ಸಫಲತೆಯ ಸೂತ್ರೀಕರಣ
ಒಮ್ಮೊಮ್ಮೆ ಕೆಲವರು ಮುಟ್ಟಿದ್ದೆಲ್ಲ ಚಿನ್ನವಾಗಿಬಿಡುವುದನ್ನು ನಾವು ನೋಡುತ್ತೇವೆ. ಕೆಲವೊಂದು ದೇಶ ಕಾಲ ಪರಿಸ್ಥಿತಿಗಳು ಎಷ್ಟು ಪಕ್ವವಾಗಿರುತ್ತವೆಯೆಂದರೆ ನೀವು ಅನಾಯಾಸವಾಗಿ ನಡೆದಾಡಿದರೂ ಕೂಡಾ ಅಮಿತವಾದ ಪ್ರತಿಫಲಗಳು ನಿಮ್ಮದಾಗುತ್ತವೆ. ಹಾಗಾದರೆ, ಒಂದು ಕ್ರಿಯೆಯ ಸಫಲತೆಯ ಸ್ವರೂಪದಲ್ಲಿರುವ ನಿರ್ಧಾರಕಗಳು ಯಾವುವು?
ಸಂಕಲ್ಪ : ಬಲಿಷ್ಠ ಕಾರ್ಯಗಳ ಹಿಂದೆ ಬಲಿಷ್ಠ ಸಂಕಲ್ಪ ಇರುತ್ತದೆ. ನಿಮ್ಮ ಗುರಿ ನಿಶ್ಚಿತ ವಿಜಯದ ಕಡೆಗೆ ಇರುತ್ತದೆ.
ಆತ್ಮವಿಶ್ವಾಸ: ಆತ್ಮವಿಶ್ವಾಸವೇ ಜಯದ ಗುಟ್ಟು. ಯಶಸ್ಸನ್ನು ಪಡೆಯಬೇಕಾದರೆ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು.
ಶಕ್ತಿ, ಯುಕ್ತಿ ಮತ್ತು ಪಕ್ವತೆ: ಒಂದು ಕಾರ್ಯ ಕೈಗೊಳ್ಳಲು ಶಕ್ತಿ ಮುಖ್ಯ. ಆದರೆ ಅದರ ಗುಣಾತ್ಮಕತೆ ಹಾಗೂ ಯೋಜಿತ ನಿಭಾವಣೆಯೂ ಅತ್ಯಂತ ಮುಖ್ಯವಾಗಿದೆ. ಯುಕ್ತಿಯನ್ನು ಬಳಸಿ ಅತ್ಯಲ್ಪ ಶಕ್ತಿಯಿಂದಲೂ ಜಯಭೇರಿ ಹೊಡೆಯಬಹುದು. ಪಕ್ವತೆಯೂ ಸರಿಯಾದ ರೀತಿಯಲ್ಲಿ ಹಾಗೆಯೇ ಇರಬೇಕು.
ನಂಬಿಕೆಗಳು: ಯಶಸ್ವೀ ಕ್ರಿಯೆಗಳ ಹಿಂದಿನ ನಂಬಿಕೆಗಳು ಯುಕ್ತವಾಗಿರುತ್ತವೆ. ಅವು ನಿಮ್ಮ ಗೊತ್ತು ಗುರಿಗಳನ್ನು, ಆದ್ಯತೆಗಳನ್ನು ರೂಪಿಸುತ್ತವೆ ಎನ್ನಬಹುದು. ನೀವೇನು ನಂಬಿರುವಿರೋ ಅದು ಆ ಕ್ಷಣದ ಬೇಡಿಕೆಗಳಿಗೆ ಅನುಗುಣವಾದುದಾಗಿರುತ್ತದೆ.
ಪರಿಸರ: ಪರಿಸರದ ಸ್ವರೂಪವು ಯಶಸ್ವೀ ಕಾರ್ಯಗಳಲ್ಲಿ ಸಂದರ್ಭೋಚಿತವಾಗಿರುತ್ತವೆ. ಹವಾಮಾನ, ಭೌತಿಕ, ಜೈವಿಕ ಹಾಗೂ ರಾಚನಿಕ ಆಯಾಮಗಳ ಸಾನ್ನಿಧ್ಯ ಅದೇ ಬಗೆಯಲ್ಲಿರಬೇಕು. ಅದು ಕ್ಲಿಷ್ಟತೆಯಾಗಿರಲಿ, ಸರಳತೆಯಾಗಿರಲಿ, ಪರಿಸರದ ರೀತಿ ಬದಲಾದರೆ ಪರಿಣಾಮಗಳು ಬೇರೆಯಾಗುತ್ತವೆ.
ಸಂಪನ್ಮೂಲಗಳು ಮತ್ತು ಒದಗುವಿಕೆ: ಒಂದು ಕಾರ್ಯವನ್ನು ಕೈಗೊಳ್ಳಲು ಅಗತ್ಯ ಸಂಪನ್ಮೂಲ, ಸಲಕರಣೆಗಳು, ಸೂಕ್ತ ವ್ಯಕ್ತಿಗಳು, ವಸ್ತುಸ್ಥಿತಿ, ಸನ್ನಿವೇಶಗಳು ಮುಖ್ಯ. ಸಮಯಕ್ಕೆ ಒದಗುವ ಸಂಪನ್ಮೂಲಗಳು ಮಹತ್ವ ಪಡೆಯುತ್ತವೆ. ಅವು ಉಳಿದ ವಿಚಾರಗಳೊಂದಿಗೆ ಯೋಜಿಸಲ್ಪಟ್ಟ ಒಂದೇ ಒಂದು ಕ್ರಮದಲ್ಲಿ ಮಾತ್ರ ಸಫಲತೆಯು ಏರ್ಪಡುವುದಾಗಿದೆ.
ಕೇಂದ್ರೀಕರಣ: ಅನೇಕರು ತಮ್ಮ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ. ಮನೋವಿಜ್ಞಾನದ ಪ್ರಕಾರ ಗೇಮ್ ಪ್ಲ್ಯಾನ್ ಬಗ್ಗೆ ಮೊದಲೇ ಘೋಷಿಸುವುದರಿಂದ ಎನರ್ಜಿ ಇಂಟೆನ್ಸಿಟಿಯ ಏರುಪೇರುಗಳಿಗೆ ಕಾರಣವಾಗುವುದರಿಂದ ಕಾರ್ಯವಿಧಾನ ಬೇರೆಯಾಗಬಹುದು. ಆದುದರಿಂದ ನಾವು ಚಾನೆಲೈಸ್ ಮಾಡಿರುವ ಎನರ್ಜಿ ಎಂಬುದು ಉತ್ಪಾದಕತೆಯೇ ಆಗಿದೆ. ಅದು ಗುರಿಯ ಕಡೆಗೇ ಹರಿಯಬೇಕಲ್ಲದೆ ತನ್ನ ದಿಕ್ಕನ್ನು ಬದಲಾಯಿಸಬಾರದು.
ಸಮಯೋಚಿತ ಕ್ರಿಯೆ-ಪ್ರತಿಕ್ರಿಯೆಗಳು: ಒಂದು ಯಶಸ್ವಿಯಾದ ಕಾರ್ಯದಲ್ಲಿ ಸಮಯೋಚಿತ ಪ್ರಯೋಗವಿರುತ್ತದೆ. ಸಮಯವು ಒಂದು ಅರೆಗಳಿಗೆ ವ್ಯತ್ಯಾಸವಾದರೂ ಪರಿಣಾಮ ಬೇರೆಯಾಗಿರುತ್ತದೆ.
ಶತ್ರುಗಳ ಕ್ಷೋಭೆ: ಶತ್ರು ಎಂದರೆ ಇಲ್ಲಿ ಯಾವುದೇ ಬಗೆಯ ಪ್ರತಿಕೂಲತೆಗಳು. ಕಾರ್ಯ ಕೈಗೂಡುವ ಕ್ಷಣದಲ್ಲಿ ಶತ್ರುಗಳ ಆಕ್ರಮಣ ಯಾವುದೇ ವಿರೋಧಗಳನ್ನು ಉಂಟುಮಾಡದು. ಒಮ್ಮೊಮ್ಮೆ ನಿಮಗೆ ಅವುಗಳೇ ಸಹಕಾರಿಯಾಗಿಬಿಡುತ್ತವೆ.
ಹೇಳಿ ಮಾಡಿಸಿದ ಸನ್ನಿವೇಶಗಳು: ನಿಮ್ಮ ಬದ್ಧತೆಗೆ ಅನುಗುಣವಾಗಿ ಹೇಳಿ ಮಾಡಿಸಿದ ಸನ್ನಿವೇಶಗಳು ಸೃಷ್ಟಿಯಾಗಬಹುದು. ಗೆಲುವು ಪೂರ್ವ ನಿರ್ಧಾರಿತವಿದ್ದಂತೆ, ಅನಾಯಾಸದಂತೆ ಮೇಲ್ನೋಟಕ್ಕೆ ತೋರಬಹುದು.
ಮೇಲೆ ವಿವರಿಸಿದ ಎಲ್ಲಾ ಅಂಶಗಳು ಅದೇ ರೀತಿ ಇರುತ್ತವೆ ಎಂದಲ್ಲ. ಆದರೆ ಅದು ಹೇಗಿರಬೇಕೋ ಹಾಗೇ ಇರುತ್ತದೆ. ಆ ಅಂಶಗಳಲ್ಲಿ ಒಂದೊಂದರ ನಿಷ್ಪತ್ತಿಯೂ ನಿಮ್ಮ ಗೆಲುವಿನ ನಿರ್ಧಾರಕವಾಗಿರುತ
್ತದೆ. ಯಶಸ್ಸು ಎಂದರೆ ಸೋಜಿಗ. ಅದು ಅರ್ಜುನನ ಹೋರಾಟದಂತೆ. ಆತ ಶಸ್ತ್ರತ್ಯಾಗ ಮಾಡಿದರೂ ಬಿಡದ ಭಾಗ್ಯ. ಅದರ ಸ್ವರೂಪ ಅಷ್ಟೇ ಅದ್ಭುತ. ಈ ಪರಿಕಲ್ಪನೆಯನ್ನು ಕಾಸ್ಮಸ್ ಅಥವಾ ಸಕಾರಾತ್ಮಕತೆ ಎಂದೂ ಹೇಳಬಹುದಲ್ಲವೇ?
✍️ ಶಿವಕುಮಾರ ಸಾಯ 'ಅಭಿಜಿತ್'
🔵🔴
Comments
Post a Comment