"ಜಗತ್ತನ್ನೇ ತಿರುಗಿಸುವ ಶಕ್ತಿ ನಿಮ್ಮ ಸುಪ್ತ ಪ್ರಜ್ಞಾ ಮನಸ್ಸಿನಲ್ಲಿದೆ" - ಈ ಮಾತನ್ನು ಹೇಳಿದವನು ತತ್ತ್ವಜ್ಞಾನಿ ವಿಲಿಯಂ ಜೇಮ್ಸ್. ನಾವು ನಂಬಿರುವ ನಂಬಿಕೆಯೇ ನಮ್ಮ ಮನಸ್ಸಿನ ಸುಪ್ತ ಶಕ್ತಿ. "ನಾವು ನಮ್ಮ ಸುಪ್ತ ಮನಸ್ಸಿಗೆ ಏನನ್ನು ಹೇಳಿಕೊಳ್ಳುತ್ತೇವೆಯೋ ಅದೇ ನಡೆಯುತ್ತದೆ" ಎಂದು ಡಾ| ಜೋಸೆಫ್ ಮರ್ಫಿ ಎಂಬ ಐರಿಶ್ ಲೇಖಕ ತನ್ನ ಪ್ರಖ್ಯಾತ ಗ್ರಂಥ 'ದ ಪವರ್ ಆಫ್ ಯುವರ್ ಸಬ್‌ಕಾನ್ಶಿಯಸ್ ಮೈಂಡ್' ಎಂಬುದರಲ್ಲಿ ಪ್ರತಿಪಾದಿಸಿದ್ದು, ಆ ಪುಸ್ತಕವು ಜಗತ್ತಿನಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದೆ. ಹಾಗಿದ್ದರೆ ಬನ್ನಿ, ಸುಪ್ತಮನಸ್ಸು ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ತಿಳಿದುಕೊಳ್ಳೋಣ. ಮನಸ್ಸು ಎಂದರೆ ಪ್ರಜ್ಞೆ, ಗ್ರಹಿಕೆ, ಯೋಚನೆ, ವಿವೇಚನೆ ಮತ್ತು ನೆನಪು ಸೇರಿದಂತೆ ಗ್ರಹಣ ಶಕ್ತಿಗಳ ಸಮೂಹ. ಇದನ್ನು ಸಾಮಾನ್ಯವಾಗಿ ಒಂದು ಜೀವಿಯ ಯೋಚನೆಗಳು ಮತ್ತು ಪ್ರಜ್ಞೆಯ ಸಾಮರ್ಥ್ಯ ಎಂದು ವ್ಯಾಖ್ಯಾನಿಸಲಾಗುತ್ತದೆ. ಮನಸ್ಸು ಜಾಗೃತ ಸ್ಥಿತಿಯಲ್ಲಿಯೂ ಇರಬಹುದು ಅಥವಾ ಸುಪ್ತ ಸ್ಥಿತಿಯಲ್ಲಿಯೂ ಇರಬಹುದು. ನಾವು ಏನು ಯೋಚಿಸುತ್ತಿದ್ದೇವೆ ಎಂಬುದರ ಅರಿವಿನೊಂದಿಗೆ ಇರುವುದು ನಮ್ಮ ಮನಸ್ಸಿನ ಜಾಗೃತ ಸ್ಥಿತಿ. ಆದರೆ ನಮಗೆ ಅರಿವಿಲ್ಲದಂತೆ ನಮ್ಮ ಮನಸ್ಸಿನ ಹಲವಾರು ಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಅದುವೇ ಸುಪ್ತ ಸ್ಥಿತಿ. ನಮ್ಮ ಬದುಕಿನ ಸರ್ವಸ್ವವೂ ಸುಪ್ತ ಮನಸ್ಸಿನಲ್ಲಿ ನಮಗೆ ತಿಳಿ...