ಹಿತಮಿತವಾಗಿದ್ದರೆ ಎಲ್ಲವೂ ಉತ್ತಮವೇ!

"ಅತಿರೂಪಾತ್ ಹೃತಾ ಸೀತಾ ಅತಿಗರ್ವಾತ್ ರಾವಣೋ ಹತಃ | ಅತಿದಾನಾತ್ ಬಲಿರ್ಬದ್ಧಃ ಅತಿ ಸರ್ವತ್ರ ವರ್ಜ್ಯಯೇತ್||"
- ಸಂಸ್ಕೃತ ಸುಭಾಷಿತಕಾರನೊಬ್ಬ ಲೋಕಸತ್ಯವನ್ನು ಸರಳವಾಗಿ ಹೇಳಿದ್ದು ಹೀಗೆ. ಅತಿ ರೂಪದಿಂದಾಗಿ ಸೀತೆ ಅಪಹರಣಕ್ಕೊಳಗಾದಳು. ಅತಿ ಗರ್ವದಿಂದಾಗಿ ರಾವಣ ಹತನಾದ. ಅತಿ ದಾನಬುದ್ಧಿಯಿಂದಾಗಿ ಬಲಿ ಪಾತಾಳಕ್ಕೆ ತಳ್ಳಲ್ಪಟ್ಟ. ಆದುದರಿಂದ ಸರ್ವತ್ರ ಈ ಅತಿಯನ್ನು ಬಿಟ್ಟುಬಿಡಬೇಕು ಎಂಬುದು ಅವನ ಮಂತ್ರ.
"ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ ।ಹಿತವಿರಲಿ ವಚನದಲಿ, ಋತವ ಬಿಡದಿರಲಿ ।।ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ ।
ಅತಿ ಬೇಡವೆಲ್ಲಿಯುಂ – ಮಂಕುತಿಮ್ಮ ।।" ಈ ಮಾತನ್ನು ಕನ್ನಡ ಕವಿ ಡಿ. ವಿ. ಗುಂಡಪ್ಪನವರು ಹೇಳಿದ್ದಾರೆ.
ಅತಿಯಾದರೆ ಅಮೃತವೂ ವಿಷವಾಗಿಬಿಡುತ್ತದೆ ಎನ್ನುತ್ತಾರೆ. ಮೌನ ಒಳ್ಳೆಯ ಲಕ್ಷಣ. ಆದರೆ ಅದೇ ಅತಿಯಾದರೆ ಬಂಧನವೇ. ವಿನಯ ಒಳ್ಳೆಯ ಲಕ್ಷಣ. ಹಾಗೆಂದು ಕೇವಲ ನಮ್ರತೆಯೊಂದೇ ಉಳಿದು ಬರೀ ಸಾತ್ವಿಕ ಕ್ರೋಧವೂ ಇಲ್ಲದಿದ್ದರೆ ಅಂತಹವನ ಗತಿಯೇನು? ಪ್ರೀತಿ ಒಳ್ಳೆಯ ಲಕ್ಷಣ. ಹಾಗೆಂದು ಅದು ವ್ಯಾಮೋಹವಾದರೆ ಕಷ್ಟವೇ. ಆಸೆ ಒಳ್ಳೆಯ ಲಕ್ಷಣ. ಆದರೆ ಅಸೆ ಅತಿಯಾದರೆ ಗತಿಗೇಡು. ಅದೇ ರೀತಿ ಬಹುತೇಕ ಪುರಾಣ - ಮಹಾಕಾವ್ಯಗಳಲ್ಲಿ ಪ್ರತಿಯೊಂದು ಪಾತ್ರದ ಕತೆ ಹೇಳಬೇಕಿದ್ದಾಗಲೂ ಒಂದೊಂದು ಗುಣ ಎದುರಿಸಿದ ತಾಕಲಾಟಗಳನ್ನು, ವಿಪರ್ಯಾಸಗಳನ್ನು, ಹಾಗೆಯೇ ಹಿತಮಿತವಾಗಿದ್ದಾಗ ಗುಣಗಳು ವ್ಯಕ್ತಿಗೆ ಪ್ರಾಪ್ತಗೊಳಿಸಿದ ವಿಜಯಗಳನ್ನು ಕವಿಗಳು ವರ್ಣಿಸಿದ್ದಾರೆ. ಮಹಾಕವಿಗಳು ಎಲ್ಲಾ ಪಾತ್ರಗಳನ್ನು ಮುಂದಿರಿಸಿ ಸಾರಿದ ನಿಜಾಂಶ ಇದೇ. ಈ ಬರಹ ಸದ್ಗುಣ ಮತ್ತು ದುರ್ಗುಣಗಳನ್ನು ಗೆರೆ ಎಳೆದು ತೋರಬಲ್ಲ ಉದ್ದೇಶಿತ ತತ್ತ್ವೋಪದೇಶವಲ್ಲವಾದ್ದರಿಂದ ಆ ಬಗ್ಗೆ ಇಲ್ಲಿ ತೀರ್ಮಾನಗಳನ್ನು ನೀಡುವುದು ಆದ್ಯತೆಯಲ್ಲ. ಆದರೆ ಲೋಕಸತ್ಯ ಅಥವಾ ನ್ಯಾಯ ಯಾವ ಬಗೆಯಲ್ಲಿರುತ್ತದೆ ಎಂದು ವಿವೇಚಿಸಿದಾಗ ಯಾವುದೇ ಗುಣವಾಗಲೀ ಹಿತಮಿತವಾಗಿದ್ದಾಗ ಬಾಳುತ್ತದೆ. ಅತಿಯಾದಾಗ ಅದು ಪತನವನ್ನನುಭವಿಸುತ್ತದೆ ಎಂಬುದು ತಿಳಿದುಬರುತ್ತದೆ. ಇದು ಒಂದು ಸಾರ್ವತ್ರಿಕ ಸತ್ಯ. ಇದನ್ನರಿತು ಪ್ರತಿಯೊಂದು ಗುಣವನ್ನು ಕೂಡಾ ನಮ್ಮ ಬದುಕಿನಲ್ಲಿ 'ಪ್ರಮಾಣ ಪ್ರಜ್ಞೆ'ಯಿಂದ ಇಟ್ಟುಕೊಳ್ಳಬೇಕಾದುದು ಜೀವಿಗಳ ಉಳಿವಿನ ಗುಟ್ಟು ಎಂದು ಹೇಳಬೇಕಾಗುತ್ತದೆ.
ಕೆಲವರು ತಮ್ಮ ಆರೋಗ್ಯದ ಬಗ್ಗೆಯಾಗಲೀ, ವೈಯಕ್ತಿಕ ವಿಚಾರಗಳ ಬಗ್ಗೆಯಾಗಲೀ ಏನನ್ನೂ ಹೇಳಿಕೊಳ್ಳುವುದಿಲ್ಲ. ಮತ್ತೆ ಕೆಲವರು ಒತ್ತಡವನ್ನು ವೃಥಾ ಒಳಗೆಳೆದುಕೊಳ್ಳುವಂಥವರು. ಆದರೆ ನಾವು ಒಂದು ಮಿತಿಯಲ್ಲಿ ನಮ್ಮ ಬಗ್ಗೆ ಹೇಳಿಕೊಳ್ಳಲೂ ಬೇಕು. ಹಾಗೆಯೇ ಯಾರು ಹೆಚ್ಚು ಅಂತರ್ಮುಖಿಗಳಿದ್ದಾರೋ ಅಂಥವರನ್ನು ಒಮ್ಮೊಮ್ಮೆ ಹಿತಮಿತವಾಗಿ ಸಂತೈಸಿದರೆ ಅವರ ನೋವುಗಳನ್ನೂ ಶಮನಗೊಳಿಸಿದಂತಾಗುತ್ತದೆ.
ನಮ್ಮಲ್ಲಿ ಎಲ್ಲವೂ ಹಿತವಾಗಿ, ಮಿತವಾಗಿ ಬೇಕು. ವರ್ಜಿಸಬೇಕಾದ್ದು ಏನನ್ನೂ ಅಲ್ಲ - ಆದರೆ ಈ ಅತಿಯನ್ನು. ಅದು ನಾವು ಮಾಡುವ ಆಲೋಚನೆಯಾಗಿರಬಹುದು. ಆರಿಸಿದ ವಿಷಯವಾಗಿರಬಹುದು. ವೃತ್ತಿ - ಪ್ರವೃತ್ತಿ - ಸಂಬಂಧ ಯಾವುದೂ ಆಗಿರಬಹುದು. ಏನೂ ಆಗಿರಬಹುದು. ಅತಿಯಾದೊಡನೆ ಪರೀಕ್ಷೆಗೊಳಪಡುತ್ತದೆ.
ನಮ್ಮ ಎಲ್ಲರ ಜೀವನವೂ ಪರಿಪೂರ್ಣವಲ್ಲ. ಎಲ್ಲರಲ್ಲೂ ಎಲ್ಲ ಸಂದರ್ಭದಲ್ಲೂ ಎಲ್ಲ ಗುಣಗಳೂ ಸ್ಥಿರವಾಗಿದ್ದರೆ ಗುಣಗಳ ವರ್ತನೆಯೇ ಉಂಟಾಗದೇನೋ. ಆಗ ಜಗತ್ತು ಸ್ತಂಭಿಸಿಬಿಡಬಹುದು. ಆದರೆ ಹಾಗಾಗುವುದಿಲ್ಲ. ಏಕೆಂದರೆ ಜಗತ್ತಿನ ಪರಿವರ್ತನೆಗಳಿಗೆ ಗುಣಗಳ ಏರುಪೇರುಗಳು ಮತ್ತು ವರ್ತನೆಗಳು ಆಧಾರ.
ಪ್ರತಿಯೊಬ್ಬರಿಗೂ ವಿಭಿನ್ನವಾದ ತಾಪತ್ರಯಗಳು - ಆದಿಭೌತಿಕ, ಆದಿದೈವಿಕ, ಆಧ್ಯಾತ್ಮಿಕ ರೂಪದಲ್ಲಿ ಇದ್ದೇ ಇರುತ್ತವೆ. ಯಾರೂ ಕ್ಷುಲ್ಲಕವಲ್ಲ. ನಾವು ಎಲ್ಲರನ್ನೂ ಅವರ ಪರಿಸ್ಥಿತಿಗಳಲ್ಲಿ ನೋಡಿ ಒಪ್ಪಿಕೊಳ್ಳಲೇಬೇಕು.
ಯಾವ ಗುಣವೂ ದೌರ್ಬಲ್ಯವಾಗಬಾರದು. ಪ್ರಾಬಲ್ಯವಾಗಬೇಕು. ಹಿತಮಿತವಾಗಿದ್ದಾಗ ಎಲ್ಲ ಗುಣವೂ ಪ್ರಾಬಲ್ಯವೇ ಆಗಿರುತ್ತದೆ. ಮನಸ್ಥಿತಿ ಮತ್ತು ಪರಿಸ್ಥಿತಿಗಳು ಪ್ರಕೃತಿಯ ಭಾಗವಾದ್ದರಿಂದ ನಾವು ಚಲನಶೀಲ ಜಗತ್ತಿನಲ್ಲಿ ಔಚಿತ್ಯಾನುಸಾರ ಪ್ರತಿಕ್ರಿಯಾತ್ಮಕವಾಗಿರಬೇಕು. ಎಲ್ಲರೊಳಗೊಂದಾಗಿ, ಸಹಬಾಳ್ವೆಯಿಂದ ಬದುಕಬೇಕು.

✍️ ಶಿವಕುಮಾರ ಸಾಯ 'ಅಭಿಜಿತ್'


Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್