ಆ ಒಂಭತ್ತು ಸಂಗತಿಗಳು.......

ಎಲ್ಲರಿಗೂ ನಮಸ್ಕಾರಗಳು. ಈ ಒಂದು ಲೇಖನದಲ್ಲಿ ವಿಜ್ಞಾನದ ದೊಡ್ಡ ಸಿದ್ಧಾಂತಗಳು, ಜ್ಯೋತಿಷ್ಯ - ಮಂತ್ರ - ತಂತ್ರಗಳು, ಸಾಹಿತ್ಯ - ಕಲಾಪ್ರಿಯತೆ, ಅಧ್ಯಾತ್ಮ, ಯೋಗ ಮತ್ತು ಧ್ಯಾನ, ತತ್ತ್ವಶಾಸ್ತ್ರ, ಆನ್ವಯಿಕ ಮನಃಶಾಸ್ತ್ರ ಮುಂತಾದ ವಿಷಯಗಳ ಒಟ್ಟು ಅನುಭವವನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳಬಯಸುತ್ತೇನೆ. ಈ ವಿಷಯಗಳು ನನಗೆ ಬದುಕಿನ ಕೆಲವು ಹಂತಗಳಲ್ಲಿ ಆಸಕ್ತಿ, ಅನಿವಾರ್ಯತೆ ಮತ್ತು ಪ್ರಭಾವ ಬೀರಿದ ವಿಭಾಗಗಳು. ಅನುಭವಗಳು ವಿಕಸಿತವಾದಂತೆ ನನ್ನ ಅಧ್ಯಯನ ಅನಿವಾರ್ಯವಾಗತೊಡಗಿತು.
ಇತ್ತೀಚೆಗೆ ನನ್ನ ಜೊತೆ ಮಾತನಾಡುವ ಅನೇಕರು ಈ ರೀತಿಯ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾರೆ ಅಥವಾ ನನ್ನ ಚರ್ಚೆಗಳು ಆ ಬಗೆಯಲ್ಲಿ ಸಾಗುತ್ತವೆ ಎಂಬುದು ಹೆಮ್ಮೆಯ ಸಂಗತಿ. ಸಾಹಿತ್ಯ, ಸಂಗೀತ ಮತ್ತು ಇತರ ಕಲೆಗಳು ಲೋಕದ ಜೊತೆಗಿನ ನಮ್ಮ ಅಭಿವ್ಯಕ್ತಿಯ ವಿಧಾನಗಳಾದರೆ, ಅಧ್ಯಾತ್ಮ ನಮ್ಮೊಳಗಿನ ಮೂಲಸ್ವರೂಪದೊಂದಿಗೆ ಒಂದೇ ಆಗುವ ಪ್ರಕ್ರಿಯೆ. ಅಧ್ಯಾತ್ಮ ಒಂದು ಸಿದ್ಧಿ.
ವಿವಿಧ ಬಗೆಯ ವ್ಯಕ್ತಿಗಳೊಂದಿಗೆ ವರ್ತಿಸಿದ ಸಂದರ್ಭಗಳಿರಬಹುದು, ಸಂಗೀತ - ಸಾಹಿತ್ಯದ ನನ್ನ ಅಭಿವ್ಯಕ್ತಿಯೊಂದಿಗೆ ಹೆಸರು ಮಾಡುತ್ತಿದ್ದ ಆ ನನ್ನ ಬಾಲ್ಯ - ಹರೆಯದ ದಿನಗಳಿರಬಹುದು, ವಿಭಿನ್ನವಾಗಿ ಸಾಗಿತು. ನಮ್ಮ ಹೊರಗೆ ಅನುಭವಕ್ಕೆ ಬರುತ್ತಿರುವ ವಿಷಯ ನನ್ನ ಒಳಗಿನಿಂದಲೇ ಉತ್ಪ್ರೇಕ್ಷಿತವಾದ ವಿಷಯ ಎಂಬುದು ಜರುಗಿದ ಕೆಲವು ಘಟನೆಗಳಿಂದ ಅರಿವಾಯಿತು. ಹೀಗಾಗಿ ನನ್ನದೇನಿದ್ದರೂ ಜ್ಞಾನಾನುಭವವೇ. ಅದು ಪ್ರಯತ್ನಪೂರ್ವಕವಾಗಿ ಓದಿಕೊಂಡ ಪುಸ್ತಕದ ಬದನೆಕಾಯಿಯಲ್ಲ. ನಾನು ಎಲ್ಲವನ್ನೂ ಅನುಭವದ ಆಧಾರದಲ್ಲೇ ನೋಡುತ್ತಿದ್ದುದರಿಂದ ಪೊಳ್ಳು ಸಂಗತಿಗಳು ನನ್ನ ಮೇಲೆ ಪ್ರಭಾವ ಬೀರಲು ಸಾಧ್ಯವೇ ಇರಲಿಲ್ಲ. ಈ ಹಿನ್ನೆಲೆಯಲ್ಲಿ ನಾನು ಆಳವಾಗಿ ತಿಳಿದು ಬಳಸಿಕೊಂಡ ವಿಷಯಗಳು, ಹಲವು ಗುರುಗಳು, ಹಲವು ಮೂಲಗಳಿಂದ ಕಲಿತ ಮಹತ್ವದ ಸಂಗತಿಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ದಾಖಲಿಸಲು ಬಯಸುತ್ತಿದ್ದೇನೆ. ಏಕೆಂದರೆ ನಾನು ಇವತ್ತು ಉಸಿರಾಡುತ್ತಿರುವುದು ಈ ಸಿದ್ಧಾಂತಗಳ ಪ್ರಯೋಜನಕಾರಿ ಅಂಶಗಳ ಮೇಲೆಯೇ. ಇವುಗಳಲ್ಲಿ ನನ್ನ ಶಕ್ತಿಯನ್ನು, ಆತ್ಮವಿಶ್ವಾಸವನ್ನು, ಅನುಭವವನ್ನು ಹೆಚ್ಚಿಸಿದ ತತ್ತ್ವಗಳನ್ನು ಉಳಿಸಿಕೊಳ್ಳಲೇಬೇಕು. ಹಾಗೆಂದು ನಮ್ಮ ಶಕ್ತಿಯನ್ನು ಪರಿಮಿತ ಮಾಡುವ ರೀತಿಯ ವಿಭಾಗಗಳನ್ನು ಕೈಬಿಡಲು ಸಾಧ್ಯವಿದ್ದರೆ ಬಿಡುವುದು ಉತ್ತಮ.
ಸಾಹಿತ್ಯ ಮತ್ತು ಸಂಗೀತ - ಇವುಗಳು ಲೌಕಿಕ ಮತ್ತು ಅಲೌಕಿಕ ಎರಡು ಬಗೆಯ ಪ್ರಚೋದನೆಯಿಂದಲೂ ಹುಟ್ಟಬಹುದು. ನನ್ನ ಕವಿತೆಗಳಲ್ಲಿ ಅವೆರಡೂ ಇತ್ತು. ಆದರೆ ಅವೆರಡೂ ಬಗೆಯ ಅಭಿವ್ಯಕ್ತಿಯು ಸಹೃದಯನ ಜೊತೆಗಿನ ಸಂವಾದವಾದ್ದರಿಂದ ಲೌಕಿಕವನ್ನು ಈ ವಿಧಾನಗಳು ಹೆಚ್ಚು ನಂಬುತ್ತವೆ. ಭಾವನೆಗಳನ್ನು ಹೇಳಿಕೊಳ್ಳುವ ಚಪಲ ಹೆಚ್ಚಿದಾಗ ತನ್ನೊಳಗೆ ಒಂದಾಗುವ, ಮೌನ - ತಪಸ್ಸಿನ ಶಕ್ತಿ, ಅಂತರಂಗ - ಪರಮಾತ್ಮನ ಅನುಸಂಧಾನಕ್ಕೆ ಮಹತ್ವ ಕಡಿಮೆಯಾಗಬಹುದು. ಏಕೆಂದರೆ ಶಬ್ದ, ಮಾತು ಹೊರಮುಖವಾದ ತಲ್ಲೀನತೆಯಾದರೆ, ಮೌನ ಒಳಮುಖವಾದ ತಲ್ಲೀನತೆ. ಸಂಭಾಳಿಸುವ ಶಕ್ತಿ ಇರುವುದು ಮೌನಕ್ಕೆ.
ಮೌಲ್ಯದ ಕಾರಣಕ್ಕೆ ಸ್ವಭಾವೋಕ್ತಿಯೇ ಶ್ರೇಷ್ಠ - ಏಕೆಂದರೆ ಅದು ಇಲ್ಲದ್ದನ್ನು ಪರಿಣಾಮದಲ್ಲಿ ಕೊಡುವುದಿಲ್ಲ. ಅಪಪ್ರಯೋಗವಾಗುವುದಿಲ್ಲ. ಸ್ವಭಾವೋಕ್ತಿಯೇ ಶ್ರೇಷ್ಠ ಎಂಬುದನ್ನು ಆಲಂಕಾರಿಕರೂ ಹೇಳಿದ್ದಾರೆ. ಆದರೆ, ಕಲಾತ್ಮಕ ದೃಷ್ಟಿಯಿಂದ ನೋಡಿದರೆ, ಸ್ವಭಾವೋಕ್ತಿಯಲ್ಲಿ ಆಕರ್ಷಣೆಯಿರುವುದಿಲ್ಲ. ಇಲ್ಲೊಂದು ಖೇದದ ವಿಚಾರವಿದೆ. ಅದು ಸ್ವಾನುಭವದ್ದು. ಜನರು ಸುಖವನ್ನು, ಸಂತೋಷದ ಸಾಹಿತ್ಯಭಾಗವನ್ನು ಕಡಿಮೆ ಮೆಚ್ಚುತ್ತಾರೆ. ದುರಂತವನ್ನು, ದುಃಖವನ್ನು ರಂಜನೀಯವಾಗಿ ಹಂಚಿ ನೋಡಿ. ನೂರಾರು ಲೈಕುಗಳು ಬಂದಿರುತ್ತವೆ. ಅಂದರೆ ಸಾಮಾನ್ಯ ಜನರಿಗೆ ಸಹಜವಾಗಿ ನಾವು ಮಾಡಿಕೊಳ್ಳುವ ರಥೋತ್ಸವ ಇಷ್ಟವಾಗುವುದಿಲ್ಲ. ಅದೇ ನಮ್ಮ ಗಾಯದ ಕೀವು ಕಂಡರೆ ಇಷ್ಟವಾಗುತ್ತದೆ. ಅದಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕೇನು? ಅದು ಖಂಡಿತಕ್ಕೂ ಅವಶ್ಯವಿಲ್ಲ. ಏಕೆಂದರೆ ನಿಜವಾಗಿಯೂ, ಪಾಸಿಟಿವಿಟಿ ಪಾಸಿಟಿವಿಟಿಯನ್ನು ಆಕರ್ಷಿಸುತ್ತದೆ, ಸಂತೋಷವು ಸಂತೋಷವನ್ನು ಆಕರ್ಷಿಸುತ್ತದೆ ಎಂಬುದು ಮನೋವಿಜ್ಞಾನದ ಹೇಳಿಕೆ. ಅನುಭವವೂ ಕೂಡಾ. ಅದು ಫೋಕಸಿಂ‌ಗ್‌ಗೆ ಸಂಬಂಧಿಸಿದೆ. ಪ್ರಜ್ಞಾಪ್ರವಾಹ ನಡೆಯಬಾರದು. ಬುದ್ಧಿಪೂರ್ವಕವಾಗಿ, ವಿವೇಕಯುತವಾಗಿ ಮಾತು - ಕೃತಿ - ಆಲೋಚನೆಗಳನ್ನು ನಿರ್ದೇಶಿಸಬೇಕು. ಇದು ನನ್ನ ಒಂದು ಬಗೆಯ ಅನಿವಾರ್ಯ ತೀರ್ಮಾನವಾಗಿಬಿಟ್ಟಿತು. ಮನೋವಿಜ್ಞಾನದ ದೃಷ್ಟಿಯಿಂದ ನೋಡುವಾಗ ನೆಗೆಟಿವಿಟಿಯನ್ನು ಹಂಚಿಕೊಳ್ಳುವ ಅವಶ್ಯಕತೆ ಇಲ್ಲ. ಫೋಕಸಿಂ‌ಗ್‌ ಬದಲಾಯಿಸಬೇಕು ಅಷ್ಟೇ. ಏಕೆಂದರೆ ಪ್ರಜ್ಞೆಯ ಭಾಗವಾದ ವಿಷಯಗಳು ಉತ್ಪ್ರೇಕ್ಷಿತವಾಗಿ ಬದುಕಿನಲ್ಲಿ ಮೂಡಿಬರುತ್ತವೆ. ಈ ವಿಷಯ ಗಹನವಾದರೂ ಒಣ ಬಡಾಯಿಯಲ್ಲ. 
ಸಾಹಿತ್ಯ ಮೀಮಾಂಸೆಯ ಪಾಠಗಳಲ್ಲಿ, ಪಾಶ್ಚಾತ್ಯ ವಿಮರ್ಶೆಯಲ್ಲಿ ನೂರಾರು ಹೇಳಿಕೆಗಳಿವೆ. ಆದರೆ ನಾವು ಈ ಮೇಲೆ ತಿಳಿದುಕೊಂಡ ವಿಚಾರವೇ ಇದ್ದದ್ದಿಲ್ಲ. ಕವಿಯ ವ್ಯಕ್ತಿತ್ವ ಹಾಗೂ ಕವಿತೆಯ ವ್ಯಕ್ತಿತ್ವ ಎರಡೂ ಸಮಾನಾಂತರವಾಗಿ ವಿಕಾಸವಾಗಬೇಕು. ಹೀಗಾಗಿ ನನಗೆ ಅನುಭವವಾದಂತೆ ಮಾತು ಹಾಗೂ ಬರಹಗಳಲ್ಲಿ ಕಲಾತ್ಮಕತೆ, ರಂಜಕತೆಯನ್ನು ಬದಿಗಿರಿಸಿ, ನನ್ನ ಬದುಕಿನ ತಾಂತ್ರಿಕ ಭಾಗವಾಗುವಂತೆ ಬರೆದ ನುಡಿಗಳನ್ನು ಮಾತ್ರ ಹೆಚ್ಚಾಗಿ ಉಳಿಸಿಕೊಳ್ಳತೊಡಗಿದೆ. ನಮಗೆ ಹೊರಜಗತ್ತು ಯಾವಾಗ ಉತ್ಪ್ರೇಕ್ಷೆ ಎಂದು ಕಂಡಿದೆಯೋ ಆ ಬಳಿಕದಲ್ಲಿ ಬರವಣಿಗೆಯ ಹಾದಿಯೇ ವಿಭಿನ್ನವಾಗಿದೆ, ವಿಶಿಷ್ಟವೂ ಆಗಿದೆ. ಆಧ್ಯಾತ್ಮಿಕ ಪ್ರಕ್ರಿಯೆಗೆ ಮಹತ್ವ ನೀಡಲಾಗಿದೆ. ಅನಂತವಾದ ವಿಶ್ವದ ಆಯಾಮಗಳ ಬಗ್ಗೆ ಯೋಚಿಸುವಾಗ ತನ್ನ ಅಪಾರ ಸಾಧ್ಯತೆಗಳೊಂದಿಗೆ ಪ್ರಜ್ಞೆ, ಮನಸ್ಸು ವಿಶಾಲವಾಗುತ್ತಾ ಹೋಗುತ್ತದೆ. ಅಲ್ಲಿ ಅನುಭವ ಮುಖ್ಯವಾದದ್ದು. ಅದನ್ನು ಪರರಲ್ಲಿ ಹೇಳಿಕೊಳ್ಳುವುದು ನಿಜಕ್ಕೂ ನೆರಳುಗಳ ಜೊತೆ ಸಂವಾದಿಸಿದಂತೆ ಅಸಂಬದ್ಧವಾದುದು. ಏಕೆಂದರೆ 'ಬೇರೆಯವರು' ಎಂದರೆ ನಮ್ಮದೇ ವಿಭಿನ್ನ ಸ್ಪೇಸ್ - ಟೈಮ್ ಕೂಡುವಿಕೆಯಲ್ಲಿ ಹುಟ್ಟಿ ಕಾಣಿಸಿಕೊಂಡ ನಾವೇ. ನಮ್ಮ ಧರ್ಮ ಕರ್ಮ ಯೋಗಕ್ಕೆ ಸಂಪರ್ಕ ಆಗುತ್ತಿರುವ ಜನಗಳು, ವಸ್ತು, ವಿಷಯಗಳು. ಎಲ್ಲರ ಅರ್ಥಗ್ರಹಣದ ರೀತಿ ನೀತಿ ಒಂದೇ ಆಗಲು ಸಾಧ್ಯವೇ ಇಲ್ಲ. ನಮ್ಮ ಕೆಲವು ಅನುಭವಗಳನ್ನು ನಮ್ಮ ಜೊತೆಗಿನ ಸಹವಾಸಿಗಳಾದ ಈ ಭೂಮಿಯ ಜನರೊಂದಿಗೆ 'ನನಗೆ ಈ ಅನುಭವವಾಯಿತು' ಎಂದು ಹಂಚಿಕೊಳ್ಳಬಹುದು, ಅಷ್ಟೇ. ಆದರೆ, ಆಧ್ಯಾತ್ಮಿಕವಾಗಿ ವಿಸ್ತರಣೆಯಾದಾಗ ಮನಸ್ಸು ಎಷ್ಟು ವಿಸ್ತಾರವಾಗುತ್ತದೆ ಗೊತ್ತೇನು? ಅದು ಕೊನೆಯ ಆಯಾಮದಲ್ಲೇ ಆನಂದಿಸುತ್ತಿರುತ್ತದೆ. ಅದು ಯಾವುದೆಂದರೆ, 'ಅಹಂ ಬ್ರಹ್ಮಾಸ್ಮಿ', "Iam everywhere!" ಎಂಬ ಆಯಾಮ. ಇಲ್ಲಿನ "I" ಅಂದರೆ "ನಾನು" ಎಂಬುದು ಅಹಂ ಸೂಚಕವಾದ ಬಳಕೆಯಲ್ಲ. ಅಲ್ಲಿ ನಾನು - ನೀನು - ಅವರು - ಇವರು ಎಂಬರ್ಥ ಇಲ್ಲವೇ ಇಲ್ಲ. ಅನಂತದ ಎಲ್ಲವೂ ಒಂದೇ ಆಗಿರುವ ವಿಶ್ವಚೈತನ್ಯದ ನೆಲೆ. ಅದು ಪರಮಾತ್ಮನ ಮಟ್ಟ. ನಾವು ಹುಟ್ಟಿದ ನಕ್ಷತ್ರಕೋನ, ಸಮಯ, ಲಗ್ನ ನಮ್ಮ ಹುಟ್ಟು - ಸಾವನ್ನು ನಂಬಿ ಹೇಳಿದಂತಿದ್ದರೆ ಆ ಬಿಂದುಗಳೇ ಇಲ್ಲಿ ಇಲ್ಲ ಎಂಬಂತೆ, ಈ 360 ಡಿಗ್ರಿಗಳ ಕ್ರಾಂತಿವೃತ್ತದ ಎಲ್ಲ ನಕ್ಷತ್ರಗಳ ಎಲ್ಲ ಪಾದಗಳಲ್ಲಿ ಸಂಭವಿಸಿದ ಎಲ್ಲಾ ದೇಶ ಕಾಲಗಳ ಚರಾಚರಗಳೂ ನನ್ನದೇ ವಿಭಿನ್ನ ಅಭಿವ್ಯಕ್ತಿ ಎಂಬುದು ಆದಿಮೂಲದೊಂದಿಗೆ ಜೋಡಿಕೊಂಡಾಗ ಅರ್ಥವಾಗುವ ಸತ್ಯ. ಆಧ್ಯಾತ್ಮಿಕ ಅನುಭವ ಜ್ಯೋತಿಷ್ಯದ ಗ್ರಹಗಳೊಂದಿಗಿನ ಈ ಭೂಮಿಯ ಮಟ್ಟದಲ್ಲಿ ಮಾತ್ರವೇ ಇರುವುದಿಲ್ಲ. ಅನಂತದಲ್ಲಿ ಭೂಮಿಯೆಂಬ ಕಣಕ್ಕೆ ಗುರುತೇ ಇಲ್ಲ. ಅದು ಇರುತ್ತದೆ ಅಷ್ಟೇ. ನಮಗೆ ಕಾಣಿಸುವ ಈ ಸೌರವ್ಯೂಹ, ಇನ್ನು ಮೇಲೆ ಅಥವಾ ಆಳಕ್ಕೆ ಹೋಗಬೇಕಾದರೆ ಒಂದು ಕ್ರಮ ಮಾತ್ರ ಇದೆ. ಅದರ ಬಗ್ಗೆ ಈಗ ಮಾತಾಡೋಣ.
ಸಮಯದ ಹಿಗ್ಗುವಿಕೆ ಹಾಗೂ ಗುರು ದೃಷ್ಟಿ: ವಿಜ್ಞಾನಿ ಐನ್‌ಸ್ಟೈನ್ ಅವರು ಬಾಹ್ಯಾಕಾಶಕ್ಕೆ ಹೋದಂತೆ ಸಮಯದ ಹಿಗ್ಗುವಿಕೆಯಾಗುತ್ತದೆ ಎಂದು ಹೇಳಿರುವರು. ಅನಂತ ಎನ್ನುವಾಗ ಅಲ್ಲಿ ಚೈತನ್ಯ ಮಾತ್ರವಿದೆ. ಕೇಂದ್ರ ನಾವೇ ಏಕೆಂದರೆ ಅನುಭವ ನಮ್ಮದೇ. ಯಾವುದೇ ಎರಡು ವಸ್ತುಗಳ ನಡುವಿನ ಅಂತರವನ್ನು ಬೆಳಕಿನ ವೇಗದ ಅಂತರದಲ್ಲಿ ಹೇಳಲಾಗುವುದು. ಸೌರವ್ಯೂಹದ ಆಚೆ ಎಲ್ಲಿ ನಿಂತರೂ ಯಾವುದಾದರೂ ಒಂದು ಸೂರ್ಯ ಅಂದರೆ ನಕ್ಷತ್ರ ನಮ್ಮ ಹತ್ತಿರದ ನಕ್ಷತ್ರವಾದಾನು. ಹಾಗಿದ್ದರೂ ಒಂದು ಊಹಾತ್ಮಕ ಚಿತ್ರದಲ್ಲಿ ಈ ಗ್ಯಾಲಕ್ಸಿಯಲ್ಲಿ ಇರುವ ಎಲ್ಲ ನಕ್ಷತ್ರಗಳೂ ನಮ್ಮ ಆದಿಮೂಲದ ಗುಣಗಳ ಹರಡುವಿಕೆಯಾದ್ದರಿಂದ ಒಂದು ಕ್ರಮದಲ್ಲಿ ಅವು ಇರುತ್ತವೆ. ವಿಶಾಲ ಅರ್ಥದಲ್ಲಿ, ನಿಜವಾಗಿ ಬೆಳಕಿನ ಶಾಸ್ತ್ರವೇ ಜ್ಯೋತಿಷ್ಯ. ಅದು ಚೈತನ್ಯದ ಬಗ್ಗೆ ಹೇಳುತ್ತದೆ.
ಒಂದು ಕಾಗದದಲ್ಲಿ ಅಪಾರ ಚುಕ್ಕಿಗಳನ್ನು ಹಾಕಿಕೊಂಡು ಅದರ ಮಧ್ಯೆ ನಮ್ಮ ಅನುಭವಕೇಂದ್ರವನ್ನು ಕಲ್ಪಿಸಿಕೊಳ್ಳೋಣ. ನಾವಿರುವ ಬ್ರಹ್ಮಾಂಡ ಅದು ಎಂಬ ಊಹೆಯಿರಲಿ. ಸೂರ್ಯನನ್ನೂ ಒಳಗೊಂಡ ನಮ್ಮ ಭೂಮಿಯ ಅನುಭವಕೇಂದ್ರದಿಂದ ನಾವು ಕ್ರಾಂತಿವೃತ್ತವನ್ನು ಗುರುತಿಸಿಕೊಂಡು, ಅದನ್ನೇ ರಾಶಿಕುಂಡಲಿ ಮಾಡಿಕೊಂಡು, ಯಾವ ಡಿಗ್ರಿಯಲ್ಲಿ ಯಾವ ಆಕಾಶಕಾಯ ಅಂದರೆ ಗ್ರಹ ಇದೆ, ಎಲ್ಲಿ ಯಾವ ಕೋನ (ನಕ್ಷತ್ರಪಾದ, ದೃಷ್ಟಿಕೋನ, ಗುಣ) ಸಂಯೋಜಿಸಲ್ಪಟ್ಟಿದೆ ಎಲ್ಲವನ್ನೂ ಲೆಕ್ಕಾಚಾರ ಮಾಡುತ್ತೇವೆ. ನಾವು ಇವುಗಳಿಗೆ ಬಳಸುವುದು ಆಯಾಮವನ್ನು. ಇನ್ನು, ಮೇಲೆ ಮೇಲೆ ಹೋದಂತೆ ಸಮಯ ಎನ್ನುವುದೂ ಸ್ಥಳ ಎನ್ನುವುದೂ ಬೇರೆ ಬೇರೆ ಅಲ್ಲ. ಏಕೆಂದರೆ ಈ ಸೌರವ್ಯೂಹದ ಆಚೆ ನಮ್ಮ ಬ್ರಹ್ಮಾಂಡವನ್ನು ಒಂದು ವೃತ್ತದಲ್ಲಿ ಚಿತ್ರಿಸಿಕೊಂಡು ನೋಡುವ ಕಲ್ಪನೆಯಲ್ಲಿ ಸಮಯ ಸಂಪೂರ್ಣವಾಗಿ ಹಿಗ್ಗುವಿಕೆಗೆ ಒಳಗಾಗಿದೆ. ಐನ್‌ಸ್ಟೈನ್ ಅವರು ಇದನ್ನು ಸ್ಪೇಸ್ ಮತ್ತು ಟೈಮ್ ಎರಡನ್ನೂ ಒಂದು ಮಾಡಿ "ಸ್ಪೇಸ್ ಟೈಮ್" ಎಂದು ಕರೆದಿದ್ದಾರೆ. ಅದು ನಾವು ಹೇಳುವ ಸಮಯವೂ ಅಲ್ಲ, ನಾವು ಹೇಳುವ ಸ್ಥಳಾವಕಾಶ ಕೂಡ ಅಲ್ಲ. ಎಲ್ಲಾ ಆಯಾಮಗಳೂ ಬಂತು. ಈಗಲೂ ನಾವು 108ನ್ನೇ ಲೆಕ್ಕಾಚಾರಕ್ಕೆ ಬಳಸಬೇಕಾಗಿದೆ. ಯಾವುದು ನಮಗೆ ಅನೂಹ್ಯವೋ ಆಗ ಅದನ್ನು ಊಹಾತ್ಮಕವಾಗಿಸುವ ಒಂದೇ ಒಂದು ಮಾಪನ ಸದ್ಯ 108. ಈ ಸಂಖ್ಯೆಗೆ ಅಷ್ಟೊಂದು ದೈವಿಕತೆ, ಅಷ್ಟೊಂದು ಮಹತ್ವ ಎಲ್ಲವೂ ಇದೆ. ನಾನು ಹೇಳುತ್ತಿರುವುದು, ಇದೇ ಬ್ರಹ್ಮಾಂಡದಲ್ಲೇ ಇರುವ ಕೋಟ್ಯಂತರ ನಕ್ಷತ್ರಗಳನ್ನು ವೃತ್ತದಲ್ಲಿ ಹಾಕಿಕೊಂಡರೆ ಅವುಗಳ ಸಂಯೋಜನೆಯೂ ಕೂಡ ಗುಣಗಳ ಹಂಚಿಕೆಯಂತೆಯೇ ಆ ಬೆಳಕಿನ ನಮ್ಮದೇ ಚೈತನ್ಯದ ಕಾಲ್ಪನಿಕ ಆದಿಮೂಲದಿಂದ ಆಸ್ಫೋಟಿಸಿದೆ. ಹಾಗಾಗಿ ಅಲ್ಲೂ 108 ಕೋನಗಳು ಇವೆ. ಇನ್ನು, ಈ ಬ್ರಹ್ಮಾಂಡದಲ್ಲೇ ಕೋಟ್ಯಂತರ ಭೂಮಿಗಳೂ ಇವೆ. ನಾವು ಇಲ್ಲಿ ಇರುವ ಹಾಗೆ, ವಿಭಿನ್ನ ರೀತಿಯಲ್ಲಿ, ಊಹಿಸಿದಂತೆ ಎಲ್ಲೆಲ್ಲೂ ಇದ್ದೇವೆ. ಈ ಬ್ರಹ್ಮಾಂಡವನ್ನು ಒಂದಾಗಿ ಪರಿಗಣಿಸಿ, ಗುರು ದೃಷ್ಟಿಯಿಂದ ಮುಂದೆ ಸಾಗಿದರೆ ಅಂಥದ್ದೇ ಕೋಟ್ಯಂತರ ಗ್ಯಾಲಕ್ಸಿಗಳನ್ನು 108 ಕೋನಗಳಲ್ಲಿ ಹೊಂದಿರಬಹುದಾದ ವೃತ್ತ. ನಾವು ಹೇಗೆ ಹಿಗ್ಗುತ್ತಿದ್ದೇವೆ, ಊಹಿಸಿ! ಮತ್ತೆ ಅದೆಲ್ಲವನ್ನು ಒಂದಾಗಿ ಪರಿಗಣಿಸಿ ಗುರು ದೃಷ್ಟಿಯಿಂದ ಮುಂದೆ ಸಾಗಿದರೆ, ಮತ್ತೆ ಆ ಎಲ್ಲ ತೇಜಪುಂಜಮೊತ್ತಗಳ ಕೋಟ್ಯಂತರ ಮಾದರಿಯ ಬೃಹತ್ ವೃತ್ತ. ಅದಕ್ಕೂ ನೂರೆಂಟು ಕೋನಗಳು. ನಾವೀಗ ಅನಂತಕ್ಕೆ ಮುಂದುವರಿಯುತ್ತಿರುವುದು, ನಮ್ಮ ಪ್ರಜ್ಞೆಗೆ ಗುರು ದೃಷ್ಟಿಯಿಂದ ತೆರೆದುಕೊಂಡ ದಿಕ್ಕಿನಲ್ಲಿ. ಇದಕ್ಕೆ ನಾವು ಸಾಧನವಾಗಿ ಬಳಸಿಕೊಂಡದ್ದು ನಮ್ಮ ನೂರೆಂಟು ನಕ್ಷತ್ರಪಾದಗಳನ್ನು, ಅಂದರೆ ಕೋನಗಳನ್ನು ಸಂಕೇತಿಸುವ ಕ್ರಾಂತಿವೃತ್ತವನ್ನು ಹೊಂದಿರುವ ಹಾಗೂ ಒಂದು ಗುರು ಮಣಿಯೊಂದಿಗೆ ದೃಷ್ಟಿ, ದಿಕ್ಕು ನೀಡುತ್ತಿರುವ ಜಪಮಾಲೆಯನ್ನು.
ಸ್ನೇಹಿತರೇ, ನಾವೀಗ ಮುಂದೆ ಮುಂದೆ ಹೋದೆವಲ್ಲವೇ? ನಾವು ಹೋದಲ್ಲಿ ಮುಂದೆ ಹಿಂದೆ, ಮೇಲೆ ಕೆಳಗೆ ಏನಾದರೂ ಒಂದು ದಿಕ್ಕು ಇತ್ತಾ? ಖಂಡಿತ ಇರಲಿಲ್ಲ. ನಾವು ಭೂಮಿಯಿಂದ ಸ್ವಲ್ಪ ದೂರ ಹೋದ ಮೇಲೆ ಸಾಮಾನ್ಯ ದಿಕ್ಕುಗಳ ಪರಿಜ್ಞಾನ ಕೆಲಸ ಮಾಡಲಿಲ್ಲ. ಆಗ ನಮಗೆ ಗುರು ಮಣಿ ತೋರಿದ ದೃಷ್ಟಿಯೇ ದಿಕ್ಕು. ದಿಕ್ಕಿಗೆ ಎಷ್ಟೊಂದು ಬೆಲೆಯಿದೆ ನೋಡಿ. ಅದಿಲ್ಲದಿದ್ದರೆ ನಾವು ಖಂಡಿತವಾಗಿಯೂ ಇರುತ್ತಿರಲಿಲ್ಲ. ಜಪಮಾಲೆಯಲ್ಲಿ ಗುರು ಮಣಿಗೆ ಅಷ್ಟೊಂದು ಮಹತ್ವ ಇದೆ. ಅದು ನಮ್ಮನ್ನು ಅನಂತಕ್ಕೆ ತೆರೆದುಕೊಳ್ಳುತ್ತಾ ಮುಂದಕ್ಕೆ ಸಾಗುತ್ತಿರಲು, ನಮ್ಮ ಪ್ರಜ್ಞೆಯನ್ನು ದೈವಿಕ ಕೃಪೆಯಿಂದ ನಿರ್ದೇಶಿಸಲು ಸಾಧನ.
ಇಲ್ಲಿ ನಾವು ಹೋದದ್ದು ನಮ್ಮ ಒಳಗೇನೇ ಹೊರತು ಹೊರಗಲ್ಲ. ಒಳ ಹೊರಗು ಎಂಬುದೇ ಇಲ್ಲ. ವೇದ - ಶಾಸ್ತ್ರಗಳ ಪ್ರಕಾರ ಬ್ರಹ್ಮದಿಂದ, ಈ ಅನಂತ ವಿಶ್ವದ ವಿವಿಧ ದ್ರವ್ಯಗಳನ್ನು ಬಳಸಿಕೊಂಡು ಈ ಬಗೆಯಲ್ಲಿ 'ಸ್ವಯಂಭು' ಎಂಬಂತೆ ಸಂಭವಿಸಿರುತ್ತೇವೆ. ಇರುವುದೊಂದೇ, ಅದು ಬ್ರಹ್ಮವೇ. ಇಲ್ಲಿ ಸಣ್ಣದು - ದೊಡ್ಡದು ಎಲ್ಲವೂ ನಮ್ಮ ಊಹೆ ಮತ್ತು ದೃಷ್ಟಿ. ಸಣ್ಣದರಲ್ಲಿ ದೊಡ್ಡದು ಉತ್ಪ್ರೇಕ್ಷಿತವಾಗಿದೆ. ಹಾಗಾಗಿ ಇಲ್ಲಿ ಯಾವುದೂ ಸಣ್ಣದಲ್ಲ. ಇರುವುದು ಚೈತನ್ಯ ಮಾತ್ರ, ಅದು ಸರ್ವಾಂತರ್ಯಾಮಿ. ಅಣು ಮಹತ್ತುಗಳು ನಮ್ಮ ಗೋಚರಾನುಭವ. ಏಕೆಂದರೆ ನಾವು ಮಹತ್ತಿನಿಂದಾದ ಅಣುಗಳು. ನಮ್ಮ ವ್ಯವಸ್ಥೆ ಬ್ರಹ್ಮಾಂಡದ ಸರ್ವತ್ರಕ್ಕೂ ಕನೆಕ್ಟ್ ಆಗಿರುತ್ತದೆ. ನಮ್ಮ ಸಮಗ್ರತೆಯನ್ನು ಅರ್ಥೈಸಿಕೊಳ್ಳುವುದೇ ಅಧ್ಯಾತ್ಮ.
ನಾನೀಗ ಕಣ ಸಿದ್ಧಾಂತದಲ್ಲಿ ಚೈತನ್ಯದ ಭಾಗಕ್ಕೆ ಬರುತ್ತೇನೆ. ಕಣದ ಬಗ್ಗೆ ಸಂಶೋಧನೆ ನಡೆಸಿದ ವಿಜ್ಞಾನ ನೀಡಿದ ಹೇಳಿಕೆಯನ್ನು ಅರ್ಥೈಸಲು ಪ್ರಯತ್ನಿಸೋಣ. ಸದ್ಯಕ್ಕೆ ಒಪ್ಪಲಾದ ಸಿದ್ಧಾಂತ "Uncertainty principle" ಅಥವಾ ಅನಿಶ್ಚಿತತೆಯ ತತ್ತ್ವ. ಇಲೆಕ್ಟ್ರಾನ್ ಅಂದರೆ ಚೈತನ್ಯ ಒಂದು ಕಣದಲ್ಲಿ ಇದೇ ಸ್ಥಳದಲ್ಲಿ ಇದೇ ಸಮಯದಲ್ಲಿ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಎಲ್ಲೂ ಇರಬಹುದು ಎಂಬುದು ಆ ಸಿದ್ಧಾಂತ. ವಾಸ್ತವವಾಗಿ ಅಣು, ಪರಮಾಣು ಬಗ್ಗೆ ಓದುತ್ತಾ ಹೋದಾಗ, ಬೆಳಕಿನ ಕಣ, ಫೋಟಾನ್ ಬಗ್ಗೆ ಊಹಿಸಿದಾಗ ಕಣ ಎಂಬ ಪದವನ್ನೇ ಮರೆಯಬೇಕು. ಏಕೆಂದರೆ, ಇರುವುದು ಕಣವಲ್ಲ, ಕಣ ಭಾಸವಾದದ್ದು. ಇರುವುದು ಚೈತನ್ಯ ಅಂದರೆ ಇಲೆಕ್ಟ್ರಾನ್ ಹಾಗೂ ಅದನ್ನು ನಾವು ಪ್ರಜ್ಞೆಯ ಮೂಲಕ ನೋಡಿರುವ ದೃಷ್ಟಿ. ಅದು ಇದ್ದದ್ದು ಅಲ್ಲ; ನಾವು ನೋಡಿದ್ದು. ನಾವು ನೋಡಿದ್ದಕ್ಕೆ, ಅದು ಇದ್ದದ್ದು. ಹಾಗಿರುತ್ತದೆ ನಮ್ಮ ಬದುಕು. ನಾವು ಇದ್ದೇವೋ ಎಂದರೆ ಇದ್ದೇವೆ, ಖಂಡಿತವಾಗಿ ಇದ್ದೇವೆ ಹಾಗೂ ಯಾವಾಗಲೂ ಇದ್ದೇ ಇರುತ್ತೇವೆ.
ಸಂಖ್ಯಾ ಶಾಸ್ತ್ರ ನಮ್ಮ ಒಂದು ಅನ್ವೇಷಣೆಯಷ್ಟೇ. ಇಲ್ಲಿ 108 ಎಂಬ ಸಂಖ್ಯೆಯನ್ನು ಯಾಕೆ ಬಳಸುತ್ತಿದ್ದೇವೆ ಗೊತ್ತಾ? ಶೂನ್ಯತೆ, ಏಕತೆ, ಅನಂತ - ಮೂರನ್ನೂ ಒಳಗೊಂಡ ಅದ್ಭುತ ದೈವಿಕ ಸಂಖ್ಯೆ ಇದು. ಈ ವಿಶ್ವ ಇಡೀ ಒಂದೇ ಆಗಿದೆ, ಶೂನ್ಯ, ಇಲ್ಲ ಎಂದುಕೊಂಡರೆ ಏನೂ ಇಲ್ಲ ಎಂದರೆ ಇಲ್ಲ, ಇದೆ ಎಂದರೆ ಅನಂತ. ಒಟ್ಟಾಗಿ 108 ಎಂದರೆ ನಮಗೆ ಕಾಣಿಸುವ, ಕಾಣಿಸದ ಎಲ್ಲವೂ ಆಯಿತು. ಅಷ್ಟೇ ಅಲ್ಲದೆ, 108 ಗುಣಗಳೇ ವಿಭಿನ್ನವಾಗಿ ತೆರೆದುಕೊಂಡು ಪ್ರಕೃತಿಯಾಯಿತು ಎಂಬ ತತ್ತ್ವ ಕೂಡ ಇದರಲ್ಲಿದೆ. ಜ್ಯೋತಿಷ್ಯದ ಕ್ರಾಂತಿವೃತ್ತದ 27x4=108 ಕೋನಗಳನ್ನು ಅಂದರೆ ಅಖಂಡ ಬ್ರಹ್ಮಾಂಡವನ್ನು ಈ ಸಂಖ್ಯೆ ಸಂಕೇತಿಸುತ್ತದೆಯಂತೆ. ಇದರಲ್ಲಿ ಶೂನ್ಯ ಇದ್ದರೂ ಇದು ಶೂನ್ಯವಲ್ಲದ ಅನಂತ ಮೌಲ್ಯವನ್ನೂ ಸೂಚಿಸುವುದರಿಂದ ಎಲ್ಲವೂ ಇದರಲ್ಲಿದೆ ಎಂದು ಧರ್ಮ - ಶಾಸ್ತ್ರಗಳು ಒಪ್ಪಿವೆ.
ಒಟ್ಟಾರೆಯಾಗಿ, ನನ್ನ ಅಧ್ಯಯನ, ಅನುಭವದಿಂದ ಗಳಿಸಿದ ಕೆಲವು ಪ್ರಯೋಜನಕಾರಿ ಅಂಶಗಳು ಹೀಗಿದ್ದವು.
1. ಮನಸ್ಸಿನಲ್ಲಿ ಮೂರು ಪದರುಗಳಿದ್ದು ಸುಪ್ತಮನಸ್ಸಿನಿಂದಲೇ ಹೊರಜಗತ್ತಿನ ಅನುಭವಗಳೆಲ್ಲವೂ ಉತ್ಪ್ರೇಕ್ಷಿತವಾಗಿ ಬರುತ್ತವೆ. ಸುಪ್ತಮನಸ್ಸಿನ ಮೇಲೆ ಬಾಹ್ಯ ಜಗತ್ತಿನ ಪಂಚೇಂದ್ರಿಯಗಳ ಅನುಭವ ಪ್ರಭಾವ ಬೀರುತ್ತದೆ. ಇರುವ ತಂತ್ರಗಳೆಲ್ಲದರಿಂದಲೂ ನಾನು ಸುಪ್ತ ಮನಸ್ಸನ್ನು ಪ್ರೋಗ್ರಾಂ ಮಾಡಬಹುದು. ರೂಪಕಗಳು (metaphors) ಹಾಗೂ ದೃಢೀಕರಣಗಳನ್ನು(affirmations) ಬಳಸಬಹುದು. ಫೆಂಗ್‌ಶುಯಿ ತಂತ್ರ ಹಾಗೂ ನಮ್ಮ ವಾಸ್ತುಶಾಸ್ತ್ರ ಇದಕ್ಕೆ ಹತ್ತಿರದ ಪರಿಕಲ್ಪನೆಗಳು ಎಂಬ ವಿಚಾರ.
2. ಮನಃಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಜೀವನವು ಸಣ್ಣ ಸಣ್ಣ ಪ್ಯಾಟರ್ನ್ ರೂಪಿಸಿದ ಕ್ರಿಯೆ ಪ್ರತಿಕ್ರಿಯೆಗಳಿಂದಾಗಿರುವ ಬೃಹತ್ ಮೊತ್ತ. ಸಣ್ಣ ಸಣ್ಣ ಕ್ರಿಯೆಗಳನ್ನು ಆಲೋಚನೆಗಳನ್ನು ಬದಲಾಯಿಸಿ ದೊಡ್ಡ ಬದಲಾವಣೆ ಪಡೆಯಬಹುದು. ಯಾವ ವಿಷಯ ನಮಗೆ ಹೆಚ್ಚಾಗಬೇಕೋ ಅದರ ಕಡೆ ನಾವು ಫೋಕಸ್ ಆಗಬೇಕು. ನಾವು ಬೇಕಿಲ್ಲದ ವಸ್ತು, ವ್ಯಕ್ತಿ, ವಿಷಯದ ಲಕ್ಷಣದೆಡೆಗೆ ಆಕರ್ಷಿತರಾದಾಗ ವಿವೇಕವನ್ನು ಬಳಸಿ ಆದ್ಯತೆಯನ್ನು ಬದಲಾಯಿಸಿದರೆ ಬದುಕನ್ನೇ ಬದಲಿಸಬಹುದು.
3. ಯೋಗಶಾಸ್ತ್ರ ಒಂದು ಮಹತ್ವದ ವಿದ್ಯೆ. ಕೇವಲ ಧ್ಯಾನವೊಂದರಿಂದಲೇ ನಮ್ಮ ಪ್ರಜ್ಞೆಯ ಅಭೂತಪೂರ್ವ ಪ್ರಯೋಜನಗಳನ್ನು ಸಾಧನೆಯ ಮೂಲಕ ಪಡೆಯಬಹುದು. ನಾನು ಒಂದು ಕಣವಲ್ಲ; ಅನಂತ ಚೈತನ್ಯದ ಒಂದು ವ್ಯಕ್ತತೆ. ನನ್ನ ಮೂಲಸ್ವರೂಪವನ್ನು ಧ್ಯಾನಿಸಿಕೊಳ್ಳುವುದರಲ್ಲಿ ಎಲ್ಲವೂ ಇದೆ. ಮನಸ್ಸನ್ನು ತೋರಿಸಲು ಸಾಧ್ಯವಿಲ್ಲ. ದೇಹದಲ್ಲಿ ಅದು ಇದೆ. ಹಾಗಾಗಿ ದೇಹದ ಪಾದಗಳಿಂದ ನೆತ್ತಿಯ ಊರ್ಧ್ವ ಭಾಗದ ತನಕ ಪ್ರತಿಯೊಂದು ಅವಯವಗಳ, ಪ್ರತಿಯೊಂದು ಚಕ್ರಗಳ, ಜೀವಕೋಶಗಳೆಲ್ಲದರ ಒಳಗೆ ಪ್ರಜ್ಞೆಯನ್ನು ಬಳಸಿ ಧ್ಯಾನಿಸಿದರೆ ವಿಶ್ವದ ಎಲ್ಲವನ್ನೂ ನಾನು ತಲುಪಬಹುದು. ದೊಡ್ಡದು ಎಂಬುದು ದೊಡ್ಡದಲ್ಲ. ಸಣ್ಣದು ಎಂಬುದು ಸಣ್ಣದಲ್ಲ. ಇದರ ಹಿಂದೆ ಭೌತಶಾಸ್ತ್ರದ ಕ್ವಾಂಟಮ್ ಮೆಕ್ಯಾನಿಕ್ಸ್ ಸಿದ್ಧಾಂತ ಇದೆ. MSRT - Mind sound resonance technique ಮೂಲಕ ಯಾವುದೇ ಸಾಧನೆ ಮಾಡಬಹುದು.
4. ಬರವಣಿಗೆ ಮತ್ತು ಮಾತುಗಳಲ್ಲಿ ಪಾಸಿಟಿವ್ ಶಕ್ತಿಯ ಶಬ್ದಗಳನ್ನು ಬಳಸಬೇಕು. ನೆಗೆಟಿವಿಟಿ ಅಥವಾ ಪರಿಮಿತಿಯನ್ನು ಸೂಚಿಸುವ ಪದಗಳಿಗೆ ಉಪಸರ್ಗ ಸೇರಿಸಿ ಪಡೆದ ವಿರುದ್ಧ ಅರ್ಥದ ಪದಗಳು ಹೆಚ್ಚು ಶಕ್ತಿ ಕೊಡುತ್ತವೆ ಎಂದು ಬರೆಯವಾಗಿದ್ದ ಇಂಗ್ಲೀಷ್ ಬರಹವೊಂದು ತುಂಬಾ ಪ್ರಭಾವಶಾಲಿಯಾಗಿತ್ತು. ಓದಿ "ಹೌದಲ್ಲವೇ" ಎನಿಸಿತು. ಇತ್ತ ನೋಡಿದರೆ ದೇವತೆಗಳನ್ನು ಸ್ತುತಿಸುವ ಸಹಸ್ರನಾಮಗಳು ಆ ರೀತಿಯ ಅಪರಿಮಿತ ಶಕ್ತಿ ನೀಡುತ್ತಿದ್ದ ಪದಗಳಾಗಿದ್ದವು.
5. ಕ್ವಾಂಟಮ್ ಮೆಕ್ಯಾನಿಕ್ಸ್: ಎಲ್ಲವೂ ಪ್ರತಿಯೊಂದರೊಂದಿಗೂ ಸಂಪರ್ಕದಲ್ಲಿ ಇರುತ್ತದೆ. ವಿಶ್ವದಲ್ಲಿ ಯಾವುದಕ್ಕೂ ಪ್ರತ್ಯೇಕ ಅಸ್ತಿತ್ವ ಇಲ್ಲ. ಹೀಗಾಗಿ ಪ್ರತಿಯೊಂದು ಕಣವೂ ಕೂಡಾ ಅನಂತ ವಿಶ್ವದ ಸರ್ವಸ್ವದೊಡನೆ ಸಂಪರ್ಕದಲ್ಲಿದೆ. ಚೈತನ್ಯದ ಆಂದೋಲನ ಶಾಶ್ವತ. ಕಣವೆಂಬುದು ಭಾಸವಾಗುವುದು ಚೈತನ್ಯದಿಂದಾಗಿ. ಅದು ಸತ್ - ಚಿತ್ - ಆನಂದ ಸ್ವರೂಪ ಮತ್ತು ಶಾಶ್ವತ.
6. ದೇವತೆಗಳ ಶಕ್ತಿ, ಸಾಮರ್ಥ್ಯವನ್ನು ಹೊಗಳುವ ಮಂತ್ರಗಳು, ಸ್ತುತಿಗಳು, ಸಹಸ್ರನಾಮಗಳು, ಬೀಜಮಂತ್ರಗಳು, ಕತೆಗಳು, ಪುರಾಣಗಳು, ಯಾವುದೇ ತಂತ್ರ ಯಂತ್ರಗಳು ಶಕ್ತಿಯನ್ನು ಅಸಾಮಾನ್ಯವಾಗಿ ಹೇಳುತ್ತವೆಯೋ ವೈಜ್ಞಾನಿಕವಾಗಿ ಅದು ನಮ್ಮ ಒಳಗೆಲ್ಲಾ ಅನುರಣಿಸುವಾಗ ಯಾವ ರಾಸಾಯನಿಕಗಳು ಹೃದಯ, ಮೆದುಳಲ್ಲಿ ಬಿಡುಗಡೆಯಾಗಬಹುದೋ ಅದು ಖಂಡಿತವಾಗಿಯೂ ಕ್ವಾಂಟಮ್ ಮೆಕ್ಯಾನಿಕ್ಸ್ ಪ್ರಕಾರ ಅನಂತ ವಿಶ್ವದೊಂದಿಗೆ ಸಂಪರ್ಕದಲ್ಲಿದೆ. ಹಾಗಾಗಿ ನಾವು ನಮ್ಮೊಳಗನ್ನು ಧನಾತ್ಮಕವಾಗಿ ಮೆಚ್ಚಿ, ಶಾಂತಿಯನ್ನು ಮಾತ್ರ ಎಲ್ಲಾ ಕಡೆ ಹಾರೈಸಬೇಕು. ಭಾವನೆ, ನಂಬಿಕೆ, ಆಲೋಚನೆಯನ್ನು ನಮ್ಮ ಕಾರ್ಯಗಳು ಪ್ರಭಾವಿಸುವಂತೆಯೇ ನಮ್ಮನ್ನೂ, ಇಡೀ ವಿಶ್ವವನ್ನೂ ಪ್ರಭಾವಿಬಹುದು.
7. ಕೆಲವು ಅಸಂಬದ್ಧಗಳು, ವಿಚಿತ್ರಗಳು ನಡೆಯುವುದು ಮಾಯೆಯೇ ಇರಬಹುದು. ಅಂತಹ ವಿಚಿತ್ರ ಕನಸು ಜೀವನ. ಇದೊಂದು ವಿಚಿತ್ರ ಪಯಣ. ಪರಮಾತ್ಮ, ಬ್ರಹ್ಮ ತನ್ನ ಸಂಕಲ್ಪದಿಂದ ತೆರೆದುಕೊಂಡದ್ದು. ಇಲ್ಲಿ ಗುಣಕ್ಕೆ ಅನುಗುಣವಾಗಿ ಅನುಭವ ಇದೆ. ಉಳಿದ ಎಲ್ಲರ, ಎಲ್ಲದರ ಅಸ್ತಿತ್ವ ಒಂದು ಮಾಯೆಯಾಗಿರಲು ಸಾಧ್ಯ. ಏಕೆಂದರೆ ಇಲ್ಲಿ ಯಾವುದೂ ಇಲ್ಲದಿರಬಹುದು.
8. ಅಹಂ ಬ್ರಹ್ಮಾಸ್ಮಿ. ಎಲ್ಲವೂ ನಾವೇ. ನಮ್ಮ ರೂಪ ರೂಪಾಂತರವೇ ಎಂಬ ಅರಿವು. ಅದಕ್ಕೆ ಪೂರಕವಾಗಿ ವಿಶ್ವದ ಆಯಾಮಗಳು, ಬ್ರಹ್ಮಾಂಡದ ಸೃಷ್ಟಿಗೆ ಸಂಬಂಧಿಸಿದಂತೆ ಶಾಸ್ತ್ರೀಯ ಹಾಗೂ ಎಲ್ಲಾ ವೈಜ್ಞಾನಿಕ ಸಿದ್ಧಾಂತಗಳು, ಬ್ರಹ್ಮಾಂಡ ಮತ್ತು ಕಣದ ಬಗ್ಗೆ ಇರುವ ಎಲ್ಲಾ ಸಿದ್ಧಾಂತ, ಪರಿಶೀಲನೆಗಳು, ಉಪನಿಷತ್ತುಗಳ ವಿಚಾರ. ನನ್ನ ಅನ್ವೇಷಣೆಯಲ್ಲಿ ಇಂತಹ ಕೆಲವು ಸಿದ್ಧಾಂತಗಳನ್ನು ಅವಲೋಕಿಸುವಾಗ ನಮ್ಮನ್ನೊಂದು ಕಣವಾಗಿಯೋ, ವಿಶ್ವವಾಗಿಯೋ ಸಂಕಲ್ಪಿಸಿಯೇ ಆಲೋಚಿಸಬೇಕು. ಅದರ ಹೊರತು ಬೇರೆ ಮಾರ್ಗವಿರುವುದಿಲ್ಲ ಎಂಬುದೇ ದೃಷ್ಟಿ. ಹಾಗಾಗಿ ದೂರಸ್ಥ ಪ್ರಯಾಣ, ಜಗತ್ತಿನ ಮಾಯಾಜಾಲ, ಬ್ರಹ್ಮಾಂಡದಿಂದ ಬ್ರಹ್ಮಾಂಡಕ್ಕೆ ಪ್ರಯಾಣ ಇತ್ಯಾದಿಯನ್ನು ನನ್ನದೇ ಬಗೆಯಲ್ಲಿ ಮನಸ್ಸಿನ ಸಾಮರ್ಥ್ಯದಿಂದ ಅನುಭವಿಸುತ್ತೇನೆ. ಇಲ್ಲಿ ಗಮನಿಸಬೇಕಾದ ವಿಚಾರ - ವಿಜ್ಞಾನಿಗಳು ಸಮಾನಾಂತರ ವಿಶ್ವಕ್ಕೆ ಆಧಾರ ಕೊಡಬೇಕಾದಾಗ ಒಂದು ದ್ರವ್ಯದಲ್ಲಿ ಒಂದೇ ರೀತಿಯ ಹಲವು ಅಣುಗಳಿರುವುದೇ ಪ್ರಮಾಣ ಎಂದು ಹೇಳಿದ್ದಾರೆ. ಗಹನವೆನಿಸಿದ್ದಕ್ಕೆ ಊಹನೆಯೇ ಪ್ರಮಾಣ. ವಿಶ್ವದ ಆಯಾಮಗಳಲ್ಲಿ ಉನ್ನತ ಆಯಾಮವನ್ನು 'ದೇವರ ಆಯಾಮ' ಎನ್ನಲಾಗಿದೆ. ಅಲ್ಲಿ  "ಎಲ್ಲೆಡೆಯೂ ನಾನೇ ಇದ್ದೇನೆ" ಎಂಬುದು ತಿಳಿವಳಿಕೆ. ಪ್ರಜ್ಞೆಯ ಉತ್ಕೃಷ್ಠ ಅವಸ್ಥೆಯಲ್ಲಿ ಪರಿಮಿತಿಯೇ ಇಲ್ಲ. ಒಂದು ಸೀಕ್ವೆನ್ಸ್ ಪ್ರಕಾರ ಅವು ಅನಂತಕ್ಕೆ ನಮ್ಮ ಪ್ರಜ್ಞೆಯನ್ನು ಕೊಂಡೊಯ್ಯುತ್ತ ವ್ಯಾಪಿಸಿದೆ.
9. ಜ್ಯೋತಿಷ್ಯ - ಈ ವಿದ್ಯೆ ನನ್ನ ಚೈತನ್ಯವನ್ನು ಪರಿಮಿತ ಮಾಡುತ್ತದೋ ಗೊತ್ತಿಲ್ಲ. ಏಕೆಂದರೆ ನಾನು ಒಂದು ಕೋನದಲ್ಲಿ ಹುಟ್ಟಿ, ಕೆಲವು ಕೆಲವು ಯೋಗ, ಕೆಲವು ಅವಯೋಗಗಳೊಂದಿಗೆ ಬದುಕುತ್ತಿರುವೆ ಎಂಬುದು ಅಲ್ಲಿ ಕಂಡದ್ದು. ಅದು ಕನಸಂಥ ಬದುಕಲ್ಲಿ ನೆರಳಿನ ನೆರಳನ್ನು ಕನ್ನಡಿಯಲ್ಲಿ ಕಾಣುವಂತೆ. ಅಲ್ಲಿ ಏನೋ ಇದೆ ಎನ್ನುವುದಕ್ಕಿಂತ ಏನನ್ನು ನೋಡುತ್ತೇವೋ ಅದು ಕಾಣಬಲ್ಲುದು. ನನ್ನ ಜನ್ಮನಕ್ಷತ್ರ ಉತ್ತರಾಷಾಢ 4ನೇ ಚರಣ, ಮತ್ತೆ ಆಳವಾಗಿ ನೋಡಿದಾಗ ಅದು ಒಂದು ವಿಶೇಷ ನಕ್ಷತ್ರದ ಕೋನ, ಅಭಿಜಿತ್ ನಕ್ಷತ್ರ ಎಂದು ತಿಳಿದು ಬಂದದ್ದು ಹಳೆಯ ಹುಡುಕಾಟದ ಕತೆ. ಜನ್ಮ ಲಗ್ನವಾಧರಿಸಿದ ಯೋಗಗಳ ವಿವರ ಹಾಗಿರಲಿ, ಅದರಲ್ಲೂ ಬಹಳ ಸಂತಸವಾಗಿದ್ದು ರಾಶಿ ಮತ್ತು ನವಾಂಶ ಕುಂಡಲಿ ಎರಡರ ಮೇಲೆ ಏರ್ಪಟ್ಟ ಅಪರೂಪದ 'ಭಾರತಿ ಯೋಗ'ದ ವಿಶಿಷ್ಟ ಇರುವಿಕೆ. ಸಂಗೀತಪ್ರಿಯತೆ, ಅಧ್ಯಾತ್ಮಿಕತೆ ಹಾಗೂ ಬದುಕಲ್ಲಿ ಕೀರ್ತಿಶಾಲಿಯಾಗುವ ಒಂದು ಸತ್ಯವನ್ನು ಈ ಯೋಗ ಹೇಳಿದೆ. ಸ್ವತಃ ನಾನೇ ಈಗ ಜ್ಯೋತಿಷಿಯಾಗಿಬಿಟ್ಟಿರುವುದರಿಂದ ಮಿಕ್ಕಂತೆ ನನ್ನ ಬಲಾಬಲ, ಅತಿಮಾನುಷ ವಿದ್ಯೆ, ಮಂತ್ರ ತಂತ್ರಗಳು, ದಾನ ಧರ್ಮಗಳು, ಅಷ್ಟಕ್ಕೂ ಎಲ್ಲೆಡೆ ಶಾಂತಿ ಹಾರೈಸುತ್ತಾ ಧ್ಯಾನ, ತಪಸ್ಸಿನ ಬಳಕೆಯನ್ನು ಲಾಗಾಯ್ತಿನಿಂದಲೂ ಮಾಡುತ್ತಿರುತ್ತೇನೆ. ಒಮ್ಮೊಮ್ಮೆ ಬದುಕೇ ಒಂದು ವಿಭಿನ್ನ ಕನಸು ಎಂಬಂತಿದೆ. ಇಲ್ಲಿ ಆ ಕನಸನ್ನು ಜ್ಯೋತಿಷ್ಯದಲ್ಲಿ ಕಾಣುವ ಮರುಳುತನದಲ್ಲಿ ಬೆರಗಾಗಿದ್ದೇನೆ. ಅನಂತ ಚೈತನ್ಯದ ಸ್ವರೂಪವು ಜ್ಯೋತಿಷ್ಯದಿಂದ ಪರಿಮಿತವಾಗಲಿಲ್ಲ.
ಇನ್ನೂ ಹಲವು ವಿಚಾರಗಳೊಂದಿಗೆ ಮತ್ತೊಮ್ಮೆ ಭೇಟಿಯಾಗೋಣ. ನಮಸ್ಕಾರ.
✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಸುಪ್ತ ಮನಸ್ಸಿನ ಅಪರಿಮಿತ ಶಕ್ತಿ

ನಗ್ನಸತ್ಯ (ಹನಿಗವನ)