ಅಕಾಶದಲ್ಲಿ ಅಸ್ತಿತ್ವ

ಆಕಾಶದ ಬಗ್ಗೆ ನಾನು ಇವತ್ತು ಬರೆಯಲೇ ಬೇಕಿತ್ತು. ಅದು ಹೇಗೆ ನಮ್ಮ ಅಸ್ತಿತ್ವವು ಆಕಾಶದಲ್ಲಿದೆ ಎಂಬ ಬಗ್ಗೆ ಈ ಲೇಖನದಲ್ಲಿ ಬರೆದುಕೊಂಡಿದ್ದೇನೆ.
ಆಕಾಶವೆಂದರೆ ನಮ್ಮ ಇರುವಿಕೆಗೆ ಇರುವ ಸ್ಥಳಾವಕಾಶ. ವಸ್ತುಗಳು ಘನ, ದ್ರವ, ಅನಿಲ, ಪ್ಲಾಸ್ಮಾ - ಹೀಗೆ ವಿವಿಧ ರೂಪದಲ್ಲಿ ನಮಗೆ ಅನುಭವಕ್ಕೆ ಬರುತ್ತವೆ, ನಿಜ. ಆದರೆ ಎಲ್ಲಾ ವಸ್ತುಗಳ ಪರಮಾಣುವಿನ ಕಣದ ಆದಿಮೂಲಕ್ಕೆ ಹೋದಾಗ ವಿಜ್ಞಾನವು ಹೇಳುತ್ತಿರುವುದು ಏನನ್ನು ಎಂದರೆ ಈ ಭೌತಿಕ ಪ್ರಪಂಚದಲ್ಲಿ 99.99% ಬರೀ ಖಾಲಿ ಇದೆ ಎಂಬುದನ್ನು. ಹಾಗಾದರೆ ನಮಗೆ ಗೋಚರವಾಗುವ ವಸ್ತುಗಳಿಗೆ ವಿಭಿನ್ನ ಸ್ವರೂಪ ಬಂದದ್ದು ಈ ನೂರು ಶೇಕಡಾ ಖಾಲಿಯೊಳಗೆ ಇರಬಹುದಾದ ವಿಭಿನ್ನತೆಯಿಂದ, ಅಲ್ಲಿನ ಚಲಿಸುವ ಮತ್ತು ಚಲನೆಗೆ ಪ್ರೇರಿಸುವ ಕಾಯಗಳಿಂದ. ಸುಲಭವಾಗಿ ಹೇಳುವುದಿದ್ದರೆ ಅವು ಒಂದು ನಿಷ್ಪತ್ತಿಯ ಕಾಸ್ಮಿಕ್ ಚೈತನ್ಯ. ಕೇವಲ ಕಾರ್ಯಗಳ ಮೂಲಕವಷ್ಟೇ ಕಾಯಗಳು ವ್ಯಕ್ತವಾಗುತ್ತವೆ. ಅಲ್ಲದೆ, ಚಲನಶೀಲ ಮತ್ತು ಪರಿವರ್ತಿತವಾಗುವ ಪ್ರಕೃತಿಸ್ವರೂಪದ್ದು ಅದು. ಹಾಗಾಗಿ ಎಲ್ಲವೂ ಪ್ರತ್ಯೇಕವಾಗಿ ಇಲ್ಲದೇ ಈ ಆಕಾಶದಲ್ಲೇ ಇದೆ ಎನ್ನಬಹುದು. ಅಂದರೆ, ಚೈತನ್ಯಕ್ಕೆ ಪ್ರತ್ಯೇಕ ಅಸ್ತಿತ್ವ ಇಲ್ಲದ್ದರಿಂದ ನಾವು ಆಕಾಶ ಅಂದರೆ ಸ್ಪೇಸ್ ಮೇಲೆ ನಂಬಿಕೆಯಿಟ್ಟರೆ ಮುಗಿಯಿತು. ಅಸ್ತಿತ್ವ ಎನ್ನುವಂಥದ್ದು ಇರುವುದೇ ಈ ಸ್ಪೇಸ್‌ನಲ್ಲಿ. ಆ ಆಕಾಶ ಎಂಬುದು ಅಂತಹ ಖಾಲಿತನ ಅಂದರೆ ಅವಕಾಶ ಅಥವಾ ಸರ್ವಸ್ವದ ನಿರ್ಮಿತಿಯ ಮೂಲ ಮತ್ತು ಆಶ್ರಯತಾಣ. ನಾವು ಈ ಅಸ್ತಿತ್ವದ ನೂರಕ್ಕೆ ನೂರು ಪಾಲು ಕೂಡಾ ಆಕಾಶವನ್ನೇ ಕಾಣಬೇಕಾಗಿದೆ. ಎಲ್ಲಾ ಚೈತನ್ಯವೂ ಅದರೊಳಗೆಯೇ ಇರುವುದು. ಅವ್ಯಕ್ತತೆಯ ಬಾಹುಳ್ಯ ಅನಂತ. ಈ ಆಕಾಶತತ್ತ್ವವನ್ನು ನಾವು ತಿಳಿದು ಆಕಾಶದ ಬಗ್ಗೆ ಧ್ಯಾನಿಸಿದರೆ ಅದರೊಳಗಿರುವ ನಮ್ಮ ಸಂಪೂರ್ಣ ಅಸ್ತಿತ್ವವನ್ನು ನಾವು ರೂಪಿಸಿಕೊಳ್ಳಲು ಅವಕಾಶಗಳು ಹೆಚ್ಚುತ್ತವೆ. ನಮ್ಮ ಪಿಂಡಾಂಡ ಅಂದರೆ ದೇಹ ಹಾಗೂ ಅದಕ್ಕೆ ಬಾಹ್ಯ ಗೋಚರವಾಗುವ ಶರೀರ ಅದರದ್ದೇ ಪ್ರಪಂಚಶರೀರವದು. ನಾವು ಹೊರಹೊರಗೆ ದೂರದೂರ ನೋಡುತ್ತಾ ಹೋದರೂ, ಒಳಗೊಳಗೆ ನೋಡುತ್ತಾ ಹೋದರೂ ನಾವು ನೋಡುವುದು ಒಂದನ್ನೇ. ನಾವು ಬ್ರಹ್ಮವಸ್ತು ಎಂಬುದನ್ನು. ನಮ್ಮ ದಶೇಂದ್ರಿಯಗಳ ಮೂಲಕ ದಶದಿಕ್ಕುಗಳ ಅಸೀಮ ಆವರಣದಲ್ಲಿ ಉಸಿರಾಡುತ್ತಿರುವ ಮಹಾಪ್ರಾಣದ ಈ ಶರೀರವು ನಮ್ಮ ಧಾರಣೆ. ನಮ್ಮೊಳಗಿನ ಶರೀರದೊಳಗೆ ಆಕಾಶವೇ. ನಮ್ಮ ಹೊರಗಿನದು ನಾವೇ. ಆಕಾಶವೇ ಅದರ ತವರು. ವಿಜ್ಞಾನದ ಸರ್ವತತ್ತ್ವವು ನಮ್ಮ ಅನಂತತೆಯ ವೈಶಾಲ್ಯದ್ದಾಗಿದ್ದು, ಭೌತಶಾಸ್ತ್ರದಲ್ಲಿ ಈ ಬ್ರಹ್ಮಾಂಡವು ಅದರ ಶೂನ್ಯ ಆಯಾಮದಿಂದ ಸಿದ್ಧಿಸಿದ ಮಹಾಸ್ಫೋಟ ಅಥವಾ ಬಿಗ್ ಬ್ಯಾಂಗ್ ಎಂದಿರುವುದು ಈ ಬ್ರಹ್ಮವಸ್ತುವಿನಿಂದಾಗಿರುವ ಬ್ರಹ್ಮಾಂಡವನ್ನೇ. 
ಆಕಾಶ ಎಂಬುದು ಅಂತಹ ಪರಮಾದ್ಭುತ ತತ್ತ್ವವಾಗಿದೆ. ಅದು ನಿರಾಕಾರ, ನಿರ್ಗುಣ. ಅದಕ್ಕೆ ರೂಪವೇ ಇಲ್ಲ. ಎಲ್ಲ ರೂಪಗಳನ್ನು ಅದು ಮೀರಿದ್ದು  ಮತ್ತು ನಾಮರೂಪವು ಅದರೊಳಗಿನ ವ್ಯಕ್ತತೆ. ರೂಪಗಳು ಗೋಚರವಾಗುವುದು ಕೂಡಾ ಅದರಲ್ಲೇ.
ನಮ್ಮ ಸನಾತನ ಋಷಿಗಳು ಬೇರೇನೂ ಮಾಡದೆ ತಪಸ್ಸು ಮಾಡಿದರು. ಪಂಚಯಜ್ಞಗಳೆಂದರೆ ಏನೇನು ಎಂದು ನುಡಿದರು. 'ನಾನು' ಎಂದರೆ 'ಬ್ರಹ್ಮ' ಎಂಬ ವಿಚಾರವನ್ನು ಕಂಡುಕೊಂಡರು. ಅವರಿಗೆ ಕಣ್ಣು ಮುಚ್ಚಿ ತಪಸ್ಸು ಮಾಡುವಾಗಲೂ ಈ ಬ್ರಹ್ಮಾಂಡ ಎಲ್ಲವೂ ಕಾಣಿಸತೊಡಗಿತು. ಕಣ್ಣು ತೆರೆದಾಗ ಅವರು ಬಾಹ್ಯಾಕಾಶದಲ್ಲೇ ದಿಗ್ದೇವತೆಗಳಿರುವರೆಂದು ಕೈಮುಗಿದರು. ಅವರಿಗೆ ದಶದಿಕ್ಕುಗಳ ಒಂದು ವರ್ತುಲವು ನಮ್ಮ ಇಂದ್ರಿಯಗಳಿಂದ ನಿರ್ಮಿತವಾದ ಒಂದು ಕಲ್ಪವೆನ್ನಲಾಗುವ ಕಾಲ್ಪನಿಕ ಪ್ರಪಂಚವೆಂದೂ, ನಾವು ನಮ್ಮ ಗುಣಗಳೊಂದಿಗೆ ರೂಪಿಸಲ್ಪಟ್ಟ ಗುಣೀಭೂತವಾದ ಪ್ರಪಂಚದಲ್ಲಿದ್ದೇವೆ ಎಂಬುದು ಸ್ಪಷ್ಟವಾಗಿ ಕಾಣಿಸಿತು. ತಪಶ್ಶಕ್ತಿಯಿಂದ ಅದು ಹೇಗಿರಬೇಕೋ ನಿರ್ಣಯಿಸುವುದು ಆಕಾಶದ ಅನುಗ್ರಹದಿಂದ ಸಾಧ್ಯವಾಗುತ್ತಿತ್ತು. ಉಪನಿಷತ್ತುಗಳಲ್ಲಿ ಬ್ರಹ್ಮವಸ್ತುವಿನ ಬಗ್ಗೆ ಅಥವಾ ವಿಜ್ಞಾನದಲ್ಲಿ ನೋಡಿದರೆ ದೇವಕಣದ ಬಗ್ಗೆ, ಗಣಿತದಲ್ಲಿ ಶೂನ್ಯದಲ್ಲೇ ಇರುವ ಅನಂತಸ್ವರೂಪದ ಬಗ್ಗೆ ಪೂರ್ವಜರು ವಿವರಿಸಿದ್ದರು. ವಿದ್ಯಾರಂಭದಲ್ಲಿ ಈ ಮೂಲತತ್ತ್ವವನ್ನು ಅರ್ಥಮಾಡಿಕೊಂಡು ನಾವು ಒಂದೇ ಬ್ರಹ್ಮಸ್ವರೂಪದ ಸಂಭವವು ಎಂದು ತಿಳಿದವನಿಗೆ ವಿದ್ಯೆ ಕಲಿಸಲಾಗುತ್ತಿತ್ತು. ನಾವು ವಿಭಿನ್ನವಾಗಿ ತೆರೆದುಕೊಂಡರೂ ನಮ್ಮ ವರ್ತಮಾನ, ಭೂತ, ಭವಿಷ್ಯತ್ ಕಾಲಗಳು‌, ದಶಾವತಾರದಂತಿರುವ ದಶದಿಕ್ಕುಗಳ ಪ್ರಪಂಚದ ಎಲ್ಲವೂ ಕೂಡಾ ನಾವು ವ್ಯಕ್ತವಾಗುತ್ತಿರುವ ಆಯಾಮಗಳು. ನಾವು ಇನ್ನೂ ಹಲವು ಕಂಡುಕೇಳಿರದ ಇಂದ್ರಿಯಗಳೊಂದಿಗೆ ವಿವಿಧ ಮೂಲವಸ್ತುಗಳಾಗಿಯೂ, ಯೌಗಿಕಗಳಾಗಿಯೂ ಈ ಬ್ರಹ್ಮಾಂಡದ ವಿವಿಧ ಕಡೆಗಳಲ್ಲಿ ಊಹಿಸಿದಂತೆ ತೆರೆದುಕೊಂಡವರೇ. ಆದರೆ ನಮ್ಮ ಮೂಲ ಆಯಾಮ ಶೂನ್ಯ ಅಥವಾ Zero dimension ಅಥವಾ ಬ್ರಹ್ಮವಸ್ತು ಎನ್ನುವ ಆಯಾಮ. All in one ಹಾಗೂ one in all ಎರಡೂ ಸರಿಯೇ. ದೂರ ಚಲಿಸುತ್ತಾ ವಿಸ್ತಾರವಾಗುತ್ತಿರುವ ಬ್ರಹ್ಮಾಂಡವನ್ನು ನಾವು ಅನಂತವಾಗಿ ಕಲ್ಪಿಸಿಕೊಳ್ಳುತ್ತೇವೆ. ಈ ಅನಂತದಲ್ಲಿ ಇರುವುದು 'ಏನೂ ಇಲ್ಲ' ಎನ್ನುವುದೇ ಹಾಗೂ 'ಏನೂ ಇಲ್ಲ' ಎಂಬುದರಲ್ಲೇ ಅದು ಇರುವಿಕೆಯನ್ನು ಹೊಂದಿದೆ. ನಾವು ಎಷ್ಟು ವಿಸ್ತರಿಸಿಕೊಳ್ಳುತ್ತೇವೋ ಅದು ನಮ್ಮ ಇಂದ್ರಿಯಗಳ ನಿರ್ಮಿತವಾದ ಬ್ರಹ್ಮಾಂಡದ ಸ್ವರೂಪ. ಮತ್ತೂ ಆಚೆಗೆ ಕಾಲ್ಪನಿಕ. ಕಾಲ್ಪನಿಕತೆಯೇ ಬೃಹತ್ ಮತ್ತು ಅದು ಅನಂತ ಹಾಗೂ ಅದರ ಕಾಲ್ಪನಿಕ ಕೇಂದ್ರವು ನಮ್ಮೊಳಗಿನ ಆದಿಮೂಲವಾಗಿದೆ. ಅದು ಪೂರ್ಣತಃ ಆಕಾಶ ಮತ್ತು ಅದರಲ್ಲೇ ಎಲ್ಲವೂ ಇರುವುದು. ಅಂದರೆ ನಾವು ಇರುವುದು 'ಏನೂ ಇಲ್ಲ' ಎಂಬುದರಲ್ಲಿ. ಎಲ್ಲ ಸಾಧ್ಯತೆಗಳೂ ಇರುವುದು ಆಕಾಶದಲ್ಲಿ. ಏಕೆಂದರೆ ಅಲ್ಲಿ ಖಾಲಿಯಿದೆ. ನಮ್ಮ ಅಸ್ತಿತ್ವವನ್ನು ನಾನೇನೂ ನಿರಾಕರಿಸುತ್ತಿಲ್ಲ. ಆದರೆ ಅದರ ಮೂಲ ಸ್ವರೂಪದ ಸೊಗಸನ್ನು ವಿವರಿಸುತ್ತಾ ಅಸ್ತಿತ್ವವನ್ನು ಶಕ್ತಿಶಾಲಿಯಾಗಿಯೂ ಸವ್ಯಸಾಚಿಯಾಗಿಯೂ ಪ್ರಕಟಪಡಿಸುತ್ತಿದ್ದೇನಷ್ಟೇ. ಒಳ ಹೊರಗು ಎಂಬುದಿಲ್ಲದ ಈ ಆಕಾಶವು ನಮ್ಮನ್ನು ಸದಾ ಅನುಗ್ರಹಿಸಿ ಉಳಿದೆಲ್ಲವುಗಳ ಸಾರಭೂತ ನಿಷ್ಪತ್ತಿಯನ್ನು ನಿರ್ಣಯಿಸಿ ನಮ್ಮ ಪ್ರಪಂಚವನ್ನು ಕಾಪಾಡುತ್ತಿರುವುದು. ಋಗ್ವೇದದಲ್ಲಿ ಬರುವ 'ನಾಸದೀಯ ಸೂಕ್ತ' ಎಂಬ ಸೂಕ್ತವೊಂದರಲ್ಲಿ ಸೃಷ್ಟಿಯ ರಹಸ್ಯದ ವಿಚಾರವು ಇದೇ ಬಗೆಯಲ್ಲಿ ವರ್ಣಿಸಲ್ಪಟ್ಟಿದ್ದು, ನಾಸದೀಯ ಸೂಕ್ತವನ್ನು ಸೃಷ್ಟಿಯ ಸೂಕ್ತವೆಂದೇ ಆಧುನಿಕರು ಕರೆದಿರುವುದು ಗಮನಾರ್ಹ ಸಂಗತಿ.
ನಾವೇ ಬ್ರಹ್ಮವು; ನಾವೇ ನಮ್ಮ ಕರ್ತಾರರು!
ನಾವು ಒಂದೇ ( 1) ; ಒಂದಾನೊಂದು ಕಾಲದಲ್ಲಿ ಅದೇ ದೇವಕಣ, ಕ್ವಾಂಟಂ ಸಿದ್ಧಾಂತದಂತೆ ಅದು ಸಂಪೂರ್ಣ ಚೈತನ್ಯವನ್ನು ತನ್ನೊಳಗೆ ಗರ್ಭೀಕರಿಸಿಕೊಂಡ ಖಾಲಿತನ. ( 0); ಹಾಗೆಯೇ ಎಲ್ಲ ಕಣಗಳಾಗಿ, ಅದೇ ಉತ್ಪ್ರೇಕ್ಷಿತ. ಅದರ ವ್ಯಾಪ್ತಿ ಅನಂತ ವಿಸ್ತಾರ! (8) ಹಾಗಾಗಿಯೇ 108ನ್ನು ದೇವರ ಸಂಖ್ಯೆ, ಬ್ರಹ್ಮಾಂಡದ ಸಂಖ್ಯೆ, ಏಂಜೆಲ್ ನಂಬರ್ ಎಂದೆಲ್ಲಾ ಕರೆಯುವುದು.
ಆಕಾಶಕ್ಕೆ ಕೈಮುಗಿಯುವುದರಿಂದಾಗುವ ಪ್ರಯೋಜನವೇನು?
ಆಧ್ಯಾತ್ಮಿಕವಾಗಿ, ಆಕಾಶಕ್ಕೆ ಕೃತಜ್ಞತೆಯಿಂದ ಕೈಮುಗಿಯುವುದರ ಪ್ರಯೋಜನ ಅದ್ಭುತವಾದುದು ಎನ್ನಲಾಗುತ್ತದೆ. ನಮ್ಮ ಇಂದ್ರಿಯಗಳು ಸಹಜವಾಗಿ ಖಾಲಿಯಾದದ್ದರಲ್ಲಿ ಸಕ್ರಿಯವಾಗುವ ಸ್ವಭಾವದ್ದು. ಆಕಾಶಕ್ಕೆ ನಮಸ್ಕರಿಸುವಾಗ ಆ ಬ್ರಹ್ಮಾಂಡದ ಖಾಲಿ ನಮಗೆ ಕಾಣುವುದರಿಂದ ನಾವು ಸಹಜವಾಗಿ ಅಲ್ಲಿ ತುಂಬಿಕೊಳ್ಳುವಂತೆ ನಮ್ಮ ಚೇತನವು ಸಕ್ರಿಯವಾಗುತ್ತದೆ. ಆಗ ನಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಹಾಗೂ ಅವಕಾಶಗಳು ತೆರೆದುಕೊಳ್ಳುತ್ತವೆ. ನಮ್ಮ ದೃಷ್ಟಿ ಮತ್ತು ಸೃಷ್ಟಿ ಇರುವುದು ಎಲ್ಲವೂ ಆಕಾಶದಲ್ಲೇ. ಇದರಿಂದ ನಮ್ಮ ಬದುಕಿನಲ್ಲಿ ಅವಕಾಶಗಳು ಗೋಚರಿಸತೊಡಗುತ್ತವೆ.
'ದೃಷ್ಟಿ ಬದಲಿಸು, ದೃಶ್ಯ ಬದಲಾದೀತು' ಎಂಬ ಮಾತಿದೆ. ಪರಿಸ್ಥಿತಿಯು ಅದನ್ನು ನೋಡುವ ದೃಷ್ಟಿಕೋನದಲ್ಲಿದೆ. ಅವಕಾಶ ನಮ್ಮಲ್ಲೇ ಆರಂಭವಾಗುತ್ತದೆ. ಆಕಾಶವೂ ಕೂಡಾ ನಮ್ಮಲ್ಲೇ ಅದು ಆರಂಭವಾದದ್ದು. ಅವಕಾಶವೆಂದು ತಿಳಿದು ಮುನ್ನುಗ್ಗಿದರೆ ಅವಕಾಶವೇ ತೋರುತ್ತದೆ ಮತ್ತು ಅವಕಾಶ ಹೆಚ್ಚಾಗುತ್ತದೆ. ಬಾಳಿನ ಪ್ರತಿಕ್ಷಣವನ್ನು ಬಾಳು ನೀಡಿದ ಅವಕಾಶವಿದು ಎಂದು ಅರಿತು ತಕ್ಷಣ ಸ್ವೀಕರಿಸುವ ಸೂಕ್ಷ್ಮತೆ ನಮಗಿರಲಿ. ಇದೇ ವಿಕಾಸದ ಸಾಧನ.
ನಾವು ಸತ್ಯ ಮತ್ತು ವಿವೇಕದ ಮೇಲೆ ಅವಲಂಬಿಸಿರಬೇಕು. 'ಸತ್ಯಂ ವದ, ಧರ್ಮಂ ಚರ'. ಸತ್ಯವು ಒಂದು ಅರಿವು. ಸತ್ಯ ಹೇಳತಕ್ಕದ್ದು ಮತ್ತು ವಿಹಿತವೆನಿಸಿದ್ದನ್ನು ಮಾಡತಕ್ಕದ್ದಾಗಿದೆ.

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್