ಅಭಿಜಿತ್ ನಕ್ಷತ್ರ! ಬ್ಲಾಗಿಗೇಕೆ ಆ ಹೆಸರು?
ನಮಸ್ಕಾರ. ಅನೇಕರು ನಾನು 'ಅಭಿಜಿತ್' ಎಂಬ ಹೆಸರನ್ನು ಬಳಸುತ್ತಿರುವುದರ ಬಗ್ಗೆ ಕೇಳಿದ್ದಾರೆ. ಇಲ್ಲಿ ನನ್ನ ಬ್ಲಾಗಿಗೆ ಕೂಡ ಅದೇ ಹೆಸರು ಕೊಟ್ಟಿರುವುದು ನೋಡಿ ಕೆಲವರಿಗೆ ಆಶ್ಚರ್ಯವಾಗಿರಬಹುದು. 'ಅಭಿಜಿತ್' ಎಂಬುದು ಮನೆಯಲ್ಲಿ ನನ್ನನ್ನು ಮುದ್ದಿನಿಂದ ಕರೆಯಲು ಇಟ್ಟಿದ್ದ ಹೆಸರಲ್ಲ. ಅವರು ಕರೆಯುವ ಹೆಸರು 'ಭವೇಶ' ಎಂದು. ಅಫಿಶಿಯಲ್ ಆಗಿ ಶಿವಕುಮಾರ್ ಎಂಬ ಹೆಸರು ಬಳಕೆಯಾಗುತ್ತದೆ. ಆದರೆ ಈ 'ಅಭಿಜಿತ್' ಎಂಬ ಹೆಸರನ್ನು ಖಾಸಾ ಎಂಬಂತೆ ಬಳಸುತ್ತಿರುವುದೇಕೆ ಎಂಬುದರ ಕಾರಣದ ಬಗ್ಗೆ ಇಲ್ಲಿ ಖಾಸಗಿಯಾಗಿ ಬರೆಯುತ್ತಿದ್ದೇನೆ.
2016ರ ಆರಂಭದ ವರೆಗೂ ಅಭಿಜಿತ್ ನಕ್ಷತ್ರ ಎಂಬ ಪದವೇ ನನ್ನ ಗಮನಕ್ಕೆ ಬಂದಿರಲಿಲ್ಲ. ಹುಟ್ಟಿದ ದಿನಾಂಕ 11 ನವೆಂಬರ್ 1983 ಅದು ಉತ್ತರಾಷಾಢ 4ನೇ ಪಾದ ಮಕರ ರಾಶಿ ಎಂದು ಬರೆಯಲಾಗಿತ್ತು. 2014ರ ವರ್ಷಾಂತ್ಯದಲ್ಲಿ ನಾನು ತುಂಬಾ ನಿಗೂಢವೆಂದೂ, ನನ್ನನ್ನು ನಾನು ತಿಳಿದುಕೊಂಡಿಲ್ಲವೆಂದೂ, ನನ್ನಲ್ಲಿ ಎರಡು ಹೆಸರಿನಂತೆ ಎರಡು ವ್ಯಕ್ತಿಗಳಿರುವರೆಂದೂ, ಇನ್ನೂ ಏನಕೇನ ಪ್ರಕಾರೇಣ ತಲೆ ಹಾಳು ಮಾಡಿ ಕುಗ್ಗಿಸಲೆತ್ನಿಸಿದ್ದ ಶೂನ್ಯಬುದ್ಧಿಯವರೊಬ್ಬರ ಸ್ವಾರ್ಥದ ನಡತೆ ನನ್ನನ್ನು ಒಮ್ಮೆ ಉತ್ತರವೇ ಇಲ್ಲದೆ ಓಡಿಹೋಗುವ ಪರಿಸ್ಥಿತಿಗೆ ತಂದಿತ್ತು. ಆದರೆ "I survived because the fire inside me burned brighter than the fire around me" ಎಂಬಂತೆ ಭುಗಿಲೇಳುವ ತನಕ ನಾನು ಏನೂ ಆಗಿರದೆ ನಾನಾಗಲು ಚಡಪಡಿಸಿ ಪ್ರಯತ್ನಿಸುತ್ತಿದ್ದೆ. ಈ ಮಾತು ಈ ಬ್ಲಾಗಿನ ಸೀಕ್ರೆಸಿಯನ್ನು ಮರ್ಯಾದೆಯಿಂದ ಗೌರವಿಸಿ ಓದಬಹುದಾದ ಅನಾಮಿಕರೆಲ್ಲರಿಗೂ ಒಂದು ಕಣ್ಣೀರಿನ ಪ್ರೀತಿ ತರಿಸಿಯೇ ತರುತ್ತದೆ ಎಂಬುದು ನನಗೆ ತಿಳಿದಿದೆ. ಇದರ ನಂತರದಲ್ಲಿ ಒಂದು ವರ್ಷದ ಘನಮೌನ ಮತ್ತು ಕಠಿಣ ತಪಸ್ಸಿನ ಬಳಿಕ 2016ರಲ್ಲಿ ಅಚಾನಕ್ಕಾಗಿ ನನ್ನಿಂದ ಜರೂರಾಗಿ ಒಂದಷ್ಟು ಶೋಧಗಳು- ಪರಿಶೋಧನೆಗಳು ನಡೆಯತೊಡಗಿತೆನ್ನಲು ಹೆಮ್ಮೆಪಡೋಣ. ಆಗ ದೊರೆತ ನನ್ನ ತಪಸ್ಸಿನ ಫಲಶ್ರುತಿಯ ಒಂದು ಪ್ರಚಂಡ ಉತ್ತರ "ಅಭಿಜಿತ್".
ಜಗತ್ತಿನ ಅದ್ಭುತ ಜ್ಞಾನಸಾಗರದಲ್ಲಿ ಗೂಗಲ್ ಗುರುವಿನ ನೆರವಲ್ಲಿ ಜಾಲಾಡತೊಡಗಲು ಧೈರ್ಯ ತಳೆದ ಆ ರಾತ್ರಿಗೆ ಕೃತಜ್ಞತೆ ಹೇಳಬೇಕು. ಅದಕ್ಕೆ ಪ್ರೇರಣೆ 2015 ಡಿಸೆಂಬರ್ ತಿಂಗಳಲ್ಲಿ ನನ್ನನ್ನು ಹೆಸರಿಗಾದರೂ 'ಯೋಗಗುರು'ವನ್ನಾಗಿಸಿದ ಆಯುಷ್ ಇಲಾಖೆ, ಅದರ ತರಬೇತಿ ಮತ್ತು ಅಲ್ಲಿ ಕಲಿತ Mind sound resonance technique ( ಚಿತ್ತ ಶಬ್ದಾನುರಣನ ತಂತ್ರ) ಎಂಬ ಧ್ಯಾನ. ವಸ್ತು-ವಿಷಯಗಳ ಬಗ್ಗೆ, ಕಾರ್ಯ ಕಾರಣ ಸಂಬಂಧಗಳ ಬಗ್ಗೆ ತುಂಬಾ ಸೂಕ್ಷ್ಮ ಅರಿವು ಅವಶ್ಯವಿತ್ತು. ಆದರೆ ಪ್ರಾಥಮಿಕವಾಗಿ, ನಾನು ಮುಖ್ಯವಾಗಿ ನನ್ನ ಜನ್ಮಸಂಕಲ್ಪದ ಬಗ್ಗೆ ಮೊದಲು ತೃಪ್ತಿಕರ ವಿವರ ಪಡೆಯುವ ತುಡಿತ ಮತ್ತು ಅನಿವಾರ್ಯತೆಯಿತ್ತು. ಆ ಸಂಕಲ್ಪದೊಂದಿಗೆ ಮುಂದುವರಿದಾಗ ನನಗೆ ಸಿಕ್ಕ ಮಾಹಿತಿ ಉದ್ದೇಶದಷ್ಟೇ ಅಪೂರ್ವ ಹಾಗೂ ವಿಶ್ವಾಸದಾಯಕವಾದುದಾಗಿತ್ತು.
'ಅಭಿಜಿತ್' ಎಂಬ ವಿಶೇಷ ನಕ್ಷತ್ರವೊಂದು ಜ್ಯೋತಿಷ್ಯದಲ್ಲಿ ಇರುವುದಾಗಿ ಅಂದು ನನಗೆ ತಿಳಿಯಿತು. ಮತ್ತೆ ಅದರ ಬಗ್ಗೆ ಕುತೂಹಲಕರ ಮಾಹಿತಿಗಳು ಒಂದು ಶೋಧನೆಯಂತೆ ಅದ್ಭುತವಾಗಿ ತೆರೆದುಕೊಂಡವು. ಅಷ್ಟೇ ಅಲ್ಲದೆ ದಿನಾಂಕ 11 ನವೆಂಬರ್ 1983ರ ಪೂರ್ವಾಹ್ನ 10:45ಕ್ಕೆ ಜನಿಸಿದ್ದ ನನ್ನ ಜನನ ನಕ್ಷತ್ರವೂ ಇದೇ ಅಭಿಜಿತ್ ನಕ್ಷತ್ರ ಎಂಬ ಅಚ್ಚರಿಯ ವಿಷಯವೂ ಮನದಟ್ಟಾಗಿ ಮತ್ತಷ್ಟು ಸೋಜಿಗವೆನಿಸಿತು. ಜ್ಯೋತಿಷ್ಯದ ಕ್ರಾಂತಿವೃತ್ತದಲ್ಲಿ ಆ ದಿನ ಪೂರ್ವಾಹ್ನ 06:17ರಿಂದ ಅಪರಾಹ್ನ 12:56ರ ತನಕದ ಉತ್ತರಾಷಾಢ 4ನೇ ಪಾದ, ಅದು ಪೂರ್ತಿಯಾಗಿ ಅಭಿಜಿತ್ ನಕ್ಷತ್ರಕ್ಕೆ ಬರುವಂಥದ್ದು. ಇನ್ನು ಶ್ರವಣ ನಕ್ಷತ್ರದ ಆರಂಭದ ಸುಮಾರು ಒಂದು ಗಂಟೆ ನಲುವತ್ತೈದು ನಿಮಿಷವೂ ಕೂಡ (ಶ್ರವಣ ಆರಂಭದ ಹದಿನೈದನೇ ಒಂದಂಶ) ಅಭಿಜಿತ್ ನಕ್ಷತ್ರವೇ ಆಗಿರುತ್ತದೆ ಎಂಬುದು ನನಗೆ ಸಿಕ್ಕಿದ ಪರಮಾದ್ಭುತ ವಿವರವಾಗಿತ್ತು. ಆ ಬಳಿಕ ಬರವಣಿಗೆಯ ಉತ್ಕೃಷ್ಟ ವಿಧಾನವಾದ ಟ್ರಿಪಲ್ ವರ್ಡ್ ಪದಪ್ರಯೋಗಗಳು ಹಾಗೂ ಅದರಿಂದಾಗುವ ಸತ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಲು, ಇದೇ ಬಗೆಯ ಇನ್ನೂ ಹಲವಾರು ತಂತ್ರಗಳನ್ನು ಜೀವನದಲ್ಲಿ ಹುಡುಕಿ ಅಳವಡಿಸಿಕೊಳ್ಳಲು ಈ ಸಂಶೋಧನೆಯು ಪ್ರೇರೇಪಣೆಯಂತಿತ್ತು.
✍️ಶಿವಕುಮಾರ ಸಾಯ 'ಅಭಿಜಿತ್'
ಅಭಿಜಿತ್ ನಕ್ಷತ್ರದ ಬಗ್ಗೆ ಏಕೆ ಹೆಮ್ಮೆ?
❇️ಅಭಿಜಿತ್ ನಕ್ಷತ್ರದ ಬಗ್ಗೆ❇️
'ಅಭಿ' ಅಂದರೆ 'ಈಗ', 'ಜಿತ್' ಅಂದರೆ 'ಗೆದ್ದವನು' ಎಂದು ಅರ್ಥ. ಟ್ರಿಪಲ್ ವರ್ಡ್ಗಳು ಶಕ್ತಿ ನೀಡುತ್ತವೆ ಎಂಬುದನ್ನು ಒಪ್ಪುವಾಗ ಅಭಿಜಿತ್ ಎಂಬ ಪದ ನನ್ನ ಪದಶಕ್ತಿಯೇ. ಏಕೆಂದರೆ ಅದೂ ಕೂಡ ಟ್ರಿಪಲ್ ವರ್ಡ್ ಮಾದರಿಯಲ್ಲಿದೆ ಅನ್ನಿಸಿ ಸಂತೋಷವಾಯಿತು. ಅಲ್ಲದೆ ಅದು ವರ್ತಮಾನದ ಗೆಲುವು ಕೂಡ ಹೌದು. ನಾನು ಬರೆದ 'ಈಗ ಗೆದ್ದವನು' ಕವನ 2016ರ ಹೊಸದಿಗಂತ ದೀಪಾವಳಿ ವಿಶೇಷಾಂಕದಲ್ಲಿ ಆಕರ್ಷಕವಾಗಿ ಪ್ರಕಟವಾಗಿರುವುದನ್ನು ಕೆಲವರು ಗಮನಿಸಿರಬಹುದು.
❇️❇️❇️❇️❇️❇️❇️❇️
ಅಭಿಜಿತ್ ನಕ್ಷತ್ರದ ಬಗ್ಗೆ ಈ ಹಿಂದೆ ನಾನು ಬರೆದ ಬರಹದ ಭಾಗ ಇಲ್ಲಿದೆ. ಗಮನಿಸಿ.
🔴🔵Abhi+Jith=Abhijith!🔵🔴
ಪ್ರಶ್ನೆಗೊಂದು ಪ್ರಶ್ನಾತೀತ ಉತ್ತರ!?
ಸಂಸ್ಕೃತದಲ್ಲಿ ಶಬ್ದಗಳು ಧಾತುಗಳಿಂದ ಉಂಟಾಗಿರುತ್ತವೆ. ಧಾತುಗಳ ಬೆಂಬತ್ತಿದರೆ ನಮ್ಮ ಎಲ್ಲ ಸಂದೇಹಗಳು ದೂರವಾಗುತ್ತವೆ. ಎಲ್ಲ ಸವಾಲುಗಳಿಗೆ ಸಂಕಲ್ಪವೇ ದಿಟ್ಟವಾಗಿ ಉತ್ತರಿಸಿಬಿಡುತ್ತದೆ.
ಯಾವುದೇ ವಿಷಯಜ್ಞಾನವು ಪೂರ್ಣದ ಕಲ್ಪನೆಯಿಲ್ಲದೆ ಪರಿಪೂರ್ಣವೆನಿಸಲಾರದು. ಆದರೆ ಪ್ರತಿಯೊಂದು ಜೀವಿ, ನಿರ್ಜೀವಿಯೂ ಕೂಡಾ ದೈವಿಕ ದೃಷ್ಟಿಯಲ್ಲಿ ಪರಿಪೂರ್ಣವೇ. ಈ ವಾಸ್ತವತೆಯ ಅರಿವಿದ್ದವನಿಗೆ ಸುಪ್ತ ಮನಸ್ಸಿನ ಒಳಗಿದ್ದು ಜಾಗೃತ ಬದುಕಿನ ಎಲ್ಲ ಸಂಗತಿಗಳ ಪೂರ್ಣ ನೋಟ ಪಡೆಯಬಹುದು. ಮನೋವಿಜ್ಞಾನದೊಂದಿಗೆ ಈ ವಿಚಾರದಲ್ಲಿ ಜ್ಯೋತಿರ್ವಿಜ್ಞಾನ ಕೈಜೋಡಿಸುತ್ತದೆ. ಪ್ರತಿಯೊಂದನ್ನು ಇಲ್ಲಿ 'ಬೆಳಕು' ಎಂದು ಪರಿಗಣಿಸಲಾಗುತ್ತದೆ. ಎಲ್ಲ ಪದಾರ್ಥಗಳು ಪರಿಪೂರ್ಣವಾದರೂ ಅವುಗಳೊಳಗಿನ ಪಂಚಭೂತಗಳಾದ ನೀರು, ಗಾಳಿ, ಆಕಾಶ, ಅಗ್ನಿ, ಮಣ್ಣು ಇವುಗಳ ಸಾರಭೂತ ಸ್ಥಿತಿ-ನಿಷ್ಪತ್ತಿ ಬೇರೆ ಬೇರೆಯೇ ಇರುತ್ತದೆ. ಎಲ್ಲಾ ಆಯಾಮಗಳೂ ಒಂದು ಕ್ರಿಯೆ ಪ್ರಕ್ರಿಯೆಯಲ್ಲಿ ಐಚ್ಛಿಕವಾಗಿಯೋ ಅನೈಚ್ಛಿಕವಾಗಿಯೋ ಪಾಲ್ಗೊಂಡು ಸ್ಥಿತಿಗತಿ ಅವುಗಳ ಕಾಸ್ಮಸ್ ಅಥವಾ ವಿಶ್ವನಿಯಮದಂತೆ ಒಂದಿಷ್ಟು ಬದಲಾಗುತ್ತಲೇ ಇರುತ್ತವೆ. ಅವುಗಳನ್ನು ನಾವು ಇಚ್ಛಾನುಸಾರ ಸುಸ್ಥಿರವಾಗಿಟ್ಟುಕೊಳ್ಳಲೂ ಸಾಧ್ಯ. ಅದಕ್ಕೆ ಸಾಧನೆಯೂ, ಸಿದ್ಧಿಯೂ ಎರಡೂ ಬೇಕು.
ಯಾರಾದರೂ ನಿಮ್ಮನ್ನು ನಿಗೂಢವೆಂದು ಕರೆದರೆ ನಿಮಗೇನು ಅನಿಸಬಹುದು? ಇಂಥ ಒಂದು ಪ್ರಶ್ನೆಯನ್ನು ಅದೇ ಮನಃಶಾಸ್ತ್ರದ ನೆಲೆಯಿಂದ ಇಂದು ವಿಶ್ಲೇಷಿಸಬೇಕಾಗುತ್ತದೆ. ಒಂದನೇ ಉತ್ತರ- ಯಾವುದೇ ಸವಾಲು ಎದುರಾಯಿತೆಂದರೆ ಅದನ್ನು ತಾತ್ಪೂರ್ತಿಕವಾಗಿ ಆತ ಉತ್ತರಿಸಬಲ್ಲವನು-ಎದುರಿಸಬಲ್ಲವನು ಎಂದೇ ಅರ್ಥ. ಎರಡನೆಯ ಉತ್ತರ- 'ಅಭಿಜಿತ್'!
ನಿಜ. 'ಅಭಿಜಿತ್' ಎಂಬುದು ಜ್ಯೋತಿರ್ವಿಜ್ಞಾನದ 28 ನಕ್ಷತ್ರಗಳಲ್ಲಿ 22ನೇ ನಕ್ಷತ್ರ. 'ಈಗ ಗೆದ್ದವನು' ಎಂಬ ಅರ್ಥವನ್ನು ನೀಡುವ 'ಅಭಿಜಿತ್' ಯಾವಾಗಲೂ ಗೆಲ್ಲುವವನೇ. ಗೆಲ್ಲುತ್ತಲೇ ಇರುತ್ತಾನೆ ಅಷ್ಟೇ. ಜೀನಿಯಸ್ ವಿಜ್ಞಾನಿಯ 'T' ಬಿಂದುವಿನಲ್ಲೂ ಗೆಲುವಿನ ಗುಟ್ಟಾಗಿ ಇದು ಅಡಗಿದೆ. ಈ ಗುಟ್ಟನ್ನು ಸದುದ್ದೇಶಗಳು, Constructive ಕಾರ್ಯಕ್ಕೆ ಬಳಸಿದರೆ ಯಶಸ್ಸೇ. ಹೆಚ್ಚು ಹೇಳಬೇಕೆಂದರೆ ಎಲ್ಲೆಡೆ ಆ ಶಕ್ತಿಯ ಪವಾಡ ವ್ಯಾಪಿಸಿದೆ. ಅಭಿಜಿತ್ ನಕ್ಷತ್ರದ ದೇವತೆ ಬ್ರಹ್ಮ! ಸೃಷ್ಟ್ಯಾತ್ಮಕತೆ- creativityಗೆ ಈ ನಕ್ಷತ್ರ ಸಂಕೇತ. ಅಲ್ಲದೆ, ಕೆಲವು ವಿಜ್ಞಾನಿಗಳೂ ರಹಸ್ಯವಾಗಿ ಪ್ರಯೋಗಾನ್ವೇಷಣೆಗಳಿಗೆ ಅಭಿಜಿತ್ ಮುಹೂರ್ತವನ್ನು ಬಳಸುತ್ತಾರೆ ಎನ್ನಲಾಗಿದೆ.
ರಹಸ್ಯಕ್ಕೇನು ಕಾರಣ?
ಜ್ಯೋತಿಃಶಾಸ್ತ್ರದಲ್ಲಿ ಚಂದ್ರನು 28 ದಿನಗಳಲ್ಲಿ ಕ್ರಮಿಸುವ ಕಾಲಖಂಡಗಳನ್ನು 27 ನಕ್ಷತ್ರಗಳಾಗಿ 360 ಡಿಗ್ರಿಗಳ ವೃತ್ತದಲ್ಲಿ ಹಂಚಲಾಗಿದೆ. ಈ ಮಧ್ಯೆ ಅತ್ಯಂತ ಅದೃಷ್ಟಶಾಲಿ ಎಂದು ಹೇಳಲಾಗುವ ಅಭಿಜಿತ್ ನಕ್ಷತ್ರದ ಇರುವಿಕೆ ಉತ್ತರಾಷಾಢ 4ನೇ ಪಾದದಿಂದ ತೊಡಗಿ ಶ್ರವಣ ನಕ್ಷತ್ರದ ಆರಂಭದ ಹದಿನೈದನೇ ಒಂದಂಶದ ತನಕ. ಇದು 276 ಡಿಗ್ರಿ 40 ಮಿನಿಟಿನಿಂದ 280 ಡಿಗ್ರಿ 53 ಮಿನಿಟು, 20 ಸೆಕುಂಡುಗಳ ತನಕ ಬರುತ್ತದೆ. ಲೆಕ್ಕಾಚಾರದ ಅನುಕೂಲಕ್ಕಾಗಿ 4 ಪಾದಗಳ ವಿಭಾಗವುಳ್ಳ 27 ನಕ್ಷತ್ರಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಇತ್ತೀಚೆಗೆ ವಿಶೇಷಜ್ಞರು ನಕ್ಷತ್ರಗಳ ಆಧಾರದಲ್ಲಿ ಜನ್ಮಸಂಕಲ್ಪವನ್ನು ಹೇಳಬೇಕಾದಾಗ ಅಭಿಜಿತ್ ನಕ್ಷತ್ರವನ್ನೂ ಪರಿಗಣಿಸಲು ತೊಡಗಿರುವುದು ಕುತೂಹಲದ ಸಂಗತಿ.
ಮೈಥಾಲಜಿ
ಭಗವದ್ಗೀತೆಯಲ್ಲಿ ‘ವಿಭೂತಿಯೋಗಾಧ್ಯಾಯ’ ಎಂಬ ಹತ್ತನೇ ಅಧ್ಯಾಯವಿರುವ ಹಾಗೆಯೇ ಭಾಗವತದಲ್ಲಿ ಶ್ರೀಕೃಷ್ಣ-ಉದ್ಧವ ಸಂವಾದರೂಪದ ವಿಭೂತಿಯೋಗಾಧ್ಯಾಯವಿದೆ. ಇಲ್ಲಿ ಶ್ರೀಕೃಷ್ಣ ತನ್ನ ವಿಭೂತಿರೂಪವಿರುವ ನಕ್ಷತ್ರ ಯಾವುದು ಎಂದು ತಿಳಿಸುತ್ತಾನೆ. ಇದುವೇ ಅಭಿಜಿತ್ ನಕ್ಷತ್ರ. ‘ನಕ್ಷತ್ರಾಣಾಂ ಅಹಂ ಅಭಿಜಿತ್’.
ಭೂಮಿ-ಸೂರ‌್ಯ-ಅಭಿಜಿತ್-ಶ್ರೀಕೃಷ್ಣ ಇವರ ಮಧ್ಯೆ ನಡೆದ ಕಾಲ್ಪನಿಕ ಸಂವಾದವೊಂದು ಹೀಗಿದೆ -
ಭೂಮಿ: ನನ್ನಿಂದಾಗಿ ಭೂಲೋಕವಾಸಿಗಳಿಗೆ ಉತ್ತರಾಯಣ ಪುಣ್ಯಕಾಲ ಪ್ರಾಪ್ತಿ.
ಸೂರ‌್ಯ: ನಾನು ಮಕರ ರಾಶಿಯನ್ನು ಸಂಕ್ರಮಿಸುವುದರಿಂದ ಉತ್ತರಾಯಣ ಪುಣ್ಯಕಾಲ ಪ್ರಾಪ್ತಿ.
ಅಭಿಜಿತ್ ನಕ್ಷತ್ರ : ಯಾವ ದಿನ ನನ್ನ ದಿಕ್ಕಿಗೆ ಸೂರ‌್ಯಮಂಡಲ ಪ್ರವೇಶ ಮಾಡುತ್ತದೋ ಅಂದಿನಿಂದಲೇ ಉತ್ತರಾಯಣ ಪುಣ್ಯಕಾಲ ಪ್ರಾರಂಭ.
ಶ್ರೀಕೃಷ್ಣ: ನಕ್ಷತ್ರಾಣಾಂ ಅಹಂ ಅಭಿಜಿತ್. ನನ್ನ ಒಂದು ವಿಭೂತಿರೂಪವನ್ನು ಅಭಿಜಿತ್ ನಕ್ಷತ್ರದಲ್ಲಿ ಇಟ್ಟಿರುವ ಕಾರಣ ಉತ್ತರಾಯಣ ಪುಣ್ಯಕಾಲ ಪ್ರಾಪ್ತಿ.
ಶ್ರೀಕೃಷ್ಣನು ಮಧ್ಯಪ್ರವೇಶಿಸಿ ಅಭಿಜಿತ್ ನಕ್ಷತ್ರವೇ ಮಕರ ಸಂಕ್ರಾಂತಿಯ ಪರಿವರ್ತನ ಸೂಚಕ ಎಂದು ತೀರ್ಪು ನೀಡಿದ್ದು ಆ ನಕ್ಷತ್ರದ ವಿಶೇಷತೆಯನ್ನು ಸಾರುತ್ತದೆ. ಪಾಶ್ಚಿಮಾತ್ಯ ಖಗೋಳತಜ್ಞರು ಅಭಿಜಿತ್ ನಕ್ಷತ್ರಕ್ಕೆ ಅತ್ಯಂತ ಪ್ರಾಮುಖ್ಯತೆಯನ್ನು ನೀಡಿರುತ್ತಾರೆ. ಧ್ರುವ ಮತ್ತು ಅಭಿಜಿತ್ ನಕ್ಷತ್ರಗಳು ತಮ್ಮ ಸ್ಥಾನವನ್ನು ಪ್ರತಿ 25 ಸಾವಿರ ವರ್ಷಗಳಿಗೊಮ್ಮೆ ಪರಸ್ಪರ ಬದಲಾಯಿಸಿಕೊಳ್ಳುತ್ತವೆ ಎಂಬುದು ಇವರ ಸಂಶೋಧನೆಯಾಗಿದೆ. ಅಂದರೆ ಭೂಮಿಭ್ರಮಣದ ಅಕ್ಷ ಸ್ಥಾನವು ಧ್ರುವನಕ್ಷತ್ರದಿಂದ ಅಭಿಜಿತ್‌ಗೆ ಬದಲಾಗುತ್ತದೆ. ಈ ಸಂಶೋಧನೆಯಲ್ಲೂ ಅಭಿಜಿತ್ ನಕ್ಷತ್ರದ ಮಹಾರಾಜ ಗುಣವನ್ನು ಕಾಣಬಹುದು.
ಅಭಿಜಿತ್ ಮುಹೂರ್ತ: ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಹೊಂದಿಕೊಂಡು ದಿನಮಧ್ಯದ 48 ನಿಮಿಷಗಳನ್ನು ಒಟ್ಟಾಗಿ ಅಭಿಜಿತ್ ಮುಹೂರ್ತ ಎಂದು ಕರೆಯಲಾಗುತ್ತದೆ. ಈ ಮುಹೂರ್ತದಲ್ಲಿ ದಕ್ಷಿಣ ದಿಕ್ಕನ್ನು ಹೊರತುಪಡಿಸಿ ಉಳಿದ ಎಲ್ಲಾ ದಿಕ್ಕುಗಳಲ್ಲಿ ಮುಂದುವರಿದು ಮಾಡುವ ಪ್ರಯತ್ನಗಳು ಗೆಲುವನ್ನು ತರುವುದು ನಿಶ್ಚಿತ ಎನ್ನಲಾಗಿದೆ. ಅದರ ಒಳಾರ್ಥದಲ್ಲಿ ಈ ಮುಹೂರ್ತವನ್ನು ಸೃಷ್ಟಿಶೀಲವಾಗಿ ಬಳಸಿದರೆ ಗೆಲುವು, ವಿನಾಶಕ್ಕೆ ಬಳಸಿದರೆ ಸೋಲು ಎಂಬ ಧ್ವನಿ ಇದ್ದಂತಿದೆ. ಮಧ್ಯರಾತ್ರಿಯ ಅಭಿಜಿತ್ ಮುಹೂರ್ತವನ್ನು ನಿಶಿತಕಾಲ ಎಂದು ಕರೆಯಲಾಗುತ್ತದೆ.
ಮಹಾಭಾರತದಲ್ಲಿ ದುರ್ಯೋಧನನು ಪಂಚ ಪಾಂಡವರನ್ನು ಸೋಲಿಸಲಿಕ್ಕಾಗಿ ಅಭಿಜಿತ್ ನಕ್ಷತ್ರದ ಅಮಾವಾಸ್ಯೆಯಂದು ಯುದ್ಧ ಆರಂಭಿಸಲು ಸಂಚು ರೂಪಿಸಿದ್ದನಂತೆ. ಅಭಿಜಿತ್ ನಕ್ಷತ್ರದ ದುರುಪಯೋಗವನ್ನು ತಡೆಯಲಿಕ್ಕಾಗಿ ಶ್ರೀಕೃಷ್ಣನು ನಕ್ಷತ್ರಮಂಡಲದಿಂದ ಅದನ್ನು ಕಣ್ಮರೆಯಾಗಿಸಿದ ಎಂದು ಕಥೆಯಿದೆ.
ಮಾಹಿತಿಗಳ ಪ್ರಕಾರ 'ಅಭಿಜಿತ್' ನಕ್ಷತ್ರದ ದೇವತೆ ಬ್ರಹ್ಮ. 'ಅಭಿಜಿತ್' ಎಂದರೆ "Victorious or the one who cannot be defeated" ಎಂದು ಅರ್ಥ. ಇದು ಅತ್ಯಂತ ಅದೃಷ್ಟಶಾಲಿ ನಕ್ಷತ್ರವಾಗಿದೆ. ಬ್ರಹ್ಮನು ಸೃಷ್ಟಿಕರ್ತನಾಗಿರುವುದರಿಂದ ಈ ನಕ್ಷತ್ರದಲ್ಲಿ ಜನಿಸಿದವರು ಏನನ್ನೇ ಆದರೂ ತಾವೇ ಕಲ್ಪನೆಯಿಂದ ಕಟ್ಟಿಕೊಳ್ಳುವಷ್ಟು ಸಾಮರ್ಥ್ಯವುಳ್ಳವರು, ಸೃಷ್ಟಿಶೀಲರು, ಅದೃಷ್ಟವಂತರೂ ಆಗಿರುತ್ತಾರೆ. ಕೆಲವು ವಿದ್ವಾಂಸರ ಪ್ರಕಾರ ಇವರು ಅತಿಮಾನುಷ ವಿದ್ಯೆ, ವಿಜ್ಞಾನ, ಜ್ಯೋತಿರ್ವಿಜ್ಞಾನ ಹಾಗೆಯೇ ಅರೆವಿಜ್ಞಾನ ವಿಷಯಗಳಲ್ಲೂ ಪ್ರಚಂಡ ಸಾಧಕರಾಗಿರುತ್ತಾರೆ. ಬ್ರಹ್ಮ ನಕ್ಷತ್ರವಾಗಿರುವುದರಿಂದ ಇವರಲ್ಲಿ ಅತೀಂದ್ರಿಯ ಶಕ್ತಿಗಳು, ಊಹೆಗೂ ನಿಲುಕದ ಪ್ರತಿಭಾ ಶಕ್ತಿ, ಮಾಂತ್ರಿಕತೆ ಇರುತ್ತದೆ. ಇವರಲ್ಲಿ ಗೆಲುವಿನ ಅಂಶಗಳು ಅಧಿಕವಾಗಿ ಇರುತ್ತವೆ. ಪರಮಾತ್ಮನ ವಿಭೂತಿಯುಳ್ಳ ನಕ್ಷತ್ರ ಇದಾಗಿರುವುದರಿಂದ ಅದೃಶ್ಯ ಶಕ್ತಿಯುಳ್ಳವರೂ, ಮಹಾನ್ ಅದೃಷ್ಟಶಾಲಿಗಳೂ, ಸಾಧಕರೂ, ದಾರ್ಶನಿಕರೂ, ಪ್ರಖ್ಯಾತರೂ ಆಗಿರುತ್ತಾರೆ.
ಮಹಾಭಾರತದ ಪಾತ್ರವಿಚಾರಗಳಲ್ಲಾಗಲೀ ಕರ್ಮಗಳಿಂದ ಪಾರಾದ ವಿಮುಕ್ತ ಸ್ಥಿತಿಯ ಸೂತ್ರಗಳಲ್ಲಾಗಲೀ ಅಂತರ್ಗತವಾಗಿರುವುದು ವಿಜ್ಞಾನ, ಪ್ರಜ್ಞಾನ. ಬೆಳಕಿನ ವಿಜ್ಞಾನ, ಮಹಾಕಾವ್ಯಗಳ ಮೈಥಾಲಜಿ, ಕನಸು-ಬದುಕಿನ ಪವಾಡ ಇವೆಲ್ಲದರಾಚೆ ಜಗದ್ಗುರು ಶ್ರೀಕೃಷ್ಣನ ಯೋಗವಿಚಾರವನ್ನು ಸೃಜಿಸಿದ ವ್ಯಾಸರ ವ್ಯಾಸವಿಸ್ತಾರ ನಿಗೂಢ ಮತ್ತು ಬೃಹತ್ತೆನಿಸುತ್ತದೆ. ಮಾನವನೊಳಗೆ ಮಾಧವನ ವಿಶ್ವರೂಪ, ರಚನಾತ್ಮಕತೆ, ಯುಗ, ಧರ್ಮ, ಅವತಾರ, ಕರ್ತೃತ್ವ, ಸೃಷ್ಟ್ಯಾತ್ಮಕತೆ, ಸಂಗೀತ, ಸಾಹಿತ್ಯ, ನಾದಲೀಲೆಯ ಕೀಲಿಗೈ, ಉಸಿರಾಟದ ಹಂಸಕ್ಷೀರ ನ್ಯಾಯ ಎಲ್ಲವೂ ನಿನ್ನಲ್ಲೇ ಅಲ್ಲದೆ ಇವೆಲ್ಲ ನಿಜವಾಗಿಯೂ ಇನ್ನೆಲ್ಲಿರುತ್ತದೆ?
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment