ಬೆಳಕಿನ ಸುಜ್ಞಾನ, ವಿಜ್ಞಾನ, ತತ್ತ್ವಜ್ಞಾನ....
ಹೌದು. ಅಪರಿಪೂರ್ಣತೆಯಿಂದಲೇ ನಾವೆಲ್ಲರೂ ಪರಿಪೂರ್ಣರು. ಅದು ಈ ವಿಶ್ವದ ಚಮತ್ಕಾರೀ ಅಂಶ. ಈ ಅನಂತ ಬ್ರಹ್ಮವನ್ನು ಧ್ಯಾನಿಸಬಹುದಷ್ಟೇ. ಈ ದೀಪಾವಳಿಯಲ್ಲಿ ಬೆಳಕಿನ ಶಾಸ್ತ್ರದ(ಜ್ಯೋತಿಷ) ಒಳಹೊಕ್ಕು ಬರೆಯಬೇಕಾಗಿದೆ. ನೂರಾ ಎಂಟು ಕೋನಗಳಲ್ಲಿ ನಾವು ಯಾವುದೋ ಒಂದು ಮಾತ್ರ. ಹಾಗಿದ್ದೂ ನಮ್ಮೊಳಗೆ ಆ ನೂರಾ ಎಂಟು ಕೋನಗಳು ಮತ್ತೆ ಇವೆ. ಅವೆಲ್ಲದರೊಳಗೆ ಮತ್ತೆ ನೂರಾ ಎಂಟು ಗುಣ.. ಅವೆಲ್ಲದರೊಳಗೆ ಮತ್ತೆ ಅದೇ ನೂರಾ ಎಂಟು... ಹೀಗೆಯೇ ಅದು ಒಳಗೆ ಅನಂತ... ಹೊರಗೆ ಕೂಡ ನಮ್ಮಂತೆಯೇ ನೂರಾ ಎಂಟು ನಕ್ಷತ್ರಪಾದಗಳ ಗುಣ. ಅವುಗಳೊಳಗೆ ವರ್ತನೆ.. ಹಾಗೆಯೇ ಬೆಳೆದ ಈ ಸೌರವ್ಯೂಹ, ಅದರಾಚೆ ನೂರಾ ಎಂಟು ವಿಭಿನ್ನ ಸೌರವ್ಯೂಹಗಳು, ಅದರದ್ದೊಂದು ಪುಂಜ, ಅದರಾಚೆ ಅಂಥದ್ದೇ ನೂರಾ ಎಂಟು ಬೆಳಕಿನ ಪುಂಜ.. ಹೀಗೆಯೇ ಒಂದು ಕ್ರಮದಲ್ಲಿ ಈ ಅನಂತ ಬ್ರಹ್ಮಾಂಡದ ಅಸ್ತಿತ್ವ. ಇಲ್ಲಿ ನಾವು ಎಂಬುದೇ ನಾನು ಎಂಬುದಾಗಿ ತೋರ್ಪಡುವುದು. ದೈನಂದಿನ ಬದುಕಿನಲ್ಲಿ ನಮ್ಮ ಪ್ರೀತಿ, ಕೋಪ, ಪ್ರೇಮ, ಕ್ಷಮೆ, ಶಕ್ತಿ, ಮತ್ಸರ ಇಂತಹ ಎಲ್ಲಾ ಗುಣಗಳನ್ನು ವ್ಯಕ್ತಪಡಿಸುತ್ತಾ ಸಾಗುವ ನಾವು ಎಲ್ಲಾ ಗುಣಗಳ ಜೊತೆಗೂ ವಿಭಿನ್ನವಾಗಿ ವರ್ತಿಸುತ್ತಿರುತ್ತೇವೆ. ಅದು ಸಮಯ ಮತ್ತು ಸ್ಥಾನ ಮತ್ತು ಅದನ್ನೂ ಮೀರಿದ ಸ್ಪೇಸ್‌ಟೈಮ್ ಮೇಲೆ ನಿರ್ಣಯಿತ. ಲೆಕ್ಕಾಚಾರಕ್ಕೆ ದೃಗ್ಗಣಿತ ಪ್ರಯೋಜನವಾಗಬಹುದು. ಆದರೆ ನಾವೆಲ್ಲ ಬೆಳಕು. ಅಣುಅಣುಗಳೆಲ್ಲವೂ ಬೆಳಕು. ಎಲ್ಲ ಬಿಂದುಬಿಂದುಗಳೂ ಚಲಿಸುತ್ತಲೇ ಇರುತ್ತವೆ. ಯಾಕೆ ದೈನಂದಿನ ಜೀವನದಲ್ಲಿ ಸಿಹಿ ಕಹಿಗಳು ಸಂಭವಿಸುತ್ತವೆ? ಏಕೆಂದರೆ ನಾವೆಲ್ಲರೂ ಒಂದೇ ಆಗಿದ್ದರೂ ಕಾಲಾಂತರದಲ್ಲಿ ಭಿನ್ನವಾಗಿ ಸ್ಫೋಟಿಸಿದ ಸ್ಪೇಸ್‌ಟೈಮ್ ಅಂತರವಿರುವ ಕಾರಣಕ್ಕೆ. ಅದಲ್ಲವಾದರೆ ನಾವೆಲ್ಲ ಒಂದೇ ಆಗಿರುತ್ತಿದ್ದೆವು. ನೂರಾ ಎಂಟು ನಕ್ಷತ್ರಪಾದಗಳಲ್ಲಿ ಜನಿಸುತ್ತಲೇ ಇರಲಿಲ್ಲ.
ಜಪಮಾಲೆಯನ್ನೊಮ್ಮೆ ಗಮನಿಸಿ. ಅಲ್ಲಿ ನಮ್ಮೆಲ್ಲರದ್ದೊಂದು ಸಂಕೇತವಿದೆ ಗಮನಿಸಿ. ಅಲ್ಲಿ ಹಲವು ಚೋದ್ಯವೂ ಇದೆ. ಅದನ್ನು ವೃತ್ತಾಕಾರವಾಗಿ ಇಟ್ಟಾಗ ಅದರ ಎಲ್ಲಾ ಮಣಿಗಳು ಬೇರೆ ಬೇರೆ ಕೋನಗಳು. ಅಂದರೆ ಮಾಲೆಯಾಗಬೇಕಿದ್ದರೆ, ಅಂದರೆ ಈ ಬ್ರಹ್ಮಾಂಡದಲ್ಲಿ, ಜಗತ್ತಿನ ಪರಿಸರದಲ್ಲಿ ನಾವು ನೂರಾ ಎಂಟು ಗುಣಗಳಿಂದ ಭಿನ್ನರಾದವರಿದ್ದೇವೆ. ಕೆಲವೊಂದು ಮಣಿಗಳು ಬಹುತೇಕ ಹತ್ತಿರ ಇವೆ. ಕೆಲವು ದೂರ. ಕೆಲವು ವಿರುದ್ಧ. ಒಂದರ ಪಾರ್ಶ್ವದಿಂದ ಸರಿಯೆನಿಸಿದ್ದು ಮತ್ತೊಂದು ಪಾರ್ಶ್ವಕ್ಕೆ ತದ್ವಿರುದ್ಧ ಅಂದರೆ ತಪ್ಪೆನಿಸುವುದು ತಪ್ಪಲ್ಲವಲ್ಲಾ! ಸತ್ಯಕ್ಕೆ ಹಲವಾರು ಮುಖಗಳು. ಎಲ್ಲವೂ ದರ್ಶನಗಳು ಅಷ್ಟೇ. ಸುಳ್ಳು ಕೂಡಾ ಸತ್ಯದ ಒಂದು ಕಳ್ಳಮುಖ.
ನಾವೆಲ್ಲಿದ್ದೇವೋ, ಹೇಗೆ ವರ್ತಿಸುತ್ತೇವೋ ಅದು ನಮ್ಮ ಕರ್ಮ. ಆದರೆ ಕಾಲಾಂತರದಲ್ಲಿ ನಮ್ಮ ಸ್ಥಾನ ಈ ನೂರಾ ಎಂಟು ಕೂಡಾ ಆಗುತ್ತದೆ. ಏಕೆಂದರೆ ಈ ನೂರಾ ಎಂಟರ ಸರಣಿ ಅಣುಅಣುಗಳ ಪರಿವರ್ತನೆಯೊಡನೆ ಎಲ್ಲವೂ ಆಗುತ್ತದೆ. ಒಂದು ವೇಳೆ ನೂರಾ ಎಂಟರಲ್ಲಿ ಒಂದು ಗುಣ, ಸ್ವಂತಿಕೆಯನ್ನು ಬಿಟ್ಟು, ಮತ್ತೊಂದನ್ನು ಅನುಸರಿಸಿದರೆ, ಇಡೀ ಅಸ್ತಿತ್ವವೇ ಇರುವುದಿಲ್ಲ. ಬ್ರಹ್ಮಾಂಡಕ್ಕೆ ಸ್ವಂತಿಕೆಯಿದ್ದರೂ ಧಾತುಗಳಿಗೆ ಸಮಷ್ಟಿಯೇ ಸ್ವಂತಿಕೆಯಾದ್ದರಿಂದ ಅದು ಸಮಷ್ಟಿ ನೆಲೆಯ ಲೆಕ್ಕಾಚಾರದಲ್ಲಿ Law of conservation of energy ಪ್ರಕಾರವೇ ಉಳಿಯುತ್ತದೆ ಮತ್ತು ನೂರಾ ಎಂಟು ವಿಭಿನ್ನ ಬ್ರಹ್ಮಾಂಡಗಳ ಸೃಷ್ಟಿ ಆಗುತ್ತಾ ಹೋಗುತ್ತಾ, ಮುಂದಕ್ಕೂ ಹಿಂದಕ್ಕೂ, ಮೇಲೆಯೂ, ಕೆಳಗೂ, ಆಚೆಯೂ, ಈಚೆಯೂ, ಸಮಸ್ತದಲ್ಲಿ ಎಲ್ಲೆಲ್ಲೂ ಸೃಷ್ಟಿಯಾಗಿ ಸಂಭವಿಸುತ್ತಿರುತ್ತದೆ ಹಾಗೂ ತನ್ಮೂಲಕ ನಮ್ಮ ಶಕ್ತಿ ಎಲ್ಲವೂ ಶಾಶ್ವತವಾಗಿ ಉಳಿದಿರುತ್ತದೆ.
ಈಗ ನಾವು ಉಸಿರಾಡಿದ ಗಾಳಿ, ಸೇವಿಸುವ ಆಹಾರ, ವಿಹಾರ, ಆಲೋಚನೆ ಎಲ್ಲವೂ ಮತ್ತೊಂದು ಕಡೆ ಇದ್ದದ್ದು. ಮತ್ತೊಮ್ಮೆ ಅದು ಮತ್ತೆ ಇತರ ಅಂದರೆ ಎಲ್ಲಾ ನಕ್ಷತ್ರಪಾದಗಳಲ್ಲಿ ಸಂಭವಿಸುವ ಜೀವಿಗಳೊಡನೆ ಹುಟ್ಟಬಹುದು, ಸೇರಬಹುದು. ಈ ಕೊಡುಕೊಳ್ಳುವಿಕೆಯಿಂದ ಎಲ್ಲರೂ ನಾವೇ. ಆದರೆ ನಮ್ಮ ಗುಣಗಳು, ದೃಷ್ಟಿಕೋನಗಳು ಬೇರೆ ಬೇರೆ. ನಾವು ನೂರಾ ಎಂಟು ಗುಣಗಳು ಮತ್ತು ನಾವೆಲ್ಲರೂ ಒಂದೇ ಆಗಿರುವ ಅಸ್ತಿತ್ವ ಎಷ್ಟು ಖುಷಿ ಅಲ್ಲವಾ! ಲೋಕದಲ್ಲಿ ಒಂದು ನಿರುಮ್ಮಳವಾದ ಪ್ರೀತಿ, ಗೌರವ ಹೊರತು ಇನ್ನೇನು ವ್ಯಕ್ತಪಡಿಸೋಣ ಹೇಳಿ?! ಈ ಮೂಲಜ್ಞಾನ ಗೊತ್ತಾದಾಗ ಕಣ್ಣಂಚು ತೇವವಾಗುತ್ತದೆ. ಸ್ಪೇಸ್‌ಟೈಮ್‌ನಲ್ಲಿ ನಾವೇ ಎಲ್ಲರೂ ಕೂಡಾ ಆಗಿ ಎಲ್ಲೆಲ್ಲೂ ಇದ್ದೇವೆ. ಏಕೆಂದರೆ ಈ ವಿಶ್ವಕ್ಕೆ ಕೊನೆಮೊದಲೇ ಇಲ್ಲ. ಕ್ರಮವಿದೆ ಅಷ್ಟೇ. ಅಷ್ಟಕ್ಕೂ ನಾವು ಯಾರು? ನಾವೆಲ್ಲ ಬೆಳಕು ಅಷ್ಟೇ, ಸ್ನೇಹಿತರೇ....... ಬೆಳಕು ಹೇಳಿದ್ದು ನಾವು ಒಂದೇ ಅಂತ.... ದೀಪಾವಳಿ ನಮಗೆಲ್ಲ ಸಾರಿದ್ದು ಅದನ್ನೇ.
ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು..... ಅನಂತ ಬ್ರಹ್ಮಾಂಡದ 360°ಗಳಲ್ಲೂ ಸುಖ, ಶಾಂತಿ, ಸಮೃದ್ಧಿ ನೆಲೆಸಿ ಸನ್ಮಂಗಳವಾಗಲಿ.....
✍️ ಶಿವಕುಮಾರ ಸಾಯ 'ಅಭಿಜಿತ್'
ದೀಪದಿಂದ ದೀಪವ ಹಚ್ಚುವ ಕೆಲಸ. ನಿಮ್ಮ ಜ್ಞಾನದ ಬೆಳಕು ನಮಗೂ ಲಭಿಸಿತು.ಧನ್ಯವಾದಗಳು.
ReplyDelete