ಆದರ್ಶ ಗುರು, ಆತ್ಮೀಯ ಸ್ನೇಹಿತ ಶ್ರೀ ಶೀನಪ್ಪ ನಾಯ್ಕ್ ಕುದ್ಕಲ್

ಜೀವನದಲ್ಲಿ ಕೆಲವು ಮಹಾತ್ಮರು ನಮಗೆ ಅಕಸ್ಮಾತ್ ಸಿಗುತ್ತಾರೆ. ತಮ್ಮ ಅಸಾಧಾರಣ ವ್ಯಕ್ತಿತ್ವ ಮತ್ತು ಆದರ್ಶ ನಡೆ-ನುಡಿಗಳಿಂದ ಪ್ರಜ್ವಲಿಸುತ್ತಾರೆ. ಅಂತಹ ಒಬ್ಬರು ಅಪರೂಪದ ಆದರ್ಶ ವ್ಯಕ್ತಿ ಶ್ರೀ ಶೀನಪ್ಪ ನಾಯ್ಕ್ ಕುದ್ಕಲ್.
ಶ್ರೀಯುತರು ಒಬ್ಬರು ಆದರ್ಶ ಕನ್ನಡ ಉಪನ್ಯಾಸಕರು ಎಂದು ಮನದುಂಬಿ ನಾನು ನನ್ನ ಖಾಸಗಿ ಬ್ಲಾಗ್‌ನಲ್ಲಿ  ಬರೆದುಕೊಳ್ಳುವಾಗ ನನ್ನ ಕಣ್ಣಾಲಿಗಳೇಕೋ ಭಾವಪೂರ್ಣವಾಗಿ ತೇವವಾಗುತ್ತಿವೆ. ನಾನು ಅಡ್ಯನಡ್ಕ ಜನತಾ ಪ್ರೌಢಶಾಲೆಗೆ ಅಧ್ಯಾಪಕನಾಗಿ ಸೇರಿದ ಸರಿಸುಮಾರು ಒಂದು ವರ್ಷದಲ್ಲಿ ಶ್ರೀಯುತ ಶೀನಪ್ಪ ನಾಯ್ಕರ ಪರಿಚಯವಾಗಿತ್ತು. ಅವರು ಜನತಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಹುದ್ದೆಯನ್ನು ಅಲಂಕರಿಸಿದ್ದರು. ಪುತ್ತೂರು ಫಿಲೋಮಿನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಭಾಷೆಯ ಬೆಳವಣಿಗೆ, ಕನ್ನಡ ಸಂಸ್ಕೃತಿಯ ಉಳಿವು, ವಿದ್ಯಾರ್ಥಿಗಳ ವ್ಯಕ್ತಿತ್ವದ ಸರ್ವತೋಮುಖ ವಿಕಾಸಕ್ಕಾಗಿ ನಿರಂತರ ಪರಿಶ್ರಮಿಸಿದ ಒಬ್ಬರು ಅಪ್ಪಟ ಆದರ್ಶ ವ್ಯಕ್ತಿ ಎಂಬ ಚಾರಿತ್ರ್ಯ ಇವರಿಗಿತ್ತು. ಹಲವಾರು ಸಾಹಿತ್ಯ ಸಮ್ಮೇಳನ, ಫೆಸ್ಟ್‌ಗಳಲ್ಲಿ ಇವರ ನಿರೂಪಣೆ ಆಕರ್ಷಕವಾಗಿರುತ್ತಿತ್ತು.
ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಇವರು ಕನ್ನಡ ಉಪನ್ಯಾಸಕರಾದ ಬಳಿಕ, ಸದ್ದಿಲ್ಲದೇ ಕನ್ನಡ ಉಳಿಸುವ ಕೈಂಕರ್ಯವನ್ನು ನಡೆಸುತ್ತಲೇ ಬಂದಿದ್ದಾರೆ. ಕಾಲೇಜಿನ ಯಾವುದೇ ಕಾರ್ಯಕ್ರಮಗಳಲ್ಲಿ ಇವರ ಸರಳ - ಸುಂದರ, ಪಾಂಡಿತ್ಯಪೂರ್ಣ ನಿರೂಪಣೆ ಆಕರ್ಷಕವಾಗಿರುತ್ತದೆ. ಇವರ ತರಗತಿಗಳೂ ಕೂಡ ಅಷ್ಟೇ ಸ್ವಾದಿಷ್ಟ ಮತ್ತು ರಸಮಯ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಡುತ್ತಾರೆ. ಏಕೆಂದರೆ ಆಳವಾದ ಅಭ್ಯಾಸ, ವಿಚಾರಶೀಲತೆ ಮತ್ತು ನಿಯತ್ತು ಇವರ ಕಾರ್ಯಗಳ ಜೀವಾಳ. ಇಂದು ಹಳೆಗನ್ನಡ ಎಂದರೆ ಕೆಲವರು ಮೂಗುಮುರಿಯುತ್ತಾರೆ. ಅಂಥದ್ದರಲ್ಲಿ ಶ್ರೀ ಶೀನಪ್ಪ ನಾಯ್ಕ್ ಅವರು ಹಳೆಗನ್ನಡವನ್ನೂ ಇಷ್ಟಪಟ್ಟು ಬೋಧಿಸುತ್ತಾರೆ. ಕನ್ನಡ ಸಾಹಿತ್ಯ ಚರಿತ್ರೆಯ ಎಲ್ಲ ಮಜಲುಗಳ ತಲಸ್ಪರ್ಶಿಯಾದ ಅಧ್ಯಯನ, ಕಾವ್ಯಮೀಮಾಂಸೆ, ವಿಮರ್ಶೆ ಮತ್ತು ಪ್ರಸ್ತುತ ಸಂದರ್ಭಕ್ಕೆ ಅನುಗುಣವಾಗಿ ಅದನ್ನು ಬೋಧಿಸಬಲ್ಲ ಪ್ರಭುತ್ವ, ಜಾಣ್ಮೆ, ಔಚಿತ್ಯದ ತಿಳಿವು ಮುಖ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಎಷ್ಟು ಮುಕ್ತವಾದ ವಾತಾವರಣವನ್ನು ಇವರು ನೀಡಿದ್ದಾರೆ ಎಂದರೆ ಗ್ರಂಥಾಲಯದ ಪುಸ್ತಕ ನೀಡಿಕೆಯ ವಹಿಯಲ್ಲಿ ಒಬ್ಬೊಬ್ಬ ವಿದ್ಯಾರ್ಥಿಗೂ  ಒಂದೊಂದು ಪುಟವನ್ನು ಮೀಸಲಿಟ್ಟಿದ್ದಾರೆ. ಗ್ರಂಥಾಲಯದ ಸದ್ಬಳಕೆಯಾಗಬೇಕು ಎಂಬ ಮಹದಾಸೆ ಇವರದು. ಗ್ರಂಥಾಲಯಕ್ಕೆ ತೆರಳಿದ ಸಂದರ್ಭಗಳಲ್ಲಿ ಅವರು ನನಗೂ ಪುಸ್ತಕ ಓದಲು ಕೊಟ್ಟು ಹೃದಯದ ಪ್ರೀತಿಯನ್ನು ತೋರಿದರು. ಪ್ರಸ್ತುತ ಸಂದರ್ಭದಲ್ಲಿ ಕನ್ನಡ ಭಾಷಾ ಬೋಧಕರು ಎದುರಿಸುವ ಸವಾಲುಗಳ ಬಗ್ಗೆ ನನಗೆ ನಿಜಕ್ಕೂ ಅರಿವಿದೆ. ಆದರೆ ಆ ಸಮಸ್ಯೆಗಳನ್ನು ಸವಾಲುಗಳಾಗಿ ಸ್ವೀಕರಿಸಿ ಮುನ್ನುಗ್ಗಬೇಕಲ್ಲ - ಆ ರೂಢಿ ಎಲ್ಲರಿಗೂ ಸುಲಭವಲ್ಲ.
ಶ್ರೀ ಶೀನಪ್ಪ ನಾಯ್ಕ್ ಅವರು ಕಾಲೇಜಿನ ಅನೇಕ ವಿದ್ಯಾರ್ಥಿಗಳ ಸಾಹಿತ್ಯ ಅಭಿವ್ಯಕ್ತಿಗಾಗಿ ಸಾಹಿತ್ಯ ಸಂಘದ ಸಂಯುಕ್ತ ಆಶ್ರಯದಲ್ಲಿ ಭಿತ್ತಿಪತ್ರಿಕೆಯಲ್ಲಿ ಮಕ್ಕಳ ಸೃಜನಶೀಲ ಬರಹಗಳನ್ನು ಪ್ರಕಟಿಸಿ ಪ್ರೋತ್ಸಾಹಿಸುತ್ತಾರೆ. ವಿದ್ಯಾರ್ಥಿಗಳಿಗೆ ಹಲವೆಡೆ ವೇದಿಕೆ ನೀಡುತ್ತಾರೆ. ವಾರ್ಷಿಕ ಸಂಚಿಕೆಗಳನ್ನು ಸಂಪಾದಿಸುವಲ್ಲಿಯೂ ಶ್ರಮಿಸಿದ್ದಾರೆ. ಇವರಿಂದ ಸಾಹಿತ್ಯದ ಪಾಠ ಕಲಿತ ಅನೇಕರು ಯುವ ಸಾಹಿತಿಗಳಾಗಿ ಮಿಂಚುತ್ತಿದ್ದಾರೆ. ಒಂದೇ ಒಂದು ದಿನ ಮಕ್ಕಳಲ್ಲಿ ಅವರು ರೇಗಾಡಿದ ಸಂದರ್ಭವನ್ನು ನಾನು ನೋಡಿಲ್ಲ. ಹಾಗಾಗಿ ಇವರೊಬ್ಬ 'ಮಿಸ್ಟರ್ ಕೂಲ್' ಉಪನ್ಯಾಸಕ, ಆದರ್ಶ ಗುರು.
ಮಕ್ಕಳ ಶಿಕ್ಷಣವು ಅವರ ಸಮಯ, ಆಯ್ಕೆಯ ಸ್ವಾತಂತ್ರ್ಯ, ತಾರ್ಕಿಕ ಆಲೋಚನೆಗಳನ್ನು ಕಸಿದುಕೊಂಡಾಗ ಬರುವುದಿಲ್ಲ. ಸ್ವತಂತ್ರ ಆಲೋಚನೆ, ಮುಕ್ತ ವಾತಾವರಣವನ್ನು ನೀಡುವುದರಲ್ಲಿ ಸಾಂಸ್ಥಿಕ ಅಭಿವೃದ್ಧಿ ನಿಂತಿರುತ್ತದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳನ್ನು ದೂರದೆ, ತಾನೇನು ಮಾಡಬೇಕೋ ಅದನ್ನು ಶ್ರದ್ಧಾಪೂರ್ವಕವಾಗಿ ಮಾಡಬಲ್ಲ ಶ್ರೀ ಶೀನಪ್ಪ ನಾಯ್ಕ್ ಕುದ್ಕಲ್‌ರವರ ಚಾಕಚಕ್ಯತೆ, ಪ್ರಾಮಾಣಿಕತೆ ಮತ್ತು ಕರ್ತವ್ಯಪರತೆ, ಕಾಳಜಿ ಅನುಸರಣೀಯ. ಕನಿಷ್ಠ ಪಕ್ಷ ಅವರ ಬಗ್ಗೆ ಇಷ್ಟನ್ನು ದಾಖಲಿಸುವ ಮೂಲಕವಾದರೂ ಧನ್ಯನಾಗಿದ್ದೇನೆ.
✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್