಂಗಗಳ ಮೂಲಕ ಲೆಕ್ಕ ಹಾಕಬಲ್ಲೆವು. ಈ ಬ್ರಹ್ಮಾಂಡಕ್ಕೆ ಯಾವುದನ್ನೂ ಹೊಸದಾಗಿ ಸೇರಿಸಲಿಕ್ಕಾಗಲೀ, ಬ್ರಹ್ಮಾಂಡದಿಂದ ಯಾವುದನ್ನೂ ಹೊರತೆಗೆಯಲಿಕ್ಕಾಗಲೀ ಸಾಧ್ಯವಿಲ್ಲ. ಇರುವುದನ್ನು ಹೊಸ ಬಗೆಯಲ್ಲಿ ಸಂಯೋಜಿಸಬಹುದು ಅಷ್ಟೇ. ವಿಶ್ವದ ಒಟ್ಟು ಚೈತನ್ಯವು ವಿಶ್ವವು 0, 1 ಹಾಗೂ ∞ ರೂಪದಲ್ಲಿ ಇರುವಾಗಲೂ ಸಮಾನವಾಗಿಯೇ ಇರುತ್ತದೆ. ಇದನ್ನು ನಾವು ವಿಜ್ಞಾನದಲ್ಲಿ Law of conservation of energy ಎನ್ನುತ್ತೇವೆ.
ಇನ್ನು, ನಮಗೆ ಇಷ್ಟೆಲ್ಲ ತಿಳಿಯಲು ಸಾಧ್ಯವಾಗಿದ್ದು ಹೇಗೆ? ಕಾರಣ, ನಮ್ಮ ಅನುಭವದ ಕೇಂದ್ರ ನಮ್ಮೊಳಗೆಯೇ ಇದೆ ಎನ್ನುವಂಥದ್ದು. ತಾನು ಎಂಬುದಕ್ಕೆ ಪ್ರತ್ಯೇಕ ಅಸ್ತಿತ್ವ ಇದೆಯಾ ಎಂದರೆ ಈ ಪಂಚಭೂತಗಳ ಪ್ರಪಂಚವನ್ನು ಬಿಟ್ಟು ದೇಹಕ್ಕೆ ಪ್ರತ್ಯೇಕ ಅಸ್ತಿತ್ವವೇ ಇಲ್ಲ. ಕ್ವಾಂಟಂ ಸಿದ್ಧಾಂತ ಇದನ್ನು ಸಾರುತ್ತದೆ. ನಾವು ನಮ್ಮ ಒಳಗಿನಿಂದ ಹೊರಗೆ ಮತ್ತು ಹೊರಗಿನಿಂದ ಒಳಗೆ ಚೇತನವು ಪ್ರವಹಿಸಲು ಮಾಧ್ಯಮವಾಗಿರುವುದರಿಂದ ನಮ್ಮ ಎಲ್ಲ ಜೀವಕೋಶಗಳು ಹಾಗೂ ಒಟ್ಟು ದೇಹ ಬದಲಾಗುತ್ತಲೇ ಇರುತ್ತದೆ. ಈ ಬದಲಾವಣೆ ನಿತ್ಯ ನಿರಂತರವೇ ಆಗಿದ್ದು, ನಮ್ಮ ಅಸ್ತಿತ್ವವು ನಮ್ಮ ಸುತ್ತಮುತ್ತಲಿನಿಂದ ನಾವು ಸೇವಿಸುತ್ತಿರುವ ಪರಿಶುದ್ಧ ಪಂಚಭೂತಗಳನ್ನು ಬಿಟ್ಟು ಪ್ರತ್ಯೇಕವಾಗಿ ಇಲ್ಲ. ಈ ಪ್ರಕ್ರಿಯೆಯಿಂದಾಗಿ ನಮ್ಮ ದೇಹವು ಸುಮಾರು ಮೂರು ತಿಂಗಳಿನಲ್ಲಿ ಮೊದಲಿದ್ದುದಕ್ಕಿಂತ ಪೂರ್ತಿಯಾಗಿ ಬದಲಾಗಿರುತ್ತದೆಯಂತೆ. ನಮ್ಮ ಸುತ್ತಮುತ್ತಲಿನ ಎಲ್ಲ ಪಂಚಭೂತಗಳನ್ನೊಳಗೊಂಡ ಸಕಲ ಚರಾಚರಗಳಲ್ಲೂ, ಅದರಾಚೆಗೆ ನಾವು ಕಲ್ಪಿಸಿಕೊಳ್ಳಬಹುದಾದ ಎಲ್ಲ ಕಲ್ಪನೆಗಳಲ್ಲೂ, ಅನಂತ ಬ್ರಹ್ಮಾಂಡಗಳ ಸರಣಿಯ ಎಲ್ಲೆಡೆಯೂ ನಾವೇ ರೂಪ ರೂಪಾಂತರವಾಗಿ ಇದ್ದೇವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ನಾಮರೂಪಗಳೆಲ್ಲವೂ ನಾವೇ ಎಂದ ಮೇಲೆ ನಾವೆಲ್ಲರೂ ಒಂದೇ. ಎಲ್ಲವೂ ಒಂದೇ. ಹಾಗಾದರೆ ಈ ವಿಭಿನ್ನತೆ ಏಕೆ ಬಂತು ನಮ್ಮ ನಡುವೆ ಎಂದಾಗ ಅದು ನಮ್ಮ ಸ್ಪೇಸ್‌ಟೈಮ್‌ನಲ್ಲಿ ನಾವು ಸಂಭವಿಸಿದ ಸಮಯ ಸಂದರ್ಭ ಅಂದರೆ ದೇಶಕಾಲ ಸ್ಥಿತಿಯಿಂದ ಬಂತು. ನಮ್ಮ ಎಲ್ಲರ ಸ್ಥಿತಿ ಬೇರೆಬೇರೆಯಾದದ್ದು ನಾವು ಸಂಭವಿಸಿದ ಸಮಯಗಳಲ್ಲಿ ವ್ಯತ್ಯಾಸವಿರುವುದರಿಂದ. ಎಲ್ಲ ಆಲೋಚನೆ, ಸುತ್ತಲಿನ ಎಲ್ಲವೂ, ಪಂಚಭೂತಗಳೂ, ಅಗಣಿತ ಬ್ರಹ್ಮಾಂಡಗಳೂ ನಾವೇ ಆಗಿರುವಾಗ ನಾವು ಕಣ್ಣು ತೆರೆದಾಗ ನೋಡುವುದಾಗಲೀ, ಪಂಚೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳಲ್ಲಿ ಅನುಭವಿಸುವುದಾಗಲೀ, ವರ್ತಿಸುವುದಾಗಲೀ ಅದು ಬೇರೆ ಯಾರೊಂದಿಗೂ ಅಲ್ಲ. ಅದು ರೂಪಾಂತರವಾದ ನಮ್ಮನಮ್ಮ ಜೊತೆಗೇನೆ ಅಲ್ಲವೇ? ನಾವು ನಮ್ಮ ಮೂಲಕ ನಮ್ಮ ಜೊತೆಗೇ ವರ್ತಿಸುವ ಅದ್ಭುತ ಪ್ರಪಂಚವಿದು. ನಾವು ಹೊರಗೆ ನೋಡುವುದು ಸ್ಪೇಸ್‌ಟೈಮ್‌ನ ಅಂತರವಿರುವ ನಮ್ಮನ್ನೇ ಅಂದರೆ ನಮ್ಮದೇ ಭೂತಕಾಲ ಅಥವಾ ಭವಿಷ್ಯತ್ಕಾಲವನ್ನೇ. ಅದು ಭೂತಕಾಲ ಮತ್ತು ಭವಿಷ್ಯತ್ಕಾಲ ಎಂದು ಬೇರ್ಪಡಿಸಿ ತರಂಗದಂತೆ ಆಂದೋಲನಗೊಂಡು ವಿಸ್ತರಿಸಿಕೊಳ್ಳುವುದೂ, ಕಣ್ಣು ಮುಚ್ಚಿಕೊಂಡು ಕಣದಂತೆ ವರ್ತಮಾನದಲ್ಲಿ ನಿಶ್ಚಲಗೊಳ್ಳುವುದೂ ನಾವೇ. ಇದರಿಂದಾಗಿ, ಶೋಧಕನಿಗೆ ಬದುಕು ಒಂದು ಮುಗಿಯದ ಅನಂತಪದ್ಮನಾಭನ ಸಂಪತ್ತಿನಂತೆ. ಅದು ಮುಂದೆ ಮುಂದೆ ಹೋದಷ್ಟೂ ಮತ್ತಷ್ಟು ಅಚ್ಚರಿಗಳೊಂದಿಗೆ ಬಗೆದಷ್ಟೂ ಮುಗಿಯದ ಸಂಪತ್ತು. ಸರ್ವಸ್ವವೂ ನಮ್ಮದೇ ರೂಪಾಂತರ ಹಾಗೂ ನಾವು ನಮ್ಮದೇ ಭೂತ ಮತ್ತು ಭವಿಷ್ಯತ್ಕಾಲವನ್ನು ಭೂಮ್ಯಾಕಾಶಗಳಲ್ಲಿ ಎಲ್ಲೆಲ್ಲೂ ನೋಡುತ್ತೇವೆ.
✍️ ಶಿವಕುಮಾರ ಸಾಯ 'ಅಭಿಜಿತ್'
Very nice info 👌
ReplyDelete