ವಿಮರ್ಶೆಯೊಂದು ಪ್ರತಿಕ್ರಿಯೆ

ನನ್ನ ನಿಡುಗಾಲದ ಮಿತ್ರ, ಹಿರಿಯರಾದ ಸನ್ಮಾನ್ಯ ಶ್ರೀಯುತ ಉದಯಕುಮಾರ್ ರೈ ಅವರು ಹಲವು ವರ್ಷಗಳ ಹಿಂದೆ ಮಾತನಾಡುವಾಗ "ಯಾವುದೇ ವಿಚಾರವನ್ನು ಯಾರು ಹೇಳಿದರೂ ಅರ್ಧ ಒಪ್ಪಿಕೊಳ್ಳಬೇಕು. ಉಳಿದ ಅರ್ಧವನ್ನು ಪರೀಕ್ಷೆಗೆ ಹಾಕಬೇಕು" ಎನ್ನುತ್ತಿದ್ದರು.
"ನೀರು ಎಂದರೇನು?" ಎಂದು ಕೇಳಿದರೆ ಒಬ್ಬ ಒಂದು ಲೋಟದಲ್ಲೂ, ಮತ್ತೊಬ್ಬ ಚಮಚದಲ್ಲೂ, ಮತ್ತೊಬ್ಬ ಹನಿಯನ್ನೂ, ಇನ್ನೊಬ್ಬ ಸಾಗರವನ್ನೂ ತೋರಿಸಿಯಾನು. ಜಲವೆಂದರೆ ಜೀವನ, ಜೀವನವೆಂದರೆ ಜಲ - ಅದು ಮಾತ್ರ ತಾನು ಅದಲ್ಲ, ಇದಲ್ಲ ಎಂಬಂತೆ ಪ್ರವಹಿಸುತ್ತಲೇ ಇರುತ್ತದೆ.
ಪ್ರಕೃತಿ ಸತ್ಯ-ಮಿಥ್ಯೆಗಳ ಸಹಿತ ಹೇಳಿಕೆ! ಕೆಲವರು ಸತ್ಯದ ಭಾಗವನ್ನೂ, ಕೆಲವರು ಸುಳ್ಳಿನ ಭಾಗವನ್ನೂ, ಇನ್ನು ಕೆಲವರು ತಮಗೆ ಬೇಕಾದಂತೆಯೂ ಅರ್ಥೈಸಿಕೊಳ್ಳುತ್ತಾರೆ. ಇಡೀ ಬದುಕು ನಿಂತಿರುವುದೇ ಈ ಗ್ರಹಿಕೆ (perception) ಹಾಗೂ ಪ್ರತಿಕ್ರಿಯೆಗಳ ಆಧಾರದ ಮೇಲೆ. ಪ್ರತಿಯೊಬ್ಬರು ನೀಡುವ ಪ್ರತಿಕ್ರಿಯೆಗಳು ವಿಭಿನ್ನ. ಏಕೆಂದರೆ ಎಲ್ಲರ ನಂಬಿಕೆಗಳು, ಆಲೋಚನೆಗಳು, ಊಹೆಗಳು, ಅವಧಾನ, ಸಾಮರ್ಥ್ಯ, ವಿದ್ಯೆ, ಅರಿವು, ಅನುಭವ ಇವೆಲ್ಲವೂ ಬೇರೆ ಬೇರೆ. ಆದುದರಿಂದ ಅಭಿಪ್ರಾಯಗಳಲ್ಲಿ, ಚಿಂತನೆಗಳಲ್ಲಿ ಸರಿ - ತಪ್ಪು ಎಂಬುದಿಲ್ಲ. ಎಲ್ಲವೂ ಒಂದೊಂದು ದೃಷ್ಟಿಯಿಂದ ಸರಿಯೇ. ಪ್ರತಿಯೊಬ್ಬನೂ ಅವನ ಕಣ್ಣಿನಿಂದಷ್ಟೇ ನೋಡುವುದಕ್ಕೆ ಸಾಧ್ಯ. ಅವನ ಮೆದುಳಿನ ಜೀವರಾಸಾಯನಿಕ ಬದಲಾವಣೆಯಂತೆಯೇ ಯೋಚಿಸುವುದಕ್ಕೆ ಸಾಧ್ಯ, ಹಾಗೆಯೇ ಪ್ರತಿಕ್ರಿಯಿಸಬಲ್ಲನಷ್ಟೇ.
ಬದುಕು ಮತ್ತು ಬದುಕಗೊಡು ಎಂಬಂತೆ ನೀತಿ - ನಿಯಮಗಳು ಸಮಾಜದ ಎಲ್ಲರ ಹಿತಕ್ಕಾಗಿ ರೂಪಿಸಿದ ಕಟ್ಟಳೆಗಳು. ಒಮ್ಮೊಮ್ಮೆ ಆ ಆದರ್ಶ ಇಷ್ಟವಾದೀತು. ಕೆಲವು ನಿಯಮಗಳು ಪೊಳ್ಳು ಆದರ್ಶದಂತೆಯೂ ತೋರೀತು. ಬಹುಶಃ ಇದಕ್ಕಾಗಿಯೇ "ಶಾಸ್ತ್ರ ಹೇಳುವುದಕ್ಕೆ, ಬದನೆಕಾಯಿ ತಿನ್ನುವುದಕ್ಕೆ" ಎಂಬ ಮಾತು. ನುಡಿದಂತೆ ನಡೆಯುವುದು, ನಡೆದಂತೆ ನುಡಿಯುವುದು - ಇವೆಲ್ಲ ಹೇಳುವುದಕ್ಕೆ ಸುಲಭ. ಆದರೆ ಏನಾಗುತ್ತದೆ, ಗುಣಕ್ಕೆ ಗುಣ ಎದುರಾಗುತ್ತಾ ಈ ಗುಣೀಭೂತ ಲೌಕಿಕತೆಯಲ್ಲಿ ವಿಶ್ವನಿಯಮಗಳು ಪಾತ್ರ ವಹಿಸಿ, ನಿಮ್ಮ ಎಲ್ಲಾ ನಿಯತ್ತುಗಳಿಗೂ ತನ್ನದೇ ಸಂದರ್ಭಗಳಲ್ಲಿ ಪ್ರಶ್ನೆಗಳನ್ನೊಡ್ಡಿಯಾವು. ಹೀಗಾಗಿ ಪ್ರಾಯೋಗಿಕ ಜೀವನದಲ್ಲಿ ನಡೆ - ನುಡಿಯ ಅಂತರ ಖಂಡಿತವಾಗಿಯೂ ಎಲ್ಲರಲ್ಲೂ ಅತ್ಯಲ್ಪವಾದರೂ ಇದ್ದೇ ಇರುತ್ತದೆ. ನಾವು ನಮ್ಮನ್ನು ಒಪ್ಪಿಕೊಳ್ಳುವಂತೆ ಎಲ್ಲರನ್ನೂ ಒಪ್ಪಿಕೊಳ್ಳಬೇಕು. ಹೀಗಾಗಿಯೇ ಅಂತಿಮವಾಗಿ ವಿಮರ್ಶೆಯನ್ನು ಒಂದು ಪ್ರತಿಕ್ರಿಯೆ ಮಾತ್ರ ಎಂದು ಭಾವಿಸಲೇ ಬೇಕಾಗುತ್ತದೆ.
✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್