ಸುಪ್ತ ಮನಸ್ಸಿನ ಅಪರಿಮಿತ ಶಕ್ತಿ

"ಜಗತ್ತನ್ನೇ ತಿರುಗಿಸುವ ಶಕ್ತಿ ನಿಮ್ಮ ಸುಪ್ತ ಪ್ರಜ್ಞಾ ಮನಸ್ಸಿನಲ್ಲಿದೆ" - ಈ ಮಾತನ್ನು ಹೇಳಿದವನು ತತ್ತ್ವಜ್ಞಾನಿ ವಿಲಿಯಂ ಜೇಮ್ಸ್. ನಾವು ನಂಬಿರುವ ನಂಬಿಕೆಯೇ ನಮ್ಮ ಮನಸ್ಸಿನ ಸುಪ್ತ ಶಕ್ತಿ. "ನಾವು ನಮ್ಮ ಸುಪ್ತ ಮನಸ್ಸಿಗೆ ಏನನ್ನು ಹೇಳಿಕೊಳ್ಳುತ್ತೇವೆಯೋ ಅದೇ ನಡೆಯುತ್ತದೆ" ಎಂದು ಡಾ| ಜೋಸೆಫ್ ಮರ್ಫಿ ಎಂಬ ಐರಿಶ್ ಲೇಖಕ ತನ್ನ ಪ್ರಖ್ಯಾತ ಗ್ರಂಥ 'ದ ಪವರ್ ಆಫ್ ಯುವರ್ ಸಬ್‌ಕಾನ್ಶಿಯಸ್ ಮೈಂಡ್' ಎಂಬುದರಲ್ಲಿ ಪ್ರತಿಪಾದಿಸಿದ್ದು, ಆ ಪುಸ್ತಕವು ಜಗತ್ತಿನಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದೆ. ಹಾಗಿದ್ದರೆ ಬನ್ನಿ, ಸುಪ್ತಮನಸ್ಸು ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ತಿಳಿದುಕೊಳ್ಳೋಣ.

ಮನಸ್ಸು ಎಂದರೆ ಪ್ರಜ್ಞೆ, ಗ್ರಹಿಕೆ, ಯೋಚನೆ, ವಿವೇಚನೆ ಮತ್ತು ನೆನಪು ಸೇರಿದಂತೆ ಗ್ರಹಣ ಶಕ್ತಿಗಳ ಸಮೂಹ. ಇದನ್ನು ಸಾಮಾನ್ಯವಾಗಿ ಒಂದು ಜೀವಿಯ ಯೋಚನೆಗಳು ಮತ್ತು ಪ್ರಜ್ಞೆಯ ಸಾಮರ್ಥ್ಯ ಎಂದು ವ್ಯಾಖ್ಯಾನಿಸಲಾಗುತ್ತದೆ. ಮನಸ್ಸು ಜಾಗೃತ ಸ್ಥಿತಿಯಲ್ಲಿಯೂ ಇರಬಹುದು ಅಥವಾ ಸುಪ್ತ ಸ್ಥಿತಿಯಲ್ಲಿಯೂ ಇರಬಹುದು. ನಾವು ಏನು ಯೋಚಿಸುತ್ತಿದ್ದೇವೆ ಎಂಬುದರ ಅರಿವಿನೊಂದಿಗೆ ಇರುವುದು ನಮ್ಮ ಮನಸ್ಸಿನ ಜಾಗೃತ ಸ್ಥಿತಿ. ಆದರೆ ನಮಗೆ ಅರಿವಿಲ್ಲದಂತೆ ನಮ್ಮ ಮನಸ್ಸಿನ ಹಲವಾರು ಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಅದುವೇ ಸುಪ್ತ ಸ್ಥಿತಿ. ನಮ್ಮ ಬದುಕಿನ ಸರ್ವಸ್ವವೂ ಸುಪ್ತ ಮನಸ್ಸಿನಲ್ಲಿ ನಮಗೆ ತಿಳಿದೋ ತಿಳಿಯದೆಯೋ ಹುದುಗಿರುವ ಶಕ್ತಿಯ ಪ್ರಚಂಡ ಪರಿಣಾಮಗಳೇ ಆಗಿವೆ.

ದೇಹವು ಪಂಚಕೋಶಗಳಿಂದ ರೂಪುಗೊಂಡಿದೆ ಎಂದು ಯೋಗ ವಿಜ್ಞಾನ ಹೇಳುತ್ತದೆ. ಅನ್ನಮಯ ಕೋಶದೊಳಗೆ ಪ್ರಾಣಮಯ ಕೋಶ, ಪ್ರಾಣಮಯ ಕೋಶದೊಳಗೆ ಮನೋಮಯ ಕೋಶ, ಮನೋಮಯ ಕೋಶದೊಳಗೆ ವಿಜ್ಞಾನಮಯ ಕೋಶ, ವಿಜ್ಞಾನಮಯ ಕೋಶದೊಳಗೆ ಆನಂದಮಯ ಕೋಶ. ಆನಂದಮಯವಾದ ಪರಬ್ರಹ್ಮ ವಸ್ತುವು ಐದು ಬಗೆಯ ಕೋಶಗಳ ರೂಪದಲ್ಲಿ ತೆರೆದುಕೊಳ್ಳುತ್ತಾ 'ಯಜ್ಞ' ಅಥವಾ ಬದಲಾವಣೆಗಳಿಂದ ಭೌತಿಕ ಪ್ರಪಂಚದ ವಿವಿಧ ರಾಸಾಯನಿಕ ಪರಿವರ್ತನೆಗಳೊಂದಿಗೆ ಈ ಅನ್ನಮಯ ಕೋಶದ ಶರೀರ ರೂಪದಲ್ಲಿ ಸೃಜಿಸಲ್ಪಟ್ಟು ಜೀವಿಯ ರೂಪದಲ್ಲಿ ಸಂಭವಿಸಲ್ಪಟ್ಟಿದೆ ಎಂಬುದು ಭಾರತೀಯ ವೇದದ ರಹಸ್ಯಗಳೆನಿಸಿದ ಉಪನಿಷತ್ತುಗಳು ಸಾರಿದ ನಿಹಿತಾರ್ಥ.

ದೇಹದ ಪ್ರಜ್ಞೆ ( Body consciousness): 'ಮನಸ್ಸು' ಎಂಬುದನ್ನು ನಾವು ತೋರಿಸುವುದಕ್ಕೆ ಸಾಧ್ಯ ಇಲ್ಲ. ಹಾಗಾಗಿ 'ದೇಹದ ಪ್ರಜ್ಞೆ' ( Body consciousness) ಎಂಬುದನ್ನು ಮನಗಾಣಬೇಕೆಂಬ ಸಿದ್ಧಾಂತ ಬೆಳೆದಿದೆ. ದೇಹ ಮತ್ತು ಮನಸ್ಸಿನ ವಿವೇಕವನ್ನು ಬೇರೆ ಬೇರೆಯಾಗಿ ನೋಡದೆ ದೇಹದಲ್ಲಿ ಮನಸ್ಸು ಇದೆ ಎಂಬ ಕಾರಣಕ್ಕೆ ಇಡೀ ದೇಹದ ಪ್ರಜ್ಞೆಯನ್ನೇ ಮುಖ್ಯವೆನ್ನಲಾಗುತ್ತದೆ. 'ಯೋಗ' ಎಂಬ ಒಂದು ವಿಜ್ಞಾನ ಎಷ್ಟೊಂದು ಮಹತ್ವ ಪಡೆಯಿತೆಂದರೆ 'ಯುಜ್ಯತೇ ಅನೇನ ಇತಿ ಯೋಗಃ' ಎಂಬ ಅರ್ಥದಲ್ಲಿ ನಮ್ಮನ್ನು ನಮ್ಮ ಅಂತಃಶಕ್ತಿಯೊಡನೆ ಒಂದುಗೂಡಿಸುವುದಕ್ಕೆ ಅಷ್ಟಾಂಗಯೋಗದ ವಿಧಾನವನ್ನು ಮನುಷ್ಯ ನಾಗರಿಕತೆ ಅನ್ವೇಷಿಸಿಕೊಂಡಿತು. ಅವೆಲ್ಲವೂ ಪುರಾತನ ಕಾಲದಿಂದ ಜರಗಿದ ನಮ್ಮ ಹಿರಿಯರ, ಋಷಿಮುನಿಗಳ ಅದ್ಭುತ ಪ್ರಯತ್ನಗಳೇ.

ಸುಪ್ತ ಮನಸ್ಸಿನಲ್ಲಿ ಯಾವ ನಂಬಿಕೆ, ಆಲೋಚನೆಗಳು ಇವೆಯೋ ಅವೇ ನಮ್ಮ ಜಾಗೃತ ಬದುಕಿನಲ್ಲಿ ಪ್ರತಿಫಲಿಸುತ್ತವೆ. ಪ್ರಾರ್ಥನೆಗಳು, ನಂಬಿಕೆಗಳು ಫಲಿಸಲು ಇದೇ ಕಾರಣ. "Life is the projection of our own consciousness" - ಎಂದರೆ ಜೀವನವು ನಮ್ಮ ಪ್ರಜ್ಞೆಯ ಒಂದು ಉತ್ಪ್ರೇಕ್ಷೆಯಾಗಿದೆ. ಆದ್ದರಿಂದ ನಮ್ಮೊಳಗಿನ ಸುಪ್ತ ಮನಸ್ಸು ಬಲುದೊಡ್ಡ ಮ್ಯಾಜಿಕ್ ಯಂತ್ರದಂತೆ ಎನ್ನಬಹುದೇನೋ!

ಆಲೋಚನೆಗಳು ಎಂದರೇನು? ಆಲೋಚನೆಗಳು ಕೂಡಾ ಭೌತಿಕ ವಸ್ತುಗಳೇ! ಮೂಲಭೂತವಾಗಿ ಅವು ವಿದ್ಯುತ್ ರಾಸಾಯನಿಕ ಸಂಕೇತಗಳು. ಅವುಗಳಿಗೆ ಒಂದು ನಿರ್ದಿಷ್ಟ ಸ್ವರೂಪವಿದೆ. ಸಂತೋಷಭರಿತರಾದಾಗ, ಧನಾತ್ಮಕ ಭಾವನೆಗಳು ಮೂಡಿದಾಗ ನಮ್ಮ ಶರೀರದ ನರನಾಡಿಗಳಲ್ಲಿ, ಗ್ರಂಥಿಗಳಲ್ಲಿ ಸ್ರವಿಸಲ್ಪಡುವ ಹಾರ್ಮೋನುಗಳೇ ಬೇರೆ. ದುಗುಡಭರಿತರಾದಾಗ ಅಥವಾ ಋಣಾತ್ಮಕ ಭಾವನೆಗಳನ್ನು ಹೊಂದಿದಾಗ ಸ್ರವಿಸಲ್ಪಡುವ ಹಾರ್ಮೋನುಗಳೇ ಬೇರೆ. ಡೋಪಮಿನ್, ಸೆರಟೋನಿನ್, ಎಂಡೋರ್ಫಿನ್, ಆಕ್ಸಿಟೋಸಿನ್ - ಈ ಹಾರ್ಮೋನುಗಳನ್ನು 'ಫೀಲ್ ಗುಡ್ ಹಾರ್ಮೋನುಗಳು' ಎಂದೇ ಕರೆಯಲಾಗುತ್ತದೆ.

ಸಕಾರಾತ್ಮಕತೆ - ಹೇಗೆ?

"ಮನುಷ್ಯ ದಿನವಿಡೀ ಏನು ಯೋಚಿಸುತ್ತಾನೋ ಅದೇ ಆಗಿರುತ್ತಾನೆ" ಈ ಮಾತನ್ನು ಎಮರ್ಸನ್ ಹೇಳಿದ್ದಾನೆ. ನಮ್ಮ ಆಲೋಚನೆ, ಚಿಂತನೆ, ನಂಬಿಕೆ, ವಿಚಾರಗಳು ಇವೆಲ್ಲವೂ ನಮ್ಮ ದೇಹದ ಇಡೀ ವ್ಯವಸ್ಥೆಯ ಮೇಲೆ ಒಳಗೂ, ಹೊರಗೂ ಪ್ರಭಾವಿಸುತ್ತವೆ. ಆಧುನಿಕ ಭೌತಶಾಸ್ತ್ರದ 'ಕ್ವಾಂಟಮ್ ಮೆಕ್ಯಾನಿಕ್ಸ್' ಪ್ರಕಾರ ಎಲ್ಲ ಚರಾಚರ ವಸ್ತುಗಳ ಹಿಂದಿನ ಸ್ವರೂಪ ಸಮಗ್ರತೆಯೇ ಆಗಿದ್ದು, ನಮ್ಮೊಳಗೆ ಸರ್ವಸ್ವವೂ ಇದೆ. ಅನಂತ ರೂಪದ ಸಮಷ್ಟಿಪ್ರಜ್ಞೆಯೇ ನಮ್ಮ ಜೀವಾಳ. ಅದನ್ನು ಅರ್ಥಮಾಡಿಕೊಂಡರೆ 'Life is beautiful' ಎಂಬ ಮಾತಿನಂತೆ, 'ಆನಂದಮಯ ಈ ಜಗಹೃದಯ' ಎಂಬ ರಾಷ್ಟ್ರಕವಿ ಕುವೆಂಪು ಅವರ ಕವಿವಾಣಿಯಂತೆ ನಗುನಗುತ್ತ ನಾವು ಜೀವಿಸುವವರಾಗುತ್ತೇವೆ. ಸಂತೋಷದಿಂದ, ಲವಲವಿಕೆಯಿಂದ ಕೂಡಿರುವುದು ನಮ್ಮನ್ನು ಸದಾ ಜೀವಂತವಾಗಿಡುತ್ತದೆ.

ಮನಃಶಾಸ್ತ್ರದಲ್ಲಿ 'Life Patterns' ಎಂಬ ಒಂದು ಪರಿಕಲ್ಪನೆ ಬರುತ್ತದೆ. ಅಲ್ಲಿ ಹೇಳುವುದೇನೆಂದರೆ, ಬದುಕಿನಲ್ಲಿ ನಮ್ಮ ಆಲೋಚನೆಯ ವಿಧಾನ ನಮ್ಮ ಸ್ಪಂದನೆ ಆಗಿಬಿಡುತ್ತದೆ. ನೀವು ನಿಮ್ಮ ಮನಸ್ಸಿನಲ್ಲಿ ಬರಬಹುದಾದ ಅಥವಾ ಬಾಹ್ಯದಿಂದ ಸಿಗಬಹುದಾದ ಸೂಕ್ತವಾದ ಪ್ರಚೋದನೆ, ಯೋಗ್ಯ ಪ್ರೇರಣೆಗಳ ಕಡೆಗೆ ಮಾತ್ರ ಗಮನ ನೀಡಿದರೆ ಅವುಗಳಿಂದಾಗುವ ಕ್ರಿಯೆ ಪ್ರತಿಕ್ರಿಯೆಗಳು ಮಾತ್ರ ಬೆಳೆದು ಭವಿಷ್ಯದಲ್ಲಿ ಅದ್ಭುತ ಪವಾಡಗಳು ನಡೆದು ನಿಮಗೇ ಆಶ್ಚರ್ಯ ತರಬಹುದು. ಒಟ್ಟಿನಲ್ಲಿ ನಿಮ್ಮ ಆಂತರ್ಯದ ಶಕ್ತಿಯನ್ನು ನೀವು ನಂಬುವುದು ಅತ್ಯಂತ ಮುಖ್ಯ. ನಿಮ್ಮ ಬಗ್ಗೆ ನೀವು ಸಕಾರಾತ್ಮಕ ಅಭಿಪ್ರಾಯಗಳನ್ನು ಹೊಂದಿರುವುದು ಮತ್ತು ಅವನ್ನು ಗಟ್ಟಿಯಾಗಿ ನಂಬುವುದು ಅತ್ಯಗತ್ಯ.

ಸುಪ್ತ ಮನಸ್ಸನ್ನು ಪ್ರೋಗ್ರಾಂ ಮಾಡುವುದು ಹೇಗೆ?

ಸುಪ್ತ ಮನಸ್ಸು ಮರ್ಕಟನಂತೆ - ಅದು ನಿರ್ದಿಷ್ಟ ಆದೇಶಗಳನ್ನು ತೆಗೆದುಕೊಳ್ಳುವುದಿಲ್ಲ. ಅದು ಯಾವ ವಿಮರ್ಶೆ ಇಲ್ಲದೆ ಸಂದೇಶಗಳನ್ನು ಸ್ವೀಕರಿಸುತ್ತದೆ. ಹಾಗಾಗಿ ಸುಪ್ತ ಮನಸ್ಸನ್ನು ಪ್ರೋಗ್ರಾಂ ಮಾಡುವುದಕ್ಕೆ ವಿಶೇಷ ತಂತ್ರ ಬೇಕು. ಒಂದನೇ ವಿಧಾನ ರೂಪಕಗಳು - ಎಂದರೆ ಧನಾತ್ಮಕ ಪ್ರಭಾವ ಮೂಡಿಸುವ ಸಾಂಕೇತಿಕ ಚಿತ್ರಗಳ ಮೂಲಕ. ಎರಡನೇ ವಿಧಾನ ಸರಿಯಾದ ದೃಢೀಕರಣಗಳು ಅಥವಾ ಸಕಾರಾತ್ಮಕ ಹೇಳಿಕೆಗಳು - ಎಂದರೆ ಸ್ವಸೂಚನೆಗಳನ್ನು ನಿಮಗೆ ನೀವೇ ಹೇಳಿಕೊಳ್ಳುವ ಮೂಲಕ. ಈ ಎರಡು ವಿಧಾನಗಳ ಮೂಲಕ ಸುಪ್ತ ಮನಸ್ಸನ್ನು ಪ್ರೋಗ್ರಾಂ ಮಾಡಬಹುದು. ಗುರಿ ನಿರ್ಧಾರ, ನಿಮ್ಮ ಯಶಸ್ಸಿನ ದಿನದ ಸ್ಪಷ್ಟ ಕಲ್ಪನೆ, ಧನ್ಯತಾ ಮನೋಭಾವ - ಹೀಗೆ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದು ಅದ್ಭುತವಾಗಿ ಕೆಲಸ ಮಾಡುತ್ತದೆ. ಯೋಗ, ಪ್ರಾಣಾಯಾಮ, ಧ್ಯಾನ ಕೂಡಾ ನಿಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸಿ ನಿಮ್ಮನ್ನು ಒಂದು ಉನ್ನತ ಸ್ಥಿತಿಗೆ ತರುತ್ತದೆ.

✍️ ಶಿವಕುಮಾರ್ ಸಾಯ 'ಅಭಿಜಿತ್'

Comments

  1. ಅಪೂರ್ವ ವಿಷಯ, ಅದ್ಭುತ ಬರಹ...

    ReplyDelete

Post a Comment

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್