🔶🔷 ನನ್ನ ಜೀವವಿಕಾಸ 🔸🔹 ಜೀವನ ಕಥನ
ಯಾವುದೇ ಹೆಚ್ಚುಗಾರಿಕೆಯಿಲ್ಲದೆ ನನ್ನ ಬದುಕಿನ ಕೆಲವಾರು ಸಂಗತಿಗಳನ್ನು ದಾಖಲಿಸುತ್ತಿರುವುದು ಅಗತ್ಯ ಎಂದು ಹಲವಾರು ಬಾರಿ ಮನಗಂಡಿದ್ದೇನೆ. ನನ್ನ ಹಲವಾರು ಅನುಭವಗಳು ಮತ್ತು ಪ್ರಯೋಗಗಳು 'ಸವಿನೆನಪುಗಳನ್ನು ಪುಷ್ಟೀಕರಿಸಬೇಕು' ಎಂಬ ತೀರ್ಪು ಪ್ರಕಟಿಸಿಬಿಟ್ಟ ಮೇಲೆ ನಾನು ರೀವೈರಿಂಗ್ ಮಾಡಿಕೊಳ್ಳಬೇಕು ಎಂಬ ಇಚ್ಛೆಯಿಂದ, ಹಾಗೆಯೇ ಪದಗಳು ಹಾಗೂ ವಸ್ತುಗಳ ಬಗೆಗೂ ಎಚ್ಚರಿಕೆಯಿಟ್ಟು ಬರೆಯುವ ವರ್ತಮಾನದ ಸಾಹಸ ನನ್ನದಾಗುತ್ತಿದೆ.
ಅಮ್ಮ ಹೇಳಿದಂತೆ ನಾನು ಜನಿಸಿದ್ದು 11, ನವೆಂಬರ್ 1983ರಂದು. ಅಂದು ಶುಕ್ರವಾರವಾಗಿತ್ತಂತೆ. ನಮ್ಮದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಬೆಳೆಯೂರು ಹವ್ಯಕ ಬ್ರಾಹ್ಮಣ ಕುಟುಂಬದ ಸಂಪ್ರದಾಯಸ್ಥ ಮನೆತನ. ನನ್ನ ತಾಯಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ 'ಸಾಯ' ಎಂಬಲ್ಲಿನ ಸಂಪ್ರದಾಯಸ್ಥ ಹವ್ಯಕರಾಗಿದ್ದು, ತಂದೆಯವರು ವಿವಾಹದ ಬಳಿಕ ಆ ಊರಿನ ಪಕ್ಕದಲ್ಲೇ ನೆಲೆಸಿದ್ದರಿಂದ ನಮಗೆ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರ ಲಭಿಸಿತು.
ಬೆಳೆಯೂರು ಮನೆತನ ಕಲೆ ಮತ್ತು ಸೃಜನಶೀಲತೆಗೆ ಹೆಸರಾದ ಮನೆತನ. ನಮ್ಮ ಅಜ್ಜ ಅಂದರೆ ತಂದೆಯ ತಂದೆ ಬೆಳೆಯೂರು ಪರಮಯ್ಯನವರು ಯಕ್ಷಗಾನದ ಹವ್ಯಾಸಿಯೂ, ಪ್ರಸಿದ್ಧರೂ, ಕಾರಣಿಕರೂ, ಕಾಲಜ್ಞಾನಿಯೂ ಆಗಿದ್ದರೆಂದು ತಂದೆಯವರು ಹೇಳುತ್ತಾರೆ. ಆದರೆ ನಾನು ಜನಿಸುವ ವೇಳೆಗೆ ಅವರು ತೀರಿಕೊಂಡಿದ್ದರು. ನಾವು ಸಾಗರಕ್ಕೆ ಹೋದಾಗ ಅಜ್ಜಿ ಭಜನೆ ಮಾಡುತ್ತಿದ್ದುದನ್ನು ನೋಡಿದ್ದು ನೆನಪಿದೆ. ನಮ್ಮ ದೊಡ್ಡಪ್ಪ ಬಿ. ಪಿ. ಸುಬ್ಬಾರಾವ್ ರಂಗಭೂಮಿ ಕಲಾವಿದರು. ಮತ್ತೊಬ್ಬ ದೊಡ್ಡಪ್ಪ ಬಿ.ಪಿ. ಶ್ರೀನಿವಾಸ್ ಗಣಿತ ಅಧ್ಯಾಪಕರಾಗಿದ್ದರು. ಅವರ ಮಗ ಬಿ. ಎಸ್. ಶಿವಾನಂದ್ ಭಾರತದ ಅಂತಾರಾಷ್ಟ್ರೀಯ ಚೆಸ್ ತಾರೆಯರಲ್ಲಿ ಒಬ್ಬರಾಗಿ ತುಂಬ ಪ್ರಖ್ಯಾತರು. ಸ್ವತಃ ನನ್ನ ತಮ್ಮ ವಿನಯ್ ಸಾಯ ಪ್ರಾದೇಶಿಕವಾಗಿ ಕವಿಯೂ, ದೃಶ್ಯಕಲೆಯಲ್ಲಿ ನಿಷ್ಣಾತನಾಗಿದ್ದು ಜಾಗತಿಕ ಮಟ್ಟದಲ್ಲಿ ಜಾಹೀರಾತು ವಲಯದಲ್ಲಿ ಬೇಡಿಕೆಯ ಕಲಾವಿದ ಮತ್ತು ವಿನ್ಯಾಸಕಾರನಾಗಿದ್ದಾನೆ. ಇನ್ನು ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಅನೇಕರು ನಮ್ಮ ಕುಟುಂಬದಲ್ಲಿದ್ದಾರೆ.
ಮಗುವಿನ ಶೈಶವಾವಸ್ಥೆ ತುಂಬ ಮುಖ್ಯವಾದದ್ದು. ಅಮ್ಮ-ಅಪ್ಪ ಬಹಳ ಮುಖ್ಯ ವ್ಯಕ್ತಿಗಳು. ನನ್ನ ತಂದೆ ಬಿ. ಪಿ. ಚಂದ್ರಶೇಖರ್, ತಾಯಿಯ ಹೆಸರು ದೇವಕಿ. ಅವರು ಕೃಷಿಕರು. ತಂದೆಯವರಿಗೆ ಎರಡು ಮದುವೆಗಳಾಗಿದ್ದು, ಮೊದಲ ಮಡದಿ ಎಂದರೆ ನನ್ನ ತಾಯಿಯ ಅಕ್ಕನೇ. ಅವರ ಹೆಸರು ಲಕ್ಷ್ಮೀ. ಅವರಿಗೆ ಮಕ್ಕಳಿರಲಿಲ್ಲ. ನಮ್ಮ ಅಜ್ಜಿಮನೆ ನಮ್ಮ ಮನೆಯ ಹತ್ತಿರದಲ್ಲಿತ್ತು.
ನನಗೆ ಮಣ್ಣಿನಲ್ಲಿ ಆಡುವುದು ಇಷ್ಟವಾಗಿತ್ತು. ತುಂಬಾ ಹೊತ್ತು ತೊಟ್ಟಿಲಲ್ಲಿ ನಿದ್ದೆಮಾಡುತ್ತಿದ್ದೆ. ಅಮ್ಮ ಹಾಲು ಕುಡಿಸಿ ಬೆಳೆಸಿದ್ದಲ್ಲದೆ ಹೊಲಿಗೆ ಕಲಿಯಲು ಹೋಗುತ್ತಿದ್ದರು. ಆಗ ದೊಡ್ಡಮ್ಮ ನನ್ನನ್ನು ನೋಡಿಕೊಳ್ಳುತ್ತಿದ್ದರಂತೆ. ಕೂವೆಗಿಡದ ಗಡ್ಡೆಯ ಮಣ್ಣಿ ನನಗೆ ಪ್ರಿಯವಾದ ಆಹಾರವಾಗಿತ್ತು. ಆಗ ಹಳೆಯ ಸಣ್ಣಮನೆಯಲ್ಲಿ ನನ್ನನ್ನು ಬೆಳೆಸುತ್ತಿದ್ದರು. ತೋಟದ ದಂಡೆಯಲ್ಲಿ ನೀರು ಹರಿಸಿ ಗಿಡಗಳಿಗೆ ಅಮ್ಮ ಅಪ್ಪ ಹಾಯಿಸುತ್ತಿದ್ದರು. ಬಹುಶಃ ಅವರು ಒಮ್ಮೊಮ್ಮೆ ಅಡಿಕೆಯ ಹಾಳೆಯಲ್ಲಿ ಹಾಸಿಗೆ ಹಾಸಿ ಅದರಲ್ಲಿ ನನ್ನನ್ನು ಮಲಗಿಸುತ್ತಿದ್ದರು.
ನಾನು ಹುಟ್ಟಿ ಎರಡು ವರ್ಷಕ್ಕೆ ತಮ್ಮ ವಿನಯ ಜನಿಸಿದ್ದು. ಮುಂದೆ ಅವನನ್ನು ಶಾಲೆಗೆ ಕರೆದೊಯ್ಯುತ್ತಿದ್ದದ್ದು ನಾನೇ. ಹೀಗಾಗಿ ನಮ್ಮ ಆಟಪಾಠಗಳು ಹೆಚ್ಚಾಗಿ ಜೊತೆಯಾಗಿ ಸಾಗುತ್ತಿದ್ದವು.
ನಾನು ಮಾತಾಡಲು, ನಡೆಯಲು ತೊಡಗಿದ ಮೇಲೆ ಎರಡು ಮೂರು ವರ್ಷದವನಿರುವಾಗ ಚೌಳ ಅಂದರೆ ಚೂಡಾಕರ್ಮವನ್ನು ಅಜ್ಜಿಮನೆಯಲ್ಲಿ ನಡೆಸಿದ್ದರು. ಅದಕ್ಕೆ ನನಗೆ ಉಡುಗೊರೆಗಳು ಬಂದಿದ್ದವು. ಊರಿನ ಜಾತ್ರೆ, ಅಜ್ಜಿಮನೆಯಲ್ಲಿ ಆಗ ನಡೆಯುವ ಪೂಜೆ ಮತ್ತು ಇತರ ಕಾರ್ಯಕ್ರಮಗಳಿಗೆ ನನ್ನನ್ನು ಒಯ್ಯುತ್ತಿದ್ದರು. ಪಕ್ಕದಲ್ಲೇ ಹರಿಯುವ ಹೊಳೆಯು ಮಳೆಗಾಲದಲ್ಲಿ ಖುಷಿ ತರುತ್ತಿತ್ತು. ಅಪ್ಪನೊಂದಿಗೆ, ಅಮ್ಮನೊಂದಿಗೆ ತಿರುಗಾಡುವುದು ಇದ್ದೇ ಇರುತ್ತಿತ್ತು. ಕೆಲವು ದಿನಗಳಿಗೊಮ್ಮೆ ಬರುತ್ತಿದ್ದ 'ಮನೆಮನೆ ಡಾಕ್ಟರ್' ಗೋಡೆಯಲ್ಲಿ ಏನೋ ಬರೆದು ಹೋಗುತ್ತಿದ್ದರು.
ಮನೆಯಲ್ಲಿ ಎಲ್ಲರೂ 'ಭವೇಶ' ಎಂಬ ಹೆಸರಿನಿಂದಲೇ ಕರೆಯುತ್ತಿದ್ದರು. ನನಗೆ ಕಟೀಲು ದೇವಸ್ಥಾನದಲ್ಲಿ ಅಕ್ಷರಾಭ್ಯಾಸ ಶಾಸ್ತ್ರ ಮಾಡಿಸಿದರು. ಸುಮಾರು ನಾಲ್ಕು ವರ್ಷದವನಿದ್ದಾಗ ನನ್ನನ್ನು ಅಂಗನವಾಡಿಗೆ ಸೇರಿಸುವ ಪ್ರಯತ್ನ ಮಾಡಿದ್ದರಾದರೂ ಆ ವಾತಾವರಣ ನನಗೆ ಎಳ್ಳಷ್ಟೂ ಇಷ್ಟವಾಗದೆ ರಂಪಮಾಡುತ್ತಿದ್ದುದರಿಂದ ಮನೆಯಲ್ಲೇ ಉಳಿದಿದ್ದೆ.
ಸುಮಾರು ನಾಲ್ಕೂವರೆ ವರ್ಷ ವಯಸ್ಸಿನಲ್ಲೇ ಒಂದನೇ ತರಗತಿಗೆ ಸೇರಿಸಲಾಗಿತ್ತು. ಗಡಿಪ್ರದೇಶದಲ್ಲಿ ಹತ್ತಿರದಲ್ಲಿದ್ದದ್ದು ಕೇರಳದ ಎಯುಪಿ ಶಾಲೆ ಕುರುಡಪದವು. ಶಾಲೆಯ ಅಧ್ಯಾಪಕರು ಚೆನ್ನಾಗಿ ಪಾಠ ಹೇಳಿ ನೋಡಿಕೊಳ್ಳುತ್ತಿದ್ದರು. ಅಮ್ಮ ಮನೆಯಲ್ಲಿ ಕಲಿಸುತ್ತಿದ್ದಳು. ನಾನು ಶಾಲೆಯ ಪುಸ್ತಕಗಳನ್ನು ಬಿಡಿಸುತ್ತಿದ್ದು, ಅವುಗಳಲ್ಲಿನ ಚಿತ್ರಗಳು, ಪಾಠಗಳು ಸೊಗಸಾಗಿದ್ದವು. ಹೀಗಾಗಿ ಎರಡನೇ ತರಗತಿಯಿಂದ ನಾನು ಪಾಠಗಳನ್ನು ಬಾಯಿಪಾಠ ಮಾಡುತ್ತಿದ್ದೆ.
ಪ್ರಾಥಮಿಕ ಶಾಲೆಯಲ್ಲಿ ಎಲ್ಲ ಅಧ್ಯಾಪಕರೂ ನನ್ನ ಇಷ್ಟದ ಅಧ್ಯಾಪಕರೇ. ಶಾಲೆಗೆ ಹೋಗಲು ನನಗೆ ಇಷ್ಟವಿಲ್ಲದ್ದರಿಂದ ನನ್ನ ಮನೆಯವರು, ಕೆಲಸದವರು, ಗೆಳೆಯರು, ಚಿಕ್ಕಮ್ಮ ಕೂಡಾ ಶಾಲೆಗೆ ಕರೆದೊಯ್ದು ಕಷ್ಟಪಟ್ಟು ಕೂರಿಸುತ್ತಿದ್ದರು. ಮತ್ತೆ ಮತ್ತೆ ಶಾಲೆ ಅಭ್ಯಾಸವಾಗಿಬಿಟ್ಟಿತು. ಎಲ್ಲರೂ ಇಷ್ಟವಾಗಿಬಿಟ್ಟರು.
ಸಂಬಂಧದಲ್ಲಿ ಅಕ್ಕಂದಿರಾದ ಸ್ವರ್ಣಗೌರಿ ಹಾಗೂ ತಿರುಮಲೇಶ್ವರಿ ತರಗತಿಯಲ್ಲಿದ್ದರು. ದಿನೇಶ, ಸಂತೋಷ, ಚಂದು, ಹಮೀದ್, ಸುರೇಶ, ಮಹಮ್ಮದ್, ಪ್ರಕಾಶಡಿಸೋಜ, ರಾಜೇಶ, ಹರೀಶ ಭಂಡಾರಿ, ನಾಗೇಶ, ಮುನೀರ್, ಉದಯ, ಗಣೇಶ, ಮೊಯಿದು ಕುಞ್ಞಿ, ರವೀಂದ್ರ, ಪ್ರಕಾಶ್ ಪಾರೆಕೋಡಿ, ರಾಝಿಕ್, ಹರೀಶ ಕೆ., ಆಯಿಷ, ಅಸ್ನ, ಮಮತ, ಪ್ರೇಮ, ವಾರಿಜ, ಬೇಬಿ ಅವರೆಲ್ಲರೂ ಒಂದನೇ ತರಗತಿಯಲ್ಲೇ ಇದ್ದರು. ಕೃಷ್ಣಪ್ರವೀಣ, ಅಬ್ದುಲ್ ರಹಿಮಾನ್, ಮೊಹಮ್ಮದ್ ಇಕ್ಬಾಲ್, ಅಬ್ದುಲ್ ಸತ್ತಾರ್, ಮಾಲಿನಿ ಯು.ಎಸ್., ಸತ್ತಾರ್, ಕೆಬೀರ್ ಮುಂತಾದವರು ನಂತರದ ಬೇರೆಬೇರೆ ತರಗತಿಗಳಲ್ಲಿ ಸಹಪಾಠಿಗಳಾಗಿ ಸೇರಿಕೊಂಡಿದ್ದರು.
ಪಠ್ಯಪುಸ್ತಕದ ಆರಂಭದಲ್ಲಿ ರಾಷ್ಟ್ರಗೀತೆ ಮತ್ತು ಪ್ರತಿಜ್ಞೆ ಇರುತ್ತಿತ್ತು. ಒಂದನೇ ತರಗತಿಯಲ್ಲಿ ಬರೀ ಚಿತ್ರಗಳೇ ಇತ್ತು. ಒಂದು ಪುಟದಲ್ಲಿ ಒಂದು ಅಕ್ಷರದ ಬಗ್ಗೆ ಸಚಿತ್ರ ವಿವರಣೆ ಇತ್ತು. ನಮಗೆ ಗೌರಿ ಟೀಚರ್ ಒಂದನೇ ತರಗತಿಯ ಗುರು. ಎರಡನೇ ತರಗತಿಯಲ್ಲಿ ಪಾಠ ಇತ್ತು. ಅದು ಬಾಯಿಪಾಠ ಬರುತ್ತಿತ್ತು. ಜಯಲಕ್ಷ್ಮಿ ಟೀಚರ್ ಗುರು. ಮೂರನೇ ತರಗತಿಯಲ್ಲಿ ಉಳುವಾನ ಶಂಕರ ಭಟ್ ಗುರು. ಎಲ್ಲ ವಿಷಯಗಳನ್ನು ಅವರೇ ಕಲಿಸುತ್ತಿದ್ದರು. ಆಗ ಪ್ರತಿದಿನ ಕಾಪಿ ಬರೆದು, ಲೆಕ್ಕ ಮಾಡಿ ಮನೆಯಲ್ಲಿ ಸಿದ್ಧವಾಗುತ್ತಿದ್ದೆ. ನಾಲ್ಕನೇ ತರಗತಿಯಲ್ಲಿ ಇಂಗ್ಲಿಷ್ ಮತ್ತು ಐದರಲ್ಲಿ ಹಿಂದಿ ಭಾಷಾಪಾಠ ಆರಂಭವಾಯಿತು. ನಾನು ಮೀಯಪದವಿನಲ್ಲಿ ನಡೆದ ಉಪಜಿಲ್ಲಾ ಬಾಲಕಲೋತ್ಸವದಲ್ಲಿ ಸಮೂಹಗಾನ ಸ್ಪರ್ಧೆಯಲ್ಲಿ 'ಜಲಲ ಜಲಲ ಜಲಧಾರೆ' ಹಾಡು ಹಾಡಲು ಹೋಗಿದ್ದೆ. ಐದನೇ ತರಗತಿಯಲ್ಲಿ ತರಗತಿಯ ಭಿತ್ತಿಪತ್ರದಲ್ಲಿ ಕಾರ್ಟೂನ್ ಮಾಡಿ ಹಾಕಿದ್ದೆ.
ಛದ್ಮವೇಷ, ಮೊಸರುಕುಡಿಕೆ, ಜಾರುಕಂಬ ನೋಡಲು ಖುಷಿಯಾಗುತ್ತಿತ್ತು. ಹೂದೋಟದಲ್ಲಿ ಇಷ್ಟದ ಗೆಳೆಯ-ಗೆಳತಿಯರೊಂದಿಗೆ ಹೂವು ಕೀಳುವಾಗ ಖುಷಿಯಾಗುತ್ತಿತ್ತು. ಮನೆಯಲ್ಲಿ ಅಮ್ಮನೊಂದಿಗೆ ಯಕ್ಷಗಾನಕ್ಕೆ ಹೋಗುವ ಕ್ರಮವಿತ್ತು. ಹಾಗೆಯೇ ಮನೆಗೆ ಬಂದ ನಂತರ ಬಣ್ಣದ ಬಟ್ಟೆಗಳನ್ನು ಧರಿಸಿ ವೇಷ ತೊಟ್ಟು ಕುಣಿಯುತ್ತಿದ್ದೆ. ನಾನು ನಾಲ್ಕನೇ ತರಗತಿಯಿಂದ ಹೆಚ್ಚಾಗಿ ತರಗತಿಯಲ್ಲಿ ಮೊದಲನೇ ರ‍್ಯಾಂಕ್ ಪಡೆಯುತ್ತಿದ್ದು, ಅಕ್ಕ ಸ್ವರ್ಣಗೌರಿ ಮತ್ತು ನನ್ನ ನಡುವೆ ಮೊದಲ ರ‍್ಯಾಂಕ್ ಪಡೆಯಲು ಅಘೋಷಿತ ಸ್ಪರ್ಧೆಯಿತ್ತು.
ಮೂರನೇ ತರಗತಿಯ ಪಠ್ಯಪುಸ್ತಕದಲ್ಲಿ ಸುಂದರವಾದ ಕನ್ನಡ ಪದ್ಯಗಳು ಇದ್ದವು. ನಾಲ್ಕನೇ ತರಗತಿಯಲ್ಲಿ ಓದಿದ ಡಾ. ಜಿ. ಎಸ್. ಶಿವರುದ್ರಪ್ಪ ಅವರ 'ಶಕ್ತಿಯ ಕೊಡು' ಹಾಡು ತುಂಬಾ ಅಚ್ಚುಮೆಚ್ಚಾಗಿತ್ತು. ಅದನ್ನು ಅನೇಕ ಕಡೆ ಹಾಡುತ್ತಿದ್ದೆ. ಆರನೇ ತರಗತಿಯಲ್ಲಿ ನನ್ನ 10ನೇ ವಯಸ್ಸಿನಲ್ಲಿ ನಾನು ಕೆಲವು ಪ್ರಾಸಗಳನ್ನು ಬರೆಯತೊಡಗಿದ್ದು, ಆಗ ಕನ್ನಡ ಪಾಠಮಾಡುತ್ತಿದ್ದ ಮಹಾಲಿಂಗ ಭಟ್ ಅವರು ಅದನ್ನು ತಿಳಿದು, ಅವನ್ನು ಬರೆದು ಕೊಟ್ಟರೆ ಪತ್ರಿಕೆಗೆ ಕಳಿಸುವುದಾಗಿ ಹೇಳಿದ್ದರು. ಅದೇ ವಯಸ್ಸಿನಲ್ಲಿ ನಮ್ಮ ಊರಿನ ತೋಡಿನ ಬಳಿಯಿಂದ ಮಣ್ಣು ತಂದು ಗಣಪತಿಯ ವಿಗ್ರಹವನ್ನು ರಚಿಸಿದ್ದೂ ಇದೆ.
ಮುಖ್ಯವಾಗಿ ಬಾಲ್ಯದ ಗೆಳೆಯರು ಆ ವೇಳೆಗೆ ತುಂಬಾ ಬೆಂಬಲ ನೀಡುತ್ತಿದ್ದರು. ನನಗೆ ನನ್ನ 11ನೇ ವಯಸ್ಸಿನಲ್ಲಿ ಮನೆಯಲ್ಲಿ ಉಪನಯನ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಜ್ವರದ ತೊಂದರೆಯಿಂದ ಆ ವರ್ಷ ವಸಂತ ವೇದಪಾಠವನ್ನು ಕಲಿಯಲು ಅಡ್ಡಿಯಾಯಿತು.
ಏಳನೇ ತರಗತಿಯಲ್ಲಿದ್ದಾಗ ನನ್ನ ಚಿಕ್ಕಮ್ಮ ವಸಂತಕುಮಾರಿ ಶಾಲೆಗೆ ಅಧ್ಯಾಪಕಿಯಾಗಿ ಸೇರಿದ್ದರು. ಅವರು ನಮ್ಮ ತರಗತಿಗೆ ನಿಯುಕ್ತರಾಗಿರಲಿಲ್ಲವಾದರೂ ಒಮ್ಮೆ ಒಂದು ಅವಧಿಗೆ ಇಂಗ್ಲಿಷ್ ಪಾಠಕ್ಕೆ ಬಂದಿದ್ದರು. ಆ ವರ್ಷ ನನಗೆ ಶಾಲೆಯಲ್ಲಿ ಕಂಠಪಾಠದಲ್ಲಿ ಪ್ರಥಮ ಮತ್ತು ಲಘುಸಂಗೀತದಲ್ಲಿ ದ್ವಿತೀಯ ಬಹುಮಾನ ಸಿಕ್ಕಿದೆ.
ಮನೆಯಲ್ಲಿ ಹಾಲು ಕೊಂಡೊಯ್ಯಲು ಸಹಾಯ ಮಾಡುವುದು, ಅಡಿಕೆ ಹೆಕ್ಕುವುದು, ತೋಟ- ಗುಡ್ಡಕ್ಕೆ ಗೇರುಬೀಜ ಕೊಯ್ಯುವಾಗ ಅಮ್ಮನೊಂದಿಗೆ ಹೋಗುವ ಅಭ್ಯಾಸ ಇತ್ತು. ತಿನ್ನಲು ತಿಂಡಿ, ಸಣ್ಣ ಸಣ್ಣ ದೋಸೆ ಇರುತ್ತಿತ್ತು. ಹೆಚ್ಚಾಗಿ ತೋಟದಲ್ಲಿರುತ್ತಿದ್ದ ನಮ್ಮ ತಂದೆ ಈಗಲೂ ಪರಿಶ್ರಮಿಯೇ ಸರಿ.
ಅಲ್ಲಿಗೆ ನನ್ನ ಪ್ರಾಥಮಿಕ ಶಿಕ್ಷಣ ಮುಕ್ತಾಯವಾಗಿತ್ತು. ನಂತರ ನನ್ನನ್ನು ಕೇರಳ ಕುರುಡಪದವಿನ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢಶಾಲೆಗೆ ಸೇರಿಸಲಾಯಿತು. ಪ್ರೌಢಶಾಲೆಯ ಹಂತ ಹಲವು ರೀತಿಯಲ್ಲಿ ಮಹತ್ವದ್ದು. ಎಂಟನೇ ತರಗತಿಯಲ್ಲಿ ನಾನು ಓದುತ್ತಿದ್ದಾಗ ಮತ್ತೆ ಕವನಗಳನ್ನು ಬರೆಯತೊಡಗಿದ್ದು, ಶಾಲೆಯಲ್ಲಿ ವಿಶೇಷ ಸಂದರ್ಭಗಳಲ್ಲಿ ಅವಕಾಶ ನೀಡಲಾಗಿತ್ತು. ತರಗತಿಗಳಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಸಾಹಿತ್ಯ ಸಭೆ ನಡೆದಿತ್ತು. ಕಾಸರಗೋಡು ಜಿಲ್ಲಾ ಕನ್ನಡ ಬಳಗ ನಡೆಸಿದ ದಸರಾ ನಾಡಹಬ್ಬದ ಆಶು ಕವಿತಾರಚನೆಯಲ್ಲಿ ದ್ವಿತೀಯ ಲಭಿಸಿತು. ಜೊತೆಗೆ ಆ ಸಮಯದಲ್ಲಿ ಸ್ಪಲ್ಪ ಕಾಲ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸ ಕೂಡ ಮಾಡಿ, ಸ್ವರಪರಿಚಯ ಮಾಡಿಕೊಂಡು ಗೀತೆಗಳನ್ನು ಕಲಿತಿದ್ದೆ. ಆ ಬೇಸಿಗೆಯಲ್ಲಿ ಸುಬ್ರಹ್ಮಣ್ಯ ಕ್ಷೇತ್ರದ ವಸಂತವೇದ ಶಿಬಿರದಲ್ಲಿ ನನಗೆ ವಿಶೇಷ ಪ್ರಥಮ ಬಹುಮಾನ ಲಭಿಸಿದ್ದು ಹಸಿರಾಗಿದೆ.
ಶಾಲೆಯಲ್ಲಿ ಸಂಸ್ಕೃತ ತರಗತಿಗಳಿಗೆ ಮಕ್ಕಳು ಬೇಕಾದ ಕಾರಣ ನಮ್ಮನ್ನು ಎಂಟನೇ ತರಗತಿಯಲ್ಲಿ ಸಂಸ್ಕೃತ ಭಾಷೆಗೆ ವಿದ್ಯಾರ್ಥಿಗಳಾಗಿ ಸೇರಿಸಿಕೊಂಡಿದ್ದರು. ಆದರೆ ಆ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ನಮ್ಮ ಸಂಸ್ಕೃತ ಅಧ್ಯಾಪಕರು ಉನ್ನತ ಹುದ್ದೆಗೆ ತೆರಳಿದ್ದರಿಂದ ಸಂಸ್ಕೃತ ತರಗತಿ ಮುಚ್ಚಲ್ಪಟ್ಟು ನಮ್ಮನ್ನು ಮತ್ತೆ ಕನ್ನಡದಲ್ಲೇ ಉಳಿಸಲಾಯಿತು. ಅದಲ್ಲವಾಗಿದ್ದರೆ ನನಗೆ ಪ್ರಥಮ ಭಾಷೆ ಕನ್ನಡದ ಗೋಜು ಅಲ್ಲೇ ಹೊರಟುಹೋಗಿ ಕಥೆ ಬೇರೆಯಾಗುತ್ತಿತ್ತೋ ಏನೋ. ಏಕೆಂದರೆ ಆಗ ನಾನು ಸಂಸ್ಕೃತದಲ್ಲೂ ಕವನ ಬರೆಯತೊಡಗಿದ್ದೆ.
ಒಂಬತ್ತನೇ ತರಗತಿಯಲ್ಲಿದ್ದಾಗ ಉಪಜಿಲ್ಲಾ ಯುವಜನೋತ್ಸವದ ಕವನರಚನೆಯಲ್ಲಿ ಬಹುಮಾನ ಲಭಿಸಿತು. ಒಂಬತ್ತನೇ ತರಗತಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ 'ಎದೆತುಂಬಿ ಹಾಡಿದೆನು' ಭಾವಗೀತೆ ಹಾಡಿದ್ದೆ. ಪ್ರಬಂಧ, ಭಾಷಣ, ಹಾಡು ಮತ್ತು ಕಥಾರಚನೆ ಕೂಡಾ ನಾನು ಗುರುತಿಸಿಕೊಳ್ಳುತ್ತಿದ್ದ ವಿಷಯಗಳು. ಅದೇ ಸಮಯದಲ್ಲಿ ನಾನು ರಚಿಸಿದ 'ಹಕ್ಕಿ' ಎಂಬ ಚುಟುಕು 'ಮಂಗಳ' ವಾರಪತ್ರಿಕೆಯ ಬಾಲಮಂಗಳ ಪುಟದಲ್ಲಿ ಪ್ರಕಟವಾಗಿತ್ತು. ಹತ್ತನೇ ತರಗತಿಯಲ್ಲಿ ಶಾಲೆಗೆ ಮೊದಲಿಗನಾಗಿ 77.5% ಅಂಕಗಳೊಂದಿಗೆ ತೇರ್ಗಡೆಯಾಗಿ ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದ್ವಿತೀಯ ಸ್ಥಾನದ ಎವಾರ್ಡ್ ಪಡೆದೆ.
ಶ್ರೀಪತಿ ಭಟ್ ಪದ್ಯಾಣ, ಕಾಂತಿಲ ತಿರುಮಲೇಶ್ವರ ಭಟ್ ನಮಗೆ ಕನ್ನಡ ಅಧ್ಯಾಪಕರಾಗಿದ್ದರು. ಸೊಡಂಕೂರು ರವಿನಾರಾಯಣ ಭಟ್ ಉತ್ತಮ ಗಣಿತ ಅಧ್ಯಾಪಕರಾಗಿದ್ದರು. ತರಗತಿಯಲ್ಲಿ ಅವರು ಸಾಮಾನ್ಯವಾಗಿ ಎಲ್ಲರಿಗೂ ಹೊಡೆದವರೇ. ಆದರೆ ಅವರಿಂದಲೂ ಪೆಟ್ಟು ತಿನ್ನದೇ ಕಲಿತ ವಿದ್ಯಾರ್ಥಿ ಎಂದರೆ ಅದು ನಾನಾಗಿದ್ದೆ. ಹೀಗೆ ಅಂದು ನಮಗೆ ಬೋಧಿಸುತ್ತಿದ್ದ ಎಲ್ಲ ಅಧ್ಯಾಪಕರೂ ಮುಖ್ಯವೇ. ಆದರ್ಶ ಪೆರ್ಲ, ರಾಜಾರಾಮ ದೇವಕಾನ ಮುಂತಾದ ಹಲವರು ತರಗತಿಯಲ್ಲಿ ಸಹಪಾಠಿಗಳಾಗಿದ್ದರು. ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಊರಲ್ಲಿ ತಂಡ ಕಟ್ಟಿ ಕ್ರಿಕೆಟ್ ಆಡುತ್ತಿದ್ದೆ. ನಮ್ಮ ಬಳಗದಲ್ಲಿ ತಾಳ್ಮೆಯ ಆಟಕ್ಕೆ ನಾನು ಹೆಸರಾಗಿದ್ದೆ. ರೇಡಿಯೋದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಲಿಸುತ್ತಿದ್ದೆ.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿದ್ದರಿಂದ ನನ್ನನ್ನು ಪುತ್ತೂರು ವಿವೇಕಾನಂದ ಕಾಲೇಜಿಗೆ ವಿಜ್ಞಾನ ವಿಭಾಗ ಪಿಸಿಎಂಬಿಗೆ ಸೇರಿಸಲಾಯಿತು. ಕಾಲೇಜಿನ ಆರಂಭದ ದಿನಗಳು ಮಹತ್ವದ್ದು. ನನಗೊಂದು ರೀತಿ ರೆಕ್ಕೆ ಬಂದ ಅನುಭವವಾಗಿತ್ತು. ಎಲ್ಲ ಪಾಠಗಳೂ ಸುಲಭವಾಗಿದ್ದು ಹೆಚ್ಚು ಅಂಕಗಳು ಸಿಗುತ್ತಿದ್ದವು. ಆದರೆ ಪ್ರಥಮ ವರ್ಷದ ವಾರ್ಷಿಕ ಪರೀಕ್ಷೆಯ ವೇಳೆಗೆ ಹೊಟ್ಟೆನೋವು ಕಾಡಿತು. ಕೆಎಂಸಿ ಆಸ್ಪತ್ರೆಯ ಡಾl ಎರಿಲ್ ಡಯಾಝ್ ಅವರು ಪ್ರಾಣಾಪಾಯದ ಹಂತದಲ್ಲಿ ದೊಡ್ಡ ಎಪೆಂಡಿಸೈಟಿಸ್ ಆಪರೇಷನ್ ನಡೆಸಿ ಬದುಕಿಸಿದವರು. ಕಾಲೇಜಿನಲ್ಲಿ ಪರೀಕ್ಷೆ ಬರೆಯದಿದ್ದರೂ ನನ್ನನ್ನು ಉತ್ತಮ ನಿರ್ವಹಣೆ ಆಧರಿಸಿ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಮತ್ತು ಅಕಾಡೆಮಿಕ್ ಅಡ್ವೈಸರ್ ಆಗಿದ್ದ ಕೆ. ಶಿವಪ್ರಸಾದ್ ತೇರ್ಗಡೆಗೊಳಿಸಿದ್ದರು.
ದ್ವಿತೀಯ ಪಿಯುಸಿ ಹಂತದಲ್ಲಿ ಪದೇ ಪದೇ ಕಾಡುತ್ತಿದ್ದ ಜ್ವರ ಮತ್ತು ಬದಲಾದ ಪರಿಸ್ಥಿತಿಯಲ್ಲಿ ಓದಿನಲ್ಲಿ ಆಸಕ್ತಿ ಏಕೋ ಕಡಿಮೆಯಾಗಿತ್ತು. ಇದರಿಂದಾಗಿ ಪಿಯುಸಿಯಲ್ಲಿ ನನ್ನ ಫಲಿತಾಂಶ ಕುಸಿದಿತ್ತು. ಪಿಯುಸಿ ಬಳಿಕ ಡಿಪ್ಲೊಮಾ ಸೇರುವ ಪ್ರಯತ್ನ ಕೂಡಾ ನಡೆಯಿತು. ದೂರದ ಬೆಂಗಳೂರಿಗೆ ಹೋಗಿ ಗಡಿನಾಡು ಕೋಟಾದಲ್ಲಿ ಸೀಟು ಪಡೆದದ್ದು, ಮತ್ತೆ ಅದು ಬೇಡವೆಂದು ಹೋಗದೇ ಬಿಟ್ಟದ್ದು, ಎಲ್ಲವೂ ಆಯಿತು.
ನಾವು ಬಾಲ್ಯದಲ್ಲಿ ಸೀಮೆ ಎಣ್ಣೆಯ ದೀಪ ಮತ್ತು ಲ್ಯಾಂಪ್ ಬೆಳಕಿನಲ್ಲಿ ಓದಿದವರು. ತೋಟಕ್ಕೆ ಸೀಮೆ ಎಣ್ಣೆ ಮತ್ತು ಡೀಸೆಲ್ ಪಂಪ್ ಮೂಲಕ ನೀರು ಹಾಕುತ್ತಿದ್ದರು. ನಮ್ಮ ಹಳ್ಳಿಗೆ ವಿದ್ಯುತ್ ಸಂಪರ್ಕ ಲಭಿಸಿದ್ದು ನಾನು ಪಿಯುಸಿಯಲ್ಲಿರುವಾಗಲೇ.
ಪದವಿ ಸೇರಲು ನಿರ್ಧರಿಸಿ, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಐಚ್ಛಿಕವಾಗಿ ಇರುವ ಕಲಾ ಪದವಿ ಪಡೆಯಲು ನಿರ್ಧರಿಸಿದೆ. ಆದರೆ ಗೊಂದಲ ಉಂಟಾಯಿತು. ಕಲಾ ವಿಭಾಗದಲ್ಲಿ ವಿಜ್ಞಾನ ವಿದ್ಯಾರ್ಥಿ ಎಂಬ ಕಾರಣ ಸೀಟು ನೀಡಲು ನಿರಾಕರಿಸಲಾಯಿತು. ಆಗ ಛಲ ಬಿಡದೆ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್. ಜಿ. ಶ್ರೀಧರ ಹಾಗೂ ಪ್ರಾಂಶುಪಾಲ ಪ್ರೊ ಯು. ರಾಮಮೋಹನ ರಾವ್ ಅವರನ್ನು ಕೇಳಿದೆ. 'ಬರೆವೆ ಬದುಕಿನ ಬರಹ' ಎಂಬ ಕವನ ಬರೆದು ಕೊಟ್ಟು, ಪ್ರಶಸ್ತಿ ಪತ್ರ ದಾಖಲೆಗಳನ್ನು ತೋರಿಸಿ ಕೊನೆಗೂ ಸೀಟು ಪಡೆದೆ. ಆ ವೃತ್ತಾಂತ ಮತ್ತೆ ದಂತಕಥೆಯೇ ಸರಿ. ಉಪನ್ಯಾಸಕರಾಗಿದ್ದ ಡಾ. ಪಿ. ಕೆ. ಬಾಲಕೃಷ್ಣ ಮತ್ತು ಡಾ. ಅರುಣ್ ಪ್ರಕಾಶ್ ಈ ವಿಷಯವನ್ನು ಅನೇಕ ಬಾರಿ ನೆನಪಿಸಿಕೊಂಡಿದ್ದಾರೆ.
ಪದವಿ ಹಂತದಲ್ಲಿ ತರಗತಿಯಲ್ಲಿ ನಮ್ಮ ಕಲಿಕೆ ಚೆನ್ನಾಗಿ ಸಾಗುತ್ತಿತ್ತು. ಇದರ ಹೊರತಾಗಿ ಕನ್ನಡ ಐಚ್ಛಿಕ ವಿದ್ಯಾರ್ಥಿಯಾದ ಒಂದೇ ತಿಂಗಳಲ್ಲಿ ನಾನು ಬರೆದಿದ್ದ ಕವನವೊಂದನ್ನು ಮಂಗಳೂರು ಬೆಸೆಂಟ್ ಕಾಲೇಜಿನ ಬೆಳ್ಳಿಹಬ್ಬದ ಪ್ರಯುಕ್ತ ನಡೆದ ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಕವಿಗೋಷ್ಠಿ ಸ್ಪರ್ಧೆಯಲ್ಲಿ ವಾಚಿಸಿ ಪ್ರಥಮ ಸ್ಥಾನ ಪಡೆದೆ. ಆ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಕಯ್ಯಾರ ಕಿಞ್ಞಣ್ಣ ರೈ ಮೆಚ್ಚಿಕೊಂಡು ಪ್ರಶಂಸಿಸಿದರು.
ಪದವಿಯ ವಿದ್ಯಾರ್ಥಿಯಾಗಿದ್ದಾಗ ನಾನು ಮತ್ತೆ ಎಲ್ಲಾ ಬಗೆಯಲ್ಲಿ ಬರವಣಿಗೆಯಲ್ಲಿ ಪ್ರವೃತ್ತನಾದೆ ಎನ್ನಬಹುದು. ನನ್ನ ಕವನ, ಮಕ್ಕಳ ಕವನ, ಹನಿಗವನ ಎಲ್ಲವೂ ಪತ್ರಿಕೆಗಳಲ್ಲಿ ಬರತೊಡಗಿದವು. ಅದೂ ರಾಜ್ಯದ ಪ್ರಮುಖ ಪತ್ರಿಕೆಗಳ ಪ್ರಮುಖ ಪುಟಗಳಲ್ಲಿ ಮುದ್ರಿತವಾದವು. ಆಗ ಅಂಚೆಯ ಮೂಲಕವೇ ಬರಹಗಳನ್ನು ಕಳಿಸುತ್ತಿದ್ದುದು.
ನಾನು ಪದವಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದೆ. ಆಗ ಕಾರ್ಯಕ್ರಮವೊಂದರಲ್ಲಿ ಸಾಹಿತಿ ನೀರ್ಪಾಜೆ ಭೀಮ ಭಟ್ಟ ಹಾಗೂ ಅವರ ಮಗ, ಪತ್ರಕರ್ತ ಉದಯಶಂಕರ ನೀರ್ಪಾಜೆ ಅವರ ಪರಿಚಯವಾಯಿತು. ನೀರ್ಪಾಜೆ ಅವರು ಬಂಟ್ವಾಳ ತಾಲೂಕಿನ ಕನ್ನಡ ಜಾಗೃತಿ ಸಮ್ಮೇಳನದ ಕವಿಗೋಷ್ಠಿಯಲ್ಲಿ ಅವಕಾಶವಿತ್ತರು. ಆಗ ಇತರ ಹಲವು ಹಿರಿಯ ಸಾಹಿತಿಗಳ ಪರಿಚಯವಾಗತೊಡಗಿತು. ಉದಯಶಂಕರ್ ನೀರ್ಪಾಜೆ ಅವರು ಆಗಲೇ ಕನ್ನಡಪ್ರಭದಲ್ಲಿ ನಾನು ಮತ್ತು ನನ್ನ ತಮ್ಮ ವಿನಯನ ಬಗ್ಗೆ ಒಂದು ಲೇಖನವನ್ನೇ ಬರೆದು ಪ್ರೋತ್ಸಾಹಿಸಿದರು. ಆ ಸಂದರ್ಭದಲ್ಲಿ ತಮ್ಮನ ಒಂದು ಮಕ್ಕಳ ಕವನ ಸಂಕಲನ ಪ್ರಕಟವಾಗಿತ್ತು. ಪತ್ರಿಕೆಗಳಲ್ಲಿ ಅವನ ಕವನಗಳೂ ಪ್ರಕಟವಾಗುತ್ತಿದ್ದವು.
ರೇಡಿಯೋ ಆಲಿಸುವುದು ಚಿಕ್ಕಂದಿನಿಂದಲೂ ನನ್ನ ಹವ್ಯಾಸವಾಗಿತ್ತು. ನಾನು ಸಣ್ಣ ಮಗುವಾಗಿದ್ದಾಗ ರೇಡಿಯೋದಲ್ಲಿ ಧ್ವನಿ ಕೇಳುವಾಗ ಆಶ್ಚರ್ಯ, ಕುತೂಹಲ ಉಂಟಾಗುತ್ತಿತ್ತು. ಒಮ್ಮೊಮ್ಮೆ ಆಕಾಶವಾಣಿಗೆ ಪತ್ರ ಬರೆಯುತ್ತಿದ್ದೆ. ಅವು ಪ್ರಸಾರವೂ ಆಗಿದ್ದವು. ಪದವಿ ಓದುತ್ತಿದ್ದಾಗ ಪತ್ರಕರ್ತ ಕೃಷ್ಣಮೋಹನ ತಲೆಂಗಳ ಅವರು ಯುವವಾಣಿ ನಿರ್ವಾಹಕರಿಂದ ಅವಕಾಶ ಒದಗಿಸಿಕೊಟ್ಟರು. ಹೀಗಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಒಟ್ಟು ಸುಮಾರು 33ಕ್ಕೂ ಹೆಚ್ಚು ಕವನಗಳು ಆಕಾಶವಾಣಿಯಲ್ಲಿ ಪ್ರಸಾರವಾದವು.
ವಿವಿಧ ಪತ್ರಿಕೆಗಳಲ್ಲಿ ನನ್ನ ಕವನಗಳು ಪ್ರಕಟವಾಗುವುದು ಮುಂದುವರಿದಿತ್ತು. ಕಾಲೇಜು ಮತ್ತು ಹೊರಗೆ ನನ್ನ ಸಹವರ್ತಿಗಳ ವಲಯವೊಂದು ಸೃಷ್ಟಿಯಾಗಿತ್ತೇನೋ. ನನ್ನ ಗುರುಗಳಾದ ಡಾ. ಎಚ್. ಜಿ. ಶ್ರೀಧರ್ ಅವರು ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಅವಕಾಶ ಒದಗಿಸಿಕೊಟ್ಟರು. ಉಪನ್ಯಾಸಕರಾಗಿದ್ದ ಧನಂಜಯ ಕುಂಬ್ಳೆ ಅವರೂ ತಿದ್ದಿ ತೀಡಿ ಪ್ರೋತ್ಸಾಹಿಸುತ್ತಿದ್ದರು. ಪದವಿಯ ಮೂರು ವರ್ಷಗಳಲ್ಲೂ ಬೆಂಗಳೂರಿನ ಕ್ರೈಸ್ಟ್ ಕಾಲೇಜು ನಡೆಸುವ ಡಾ. ದ. ರಾ. ಬೇಂದ್ರೆ ಸ್ಮೃತಿ ಕವನ ಸ್ಪರ್ಧೆಯಲ್ಲಿ ಬಹುಮಾನಗಳು ಬಂದಿದ್ದವು. ಅಂತಿಮ ವರ್ಷದಲ್ಲಿದ್ದಾಗ ಹಂಪಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ನಡೆಸಿದ ಅಲ್ಲಮ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಬಂದಿತ್ತು. ಕಾಲೇಜಿನ ಒಳಗೆ ಸ್ಪರ್ಧೆಗಳು ನಡೆದಾಗ ಬಹುಮಾನಗಳು ಇದ್ದದ್ದೇ ಎಂಬಂತಾಗಿತ್ತು. ವಿವೇಕಾನಂದ ಕಾಲೇಜಿನಿಂದ ಪ್ರತಿಭಾ ಪುರಸ್ಕಾರ, ವಿವೇಕ ಜಯಂತಿ ಕವನ ಸ್ಪರ್ಧೆಯಲ್ಲಿ ಬಹುಮಾನ ಲಭಿಸಿತ್ತು. ಕಾಲೇಜಿನ ಜಾಗೃತಿ ಮತ್ತು ನಿನಾದ ಪತ್ರಿಕೆಗಳಿಗೆ ವಿದ್ಯಾರ್ಥಿ ಸಂಪಾದಕನಾಗುವ ಅವಕಾಶ ಲಭಿಸಿತ್ತು. ಆ ದಿನಗಳಲ್ಲಿ ಕಾಲೇಜಿನ ಭಿತ್ತಿ ಪತ್ರಿಕೆಯಲ್ಲಿ ನನ್ನ ಕವನಗಳು ಹೆಚ್ಚಾಗಿ ರಾರಾಜಿಸುತ್ತಿದ್ದುದು ಸುಳ್ಳಲ್ಲ.
ಪದವಿ ಹಂತದಲ್ಲಿ ಅನೇಕ ಪ್ರಮುಖ ಗೆಳೆಯರು ಕಾಲೇಜಿನಲ್ಲಿದ್ದರು. ಜಯರಾಮ ನಾವಡ, ಶ್ರೀಕೃಷ್ಣ ಸುಣ್ಣಂಗುಳಿ, ಮಹೇಶ್ ನೆಟ್ಲ, ನವೀನ್ ಮರಿಕೆ, ವಸಂತ್, ಟಿಕೆಪಿ ಮುಂತಾದ ಸಹಪಾಠಿಗಳು ಅಲ್ಲದೆ ಡೊಂಬಯ್ಯ ಇಡ್ಕಿದು, ವಿದ್ಯಾರಶ್ಮಿ, ಶಂಭುಕುಮಾರ ಶರ್ಮ, ಶಶಿಕಾಂತ, ದುರ್ಗಾಪ್ರವೀಣ, ಮಹೇಶ್ ಸವಣೂರು, ಮುರಳಿಶ್ಯಾಮ್, ಶೇಷಕೃಷ್ಣ, ಕೃಷ್ಣಕುಮಾರ್ ಕಮ್ಮಜೆ ಹೀಗೆ ಹಲವರು ಕಾಲೇಜಿನ ಸ್ನೇಹಿತರು.
ಪ್ರೊ. ವಿ.ಬಿ. ಅರ್ತಿಕಜೆ ಅವರು ವಾರಾಂತ್ಯ ಪತ್ರಿಕೋದ್ಯಮ ಶಿಬಿರ ನಡೆಸುತ್ತಿದ್ದರು. ನಾನು ಪದವಿಯ ವೇಳೆ ಆ ಶಿಬಿರಗಳಲ್ಲಿ ಪಾಲ್ಗೊಂಡಿದ್ದರಿಂದ, ಆ ಪ್ರಮಾಣ ಪತ್ರಗಳು ಮುಂದೆ ನನ್ನ ಪ್ರಯೋಜನಕ್ಕೆ ಬಂದವು.
ಪದವಿ ಮುಗಿದ ಕೂಡಲೇ ಓದು ಮುಂದುವರಿಸಲು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಆಗ ತಾತ್ಕಾಲಿಕ ಉದ್ಯೋಗಕ್ಕೆ ಪ್ರಯತ್ನಿಸಿ ಹೊಸದಿಗಂತ ಪತ್ರಿಕೆಯ ಎಕ್ಸಿಕ್ಯೂಟಿವ್ ಹುದ್ದೆ ಭರ್ತಿ ಗಮನಿಸಿ ಅರ್ಜಿ ಸಲ್ಲಿಸಿದೆ. ಸಂಸ್ಥೆಯ ಸಿಇಓ ರಾಹುಲ್ ಅವರು "ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೀರಲ್ಲಾ... ನೀವು ಸಂಪಾದಕೀಯ ವಿಭಾಗಕ್ಕೆ ಸೂಕ್ತ" ಎಂದು ನುಡಿದು ನಿರ್ವಾಹಕ ಸಂಪಾದಕ ದಿನಕರ ಇಂದಾಜೆ ಅವರ ಬಳಿ ಕಳಿಸಿದರು. ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಸ್ಥಾನೀಯ ಸಂಪಾದಕ ಪ್ರಕಾಶ್ ಇಳಂತಿಲ ಅವರಿಂದ ಸಂದರ್ಶನಕ್ಕೆ ಪತ್ರ ಬಂತು. ನನ್ನನ್ನು ವಿಭಾಗಕ್ಕೆ ಆಯ್ಕೆಗೊಳಿಸಿದರು.
ಅದುವರೆಗೆ ಪತ್ರಿಕೆಗಳಲ್ಲಿ ಕವನ, ಕತೆ, ವರದಿ ಇವೆಲ್ಲ ಕಳಿಸಿ ಪ್ರಕಟವಾಗುವುದಷ್ಟೇ ಗೊತ್ತಿದ್ದ ನನಗೆ ಸುದ್ದಿಮನೆಯ ಒಳಗಿನ ಅನುಭವ ಅಪೂರ್ವವಾಗಿತ್ತು. ನನ್ನ ಕವನಗಳು ಆಯ್ಕೆಯಾಗುವುದು ಮತ್ತು ಪ್ರಕಟವಾಗುವುದು ಆ ನಂತರ ನನ್ನ ಮುಂದೆಯೇ ನಡೆದದ್ದಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು ಈ ವಿಭಾಗಗಳು ನಮ್ಮ ಹಗಲಿನ ಪಾಳಿಯಲ್ಲಿ ಸಿದ್ಧವಾಗುತ್ತಿದ್ದ ಪುಟಗಳು. ಕಜಂಪಾಡಿ ಶಾಂತಕುಮಾರಿ ಅವರು ನಮ್ಮ ಹೆಡ್ ಆಗಿದ್ದರು. ಹಗಲಿನ ಪಾಳಿಯನ್ನು ಕೆಲವು ಸಂದರ್ಭಗಳಲ್ಲಿ ಒಬ್ಬನೇ ನಿರ್ವಹಿಸಿದ್ದೂ ಇದೆ. ನಿರ್ವಾಹಕ ಸಂಪಾದಕ ದಿನಕರ ಇಂದಾಜೆ, ಸ್ಥಾನೀಯ ಸಂಪಾದಕ ಪ್ರಕಾಶ ಇಳಂತಿಲ ಮತ್ತಿತರ ಎಲ್ಲರೂ ಬಹಳ ಚೆನ್ನಾಗಿ ನಡೆಸಿಕೊಳ್ಳುತ್ತಿದ್ದರು. ಕವಿಮಿತ್ರ, ಕಾಲೇಜಿನ ಮಿತ್ರ, ಪಕ್ಕದ ಊರಿನವರಾದ ಶಶಿಕಾಂತ ಚೆಂಬರ್ಪು ಅಲ್ಲೂ ನನ್ನ ಸಹೋದ್ಯೋಗಿಯಾಗಿದ್ದು, ಕ್ರೀಡಾಪುಟ ನಿರ್ವಹಿಸುತ್ತಿದ್ದರು. ಅ.ನಾ.ಪೂರ್ಣಿಮಾ ಹಾಗೂ ಸುಜಾತಾ ಅವರು ಸಾಪ್ತಾಹಿಕ ಸಿರಿ ವಿಭಾಗ ನೋಡಿಕೊಳ್ಳುತ್ತಿದ್ದು, ಒಮ್ಮೊಮ್ಮೆ ಅವರಿಗೆ ನೆರವಾಗಿದ್ದೂ ಇದೆ. ಪೂರ್ಣಿಮಕ್ಕ ಸ್ವತಃ ಕವಯಿತ್ರಿ ಕೂಡ. ಹೊಸದಿಗಂತ ಪತ್ರಿಕೆಯಲ್ಲಿ ಇತರ ಪತ್ರಿಕೆಗಳಿಗೆ ಬರೆಯಬಾರದೆಂಬ ನಿರ್ಬಂಧವಿಲ್ಲದ ಕಾರಣ ಆ ಸಂದರ್ಭದಲ್ಲಿ ಇತರ ಪತ್ರಿಕೆಗಳಲ್ಲೂ ನನ್ನ ಕವನ, ಕತೆ ಇತ್ಯಾದಿ ಪ್ರಕಟವಾಗಿತ್ತು. ಆಲದಪದವು ಅಕ್ಷರ ಪ್ರತಿಷ್ಠಾನದ ಕವನ ಸ್ಪರ್ಧೆಯಲ್ಲಿ ಬಹುಮಾನ ಲಭಿಸಿತ್ತು. ಮಂಗಳೂರಿನ ಪುರಭವನದಲ್ಲಿ ಜರುಗಿದ ಜಿಲ್ಲಾ ಸ್ವಾತಂತ್ರ್ಯೋತ್ಸವದ ಕವಿಗೋಷ್ಠಿ, ಭೂಮಿಗೀತ ವತಿಯಿಂದ ಠಾಗೋರ್ ಪಾರ್ಕ್‌ನಲ್ಲಿ ಜರುಗಿದ ಕವಿಗೋಷ್ಠಿ ಹಾಗೂ ಕನ್ಯಾನದಲ್ಲಿ ನಡೆದ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಅವಕಾಶ ಸಿಕ್ಕಿತ್ತು. ಮುಖ್ಯವಾಗಿ 2004-05ರ ಅವಧಿಯಲ್ಲಿ 'ಹೊಸದಿಗಂತ' ಪತ್ರಿಕೆಯಲ್ಲಿ ಉಪಸಂಪಾದಕನಾಗಿ ನಾನು ಮಾಧ್ಯಮರಂಗದಲ್ಲಿ ಹೆಚ್ಚಿನ ಅನುಭವ ಪಡೆಯುವಂತಾಯಿತು.
ಪತ್ರಿಕೆಯಿಂದ ಹೊರಬಂದ ಬಳಿಕ ನಾನು ಬಿ.ಎಡ್. ಪದವಿ ಪಡೆಯಲು ನಿರ್ಧರಿಸಿ ಪುತ್ತೂರು ವಿವೇಕಾನಂದ ಬಿ.ಎಡ್. ಕಾಲೇಜು ಸೇರಿದೆ. ಆಗಲೂ ಸಾಕಷ್ಟು ಬಹುಮಾನಗಳು ಲಭಿಸುತ್ತಿದ್ದು, ಪತ್ರಿಕೆಗಳ ನಂಟು ಉಳಿಸಿಕೊಂಡಿದ್ದೆ. ನನ್ನ ಕವನಗಳು ಅಥವಾ ಮಕ್ಕಳ ಕವನ ಅಥವಾ ಕೊನೆ ಪಕ್ಷ ಹನಿಗವನವಾದರೂ ಕನ್ನಡದ ಯಾವುದೇ ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಎನ್ನಬಹುದು. ಒಮ್ಮೊಮ್ಮೆ ಗದ್ಯದಲ್ಲಿ ಹಾಸ್ಯ, ಕತೆ, ಅಂಕಣ ಸಾಪ್ತಾಹಿಕಗಳಲ್ಲಿ ಅಚ್ಚಾಗಿದೆ. ಆ ವೇಳೆಗೆ ಅಖಿಲ ಭಾರತ ತುಳು ಒಕ್ಕೂಟದ ಸದಸ್ಯನಾಗಿದ್ದು, ಅವರು ನಡೆಸಿದ ತುಳು ಕವನ ಸ್ಪರ್ಧೆಯಲ್ಲಿ ಬಹುಮಾನ ಕೂಡ ಬಂದಿತ್ತು. ಸಹಪಾಠಿ ಸಂಕೀರ್ಣ ಚೊಕ್ಕಾಡಿ ಮತ್ತಿತರರ ಜೊತೆ ಸೇರಿಕೊಂಡು 'ಕನ್ನಡ ಸಮಾಜ' ಎಂಬ ಖಾಸಗಿ ಗುಂಪು ಕಟ್ಟಿಕೊಂಡು ಗೋಷ್ಠಿಗಳನ್ನು ಜರುಗಿಸಲಾಗಿತ್ತು.
🔴 ಸಣ್ಣಜ್ಜಿಯ ಉಪಕಾರ
ನಾನು ಪಿಯುಸಿ ಮೊದಲ ವರ್ಷ, ಹಾಗೆಯೇ ಬಿಎಡ್ ಓದುತ್ತಿದ್ದಾಗ ಪುತ್ತೂರಿನ ಕೆದಿಲ ಸಮೀಪ ವಳಂಕುಮೇರಿಯ ಸಣ್ಣಜ್ಜಿ, ಎಂದರೆ ನನ್ನ ತಾಯಿಯ ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡಿದ್ದೆ. ಅಲ್ಲಿನ ಅಜ್ಜ, ಮಾವ ಮತ್ತು ಅತ್ತೆ ಮನೆಗಿಂತಲೂ ಚೆನ್ನಾಗಿ ಉಪಚರಿಸಿ ಉಪಕರಿಸಿದ್ದು, ಅದು ಸ್ಮರಣೀಯವೇ ಸರಿ.
ಬಿ. ಎಡ್. ನಂತರ ಮತ್ತೆ ಉದ್ಯೋಗದ ಬೇಟೆ ಶುರುವಾಯಿತು. 75.2% ಫಲಿತಾಂಶ ಬಂತು. ಫಲಿತಾಂಶಕ್ಕೂ ಮುನ್ನ 2006ರ ಡಿಸೆಂಬರ್ ತಿಂಗಳಲ್ಲಿ ಪುತ್ತೂರು ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ಆಂಗ್ಲಮಾಧ್ಯಮ ವಿಭಾಗದ ಕನ್ನಡ ಅಧ್ಯಾಪಕನ ಹುದ್ದೆ ದೊರೆಯಿತು. ಎಚ್. ಶ್ರೀಧರ ರೈ, ರೂಪಕಲಾ ಕೆ., ಉದಯಕುಮಾರ್ ರೈ ಹೀಗೆ ಇನ್ನೂ ಹಲವು ಅಧ್ಯಾಪಕರು ಬಂಧುಗಳಾಗಿಬಿಟ್ಟರು. ಮಂಗಳೂರಿನಲ್ಲಿ ಮಿತ್ರ ದಿನೇಶ ಹೊಳ್ಳರು ಆಯೋಜಿಸಿದ ಒಂದೆರಡು ಗೋಷ್ಠಿಗಳಲ್ಲಿ ನಾನು ಪಾಲ್ಗೊಂಡ ನೆನಪು. ಉದಯಕುಮಾರ್ ರೈ ಅವರು ನನ್ನ ಸಹೋದ್ಯೋಗಿಯಾಗಿದ್ದು ಬಳಿಕ ಬಾಡಿಗೆ ಮನೆಯಲ್ಲಿ ನನ್ನ ಜೊತೆಗಾರರಾಗಿದ್ದವರು. ನನ್ನ ಕಲ್ಪನೆಯ ಮೇಲೆ ತುಂಬಾ ಧನಾತ್ಮಕ ಪ್ರಭಾವಗಳನ್ನು ಅವರು ಬೀರಿದ್ದಾರೆ. ಏಕೆಂದರೆ ನಮ್ಮ ತಡರಾತ್ರಿಯ ಚರ್ಚೆಗಳು ಮನುಷ್ಯ, ಸಂಬಂಧಗಳು, ಸೃಜನಶೀಲತೆ ಮುಂತಾದ ಮೂಲಭೂತ ವಿಷಯಗಳ ಸುತ್ತವೇ ಇರುತ್ತಿತ್ತು. ಅವರು ಹಲವಾರು ಪುಸ್ತಕಗಳನ್ನು ಓದಲು ಕೊಡುತ್ತಿದ್ದರು ಅಲ್ಲದೆ ಯಾವುದೇ ಆಮಿಷಗಳು ಅವರಿಗೆ ಇದ್ದಂತಿರಲಿಲ್ಲ. ನಿಧಾನ ಮತ್ತು ನಿರ್ಲಿಪ್ತರಿದ್ದ ಅವರು ಅತ್ಯಂತ ಆಳವಾದ ತಿಳುವಳಿಕೆ ಹೊಂದಿದ್ದು, ವಿಜ್ಞಾನ, ಖಗೋಳ, ಬದುಕಿನ ಸೂಕ್ಷ್ಮಗಳ ಬಗ್ಗೆ ಆಳವಾದ ಜ್ಞಾನವುಳ್ಳವರು. ಹೆಸರಿನ ಹಪಹಪಿಕೆಗಳು ಒಂದರ್ಥದಲ್ಲಿ ಸುಮ್ಮನೆ ಎಂಬುದು ನನಗೆ ಸ್ಪಷ್ಟವಾಗಿತ್ತು. ಆದರೆ ಬಾಹ್ಯದಲ್ಲಿ ನನ್ನ ಮಟ್ಟಿಗೆ ಜೀವಂತ ಆಸೆಗಳು ಮತ್ತು ಕನಸುಗಾರಿಕೆ ಕೂಡ ಇದ್ದಿತು. ಆಗ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎಂ. ಎ. ಪದವಿಯನ್ನು 69.2% ಅಂಕಗಳೊಂದಿಗೆ ತೇರ್ಗಡೆಯಾದೆ.
ಹೇಳಿಕೇಳಿ ನನ್ನ ಮಿತ್ರರ ಸಂಖ್ಯೆ ಅಗಾಧ. ಹಾಗೆಂದು ಯಾವುದೇ ಓಲೈಕೆ ನನ್ನದಲ್ಲ. ಸುಮಾರು ಎರಡು ವರ್ಷಗಳಿಗೂ ಹೆಚ್ಚು ಕಾಲ ಪುತ್ತೂರಿನಲ್ಲಿ ಅಧ್ಯಾಪಕನಾಗಿ ದುಡಿದಿದ್ದೆ. ಒಂದು ದಿನ ಪುತ್ತೂರಿನಿಂದ ಹಿಂದಿರುಗುವ ಸಂದರ್ಭ ಸಾಹಿತಿ ವಿ. ಸುಬ್ರಹ್ಮಣ್ಯ ಭಟ್ ಅವರ ತಮ್ಮ, ಉಪನ್ಯಾಸಕ ಶಂಕರ ಭಟ್ ಅವರು ಅಡ್ಯನಡ್ಕದಲ್ಲಿ ಕನ್ನಡ ಹುದ್ದೆ ಖಾಲಿ ಇರುವ ಬಗ್ಗೆ ಸುಳಿವು ನೀಡಿದರು. ಆ ಪ್ರಕಾರ ಸಲ್ಲಿಸಿದ ಅರ್ಜಿಯಂತೆ ಅಡ್ಯನಡ್ಕದಲ್ಲಿ ಅಂದಿನ ಪ್ರಾಂಶುಪಾಲ ಬಿ. ಈಶ್ವರ ಭಟ್ ಶಿಫಾರಸು ಮಾಡಿದ್ದು, ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾಗಿದ್ದ ಪೂಜ್ಯ ವಾರಣಾಶಿ ಸುಬ್ರಾಯ ಭಟ್ಟರು ಅಧಿಕೃತವಾಗಿ ಕನ್ನಡ ಅಧ್ಯಾಪಕನನ್ನಾಗಿ ನೇಮಿಸಿದರು. ಸುಮಾರು ಎರಡು ವರ್ಷಗಳ ಬಳಿಕ ಈ ಹುದ್ದೆ ಸರಕಾರದಿಂದ ವೇತನಾನುದಾನ ಪಡೆಯಿತು.
ನಾನು ಅಡ್ಯನಡ್ಕಕ್ಕೆ ಸೇರಿಕೊಂಡ ಸಂದರ್ಭದಲ್ಲೇ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಯುಜಿಸಿ ನಡೆಸುವ ಎನ್ಇಟಿ ಮತ್ತು ಜೂನಿಯರ್ ರಿಸರ್ಚ್ ಫೆಲೋಶಿಪ್ ಪರೀಕ್ಷೆ ಬರೆದಿದ್ದೆ. ಕೇವಲ ಒಂದೇ ಪ್ರಯತ್ನದಲ್ಲಿ ಯಶಸ್ವಿಯಾಗಿ 2009ರ ಎನ್ಇಟಿ ಲೆಕ್ಚರ್‍ಶಿಪ್ ಮತ್ತು ಜೂನಿಯರ್ ರಿಸರ್ಚ್ ಫೆಲೋಶಿಪ್ ಎವಾರ್ಡ್ ಎರಡನ್ನೂ ನಾನು ಪಡೆದಿದ್ದೆ. ಅತ್ಯಂತ ವಿರಳವಾಗಿ ಪ್ರಾಪ್ತವಾಗಬಲ್ಲ ಆ ಸಫಲತೆ ನನ್ನ ಬದುಕಿನಲ್ಲಿ ಅತ್ಯಂತ ಮಹತ್ವದ್ದಾಗಿದೆ.
ಅಡ್ಯನಡ್ಕದಲ್ಲಿ ನಾನು ನೆನಪಿಡಬೇಕಾದ ವ್ಯಕ್ತಿಗಳು ಅನೇಕರಿದ್ದಾರೆ. ಈ ಸಂದರ್ಭದಲ್ಲಿ ಸಂಚಾಲಕರಾಗಿರುವ ಡಾ. ಅಶ್ವಿನಿ ಕೃಷ್ಣಮೂರ್ತಿ, ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರ್ ಉಪಕರಿಸಿರುವುದು ನಿಜ. ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು ಮತ್ತು ಎಲ್ಲ ಸಹೋದ್ಯೋಗಿಗಳು ವಿವಿಧ ಸಂದರ್ಭಗಳಲ್ಲಿ ನೀಡಿರುವ ಪ್ರೋತ್ಸಾಹ ಮತ್ತು ಪ್ರಶಂಸೆಗಳು ಮಾನ್ಯ.
ಮಕ್ಕಳಿಗೆ ಕನ್ನಡ ಪಾಠ ಹೇಳುವ ಅವಕಾಶ ತುಂಬ ಇಷ್ಟ ಮತ್ತು ಆಪ್ತ. ಅದನ್ನು ಅನುಭವಿಸಲು ನನಗೆ ಸಾಧ್ಯವಾಗಿರುವುದು ಸೌಭಾಗ್ಯ. ಈ ಮಧ್ಯೆ ವಿದ್ಯಾರ್ಥಿಗಳಿಗೆ ಅನೇಕ ಪ್ರಾರ್ಥನೆಗಳನ್ನು ರಚಿಸಿ, ರಾಗ ಸಂಯೋಜಿಸಿ ಕಲಿಸಿದ್ದೇನೆ. ಹಲವು ತರಬೇತಿ ಶಿಬಿರಗಳಲ್ಲಿ ಮಕ್ಕಳಿಗೆ ಬರವಣಿಗೆಯ ಬಗ್ಗೆ ಹೇಳಿಕೊಟ್ಟಿದ್ದೇನೆ. ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯ ಮತ್ತು ವಿದ್ಯಾಭಾರತಿ ಹಮ್ಮಿಕೊಂಡಿರುವ ಮಕ್ಕಳ ಶಿಬಿರಗಳಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿ ಸಂಪನ್ಮೂಲ ವ್ಯಕ್ತಿಯಾಗಿಯೂ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ.
🔴ಕೃತಿ ಪ್ರಕಟಣೆ
ನನ್ನ ಚೊಚ್ಚಲ ಕೃತಿ ಪ್ರಕಟವಾಗಿದ್ದು 2011ರಲ್ಲಿ. ನಾನು ಕಾರ್ಯನಿರ್ವಹಿಸುವ ಜನತಾ ವಿದ್ಯಾಸಂಸ್ಥೆಯಲ್ಲೇ ಆ ಪುಸ್ತಕ ಬಿಡುಗಡೆ ಸಮಾರಂಭ ನಡೆದದ್ದು ವಿಶೇಷ. 'ನಗುವ ಹೂ' ಎಂಬ ಆ ಪುಸ್ತಕದಲ್ಲಿರುವ ನನ್ನ ಕವನಗಳೆಲ್ಲವೂ ಪತ್ರಿಕೆಗಳಲ್ಲಿ ಪ್ರಕಟವಾದವುಗಳೇ. ಆ ನಂತರ ನನ್ನ ಪ್ರಕಟಿತ ಕವನಗಳನ್ನು ಆಯ್ದು 'ತೆರೆದ ಅಧ್ಯಾಯ' ಎಂಬ 250 ಪುಟಗಳ ಪಿಡಿಎಫ್ ಪುಸ್ತಕವನ್ನು ಇತ್ತೀಚೆಗೆ ನಾನೇ ಆನ್‌ಲೈನ್‌ನಲ್ಲಿ ಪ್ರಕಟಿಸಿದೆ.
🔴ಯೋಗ ತರಬೇತಿ
2015ರಲ್ಲಿ ಆಯುಷ್ ಇಲಾಖೆಯ ಯೋಗ ತರಬೇತಿಯಲ್ಲಿ ಅನೇಕ ವಿಷಯಗಳನ್ನು ತಿಳಿಯುವಂತಾಯಿತು. Mind sound resonance technique ( ಚಿತ್ತ ಶಬ್ದಾನುರಣನ ತಂತ್ರ) ಎಂಬ ಧ್ಯಾನ ಅವುಗಳಲ್ಲೊಂದು. ಆ ಬಳಿಕ Body consciousness, subconscious mind programming, telepathy, feng shui ಹೀಗೆ ಹಲವಾರು ವಿಷಯಗಳ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದ್ದು, ಪ್ರಯೋಗಗಳು ದೂರಗಾಮಿಯಾಗಿ ಫಲಿಸಿವೆ.
2018ರಲ್ಲಿ ಅಕ್ಷರ ಫೌಂಡೇಶನ್‍ನವರು ತರಬೇತಿಯಲ್ಲಿ ತಿಳಿಸಿದ ಅನುಗ್ರಹ ಧ್ಯಾನ ಮಾರ್ಗ ಕೂಡ ಒಂದು ವಿಶೇಷ ಹೊಳಹು ಮೂಡಿಸಿದೆ.
🔴ಅನ್ವೇಷಣೆ
ವೈಯಕ್ತಿಕ ಅನಿಸಿಕೆಯಂತೆ ನನ್ನ ಗಮನವಿರುವುದು ಸಾಹಿತ್ಯದ ಸಾಧನೆಯಲ್ಲಿ ಆಗಿರದೆ ಅದರ ಪದ್ಧತಿಯ ಬಗ್ಗೆ. ಸಾಹಿತ್ಯವನ್ನು ಖಂಡಿಸುವುದಕ್ಕಿಂತ ಅದು ಹೇಗಿರಬೇಕೆಂಬ ಬಗ್ಗೆ ನನ್ನ ಮಟ್ಟಿಗೆ ಸ್ಪಷ್ಟ ನಿರ್ಧಾರವಿದೆ. ಸ್ವಭಾವೋಕ್ತಿ, ಇರುವುದನ್ನು ಇರುವ ಹಾಗೆಯೇ ಹೇಳುವ, affirmative ಆಗಿರುವ ಸಾಹಿತ್ಯ ಅಗತ್ಯ. ಏಕೆಂದರೆ ಅದು ಮನುಷ್ಯನ ಒಳಗೆ ಎಷ್ಟೋ ಕೆಲಸ ಮಾಡುತ್ತದೆ. ಅದೇ ರೀತಿ ಟ್ರಿಪಲ್ ವರ್ಡ್‌ಗಳಿಂದ ಕೂಡಿರುವ ಬರವಣಿಗೆ ನಮ್ಮೊಳಗೆ ಮಾಡುವ ಕೆಲಸ ಅಗಾಧ. ಉದಾಹರಣೆಗೆ, ನಿರ್ಭೀತಿ, ಅಮಿತ, ಅಸೀಮ, ಅನಾದಿ, ಅಮೃತ, ಅವಿನಾಶ, ಅಚಲ ಈ ಬಗೆಯ ಹಲವಾರು ಪದಗಳ ಬಳಕೆ. ಯಾಕೆ ಸ್ವಭಾವೋಕ್ತಿ ಮುಖ್ಯ ಎಂದರೆ ಉಳಿದ ಹೆಚ್ಚಿನ ಅಲಂಕಾರಗಳನ್ನು ಬಳಸಬೇಕಾದಾಗ ನಾವು ಬಾಹ್ಯ ಆಧಾರಗಳಿಗೆ ಹೋಗುತ್ತೇವೆ. ವಾಸ್ತವದಲ್ಲಿ ನೀನು ನೀನೇ ಎಂದ ಮೇಲೆ ಆಧಾರಗಳನ್ನು ಬಳಸಿದಾಗ ಮಿತಿ ಸಿದ್ಧಮಾಡಿದಂತೆ. ಆದುದರಿಂದ ಅಲಂಕಾರಗಳು ಬೇಕಾಗುವುದಿಲ್ಲ. Affirmative ಆಗಿರಬೇಕು ಏಕೆಂದರೆ ಭೂತಕಾಲ ಮತ್ತು ವರ್ತಮಾನಗಳು ಊಹೆಯನ್ನು ಹುಟ್ಟುಹಾಕುತ್ತವೆ. ಊಹೆ ಬೇಕಾಗಿಲ್ಲ. ವಾಸ್ತವ ಮಾತ್ರ. ಬರೀ ವಾಸ್ತವ ಮತ್ತು ಅಂಗೀಕರಣ. ನಮಗೆ ಹುಟ್ಟುಹಾಕಬೇಕಾದ ಒಂದು ಆನಂದದ ಮಾದರಿ straight line pattern ಎಂದು ನನ್ನ ಭಾವನೆ. ಅದರಿಂದ ಅಪಾಯವೇನಿಲ್ಲ. ಆದರೆ random ಆಗಿ ಬರುವ ನೆನಪುಗಳು, ಊಹೆಗಳು ಗೊಂದಲಕ್ಕೆ ಕಾರಣ. ಸಮತೋಲನವನ್ನು ಭಾಷೆಯ ಮೂಲಕವೂ ಸಾಧಿಸಬಹುದು ಎಂಬುದು ನನ್ನ ವಾದ. ಅದನ್ನು ಅನುಸರಿಸಬೇಕೆಂಬುದು ಒಂದು ಕಠಿಣ ಕಾಳಜಿ. ಸ್ವರಗಳನ್ನು ಧ್ಯಾನದಲ್ಲಿ ಬಳಸುತ್ತೇವೆ. ಅಷ್ಟೇ ಅಲ್ಲ ಮನಸ್ಸನ್ನು ಸಿದ್ಧಪಡಿಸಲು ಸ್ವರದಿಂದ ಸಾಧ್ಯ. ಸ್ವರಚಿಕಿತ್ಸೆಯಂತೆ ಸಾಹಿತ್ಯ ಒಂದು ಸಂಸ್ಕಾರದ ಮಾರ್ಗ. ಬಳಿಕ ಬೇಕಾದಲ್ಲಿ ಸವಿನೆನಪುಗಳನ್ನು ಸಮತೋಲನದಲ್ಲಿ ನಿಂತು ಜಾಗರೂಕರಾಗಿ ಶೋಧಿಸಿ ಆಯಬಹುದು. ರೀವೈರಿಂಗ್‍ನಂತೆ. ಅಂತೂ ಸಾಹಿತ್ಯ ಒಂದು ಕರ್ಮ. ಅದು ಮನಸ್ಸಿನ ಮತ್ತು ಮನುಷ್ಯನ ಮೇಲೆ ತುಂಬಾ ಪರಿಣಾಮವನ್ನು ತರುವಂಥದ್ದಾಗಿದೆ. ಸಾಹಿತ್ಯದ ಮೂಲಕ ಮನುಷ್ಯನ ಬದುಕಿನಲ್ಲಿ ಸತ್ಪರಿಣಾಮಗಳನ್ನು ತರುವಂತಾಗಬೇಕು.
🔴ಕೃತಜ್ಞತೆ
ಈ ಪುಟ್ಟ ಬರಹ ರೀವೈರಿಂಗ್ ಎಂಬ ಮಹತ್ವದ ಪ್ರಕ್ರಿಯೆಗಾಗಿ ಬರೆದದ್ದು. ಹೀಗಿದ್ದೂ ಇಲ್ಲಿ ಅನೇಕ ವ್ಯಕ್ತಿಗಳನ್ನು ಉಲ್ಲೇಖಿಸಲು ಸಾಧ್ಯವಾಗಿಲ್ಲ. ಅನೇಕ ಅಧ್ಯಾಪಕರನ್ನೂ ಕೂಡ, ಬಂಧುಗಳ ಬಗ್ಗೆ ಕೂಡ ಉಲ್ಲೇಖಿಸಲಾಗಿಲ್ಲ. ರಾಜಾರಾಮ ವರ್ಮ, ವೇಣುವಿನೋದ್ ಕೆ. ಎಸ್, ರಾಜಶೇಖರ್ ವಿಟ್ಲ ಮುಂತಾಗಿ ನೂರಾರು ಮಿತ್ರರು. ಅನೇಕರು ನನ್ನ ಫೇಸ್ ಬುಕ್ ಗೆಳೆಯರಾಗಿರಲೂಬಹುದು. ಇನ್ನು ಹಲವರು ನನ್ನ ಫೋನ್ ಬುಕ್‌ನಲ್ಲೂ ಇರಬಹುದು. ಕೆಲವರು 'ಅಮೃತವಾಹಿನಿ'ಯವರಿರಬಹುದು. ಕೆಲವರು ಅಲ್ಲೆಲ್ಲೂ ಇಲ್ಲದಿರಲೂಬಹುದು. ಆದರೆ ನಾನು ಬದುಕಿನಲ್ಲಿ ಪಡೆದ ಪ್ರೀತಿ ಮತ್ತು ಅನುಭವಗಳ ನಿಷ್ಪತ್ತಿಯಂತೆ ಪ್ರತಿಯೊಂದಕ್ಕೂ ಕೃತಜ್ಞನಾಗಿದ್ದೇನೆ.
✍️ಶಿವಕುಮಾರ ಸಾಯ 'ಅಭಿಜಿತ್'
I am really proud of you
ReplyDeleteವಿದ್ಯಾರ್ಥಿ ಸ್ನೇಹಿತನಿಗೆ ಇನ್ನೂ ಎತ್ತರಕ್ಕೇರು ಎಂದು ಶುಭ ಕೋರುತ್ತೇನೆ
ReplyDelete