ಚೈತನ್ಯದ ಆಂದೋಲನ ನಿರಂತರ - ಇದು ಜೀವ, ಇದೇ ಜೀವನ!
“No man ever steps in the same river twice, for it's not the same river and he's not the same man.” - ಹೀಗೆಂದು ಹೇಳಿದವನು ಹಿರಾಕ್ಲಿಟಸ್. ಬದುಕಿನ ಬಗ್ಗೆ ಆತ ಎಷ್ಟೊಂದು ಅರ್ಥವತ್ತಾಗಿ ಹೇಳಿದ್ದಾನೆ ಅಲ್ಲವೇ? ನದಿ ಹೇಗೆ ಕ್ಷಣ ಕ್ಷಣ ಬದಲಾಗುತ್ತಿರುತ್ತದೆಯೋ ಮನುಷ್ಯ ಕೂಡ ಕ್ಷಣ ಕ್ಷಣ ಬದಲಾಗುತ್ತಾನೆ. ಅಚಲ ಎಂದು ಭಾವಿಸಿದರೆ ಎಲ್ಲವೂ ಅಚಲ, ಸ್ಥಿರ. ಆದರೆ ಪ್ರತಿಕ್ಷಣ ಬದಲಾವಣೆಯೊಂದಿಗೆ ಪ್ರಕೃತಿಯಾಗಿ ತೆರೆದುಕೊಳ್ಳುವುದು ಬ್ರಹ್ಮಾಂಡವೇ. "ಜೀವನ" ಎಂಬ ಪದವನ್ನು ಬದುಕಿಗೆ ಅನ್ವರ್ಥವಾಗಿ ಬಳಸುವಾಗ ಅದರ ನೀರು ಎಂಬರ್ಥವನ್ನು ಗ್ರಹಿಸಬೇಕು. ನೀರು ಎಲ್ಲಾ ಸ್ಥಿತಿಯಲ್ಲೂ ಇರುತ್ತದೆ. ಈ ಅನಂತ, ಅಖಂಡ ವಿಶ್ವವೂ ತನ್ನಷ್ಟಕ್ಕೆ ತಾನೇ ಬಹು ಆಯಾಮಗಳ ಬೃಹತ್ ಬೆಳಕು ಅಂದರೆ ಚೈತನ್ಯ. ಅದು ಅದರಷ್ಟಕ್ಕೇ ಸ್ಥಿರವೂ, ಚಲನಶೀಲವೂ ಹೌದು. ಅದು ಬದಲಾಗುವ ಸ್ವರೂಪ ಹೊಂದಿರುವುದರಿಂದಲೇ ಶಾಶ್ವತ! ಅದಕ್ಕೆ ಒಳಗೆ ಹೊರಗೆ ಎಂಬುದಿಲ್ಲ. ಅದರ ಹೊರಗೆ ಮತ್ತೊಂದು ಎಂಬುದೂ ಇಲ್ಲ. ಜೀವವಿಜ್ಞಾನವು ಉಸಿರಾಟದ ಆಧಾರದಲ್ಲಿ, ಹೃದಯಬಡಿತದ ಆಧಾರದಲ್ಲಿ ಜೀವಂತಿಕೆಯನ್ನು ಗುರುತಿಸುತ್ತದೆ. ದೇಹದ ಕಣಕಣಗಳಲ್ಲಿ ಶಕ್ತಿಯ ಸ್ವೀಕರಣೆಯಾಗುತ್ತದೆ. ಶಕ್ತಿಯ ಪರಿವರ್ತನೆಯಾಗುತ್ತದೆ. ಶಕ್ತಿಯ ಬಿಡುಗಡೆಯಾಗುತ್ತದೆ. ಜೀವಿ ಪರಿಸರಶಾಸ್ತ್ರದಲ್ಲಿ ಜೀವಿಗಳ ಮೂಲ ಉದ್ದೇಶ ಪ್ರತ್ಯುತ್ಪಾದನೆಯಲ್ಲದೆ ಮತ್ತೇನೂ ಅಲ್ಲ ಎನ್ನುತ್ತಾರೆ. ರಸಾಯನಶಾಸ್ತ್ರವು ...