ಕ್ವಾಂಟಮ್ ಭೌತಶಾಸ್ತ್ರ ಮತ್ತು ಭಾರತೀಯ ತತ್ತ್ವಶಾಸ್ತ್ರ

ಭೌತಶಾಸ್ತ್ರದಲ್ಲಿ ಜಗತ್ತಿನ ಎಲ್ಲ ವಸ್ತುಗಳಲ್ಲಿರುವ ಕಣದ ಸ್ವರೂಪ, ಶಕ್ತಿಯ ಬಗ್ಗೆ ಅಧ್ಯಯನ ಮಾಡುವುದಕ್ಕೆ ಕ್ವಾಂಟಮ್ ಭೌತಶಾಸ್ತ್ರ ಎನ್ನುತ್ತಾರೆ. ಆಧುನಿಕ ಭೌತಶಾಸ್ತ್ರದ ಇತ್ತೀಚೆಗಿನ ಅಧ್ಯಯನಗಳು ಕ್ವಾಂಟಮ್ ಮೆಕ್ಯಾನಿಕ್ಸ್ ಬಗ್ಗೆ ತೃಪ್ತಿಕರ ವಿವರಣೆ ನೀಡುವಲ್ಲಿ ಯಶಸ್ವಿಯಾಗಿವೆ. ಯಾವುದೇ ಒಂದು ಕಣ, ಇಲೆಕ್ಟ್ರಾನ್, ವಸ್ತು ಅಥವಾ ವ್ಯವಸ್ಥೆಯನ್ನು ನಾವು ಕಾಣುವುದು ಕೇವಲ ಮಾಯೆ. ವಾಸ್ತವವಾಗಿ ಕಣ ಇರುವುದಿಲ್ಲ ಅಥವಾ ಅದು ವ್ಯಕ್ತವಾಗುತ್ತಿರುವ, ಅನುಭವಕ್ಕೆ ಬರುವ ಒಂದು ವಿದ್ಯಮಾನ ಮಾತ್ರ. ಶಕ್ತಿಯು ಪ್ರವಹಿಸುತ್ತಲೇ ಇರುವುದರಿಂದ ಒಂದು ಕಣವು ವಿಶ್ವದ ಎಲ್ಲಾ ಕಣಗಳೊಂದಿಗೆ ಸಂಪರ್ಕದಲ್ಲಿರುತ್ತದೆ ಎನ್ನಲಾಗಿದೆ.
ಆಧ್ಯಾತ್ಮಿಕ ಪ್ರಕ್ರಿಯೆಯ ಮೂಲಕ ಸಾಧನೆ ಮಾಡುವುದಕ್ಕೆ ಅನುಭಾವ ಒಂದು ಆಧಾರ. ಆದರೆ ಅನುಭಾವವನ್ನು ವಿವರಿಸುವುದು ಕಷ್ಟ ಮತ್ತು ಅದನ್ನು ಅವೈಜ್ಞಾನಿಕವೆಂದು ತಿಳಿಯುವವರಿದ್ದಾರೆ. ಆದರೆ ಆಧುನಿಕ ಭೌತಶಾಸ್ತ್ರದ ತತ್ತ್ವಗಳು ಭಾರತೀಯ ತತ್ತ್ವಶಾಸ್ತ್ರ ಮತ್ತು ಆಧ್ಯಾತ್ಮಿಕ ಅನುಭವಗಳ ಮೂಲಕ ವಿಜ್ಞಾನಿಗಳು ಹೇಳಿಕೊಂಡ ವಿಷಯಗಳಾಗಿವೆ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ.
ಭೌತಶಾಸ್ತ್ರದಲ್ಲಿ, ಆರಂಭಿಕವಾಗಿ, ಜಗತ್ತಿನ ಎಲ್ಲ ವಸ್ತುಗಳೂ ಅಣುಗಳಿಂದ ಮಾಡಲ್ಪಟ್ಟಿವೆ; ಅಣುವಿನಲ್ಲಿ ಪರಮಾಣುಗಳು ಇರುತ್ತವೆ; ಪರಮಾಣುವಿನೊಳಗೆ ಧನಾತ್ಮಕ ಶಕ್ತಿ ಹೊಂದಿರುವ ಪ್ರೋಟಾನ್, ತಟಸ್ಥವಾಗಿರುವ ನ್ಯೂಟ್ರಾನ್ ನ್ಯೂಕ್ಲಿಯಸ್‌ನಲ್ಲಿದ್ದು, ಇಲೆಕ್ಟ್ರಾನ್ ಈ ನ್ಯೂಕ್ಲಿಯಸ್‌ನ ಸುತ್ತ ಸುತ್ತುತ್ತಿರುತ್ತದೆ ಎಂದು ಭಾವಿಸಲಾಗಿತ್ತು. ಇಲೆಕ್ಟ್ರಾನ್ ಬಗ್ಗೆ ಸಂಶೋಧನೆ ನಡೆಸಿದ ವಿಜ್ಞಾನಿಗಳು ಅದರೊಳಗೆ ಇನ್ನೂ ಚಿಕ್ಕ ವಸ್ತುವಿರುತ್ತದೆ ಎಂದು ಸಂಶೋಧಿಸಿ ಅದನ್ನು ಕ್ವಾರ್ಟ್ಸ್ ಎಂದು ಕರೆದರು. ಈ ಕ್ವಾರ್ಟ್ಸ್ ಗುರುತಿಸುವುದಕ್ಕೂ ಸಾಧ್ಯವಿಲ್ಲದಂತೆ ಅದರೊಳಗೆ ಎಲ್ಲವೂ ಖಾಲಿ ಖಾಲಿ. ಆದರೆ ಅದು ಕ್ವಾಂಟಮ್ ಎಂದು ಹೇಳಲಾಗುವ ಶಕ್ತಿಯನ್ನು ಹೊಂದಿದೆ. ಆದರೆ ಆ ಶಕ್ತಿಗೆ ನಿರ್ದಿಷ್ಟ ಸ್ಥಳ ಎಂಬುದಿಲ್ಲ. ಇದು ಕ್ವಾಂಟಮ್ ಭೌತಶಾಸ್ತ್ರದ ಮುಖ್ಯ ವಿಚಾರ.
ಕ್ವಾಂಟಮ್ ಸಿದ್ಧಾಂತಕ್ಕೆ ಸಂಬಂಧಿಸಿ ವಿಜ್ಞಾನಿಗಳು Quantum duality, Quantum superposition, Quantum entanglement ಎಂಬ ಮೂರು ತತ್ತ್ವಗಳನ್ನು ಪ್ರತಿಪಾದಿಸಿದ್ದಾರೆ.
Quantum Duality: ಇಲೆಕ್ಟ್ರಾನ್ ಕಣವೂ ಹೌದು, ತರಂಗವೂ ಹೌದು. ಎರಡೂ ರೀತಿ ಅದು ಇರುತ್ತದೆ ಎಂಬ ತತ್ತ್ವವನ್ನು Quantum duality ಎನ್ನುತ್ತಾರೆ.
Quantum superposition: ಇಲೆಕ್ಟ್ರಾನ್ ಪರಮಾಣುವಿನೊಳಗೆ ಎಷ್ಟು ವೇಗವಾಗಿ ತಿರುಗುತ್ತಿರುತ್ತದೆಯೆಂದರೆ, ನಾವು ಎಲ್ಲಿ ಬೊಟ್ಟು ಮಾಡಿ ತೋರಿಸುತ್ತೇವೋ ಅಲ್ಲಿ ಅದು ಇರುತ್ತದೆ ಎಂಬಂತೆ ಇಲೆಕ್ಟ್ರಾನ್ ಇರುತ್ತದೆ ಎಂದು ಹೇಳುವ ತತ್ತ್ವವೇ Quantum superposition ತತ್ತ್ವ. ಪರಮಾತ್ಮ ಅಲ್ಲಿಯೂ ಇದ್ದಾನೆ, ಇಲ್ಲಿಯೂ ಇದ್ದಾನೆ, ಎಲ್ಲೆಲ್ಲಿಯೂ ಇದ್ದಾನೆ ಎಂಬಂತೆ ಇಲೆಕ್ಟ್ರಾನ್ ಇರುತ್ತದೆ!
Quantum entanglement: ಈ ತತ್ತ್ವದ ಪ್ರಕಾರ, ಎರಡು ಇಲೆಕ್ಟ್ರಾನ್‌ಗಳು ಅದೃಶ್ಯ ಸಂಪರ್ಕದಲ್ಲಿದ್ದರೆ, ಎರಡು ವಸ್ತುವಿಷಯಗಳು ಅದೃಶ್ಯ ಸಂಪರ್ಕದಲ್ಲಿದ್ದರೆ ಎಷ್ಟೇ ದೂರವಿದ್ದರೂ, ತದ್ವಿರುದ್ಧ ಗುಣ ಹೊಂದಿರುವ ವಿಷಯಗಳಂತೆ  ವರ್ತಿಸುತ್ತಿರುತ್ತವೆಯಂತೆ.
ಕ್ವಾಂಟಮ್ ಸಿದ್ಧಾಂತ ಹೇಳುವುದು "Energy is matter, matter is energy". ಕಣದ ಹಿಂದಿನ ಶಕ್ತಿಯು ಸರ್ವವ್ಯಾಪಕ. ಹನ್ಸ್ ಪೀಟರ್ ಡ್ಯೂರ್ ಎಂಬ ವಿಜ್ಞಾನಿಯು " Matter is not made out of matter" ಅಂದರೆ "ಕಣ ಕಣದಿಂದ ಮಾಡಲ್ಪಟ್ಟೇ ಇಲ್ಲ. ಕೇವಲ ಚೈತನ್ಯ ಮಾತ್ರ ಇರುವುದು" ಎಂದು ಹೇಳಿದರು. ಶಂಕರಾಚಾರ್ಯರು ಅದ್ವೈತ ತತ್ತ್ವದಲ್ಲಿ ಜೀವಾತ್ಮ ಮತ್ತು ಪರಮಾತ್ಮ ಒಂದೇ. ಎಲ್ಲವೂ ಒಂದೇ ಆಗಿರುವ ಬ್ರಹ್ಮವೇ ಎಂದು ಉಪನಿಷತ್ತುಗಳ ಸಾರವನ್ನು ಸಾರಿದ್ದರು. ಹಾಗೆಯೇ ಭಗವದ್ಗೀತೆಯಲ್ಲಿ ಪರಮಾತ್ಮನ ಬಗ್ಗೆ ಹೇಳುತ್ತಾ " ಬಹಿರಂತಶ್ಚ ಭೂತಾನಾಂ ಅಚರಂ ಚರಮೇವ ಚ । ಸೂಕ್ಷ್ಮತ್ವಾತ್ತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ ತತ್ || " ಎಂದು ಹೇಳಲಾಗಿದೆ. ಏನೂ ಇಲ್ಲ ಎಂಬುದರಲ್ಲಿ ಎಲ್ಲವೂ ಇದೆ ಎಂದು ವಿಜ್ಞಾನಿಗಳು ಹೇಳುವಂತೆ ಸೂಕ್ಷ್ಮವಾಗಿ ಮತ್ತು ಅದೃಶ್ಯವಾಗಿ ಭಗವಂತನ ಶಕ್ತಿಯು ಅಡಗಿರುತ್ತದೆ. ಆದಿ ಶಂಕರಾಚಾರ್ಯರ "ಅಹಂ ಬ್ರಹ್ಮಾಸ್ಮಿ" ಎಂಬ ಹೇಳಿಕೆಯನ್ನು ಆ ಅರ್ಥದಲ್ಲಿ ಗ್ರಹಿಸಬಹುದು.
ವಿಜ್ಞಾನಿ ಜೆ. ಜೆ. ಥಾಮ್ಸನ್ ಇಲೆಕ್ಟ್ರಾನ್ ಕಣದ ರೂಪದಲ್ಲಿ ಇರುತ್ತದೆ ಎಂದು ಪ್ರತಿಪಾದಿಸಿದ್ದನು. ಆದರೆ ಅದಾದ ಮೂವತ್ತು ವರ್ಷಗಳ ಬಳಿಕ ಅವನ ಮಗ ಮತ್ತು ವಿಜ್ಞಾನಿ ಜಾರ್ಜ್ ಥಾಮ್ಸನ್ ಅವರು ಇಲೆಕ್ಟ್ರಾನ್ ಎಂಬುದು ಕಣವಲ್ಲ. ಇಲೆಕ್ಟ್ರಾನ್ ತರಂಗದ ರೂಪದಲ್ಲಿ ಇರುತ್ತದೆ ಎಂದು ಪ್ರತಿಪಾದಿಸಿದರು. ಆದರೆ  ವಿಜ್ಞಾನಿ ಶ್ರುಡಿಂಗರ್ ಅವರು ಇಲೆಕ್ಟ್ರಾನ್ ಸೂಪರ್‌ಪೊಸಿಶನ್ ತತ್ತ್ವವನ್ನು ಪ್ರತಿಪಾದಿಸಿದರು. ವಿಜ್ಞಾನಿ ವರ್ನರ್ ಹೈಸನ್‌ಬರ್ಗ್ ಅವರು ಇಲೆಕ್ಟ್ರಾನ್ ಎಂಬುದು ಅನಿಶ್ಚಿತ ಸ್ವರೂಪದಲ್ಲಿ ಇರುತ್ತದೆ. ಹೀಗೆಯೇ ಇರುತ್ತದೆ ಎನ್ನಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ವಿಜ್ಞಾನಿ ಮ್ಯಾಕ್ಸ್ ಪ್ಲಾಂಕ್ ಅವರು ಕ್ವಾಂಟಮ್ ಭೌತಶಾಸ್ತ್ರವೆಂದರೆ ಭಾರತೀಯ ತತ್ತ್ವಶಾಸ್ತ್ರವೇ ಹೊರತು ಬೇರೇನಲ್ಲ ಎಂದು ಹೇಳಿದರು. ವಿಜ್ಞಾನಿಗಳು matter, dark matter, dark energy, dark matter, antimatter ಹೀಗೆ ವಿವಿಧ ವಿಷಯಗಳ ಸಂಶೋಧನೆ ನಡೆಸುತ್ತಾ ಕ್ವಾಂಟಮ್ ಭೌತಶಾಸ್ತ್ರದಲ್ಲಿ ಮುನ್ನಡೆಯುತ್ತಲೇ ಇದ್ದಾರೆ. ಸಂಶೋಧನೆ ನಡೆಸಿದ ವಿಜ್ಞಾನಿಗಳು "ವಸ್ತು ಪ್ರಪಂಚದ ಎಲ್ಲ ಅಣು-ಪರಮಾಣುಗಳ 99.9999999% ಬರೀ ಖಾಲಿ ಇದೆ. ಏನೂ ಇಲ್ಲ" ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ, ವಿಶ್ವವು ಸಂಘಟಿತವಾದದ್ದು ಮತ್ತು ಶಕ್ತಿ ಅನಂತವಾದದ್ದು. ಎಲ್ಲ ಚರಾಚರಗಳು ನಿರಂತರ ಒಳಹೊರಗೆ ಚೈತನ್ಯದ ಪ್ರವಾಹದೊಂದಿಗೆ ಊಹಿಸಿದಲ್ಲಿಗೆ ಜೋಡಿಕೊಂಡಿರುತ್ತವೆ. ಹಾಗಾಗಿ ಕಣ, ವಸ್ತು ಎಂಬುದು ಕೇವಲ ಭಾಸವಾಗಿದ್ದು. ಅದರ ಹಿಂದಿನ ಚೈತನ್ಯ ಶಾಶ್ವತ ಮತ್ತು ಅನಂತ ಸ್ವರೂಪದ್ದು. ಯಾವುದೂ ಕೂಡಾ ಬೇರೆ ಬೇರೆಯಲ್ಲ. ಎಲ್ಲವೂ ಒಂದೇ ಮೂಲದ ಹಲವು ಮುಖಗಳು. ಇದೇ ವಿಷಯ ಭೌತಶಾಸ್ತ್ರದ ಕಾಸ್ಮಾಲಜಿ, ಮನಃಶಾಸ್ತ್ರದಲ್ಲಿ ಕಾಸ್ಮಸ್, ಅಧ್ಯಾತ್ಮದಲ್ಲಿ ಕಾಸ್ಮಿಕ್ ಎನರ್ಜಿ ಎಂಬ ಬಗೆಯಲ್ಲಿ ಚರ್ಚೆಯಾಗಿದೆ. ಪರಮಾತ್ಮ ಒಬ್ಬನೇ, ನಾಮ ಹಲವು ಎಂಬಂತೆ ಈ ಜಗತ್ತಿನಲ್ಲಿ ಹಲವು ಬಣ್ಣ, ಹಲವು ಬಗೆ. ನಿರಾಕಾರವಾಗಿರುವ ಬ್ರಹ್ಮವು ಅನಂತ ಸ್ವರೂಪದೊಡನೆ ಸಾಕಾರವೂ ಆಗಿರುವ ಅದ್ಭುತವಿದು. ಕ್ವಾಂಟಮ್ ಭೌತಶಾಸ್ತ್ರವೆಂದರೆ ಅದು ಭಾರತೀಯ ತತ್ತ್ವಶಾಸ್ತ್ರದ, ಅಧ್ಯಾತ್ಮದ ಜ್ಞಾನವೇ. "ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ" ಎಂದು ಪುರಂದರದಾಸರು ಹಾಡಿದ್ದು; ಪಿಂಡಾಂಡ ಮತ್ತು ಬ್ರಹ್ಮಾಂಡ ಒಂದೇ ಬಗೆಯಲ್ಲಿ ಇರುವುದು ಇವೆಲ್ಲ ನೋಡಿದರೆ, ಆಂಗ್ಲ ಕವಿ ಎಡ್ಗರ್ ಅಲನ್ ಪೋವೆ ಅವರು ತನ್ನ ಕವಿತೆಯಲ್ಲಿ "A dream within a dream is life" ಎಂದು ಹೇಳಿರುವುದು ಏಕೆ ಎಂಬುದು ಅರ್ಥವಾಗುತ್ತದೆ.
ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ಧ್ಯಾನ:-
ಯೋಗಶಾಸ್ತ್ರದಲ್ಲಿ ಕ್ವಾಂಟಮ್ ತತ್ತ್ವ ಪಾಲನೆಯಾಗುತ್ತದೆ. ಇಲ್ಲಿ ದೇಹದ ಒಳಗೆ ಹೋಗುತ್ತಾ ಅದನ್ನೇ ಅನಂತ ವಿಶ್ವವೆಂದು ಕಲ್ಪಿಸಿಕೊಳ್ಳಲಾಗುತ್ತದೆ. ಹಾಗಾಗಿ ಒಬ್ಬನೇ ಮನುಷ್ಯನಿಗೆ ಸಿದ್ಧಿಯಿಂದ ಏನನ್ನೂ ಮಾಡಬಹುದು, ಆಶೀರ್ವದಿಸಬಹುದು. ಪರಿಪೂರ್ಣವಾದ Quantum body ತನಕ ಮೇಲೇರಿ ತನ್ನ ಮತ್ತು ಬೇರೆಯವರ ರೋಗಗಳನ್ನು, ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು ಎಂದು ಕ್ವಾಂಟಮ್ ಹೀಲಿಂಗ್ ಪರಿಣಿತರು ಹೇಳುತ್ತಾರೆ. ಒಂದು ಪರ್ವತವನ್ನು ಏರಿಕೊಂಡು ಹೋಗಿ ಅದರಾಚೆ ಏನಾದರೂ ಮಾಡುವುದು ಸಾಮಾನ್ಯ ಮೆಕ್ಯಾನಿಕ್ಸ್. ಪವಾಡದಂತೆ ಪರ್ವತದಾಚೆ ಕ್ಷಣಮಾತ್ರದಲ್ಲಿ ಹೋಗಿ ಅದೃಶ್ಯಶರೀರದಿಂದ ಏನನ್ನಾದರೂ ಮಾಡುವುದು ಕ್ವಾಂಟಮ್ ಮೆಕ್ಯಾನಿಕ್ಸ್. ಪವಾಡಗಳು ಸಹಜ ಮತ್ತು ಸಂಭವ. ನಾವು ನಮ್ಮ ಅನಂತ ಚೈತನ್ಯದ ಔನ್ನತ್ಯದಿಂದ ಅನುಗ್ರಹಿಸಿದಾಗ ಮಾತ್ರ. ಏಕೆಂದರೆ matter is energy, energy is matter. ಹಾಗೆಯೇ energy is infinite! "ಯುಜ್ಯತೇ ಅನೇನ ಇತಿ ಯೋಗಃ" ಎಂಬ ಮಾತಿನಂತೆ ಎಲ್ಲವೂ ಸಂಪರ್ಕಸಹಿತ ಮತ್ತು ದೇಹವು ಕ್ವಾಂಟಮ್ ಮೆಕ್ಯಾನಿಕ್ಸ್ ಪ್ರಕಾರ ಪ್ರತಿಕ್ಷಣ ಪರಮಾತ್ಮನ ಪರಿಣಾಮ ಸ್ವರೂಪವಾದ ಪಂಚಭೂತಗಳೊಂದಿಗೆ ಜೋಡಿಸಲ್ಪಟ್ಟಿದ್ದು, ನಮ್ಮ ಚೈತನ್ಯದ ಅಸ್ತಿತ್ವವು ಸರ್ವಸ್ವದಿಂದ ಸಿದ್ಧಿಸಿರುತ್ತದೆ. ದೇಶ ಕಾಲಾತೀತವಾಗಿ ಚೈತನ್ಯದ ವಿವಿಧ ರೂಪಾಂತರಗಳೊಂದಿಗೆ ಅದು ಶಾಶ್ವತವಾಗಿ ಇರುತ್ತದೆ ಕೂಡಾ ಎನ್ನಬಹುದು.
✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್